ಕನ್ನಡ ಸುದ್ದಿ  /  Karnataka  /  Maharashtra Karnataka Border Dispute: Preparation For Legal Battle Related Border Dispute- Cm Bommai

Maharashtra Karnataka border dispute: ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಕಾನೂನು ಹೋರಾಟಕ್ಕೆ ಸಿದ್ಧತೆ- ಸಿಎಂ

ರಾಜ್ಯ ಪನರ್ವಿಂಗಡಣಾ ಕಾಯ್ದೆ ಮತ್ತು ಸಂವಿಧಾನ 3ನೇ ವಿಧಿ ಅನುಸಾರ ಮಹಾರಾಷ್ಟ್ರ ಗಡಿ ವಿವಾದ ಹಿನ್ನಲೆಯಲ್ಲಿ 2004 ರಲ್ಲಿ ಹೂಡಿದ ದಾವೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಾವಣಗೆರೆ: ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿವಿವಾದ ಕಳೆದ ಕೆಲವು ದಿನಗಳಿಂದ ಮತ್ತೆ ಸುದ್ದಿಯಲ್ಲಿದೆ. ಉಭಯ ರಾಜ್ಯಗಳ ರಾಜಕಾರಣಿಗಳು ಗಡಿ ವಿಚಾರದ ಕುರಿತು ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ಗಡಿ ವಿವಾದದ ಕುರಿತು ಆಕ್ರೋಶ ಹೆಚ್ಚಾಗಿದೆ. ಇದೀಗ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿರುವುದಾಗಿ ಹೇಳಿದ್ದಾರೆ.

ರಾಜ್ಯ ಪುನರ್ವಿಂಗಡಣಾ ಕಾಯ್ದೆ ಮತ್ತು ಸಂವಿಧಾನ 3ನೇ ವಿಧಿ ಅನುಸಾರ ಮಹಾರಾಷ್ಟ್ರ ಗಡಿ ವಿವಾದ ಹಿನ್ನಲೆಯಲ್ಲಿ 2004 ರಲ್ಲಿ ಹೂಡಿದ ದಾವೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಈ ವಾದಕ್ಕೆ ಹೆಚ್ಚಿನ ಒತ್ತು ನೀಡಿ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥವಾದ ಕಾನೂನು ಹೋರಾಟಕ್ಕೆ ಸಿದ್ದತೆ ಮಾಡಿಕೊಂಡಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಾಸಕ ಎಸ್.ವಿ.ರವಿಂದ್ರನಾಥ್ ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗವಹಿಸಲು ದಾವಣಗೆರೆಗೆ ಆಗಮಿಸಿದ ಮುಖ್ಯಮಂತ್ರಿಗಳ ಜಿ.ಎಂ. ಐ.ಟಿ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಹಿರಿಯ ನ್ಯಾಯವಾದಿಗಳಾದ ಮುಕುಲ್ ರೊಹಟಗಿ, ಉದಯಹೊಳ್ಳ ನೇತೃತ್ವದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಗಂಭೀರವಾಗಿ ವಾದ ಮಂಡಿಸಲಿದ್ದೇವೆ. ಕಾನೂನು ಹೋರಾಟಕ್ಕೆ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರನ್ನು ಸಹ ಸರ್ಕಾರ ನೇಮಿಸಿದೆ. ನಾವು ಸಂವಿಧಾನ ಹಾಗೂ ಕಾನೂನು ಬದ್ದವಾಗಿ ಇದ್ದೇವೆ. ಕರ್ನಾಟಕದ ರಾಜ್ಯದ ಭೂ ಪ್ರದೇಶದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಬೇಡಿಕೆ ಹಾಗೂ ನಿಲುವುಗಳನ್ನು ವಿಚಾರಣೆ ಸಂದರ್ಭದಲ್ಲಿ ಮಂಡಿಸಲಾಗುವುದು. ಈ ಸಂಬಂಧವಾಗಿ ಮುಂದಿನ ವಾರ ಸರ್ವಪಕ್ಷ ಹಾಗೂ ಕಾನೂನು ತಜ್ಞರ ಸಭೆ ಕರೆದಿದ್ದೇನೆ. ಯಾವ ವಿಚಾರವನ್ನು ಮಂಡಿಸಬೇಕು ಎಂಬುದರ ಕುರಿತು ಕೂಲಂಕುಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಾಗುವುದು ಎಂದರು.

ಮಹಾರಾಷ್ಟ್ರ ಹಿರಿಯ ರಾಜಕಾರಣಿ ಶರದ್ ಪವಾರ್ ಬೆಳಗಾವಿ ಗಡಿ ವಿವಾದ ಇಟ್ಟುಕೊಂಡು ಇದುವರೆಗೂ ರಾಜಕೀಯ ಮಾಡಿದ್ದಾರೆ. ಬೆಳಗಾವಿ ಬಗೆಗಿನ ಅವರ ಕನಸ ನನಸಾಗಿಲ್ಲ, ಮುಂದೆಯೂ ನನಸಾಗುವುದಿಲ್ಲ. ಮಹಾರಾಷ್ಟ್ರದ ಜತ್ತ ಭಾಗದ ಜನರು ಕರ್ನಾಟಕದಲ್ಲಿ ವಿಲೀನವಾಗಲು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು‌.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ,ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಶಿವಾನಂದ ಕಪಾಶಿ, ಜಿ.ಪಂ‌.ಸಿಇಓ ಡಾ.ಚೆನ್ನಪ್ಪ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮತ್ತಜ್ಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಉಪವಿಭಾಗಧಿಕಾರಿ ದುರ್ಗಶ್ರೀ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಮುಂಬೈನ ಮಾಹಿಮ್ ಬಸ್ ನಿಲ್ದಾಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪೋಸ್ಟರ್‌ಗೆ ಮಸಿ ಬಳಿದಿರುವುದು ಕಂಡುಬಂದಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ಸಚಿತ್ರ ವರದಿ ಮಾಡಿದೆ. ಕಪ್ಪು ಬಣ್ಣ ಬಳಿದ ಪೋಸ್ಟರ್‌ಗಳ ಹಲವಾರು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಇತ್ತೀಚೆಗೆ ದ್ವಿಪಕ್ಷೀಯ ಸಂಬಂಧ ಚೆನ್ನಾಗಿಲ್ಲ. ಕೆಲವು ದಿನಗಳಿಂದ ಗಡಿ ವಿವಾದ ನಡೆಯುತ್ತಿದ್ದು, ಈ ನಡುವೆ ಸಿಎಂ ಫೋಟೋಗೆ ಮಸಿ ಬಳಿದಿರುವ ಘಟನೆ ನಡೆದಿದೆ. ಗಡಿ ವಿಚಾರವಾಗಿ ಎರಡೂ ರಾಜ್ಯಗಳ ನಾಯಕರು ಪರಸ್ಪರ ವಾಗ್ವಾದ ನಡೆಸುತ್ತಿದ್ದಾರೆ. ಈ ಕುರಿತಾದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.