ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬದ ಖರೀದಿ ಭರಾಟೆ ಜೋರು; ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಕಬ್ಬಿನ ಬೆಲೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬದ ಖರೀದಿ ಭರಾಟೆ ಜೋರು; ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಕಬ್ಬಿನ ಬೆಲೆ

ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬದ ಖರೀದಿ ಭರಾಟೆ ಜೋರು; ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಕಬ್ಬಿನ ಬೆಲೆ

ಮಕರ ಸಂಕ್ರಾಂತಿ ಹಬ್ಬಕ್ಕೆ ರಾಜಧಾನಿ ಬೆಂಗಳೂರಿಗರ ಶಾಂಪಿಂಗ್ ಜೋರಾಗಿದ್ದು, ಹಬ್ಬಕ್ಕೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಬ್ಬಿನ ಬೆಲೆ ಜಾಸ್ತಿಯಾಗಿದೆ.

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಬ್ಬಿನ ಬೆಲೆಯಲ್ಲಿ ಏರಿಕೆಯಾಗಿದೆ. (ಫೋಟೊ-ಸಂಗ್ರಹ)
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಬ್ಬಿನ ಬೆಲೆಯಲ್ಲಿ ಏರಿಕೆಯಾಗಿದೆ. (ಫೋಟೊ-ಸಂಗ್ರಹ)

ಬೆಂಗಳೂರು: ಸುಗ್ಗಿಯ ಹಬ್ಬಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಿದ್ಧವಾಗುತ್ತಿದ್ದು, ಜನರು ಮಾರುಕಟ್ಟೆಗೆ ತೆರಳಿ ಹಬ್ಬಕ್ಕೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹೂವು, ಹಣ್ಣು, ಕಬ್ಬು, ಎಳ್ಳು, ಬೆಲ್ಲ, ತೆಂಗಿನ ಕಾಯಿಯಂತಹ ವಸ್ತುಗಳ ಖರೀದಿ ಜೋರಾಗಿ ನಡೆಯುತ್ತಿದೆ. ಕೆ.ಆರ್.ಪುರಂ, ಕೆಆರ್ ಮಾರುಕಟ್ಟೆ ಸೇರಿದಂತೆ ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ವಸ್ತುಗಳನ್ನು ಬೆಂಗಳೂರಿಗರು ಖರೀದಿಸುತ್ತಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ರೈತರು ಹಾಗೂ ವ್ಯಾಪಾರಿಗಳು ತಮ್ಮ ವಾಹನಗಳ ಮೂಲಕ ಕಬ್ಬು ತಂದು ಮಾರಾಟ ಮಾಡುತ್ತಿದ್ದಾರೆ. ಉತ್ತಮ ಬೇಡಿಕೆ ಇರುವುದಾಗಿ ಹೇಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಕಬ್ಬಿಗೆ ಬೇಡಿಕೆ ಹೆಚ್ಚಾಗಿದೆ. ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಕಬ್ಬಿನ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ನಿರೀಕ್ಷೆಯಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕಬ್ಬಿನ ಬೆಲೆ ಗಗನಕ್ಕೇರಿದೆ.

ಸಂಕ್ರಾಂತಿ ಹಬ್ಬದಲ್ಲಿ ಕಪ್ಪು ಕಬ್ಬು ಬಳಸಲಾಗುತ್ತದೆ. ಈ ಬಾರಿ ಮಾರುಕಟ್ಟೆಯಲ್ಲಿ ಒಂದು ಜಲ್ಲೆ ಕಬ್ಬಿನ ಬೆಲೆ 100 ರೂಪಾಯಿಗೆ ತಲುಪಿದೆ. ಕೆಲವು ರೈತರು ತೋಟದಲ್ಲೇ ವ್ಯಾಪಾರಿಗಳಿಗೆ ಕಬ್ಬು ಮಾರಾಟ ಮಾಡಿದ್ದರೆ, ಇನ್ನೂ ರೈತರು ತಾವೇ ಮಾರುಕಟ್ಟೆಗೆ ತಂದು ಮಾರುತ್ತಾರೆ. ಜನವರಿ 10 ರಿಂದ 14 ರೊಳಗೆ ಉತ್ತಮ ವ್ಯಾಪಾರ ಆಗುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ 10 ಕಬ್ಬುಗಳ ಒಂದು ಕಟ್ಟು 400 ರೂಪಾಯಿ ಇತ್ತು, ಆದರೆ ಈ ಬಾರಿ 500 ರೂಪಾಯಿಗೆ ತಲುಪಿದೆ ಎಂದು ರೈತರು ವಿವರಿಸಿದ್ದಾರೆ.

ಕಬ್ಬು ಸಾಗಿಸಲು ವೆಚ್ಚವೂ ಹೆಚ್ಚಿದೆ. ಹೀಗಾಗಿ ಕಬ್ಬಿನ ಬೆಲೆ ಏರಿಕೆಯಾಗಿರುವುದು ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ಆದರೆ ಗ್ರಾಹಕರಿಗೂ ಹಬ್ಬದಲ್ಲಿ ಹೆಚ್ಚಿನ ಹೊರೆಯಾಗದಂತೆ ವ್ಯಾಪಾರ ಮಾಡಬೇಕಿದೆ ಎಂದು ಹೇಳಿದ್ದಾರೆ. ಹಬ್ಬದಲ್ಲಿ ಎಳ್ಳು-ಬೆಲ್ಲವನ್ನು ಹಂಚುವ ಸಂಪ್ರದಾಯವಿದೆ. ಹೀಗಾಗಿ ಗ್ರಾಹಕರು ಹಬ್ಬದ ಅಗತ್ಯ ವಸ್ತುಗಳಲ್ಲಿ ಎಳ್ಳು, ಬೆಲ್ಲ, ಒಣ ಕೊಬ್ಬರಿ ಹಾಗೂ ಕೆಲವೊಂದು ಸಿಹಿ ಪದಾರ್ಥಗಳನ್ನು ಖರೀದಿಸುತ್ತಾರೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಇಂದಿಗೂ ಗ್ರಾಮೀಣ ಪ್ರದೇಶದಂತೆಯೇ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಕೆಲವೊಂದು ಕಾರ್ಯಕ್ರಮಗಳನ್ನು ಆಯೋಚಿಸುತ್ತಾರೆ. ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನಲ್ಲಿ ಸಂಕ್ರಾಂತಿ ಹಬ್ಬದ ಸುಗ್ಗಿ ಹುಗ್ಗಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಲ್ಲಿ ಅವರೆಕಾಯಿ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

Whats_app_banner