ಚಿಕ್ಕಬಳ್ಳಾಪುರ ಆದಿಯೋಗಿ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ; ಸದ್ಗುರು ಕಾರ್ಯಕ್ರಮಕ್ಕೆ 1 ಲಕ್ಷ ರೂವರೆಗೆ ಪ್ರವೇಶ ದರ, ಇಲ್ಲಿದೆ ಹೆಚ್ಚಿನ ವಿವರ
ಚಿಕ್ಕಬಳ್ಳಾಪುರ ಆದಿಯೋಗಿ ಸನ್ನಿಧಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಉಪಸ್ಥಿತಿಯಲ್ಲಿ ಜನವರಿ 14ರಂದು ಮಕರ ಸಂಕ್ರಾಂತಿ ಕಾರ್ಯಕ್ರಮ ನಡೆಯಲಿದೆ. ಅಂದು ನಡೆಯುವ ಕಾರ್ಯಕ್ರಮಗಳು ಮತ್ತು ಪ್ರವೇಶ ದರದ ಕುರಿತು ಮಾಹಿತಿ ಇಲ್ಲಿದೆ.
ಬೆಂಗಳೂರು: ಚಿಕ್ಕಬಳ್ಳಾಪುರದ ಆದಿಯೋಗಿ ಸನ್ನಿಧಿಯಲ್ಲಿ ಜನವರಿ 14ರಂದು ಮಕರ ಸಂಕ್ರಾಂತಿ ಕಾರ್ಯಕ್ರಮ ನಡೆಯಲಿದೆ. ಮಹಾಶೂಲದ ಉದ್ಘಾಟನೆ, ಆದಿಯೋಗಿ ದಿವ್ಯ ದರ್ಶನ, ಸುಗ್ಗಿ ಹಬ್ಬದ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿಗಳು ನಡೆಯಲಿವೆ. ಚಿಕ್ಕಬಳ್ಳಾಪುರ ಆದಿಯೋಗಿ ಸನ್ನಿಧಿಯಲ್ಲಿ ನಡೆಯುವ ಮಕರ ಸಂಕ್ರಾಂತಿ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕವೂ ಇದೆ. ಸಾಮಾನ್ಯ ಪ್ರವೇಶ ದರ 1 ಸಾವಿರ ರೂಪಾಯಿ ಮತ್ತು ಮುಂಭಾಗದ ಆಸನ ಕೈಲಾಸದ ದರ 1 ಲಕ್ಷ ರೂಪಾಯಿ ಇರಲಿದೆ. ಇನ್ನುಳಿದಂತೆ ಗಂಗಾ, ನೀಲಕಂಠ, ಭೈರವ ಆಸನಗಳ ದರದ ವಿವರವನ್ನೂ ಮುಂದೆ ನೀಡಲಾಗಿದೆ.
ಮಕರ ಸಂಕ್ರಾಂತಿ ಕಾರ್ಯಕ್ರಮದ ವಿವರ
ಚಿಕ್ಕಬಳ್ಳಾಪುರದ ಅವಲಗುರ್ಕಿಯಲ್ಲಿರುವ ಆದಿಯೋಗಿ ಸನ್ನಿಧಿಯಲ್ಲಿ ಜನವರಿ 14ರಂದು ಮಕರ ಸಂಕ್ರಾಂತಿ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳು, ಆಚರಣೆಗಳು ನಡೆಯಲಿವೆ. ಈ ಒಂದು ದಿನದ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸದ್ಗುರು ಜಗ್ಗಿ ವಾಸುದೇವ್ ಉಪಸ್ಥಿತರಿರುತ್ತಾರೆ.
ಮಕರ ಸಂಕ್ರಾಂತಿಯಂದು ಸಂಜೆ 6 ಗಂಟೆಗೆ ಸದ್ಗುರು ಜಗ್ಗಿ ವಾಸುದೇವ್ ಅವರು ಮಹಾಶೂಲವನ್ನು ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ವಿಶೇಷ ಪಂಚ ಭೂತ ಕ್ರಿಯಾ, ಜಾತ್ರೆ, ಭಕ್ತರಿಗೆ ವಿಶೇಷ ಪವಿತ್ರ ಸಮರ್ಪಣೆ ಅವಕಾಶ ಇತ್ಯಾದಿಗಳು ಇರಲಿವೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.
ಸದ್ಗುರು ಕಾರ್ಯಕ್ರಮದ ಟಿಕೆಟ್ ದರ
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉದ್ದೇಶಿಸುವವರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕು. ಆದಿಯೋಗಿ, ನಂದಿ ಬಳಿಕದ ಸೀಟುಗಳನ್ನು ರಿಸರ್ವ್ ಮಾಡಲಾಗಿದೆ. ಇದರ ಬಳಿಕ ಕೈಲಾಶ ಇರುತ್ತದೆ. ಈ ಆಸನಗಳಿಗೆ ಟಿಕೆಟ್ ದರ 1 ಲಕ್ಷ ರೂಪಾಯಿ ಇರುತ್ತದೆ. ಇದರ ಹಿಂದಿನ ಸಾಲುಗಳಿಗೆ ಗಂಗಾ ಎಂದು ಹೆಸರಿಡಲಾಗಿದೆ. ಗಂಗಾ ಟಿಕೆಟ್ ದರ 50 ಸಾವಿರ ರೂಪಾಯಿ. ಗಂಗಾಕ್ಕಿಂತ ಹಿಂದೆ ಭೈರವ ಆಸನಗಳು ಇರುತ್ತವೆ. ಭೈರವ ಆಸನಗಳಿಗೆ ಟಿಕೆಟ್ ದರ 15 ಸಾವಿರ ರೂಪಾಯಿ. ಇದಾದ ಬಳಿಕ ನೀಲಕಂಠ ಸೀಟುಗಳು ಇರುತ್ತವೆ. ಇದರ ದರ 5 ಸಾವಿರ ರೂಪಾಯಿ. ಕೊನೆಯ ಸಾಲುಗಳು ಮಹೇಶ ಆಗಿರುತ್ತವೆ. ಇದರ ಟಿಕೆಟ್ ದರ 1 ಸಾವಿರ ರೂಪಾಯಿ. ಸದ್ಗುರು ಉಪಸ್ಥಿತಿಯಲ್ಲಿ ಪಂಚಭೂತ ಕ್ರಿಯೆಯೂ ಈ ಶುಲ್ಕದಲ್ಲಿ ಸೇರಿರುತ್ತದೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.
ಮಕರ ಸಂಕ್ರಾಂತಿ ಪ್ರಯುಕ್ತ ಧಾನ್ಯ ಸಮರ್ಪಣೆಗೆ ಜನವರಿ 11-13ರಂದು ಬೆಳಗ್ಗೆ 7.30 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಧಾನ್ಯ ಸಮರ್ಪಣೆ ಶುಲ್ಕ: 2 ಸಾವಿರ ರೂಪಾಯಿ. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಕುಟುಂಬದ ನಾಲ್ಕು ಸದಸ್ಯರು ಭಾಗವಹಿಸಬಹುದು.
ಸಪ್ತ ಪುಷ್ಪಾಂಜಲಿಯನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಯೋಗೇಶ್ವರ ಲಿಂಗಕ್ಕೆ ಸುಗಂದ ರಾಜ, ಬಿಲ್ವ ಪಾತ್ರೆ, ಕಣಗಿಲೆ ಹೂವು, ದುಂಡು ಮಲ್ಲಿಗೆ, ಸೂಜಿ ಮಲ್ಲಿಗೆ, ಸೇವಂತಿಗೆ, ಸಂಪಿಗೆ ಅರ್ಪಿಸಬಹುದು. ಇದರ ದರ 660 ರೂಪಾಯಿ.
ತುಪ್ಪದ ದೀಪ ಅರ್ಪಣೆಗೆ ಆನ್‌ಲೈನ್‌ನಲ್ಲಿ ಮಾತ್ರ ಬುಕ್ಕಿಂಗ್ ಮಾಡಲು ಅವಕಾಶ. ಯೋಗೇಶ್ವರ ಲಿಂಗಕ್ಕೆ ತುಪ್ಪದ ದೀಪ ಅರ್ಪಿಸಲು 40 ರೂಪಾಯಿ ನಿಗದಿಪಡಿಸಲಾಗಿದೆ.
ಕರ್ನಾಟಕದಲ್ಲಿ ಆದಿಯೋಗಿ ಪ್ರತಿಮೆ
ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ನಂತರ ಜಾಲಾರಿ ನರಸಿಂಹಸ್ವಾಮಿ ದೇವಾಲಯದ ನರಸಿಂಹದೇವರಬೆಟ್ಟದ ತಪ್ಪಲಿನಲ್ಲಿಈ ಬೃಹತ್ ಆದಿಯೋಗಿ ಪ್ರತಿಮೆಯಿದೆ. ಈಶಾ ಫೌಂಡೇಷನ್ ಈ 112 ಅಡಿ ಎತ್ತರದ ಆದಿಯೋಗಿ ಶಿವನ ಪ್ರತಿಮೆ ನಿರ್ಮಿಸಿದೆ.