ಬೆಸ್ಟ್ ಕ್ಲಬ್ ಈಜುಕೊಳದಲ್ಲಿ ಮುಳುಗಿ ವ್ಯಕ್ತಿ ಸಾವು; ವಿವಾಹಿತ ಮಹಿಳೆಗೆ ಪೀಡಿಸುತ್ತಿದ್ದ ಆಟೊ ಚಾಲಕನಿಗೆ ಇರಿದ ಪತಿ
Bengaluru: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಕೊಲೆ ಪ್ರಕರಣ. ರಾಜರಾಜೇಶ್ವರಿ ನಗರದಲ್ಲೊಂದು ಅನುಮಾನಾಸ್ಪದ ಸಾವು. ನಾಯಂಡಹಳ್ಳಿ ಪಂತರಪಾಳ್ಯದಲ್ಲೊಂದು ಕೊಲೆ. ಇಲ್ಲಿದೆ ನೋಡಿ ಈ ಕುರಿತಾದ ಮಾಹಿತಿ (ವರದಿ: ಎಚ್. ಮಾರುತಿ)
ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದ ಬೆಸ್ಟ್ ಕ್ಲಬ್‌ಗೆ ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ 41 ವರ್ಷದ ದಯಾನಂದ ಮೃತ ದುರ್ದೈವಿ. ಈ ಘಟನೆಗೆ ಸಂಬಂಧಿಸಿದಂತೆ ಮೃತ ದಯಾನಂದ ಅವರ ಪತ್ನಿ ಅಕ್ಷತಾ ದಯಾನಂದ ಅವರು ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರ್.ಆರ್.ನಗರದ ಗೊಟ್ಟಿಗೆರೆಯ ಅವನಿ ಹಿಲ್ಸ್ ಅಪಾರ್ಟ್‌ಮೆಂಟ್‌ನ ನಿವಾಸಿಯಾಗಿರುವ ದಯಾನಂದ ಅವರು ಕುಟುಂಬದವರ ಜೊತೆಗೆ ವಾಸಿಸುತ್ತಿದ್ದರು.
ಅಪಾರ್ಟ್‌ಮೆಂಟ್‌ನ ತಮ್ಮಸ್ನೇಹಿತರಾದ ವಿರೂಪಾಕ್ಷ, ಶರತ್ ಮತ್ತು ಸಂದೀಪ್ ಅವರ ಜೊತೆಗೆ ಬೆಸ್ಟ್ ಕ್ಲಬ್‌ಗೆ ಈಜಾಡಲು ತೆರಳಿದ್ದರು. ಕೆಲ ಸಮಯದ ನಂತರ, ಶರತ್ ಅವರ ಪತ್ನಿ ಪಲ್ಲವಿ ಅವರು ಅಕ್ಷತಾ ಮನೆಗೆ ಆಗಮಿಸಿ ದಯಾನಂದ ಅವರು ನೀರಿನಲ್ಲಿ ಮುಳುಗಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂಬ ವಿಷಯ ತಿಳಿಸಿದ್ದರು. ಕೂಡಲೇ ಅಕ್ಷತಾ ಅವರು ಆಸ್ಪತ್ರೆಗೆ ಆಗಮಿಸಿದ್ದಾರೆ. ಅಲ್ಲಿ ದಯಾನಂದ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು ಮತ್ತು ಅವರು ಪ್ರಜ್ಞೆ ತಪ್ಪಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಯಾನಂದ ಅವರ ಜೊತೆಗೆ ಈಜಲು ತೆರಳಿದ್ದ ಅವರ ಸ್ನೇಹಿತರನ್ನು ವಿಚಾರಿಸಿದ್ದಾರೆ. ದಯಾನಂದ್ ಈಜುಕೊಳದ ಆಳ ಪ್ರದೇಶಕ್ಕೆ ಹೋಗಿ ಮುಳುಗಿದ್ದರು. ಮೇಲ್ವಿಚಾರಕರ ಸಹಾಯದಿಂದ ಅವರನ್ನು ಮೇಲಕ್ಕೆ ಎತ್ತಿ ಆಸ್ಪತ್ರೆಗೆ ಕರೆತಂದು ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದು ಸಾವಿನ ಬಗ್ಗೆ ಅನುಮಾನವಿದೆ. ಆದ್ದರಿಂದ ತನಿಖೆ ನಡೆಸುವಂತೆ ಅವರು ದೂರಿನಲ್ಲಿ ಕೋರಿದ್ದಾರೆ.
ವಿವಾಹಿತ ಮಹಿಳೆಗೆ ಪೀಡಿಸುತ್ತಿದ್ದ ಆಟೊ ಚಾಲಕನಿಗೆ ಇರಿದ ಪತಿ:
ವಿವಾಹಿತ ಮಹಿಳೆಗೆ ಪೀಡಿಸುತ್ತಿದ್ದ ಆಟೊ ಚಾಲಕನಿಗೆ ಮಹಿಳೆಯ ಪತಿ ಮತ್ತು ಆಕೆಯ ಸಹೋದರ ಚಾಕುವಿನಿಂದ ಇರಿದಿದ್ದು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ನಾಯಂಡಹಳ್ಳಿ ಪಂತರಪಾಳ್ಯದಲ್ಲಿ ಈ ಪ್ರಕರಣ ನಡೆದಿದೆ. ಹೊಸಗುಡ್ಡದಹಳ್ಳಿ ನಿವಾಸಿ 26 ವರ್ಷದ ಕಾರ್ತಿಕ್ ಇರಿತಕ್ಕೆ ಒಳಗಾದ ಚಾಲಕ. ಸದ್ಯ ಕಾರ್ತಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಮಹಿಳೆಯ ಪತಿ ಸತೀಶ್, ಸಹೋದರ ವಿನೋದ್ ಮತ್ತು ಸೂರ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ತಪ್ಪಿಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆಟೊ ಚಾಲಕ ಕಾರ್ತಿಕ್, ಪಂತರಪಾಳ್ಯದ ವಿವಾಹಿತ ಮಹಿಳೆಯೊಂದಿಗೆ ಸಲುಗೆ ಬೆಳೆಸಲು ಪ್ರಯತ್ನ ನಡೆಸುತ್ತಿದ್ದ. ಬುದ್ಧಿಮಾತು ಹೇಳಿದ್ದರೂ ತೊಂದರೆ ಕೊಡುವುದನ್ನು ನಿಲ್ಲಿಸಿರಲಿಲ್ಲ. ಆತನ ವರ್ತನೆಯಿಂದ ಬೇಸತ್ತಿದ್ದ ಮಹಿಳೆಯು ಪತಿ ಹಾಗೂ ಸಹೋದರನಿಗೆ ವಿಷಯ ತಿಳಿಸಿದ್ದರು. ನಂತರ ಮಹಿಳೆಯ ಪತಿ ಮತ್ತು ಸಹೋದರ, ಕಾರ್ತಿಕ್‌ಗೆ ಬುದ್ದಿ ಹೇಳಿ ಎಚ್ಚರಿಕೆ ನೀಡಿದ್ದರು. ಆದರೂ ಆತ ತನ್ನ ಚಳಿಯನ್ನು ಬಿಟ್ಟಿರಲಿಲ್ಲ. ವರ್ತನೆ ಮುಂದುರಿಸಿದ. ಕೋಪಗೊಂಡ ಆರೋಪಿಗಳು ಕಾರ್ತಿಕ್‌ಗೆ ಇರಿದಿದ್ದಾರೆ.
ವಿಭಾಗ