CM Bommai on Border Dispute: ಮಹಾರಾಷ್ಟ್ರ ಸಿಎಂ ರಾಜ್ಯಗಳ ನಡುವೆ ವ್ಯಾಜ್ಯ ಹೆಚ್ಚಿಸುವ ಕೆಲಸ ಮಾಡಬಾರದು: ಸಿಎಂ ಬೊಮ್ಮಾಯಿ
ಗಡಿ ಅಭಿವೃದ್ಧಿ ಪ್ರಾಧಿಕಾರವು ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕೆನ್ನುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ಹೆಚ್ಚಿಸುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಮಾಡಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಗಡಿ ಅಭಿವೃದ್ಧಿ ಪ್ರಾಧಿಕಾರವು ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕೆನ್ನುವ ತೀರ್ಮಾನ ಮಾಡಲಾಗಿದೆ. ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಗೋವಾ ವಿಮೋಚನೆಗೆ ಕೆಲಸ ಮಾಡಿದ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ದಾಖಲೆಗಳನ್ನು ತರಿಸಿ ಅವರಿಗೂ ಪಿಂಚಣಿ ನೀಡುವ ಕೆಲಸವನ್ನು ಕಾರ್ಯಗತ ಮಾಡಲಾಗುವುದು ಎಂದು ಹೇಳಿದರು.
ಕನ್ನಡಿಗರ ಹಿತರಕ್ಷಣೆ ನಮ್ಮ ಕರ್ತವ್ಯ:
ಎರಡು ರಾಜ್ಯಗಳ ನಡುವೆ ಸೌಹಾರ್ದತೆ ಇರುವಾಗ, ಎಲ್ಲಾ ಭಾಷಿಕರನ್ನು ಒಂದೇ ರೀತಿಯಲ್ಲಿ ನೋಡಿಕೊಳ್ಳುವಾಗ, ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರು ಇರುವ ಅವರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಅದನ್ನು ನಾವು ಮಾಡುತ್ತೇವೆ ಎಂದರು.
ಜತ್ ತಾಲ್ಲೂಕು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಗಂಭೀರ ಪರಿಗಣನೆ
ಜತ್ ತಾಲ್ಲೂಕಿನಲ್ಲಿ ತೀವ್ರ ಬರಗಾಲವಿದ್ದು ಕುಡಿಯುವ ನೀರಿನ ಸಮಸ್ಯೆ ಇತ್ತು. ನಾವು ನೀರು ಕೊಟ್ಟು ಸಹಾಯ ಮಾಡಬೇಕೆಂದು ಯೋಜನೆಗಳನ್ನು ರೂಪಿಸಿದ್ದೇವೆ. ಜತ್ ತಾಲ್ಲೂಕು ಕರ್ನಾಟಕಕ್ಕೆ ಸೇರಬೇಕೆಂದು ಎಲ್ಲಾ ಗ್ರಾಮ ಪಂಚಾಯಿತಿಗಳು ನಿರ್ಧರಿಸಿದ್ದವು. ಈ ಬಗ್ಗೆ ನಿರ್ಣಯವನ್ನು ಕೈಗೊಂಡಿದ್ದಾರೆ. ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಗಡಿವಿವಾದ ಬಗೆಹರಿಸಲು ಅತ್ಯಂತ ಬಲಿಷ್ಠ ಹಿರಿಯ ವಕೀಲರ ತಂಡ ರಚನೆ
ನಿನ್ನೆ ತಮ್ಮ ರೇಸ್ ಕೋರ್ಸ್ ನಿವಾಸದಲ್ಲಿ ಮಾತನಾಡಿದ್ದ ಸಿಎಂ, ಗಡಿವಿವಾದಗಳನ್ನು ಬಗೆಹರಿಸಲು ಅತ್ಯಂತ ಬಲಿಷ್ಠವಾಗಿರುವ ಹಿರಿಯ ವಕೀಲರ ತಂಡವನ್ನು ರಚನೆ ಮಾಡಲಾಗಿದೆ ಹೇಳಿದ್ದರು.
ಗಡಿವಿವಾದದ ಬಗ್ಗೆ ಸಭೆ ಬಳಿಕ ಸಿಎಂ, ಈ ತಂಡವು ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಶ್ಯಾಮ್ ದಿವಾನ್ ಹಾಗೂ ಕರ್ನಾಟಕದ ಹಿರಿಯ ವಕೀಲರಾದ ಉದಯ್ ಹೊಳ್ಳ , ಬೆಳಗಾವಿಯ ಮಾರುತಿ ಜಿರ್ಲೆ, ವಕೀಲರಾದ ರಘುಪತಿ ಅವರನ್ನೊಳಗೊಂಡಿದೆ ಎಂದರು.
ವಕೀಲರ ತಂಡವು ಈಗಾಗಲೇ 2-3 ಬಾರಿ ಸಭೆ ಸೇರಿ ವಿಷಯಗಳ ಬಗ್ಗೆ ಏನು ವಾದ ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಸಂಜೆ ಈ ವಕೀಲರೊಂದಿಗೆ ವೀಡಿಯೋ ಸಂವಾದ ನಡೆಸುತ್ತಿದ್ದು, ಈ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿರೋಧ ಪಕ್ಷದ ನಾಯಕರಿಗೆ ಹಾಗೂ ಎಲ್ಲಾ ಪಕ್ಷದ ನಾಯಕರಿಗೆ ಈಗಾಗಲೇ ಪತ್ರವನ್ನು ಕಳಿಸಿಕೊಡಲಾಗುತ್ತಿದೆ. ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಹೇಳಿದ್ದರು.
ಮಾಹಾರಾಷ್ಟ್ರ ಸಲ್ಲಿಸಿರುವ ಅರ್ಜಿಗೆ ಮಾನ್ಯತೆ ದೊರಕಿಲ್ಲ. ಮೆಂಟೇನಬಿಲಿಟಿ ಈವರೆಗೆ ಸಿಕ್ಕಿಲ್ಲ. ಸಿಗುವುದೂ ಇಲ್ಲ. ಮೆಂಟೇನಬಿಲಿಟಿ ಆಗಬೇಕೋ ಬೇಡವೋ ಎನ್ನುವ ಬಗ್ಗೆಯೇ ಇನ್ನೂ ಚರ್ಚೆಯಾಗುತ್ತಿದೆ. ಮುಖ್ಯ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯ ಇನ್ನೂ ಪರಿಗಣಿಸಿಲ್ಲ. ಮೆಂಟೇನಬಿಲಿಟಿ ಆಗುವುದಿಲ್ಲ, ಇದನ್ನು ಪರಿಗಣಿಸಬಾರದು ಎಂದು ವಾದಿಸಲು ನಾವು ಸಿದ್ಧರಿದ್ದೇವೆ. ಸಂವಿಧಾನ ಬದ್ಧವಾಗಿ 3 ನೇ ಕಲಂ ಪ್ರಕಾರ ರಾಜ್ಯ ಪುನರ್ ವಿಂಗಡನಾ ಕಾಯ್ದೆ ರಚನೆಯಾಯಿತು. ಕಾಯ್ದೆಯ ಪ್ರಕಾರ ಆಗಿದ್ದನ್ನು ಪುನರ್ ಪರಿಶೀಲನೇ ಮಾಡಿದ ಉದಾಹರಣೆ ಇಲ್ಲ ಹಾಗೂ ಅಂಥ ಸಂದರ್ಭವೂ ಒದಗಿಬಂದಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಕರ್ನಾಟಕದೊಂದಿಗೆ ಇರುವ ಗಡಿ ವಿವಾದಕ್ಕೆ ಮತ್ತಷ್ಚು ಬೆಂಕಿ ಸುರಿಯಲು ಮುಂದಾಗಿದೆ. ಕಾನೂನು ಹೋರಾಟಕ್ಕೆ ಇಬ್ಬರು ಸಚಿವ ತಂಡ ರಚಿಸುವ ಜೊತೆಗೆ ಕರ್ನಾಟಕದ ಮರಾಠಿ ಭಾಷಿಕರು ಇವರು ಪ್ರದೇಶದ ಜನರಿಗೆ ಪುಲೆ ಆರೋಗ್ಯ ಕಾರ್ಡ್ ಮತ್ತು ಸ್ವಾತಂತ್ರ್ಯ ಯೋಧರಿಗೆ ಪಿಂಚಣಿ ಘೋಷಣೆ ಮಾಡಿದೆ.
ವಿಭಾಗ