Lure for Voters News: ಬಿಜೆಪಿ ಶಾಸಕ ಸಿಟಿ ರವಿ ಬೆಂಬಲಿಗರಿಂದ ಗಿಫ್ಟ್ ಆರೋಪ; ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಬೆಂಬಲಿಗರು ನೀಡಿದ್ದಾರೆ ಎನ್ನಲಾದ ಸೀರೆಯನ್ನು ಸುಟ್ಟು ವ್ಯಕ್ತಿಯೊಬ್ಬ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಚಾರಗಳು ಕೂಡ ಜೋರಾಗಿಯೇ ನಡೆಯುತ್ತಿದ್ದು, ಮತದಾರರ ಒಲೈಕೆಗಾಗಿ ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು ನಾ ಮುಂದು, ತಾ ಮುಂದು ಅಂತ ಮತದಾರರಿಗೆ ಎಲ್ ಇಡಿ ಟಿವಿ, ಕುಕ್ಕರ್, ಮಿಕ್ಸರ್, ವಾಟರ್ ಕ್ಯಾನ್, ಕ್ರಿಕೆಟ್ ಕಿಟ್ ಹಾಗೂ ಸೀರೆ ಸೇರಿದಂತೆ ವಿವಿಧ ರೀತಿಯ ಗಿಫ್ಟ್ ಗಳನ್ನು ಹಂಚುತ್ತಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಬೆಂಬಲಿಗರು ಹಂಚಿದ್ದಾರೆ ಎನ್ನಲಾದ ಸೀರೆಯನ್ನು ಸುಟ್ಟು ವ್ಯಕ್ತಿಯೊಬ್ಬ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಯುಗಾದಿ ಹಬ್ಬಕ್ಕೆ ಅಂತ ಸೀರೆ ಗಿಫ್ಟ್ ನೀಡಲಾಗಿದೆ ಎಂದು ಹೇಳಲಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿ ತನ್ನ ಗ್ರಾಮದಲ್ಲಿ ಸೀರೆಗಳನ್ನು ಹಂಚುವ ಬದಲಿಗೆ ಸೌಲಭ್ಯಗಳು ಹಾಗೂ ಅಭಿವೃದ್ಧಿ ಬಗ್ಗೆ ಬಿಜೆಪಿ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾನೆ.
ಈ ಸೀರೆ ಬಿಟ್ಟರೆ ನಮಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಇಷ್ಟು ವರ್ಷ ನಮ್ಮ ಮತ್ತು ನಮ್ಮ ಯೋಗಕ್ಷೇಮದ ಬಗ್ಗೆ ಕೇಳುವವರು ಯಾರೂ ಇರಲಿಲ್ಲ. ಈಗ ಚುನಾವಣೆ ಸಮಯವಾದ್ದರಿಂದ ನನ್ನ ತಾಯಿ ಮತ್ತು ಪತ್ನಿಗೆ ಸೀರೆ ನೀಡಿದ್ದಾರೆ. ಇದು ಸರ್ಕಾರ ನೀಡಿದ ಸೌಲಭ್ಯ ಎಂದು ಸೀರೆಗೆ ಬೆಂಕಿ ಹಚ್ಚಿದ್ದಾನೆ.
ಕೋವಿಡ್ ಸಮಯದಲ್ಲಿ ಯಾರೂ ನಮ್ಮ ಬಗ್ಗೆ ಕೇಳಲಿಲ್ಲ, ಇಲ್ಲಿ ಹಿರಿಯರು ಮತ್ತು ಮಕ್ಕಳು ಇದ್ದಾರೆ. ನಮಗೆ ಒಂದು ಕೆಜಿ ಅಕ್ಕಿ ನೀಡುವ ಸಾಮರ್ಥ್ಯ ಅವರಿಗಿಲ್ಲ, ನಮಗೆ ಕೆಲಸವಿಲ್ಲ ಅಂತ ತರಾಟೆಗೆ ತೆಗೆದುಕೊಂಡಿದ್ದಾನೆ. ಸಿಟಿ ರವಿ ಬೆಂಬಲಿಗರು ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಘಟನೆಯೊಂದು ವರದಿಯಾಗಿತ್ತು. ಬಿಜೆಪಿ ನಾಯಕ ಧನಂಜಯ್ ಜಾಧವ್ ಅವರು ಬೆಳಗಾವಿಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ ನೀಡಿದ್ದ ಮಿಕ್ಸರ್-ಗ್ರೈಂಡರ್ ಗಳನ್ನು ಕಿತ್ತೆಸೆದು ತಮ್ಮ ಗಿಫ್ಟ್ ಗಳನ್ನು ನೀಡಿದ್ದರು.