Maha Shviaratri 2024: ಸಿದ್ದಗಂಗಾ ಮಠದಲ್ಲಿ ಶಿವರಾತ್ರಿ ವೈಭವ; ರಥೋತ್ಸವ, ಬೆಳ್ಳಿ ಪಲ್ಲಕ್ಕಿ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಭಕ್ತರು
Tumkur News: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಶಿವರಾತ್ರಿ ಆಚರಣೆ ಅದ್ಧೂರಿಯಾಗಿ ಇರಲಿದೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಕೂಡಾ ಈ ಬಾರಿ ಶಿವರಾತ್ರಿಗೆ ಎಲ್ಲಾ ಸಿದ್ಧತೆ ನಡೆದಿದೆ. ಭಕ್ತರು ಇಲ್ಲಿ ನಡೆಯುವ ರಥೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. (ವರದಿ: ಈಶ್ವರ್, ತುಮಕೂರು)
ತುಮಕೂರು: ಮಹಾ ಶಿವರಾತ್ರಿ, ಹಿಂದೂಗಳ ಪಾಲಿಗೆ ದೊಡ್ಡ ಹಬ್ಬ. ಶಿವನ ಪೂಜೆ, ಶಿವ ನಾಮ ಸ್ಮರಣೆ ಮೂಲಕ ಈ ಹಬ್ಬ ಆಚರಿಸಲಾಗುತ್ತದೆ. ಶಿವ ಶಿವ ಎಂದರೆ ಭಯಯವಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಎಂಬ ಮಾತಿನಂತೆ ಎಲ್ಲೆಡೆ ಶಿವಾರಾಧನೆ ನಡೆಯುವುದು ವಿಶೇಷ.
ತುಮಕೂರಿನ ಸಿದ್ದಗಂಗಾ ಮಠದಲ್ಲೂ ಶಿವರಾತ್ರಿ ಹಬ್ಬದ ಸಡಗರ ಜೋರಾಗಿದೆ, ಶಿವರಾತ್ರಿ ಹಬ್ಬದ ಪ್ರಯುಕ್ತ ಮಠದಲ್ಲಿ ಒಂದು ವಾರ ಕಾಲ ಜಾತ್ರೆಯೇ ನಡೆಯುತ್ತೆ, ಇಲ್ಲಿ ನಡೆಯುವ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ, ಮಾರ್ಚ್ 9 ರಂದು ಅದ್ದೂರಿಯಾಗಿ ರಥೋತ್ಸವ ನಡೆದರೆ, ಮಾರ್ಚ್ 10 ರ ರಾತ್ರಿ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಸಿಡಿಮದ್ದುಗಳ ಪ್ರದರ್ಶನ ಆಕರ್ಷಣೀಯವಾಗಿ ಇರಲಿದೆ.
ಶಿವರಾತ್ರಿ ಜಾಗರಣೆ
ಶಿವನ ಭಕ್ತರು ಜಾಗರಣೆ ಮಾಡಲು ಸಿದ್ದಗಂಗಾ ಮಠಕ್ಕೆ ಆಗಮಿಸಲಿದ್ದಾರೆ, ಬರುವ ಭಕ್ತರಿಗೆ ಭಜನೆ ಮಾಡಲು, ಶಿವನನ್ನು ಸ್ತುತಿಸಲು ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ, ಜೊತೆಗೆ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಬರುವ ಭಕ್ತರಿಗೆ ಊಟ, ಪ್ರಸಾದದ ವ್ಯವಸ್ಥೆಯೂ ಇರಲಿದೆ, ಹಬ್ಬದ ಹಿಂದಿನ ರಾತ್ರಿ ಮಠದ ಅಂಗಳದಲ್ಲಿ ಭಕ್ತರ ದಂಡೇ ಇರಲಿದೆ, ಶಿವನಾಮ ಸ್ಮರಣೆ ಮೇಳೈಸಲಿದೆ.
ಕೃಷಿ, ಕೈಗಾರಿಕೆ ವಸ್ತು ಪ್ರದರ್ಶನದ ಆಕರ್ಷಣೆ
ಶಿವರಾತ್ರಿ ಹಬ್ಬದ ಪ್ರಯುಕ್ತ ಮಠದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ, ಕೃಷಿ, ತೋಟಗಾರಿಕೆ, ರೇಷ್ಮೆ, ಉಣ್ಣೆ, ಹೈನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಪ್ರದರ್ಶನಲ್ಲಿ ಭಾಗವಹಿಸಿ ತಮ್ಮ ಇಲಾಖೆ ಸೌಲಭ್ಯ ಸೇರಿದಂತೆ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲಿವೆ. ಕೃಷಿ ಇಲಾಖೆ ಸ್ವತ: ವಿವಿಧ ಬೆಳೆ ಬೆಳೆದು ರೈತರಿಗೆ ಅರಿವು ಮೂಡಿಸಲಿದ್ದಾರೆ. ಸಾರ್ವಜನಿಕರಿಗೂ ಇದೆಲ್ಲವನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ.
ಇದಿಷ್ಟೇ ಅಲ್ಲದೆ, ಬ್ಯಾಕಿಂಗ್, ಮಾರುಕಟ್ಟೆ, ಕರಕುಶಲತೆ, ಕೈಗಾರಿಕೆಗೆ ಸಂಬಂಧಿಸಿ ಪ್ರದರ್ಶನ ಇರಲಿದೆ. ಹೈನುಗಾರಿಕೆ, ಕುಕ್ಕುಟೋದ್ಯಮ, ಮತ್ಸ್ಯೋದ್ಯಮದ ಬಗ್ಗೆಯೂ ಮಾಹಿತಿ ದೊರೆಯಲಿದೆ. ಆಹಾರಪ್ರಿಯರಿಗೆ ಬಗೆ ಬಗೆಯ ತಿನಿಸುಗಳು ಇಲ್ಲಿ ಲಭ್ಯವಿದೆ. ಮಕ್ಕಳ ಮನರಂಜನೆಗೆ ವಿವಿಧ ಆಟಿಕೆಗಳು ಇವೆ. ಇಲ್ಲಿ ಏನಿಲ್ಲ ಎಂಬ ಮಾತೇ ಇಲ್ಲ, ಕೃಷಿ, ಕೈಗಾರಿಕಾ ವಸ್ತು ಪ್ರದರ್ಶನವೇ ಸಿದ್ದಗಂಗಾ ಮಠದ ಜಾತ್ರೆಯ ವಿಶೇಷ ಆಕರ್ಷಣೆ. ಹೀಗೆ ಪ್ರತಿ ಶಿವರಾತ್ರಿ ರಾತ್ರಿ ಹಬ್ಬ ಅಂದ್ರೆ ಭಕ್ತರು ಸಿದ್ದಗಂಗಾ ಮಠದತ್ತ ದಾಪುಗಾಲಿಡುತ್ತಾರೆ, ಮಠದಲ್ಲಿ ಶಿವರಾತ್ರಿ ವೈಭವವೇ ನಡೆಯಲಿದೆ.
ವರದಿ: ಈಶ್ವರ್, ತುಮಕೂರು