Tumkur Crime: ಕುಡಿಯಲು ದುಡ್ಡು ಕೊಟ್ಟಿಲ್ಲವೆಂದು ಹೆಂಡತಿ-ಮಗುವನ್ನು ಹಾರೆಯಿಂದ ಹೊಡೆದು ಕೊಂದ ಭೂಪ
ಕನ್ನಡ ಸುದ್ದಿ  /  ಕರ್ನಾಟಕ  /  Tumkur Crime: ಕುಡಿಯಲು ದುಡ್ಡು ಕೊಟ್ಟಿಲ್ಲವೆಂದು ಹೆಂಡತಿ-ಮಗುವನ್ನು ಹಾರೆಯಿಂದ ಹೊಡೆದು ಕೊಂದ ಭೂಪ

Tumkur Crime: ಕುಡಿಯಲು ದುಡ್ಡು ಕೊಟ್ಟಿಲ್ಲವೆಂದು ಹೆಂಡತಿ-ಮಗುವನ್ನು ಹಾರೆಯಿಂದ ಹೊಡೆದು ಕೊಂದ ಭೂಪ

ಮದ್ಯಪಾನ ಮಾಡಲು ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಪತ್ನಿ ಹಾಗೂ 4 ವರ್ಷದ ಮಗುವನ್ನು ಪತಿರಾಯ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿಯಲ್ಲಿ ನಡೆದಿದೆ.

<p>ಸಾಂದರ್ಭಿಕ ಚಿತ್ರ</p>
ಸಾಂದರ್ಭಿಕ ಚಿತ್ರ

ತುಮಕೂರು: ಮದ್ಯಪಾನ ಮಾಡಲು ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಪತ್ನಿ ಹಾಗೂ 4 ವರ್ಷದ ಮಗುವನ್ನು ಪತಿರಾಯ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿಯಲ್ಲಿ ನಡೆದಿದ್ದು, ಅಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ.

ಆರೋಪಿಯನ್ನು ಮೋಹನ್ ಕುಮಾರ್ ಅಲಿಯಾಸ್‌ ಸ್ವಾಮಿ ಎಂದು ಗುರುತಿಸಲಾಗಿದೆ. ಮೃತರನ್ನು ಕಾವ್ಯ ಹಾಗೂ ಅವರ ಮಗ ಜೀವನ್ ಎಂದು ಗುರುತಿಸಲಾಗಿದೆ. ಆರು ವರ್ಷಗಳ ಹಿಂದೆ ಮೋಹನ್ ಕುಮಾರ್ ಚಿಕ್ಕನಾಯಕನಹಳ್ಳಿ ಮೂಲದ ಕಾವ್ಯರನ್ನು ವಿವಾಹವಾಗಿದ್ದನು. ಮದುವೆಯಾದಾಗಿನಿಂದಲೂ ದಿನನಿತ್ಯ ಕುಡಿದು ಜಗಳವಾಡುತ್ತಿದ್ದನು.

ಇದರಿಂದ ಬೇಸತ್ತು ಕಾವ್ಯ ತವರು ಮನೆ ಸೇರಿದ್ದರು. ಇತ್ತೀಚೆಗಷ್ಟೆ ಪಂಚಾಯತಿ ನಡೆಸಿ, ಇಬ್ಬರಿಗೂ ರಾಜಿ ಮಾಡಿಸಲಾಗಿದ್ದು, ಬಳಿಕ ಕಾವ್ಯ ಗಂಡನ ಮನೆಗೆ ಹಿಂದಿರುಗಿದ್ದರು. ಆದರೆ ಮೋಹನ್​ ಕುಮಾರ್​ ಮಾತ್ರ ಕುಡಿತದ ಚಟ ಬಿಟ್ಟಿರಲಿಲ್ಲ. ಇದರಿಂದ ಸಂಸಾರ ನಿರ್ವಹಣೆ ಕಷ್ಟವಾಗಿತ್ತು.

ನಿನ್ನೆ (ಬುಧವಾರ) ಬೆಳಗ್ಗೆ ಮೋಹನ್​ ಕುಮಾರ್​ ಹೆಂಡತಿ ಬಳಿ ಕುಡಿಯಲು ಹಣ ಕೇಳಿದ್ದಾನೆ. ಕಾವ್ಯ ಹಣ ನೀಡಲು ನಿರಾಕರಿಸಿದ್ದು, ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆದ್ದ ಮೋಹನ್​ ಕುಮಾರ್​ ಹಾರೆಯಿಂದ ಹೆಂಡತಿ ಹಾಗೂ ಮಗುವನ್ನು ಹೊಡೆದು ಕೊಂದಿದ್ದಾನೆ. ಘಟನೆ ಬಳಿಕ ಆತನ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಗ್ರಾಮಸ್ಥರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೋಹನ್ ಕುಮಾರ್​ ಈ ಹಿಂದೆಯೇ ಒಮ್ಮೆ ಜೈಲು ಸೇರಿದ್ದ. ಗ್ರಾಮದ ಕರಿಯಮ್ಮ ದೇವಸ್ಥಾನದ ಅರ್ಚಕನಾಗಿದ್ದ ಈತ ಹುಂಡಿ ಹಣ ಕದ್ದಿದ್ದ, ರೊಚ್ಚಿಗೆದ್ದ ಗ್ರಾಮಸ್ಥರು ಈತನನ್ನು ಥಳಿಸಿದ್ದರು. ಇದೇ ಕೋಪಕ್ಕೆ ಮೋಹನ್​ ಕುಮಾರ್​ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ ಜೈಲು ಸೇರಿದ್ದನು. ಇದೀಗ ಮತ್ತೆ ಸೆರೆವಾಸಕ್ಕೆ ಒಳಗಾಗಿದ್ದಾನೆ.

ಪ್ರೀತಿಸಿ ಮದುವೆಯಾದ ಪತ್ನಿಯನ್ನ ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿರಾಯ

ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಂದ ಪತಿರಾಯ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಇತ್ತೀಚೆಗಷ್ಟೆ ನಡೆದಿದೆ. ಪತ್ನಿಯ ಕತ್ತು, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಕೂಡ ಗಂಭೀರವಾಗಿದೆ. ಮೃತಳನ್ನು ಅರ್ಪಿತಾ ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ರಮೇಶ್​ ಎಂದು ಗುರುತಿಸಲಾಗಿದೆ.

ಏಳು ವರ್ಷಗಳ ಹಿಂದೆ ರಮೇಶ್ ಹಾಗೂ ಅರ್ಪಿತಾ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ 6 ವರ್ಷದ ಗಂಡು ಮಗು ಹಾಗೂ 4 ವರ್ಷದ ಹೆಣ್ಣು ಮಗು ಕೂಡ ಇದೆ. ಹೊಸಕೋಟೆ ಪಟ್ಟಣದಲ್ಲಿ ಈ ಕುಟುಂಬ ವಾಸವಾಗಿತ್ತು. ಆರಂಭದಿಂದ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕಳೆದೊಂದು ವರ್ಷದಿಂದ ದಂಪತಿ ನಡುವೆ ಮನಸ್ತಾಪ ಉಂಟಾಗಿ ಜಗಳ ವಿಕೋಪಕ್ಕೆ ತಿರುಗಿ ಹೊಸಕೋಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಕೆಲ ದಿನಗಳ ಹಿಂದೆ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ದೂರವಾಗಲು ನಿರ್ಧರಿಸಿದ್ದರಂತೆ. ಹೀಗಾಗಿ ಬೇರೆ ಬೇರೆಯಾಗಿ ವಾಸವಿದ್ದರು.

ಆದರೆ ಕಳೆದ ಒಂದು ವಾರದಿಂದ ಅರ್ಪಿತಾ ಮೇಲೆ ಅನುಮಾನಪಟ್ಟ ರಮೇಶ್, ಇನ್ನುಮುಂದೆ ಇಬ್ಬರು ಒಟ್ಟಿಗೆ ಜೀವನ ನಡೆಸೋಣ ಎಂದು ಹೇಳಿದ್ದನಂತೆ. ಭಾನುವಾರ ಬೆಳಗ್ಗೆ ಪತ್ನಿಯನ್ನು ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶಕ್ಕೆ ಕರೆದುಕೊಂಡು ಬಂದು, ರಸ್ತೆ ಮೇಲೆಯೇ ಸುಮಾರು 15 ಬಾರಿ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಕಲ್ಲಿನಿಂದಲೂ ಹಲ್ಲೆ ನಡೆಸಿದ್ದಾನೆ. ನಂತರ ತಾನೂ ಕೂಡ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Whats_app_banner