ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ, ಆತಿಥ್ಯಕ್ಕೆ ಮಂಡ್ಯ ನಗರ ಸಜ್ಜು, ಇತಿಹಾಸ ಸೃಷ್ಟಿಸಲಿರುವ ಕಾರ್ಯಕ್ರಮದ 5 ಮುಖ್ಯ ಅಂಶ
Kannada Sahitya Sammelana: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ ಮೂರು ದಿನ ಸಾಹಿತ್ಯ ಕಂಪು ಸಕ್ಕರೆ ನಾಡನ್ನು ಆವರಿಸಲಿದ್ದು, ಕನ್ನಡಿಗರು ಮಂಡ್ಯ ನಗರ ಆತಿಥ್ಯಕ್ಕೆ ತಲೆದೂಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದ 5 ಮುಖ್ಯ ಅಂಶಗಳು ಇಲ್ಲಿವೆ.
Kannada Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಮೂರು ದಿನಗಳ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ. ಮಂಡ್ಯ ನಗರ ಸಮ್ಮೇಳನದ ಆತಿಥ್ಯವಹಿಸಿದ್ದು, ಅತಿಥಿ ಸತ್ಕಾರಕ್ಕೆ ಎಲ್ಲ ರೀತಿಯಿಂದಲೂ ಸಜ್ಜಾಗಿದೆ. ನಗರದ ಉದ್ದಗಲಕ್ಕೂ ಕನ್ನಡ ಬಾವುಟ, ಪತಾಕೆಗಳು ಹಾರಾಡುತ್ತಿದ್ದು, ಆಕರ್ಷಕವಾಗಿ ಸಿಂಗರಿಸಲ್ಪಟ್ಟಿದೆ. ನಾಳೆಯಿಂದ ಅಂದರೆ ಡಿಸೆಂಬರ್ 20 ರಿಂದ 22 ರ ತನಕ ನಡೆಯಲಿದೆ. ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಅವರು ಇಂದು (ಡಿಸೆಂಬರ್ 19) ಸಂಜೆ ಮಂಡ್ಯ ನಗರಕ್ಕೆ ಆಗಮಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಮಂಡ್ಯ ನಗರದ ಹೊರವಲಯದಲ್ಲಿ 70 -80 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಮತ್ತು 40,000 ಜನರು ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಮ್ಮೇಳನ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ.
ಇತಿಹಾಸ ಸೃಷ್ಟಿಸಲಿದೆ ಕನ್ನಡ ಸಾಹಿತ್ಯ ಸಮ್ಮೇಳನ; 5 ಮುಖ್ಯ ಅಂಶಗಳು
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮಂಡ್ಯದಲ್ಲಿ ಮೂರನೇ ಬಾರಿಗೆ ನಡೆಯುತ್ತಿರುವ ಸಮ್ಮೇಳನ ಹಲವು ಹೊಸತನಗಳಿದ್ದು ಇತಿಹಾಸ ಸೃಷ್ಟಿಯಾಗಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು.
1) ಸಮ್ಮೇಳನ ಸ್ಥಳ: ಮಂಡ್ಯ ನಗರದ ಸ್ಯಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ 70 -80 ಎಕರೆ ಪ್ರದೇಶ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಕಾರ್ಯಕ್ರಮ ಸ್ಥಳವಾಗಿದ್ದು, ಎಲ್ಲ ರೀತಿಯ ತಯಾರಿ ಪೂರ್ಣಗೊಂಡಿದೆ. ಪ್ರಧಾನ ವೇದಿಕೆ, ಎರಡು ಸಮಾನಾಂತರ ವೇದಿಕೆ ಇದ್ದು, 40,000 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. 60 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ.
2) ನೋಂದಣಿ ಮತ್ತು ಪ್ರದರ್ಶನ ಮಳಿಗೆ: ಸಮ್ಮೇಳನ ಸ್ಥಳದಲ್ಲಿ 55 ವಸ್ತುಪ್ರದರ್ಶನ ಮಳಿಗೆ, 350 ವಾಣಿಜ್ಯ ಮಳಿಗೆ, 450 ಪುಸ್ತಕ ಮಳಿಗೆಗಳು ಇವೆ. ಪ್ರತಿನಿಧಿ ನೋಂದಣಿಗಾಗಿ 40 ಕೌಂಟರ್ ಇರಲಿದೆ.
3) ಆಹಾರ ಮತ್ತು ವಸತಿ: 6000 ನೋಂದಾಯಿತ ಪ್ರತಿನಿಧಿಗಳಿಗೆ ಪ್ರತಿನಿಧಿಗಳಿಗೆ ಅರ್ಧ ಕೆಜಿ ಬೆಲ್ಲ, ಅರ್ಧ ಕೆಜಿ ಸಕ್ಕರೆ, ಬ್ರಷ್, ಪೇಸ್ಟ್, ಸೋಪು, ಬೆಡ್ ಶಿಟ್ ಒಳಗೊಂಡ ಲೇದರ್‌ಬ್ಯಾಗ್‌ನಲ್ಲಿ ವಸತಿ ಮತ್ತು ಸಮ್ಮೇಳನದ ಕಿಟ್ ಸಿಗಲಿದೆ. ಊಟಕ್ಕೆ 100 ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಒಂದೇ ಊಟದ ಮೆನು ಇರಲಿದೆ. ನೀರು ಮತ್ತು ಆಹಾರ ಗುಣಮಟ್ಟ ಪರೀಕ್ಷೆ ನಡೆಸಿ ವರದಿ ಪಡೆಯಲಾಗುತ್ತಿದೆ.
4) ಶೌಚ, ಸ್ನಾನಕ್ಕೆ ವ್ಯವಸ್ಥೆ: 250 ಶೌಚಗೃಹ, 50 ಸ್ನಾನಗೃಹಗಳನ್ನು ನಿರ್ಮಿಸಲಾಗಿದ್ದು, ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಲಾಗಿದೆ. ಇದಕ್ಕಾಗಿ 250ಕ್ಕು ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ವಿದ್ಯುತ್ ಸಮಸ್ಯೆ ಕಾಡದಂತೆ ಜನರೇಟರ್ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಉಸ್ತುವಾರಿ ಸಚಿವ ಎನ್ ಚಲುವರಾಯ ಸ್ವಾಮಿ ತಿಳಿಸಿದ್ದಾರೆ.
5) ಸಾಹಿತ್ಯ ಸಾರಿಗೆ ಬಸ್: ಸಮ್ಮೇಳನ ಸ್ಥಳಕ್ಕೆ ಆಗಮಿಸುವ 7 ತಾಲೂಕು ಕೇಂದ್ರಗಳಿಂದ 15 ಉಚಿತ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.ಮಂಡ್ಯ ನಗರದಿಂದ ಕೂಡ ಬಸ್‌ಗಳು ಸಮ್ಮೇಳನದ ಸ್ಥಳಕ್ಕೆ ಉಚಿತವಾಗಿ ಕರೆತರಲಿವೆ. ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳದಿಂದ ಕೂಡ ಉಚಿತ ಸಾರಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಬೆಂಗಳೂರುಗಳಿಂದ ಮಂಡ್ಯಕ್ಕೆ 30 ನಿಮಿಷಕ್ಕೆ ಒಂದು ವಿಶೇಷ ಬಸ್ ಸಂಚರಿಸಲಿದೆ.
ಪೊಲೀಸ್ ಬಂದೋಬಸ್ತ್
ಸಾಹಿತ್ಯ ಸಮ್ಮೇಳನಕ್ಕೆ ಅಧಿಕಾರಿಗಳೂ ಸೇರಿದಂತೆ ಒಟ್ಟು 4,173 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 14 ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗುತ್ತಿದೆ. ದಕ್ಷಿಣ ವಲಯದ ಡಿಐಜಿಪಿ ಅವರ ನೇತೃತ್ವದಲ್ಲಿ ನಾಲ್ವರು ಎಸ್ಪಿ, ಆರು ಮಂದಿ ಎಎಸ್ಪಿ, 21- ಡಿಎಸ್ಪಿ, 63- ಸಿಪಿಐ/ಪಿಐ, 190- ಪಿಎಸ್ಐ, 215- ಎಎಸ್‌ಐ, 1,700- ಹೆಡ್‌ಕಾನ್‌ಸ್ಟೆಬಲ್/ ಕಾನ್‌ಸ್ಟೆಬಲ್, 165- ಮಹಿಳಾ ಹೆಡ್ ಕಾನ್ ಸ್ಟೆಬಲ್/ ಕಾನ್‌ಸ್ಟೆಬಲ್, 1000 ಗೃಹ ರಕ್ಷಕ ಸಿಬ್ಬಂದಿ, 12- ಕೆಎಸ್‌ಆರ್‌ಪಿ, 13- ಡಿಎಆರ್ ತುಕಡಿಗಳು, 2- ಕ್ಯೂಆರ್‌ಟಿ ಸ್ಟೈಕಿಂಗ್ ಫೋರ್ಸ್‌ಗಳು ಸೇರಿ ಒಟ್ಟು 4,173 ಅಧಿಕಾರಿ ಮತ್ತು ಸಿಬ್ಬಂದಿ ಸಮ್ಮೇಳನ ಸ್ಥಳದ ಸುತ್ತಮುತ್ತ ಕರ್ತವ್ಯದಲ್ಲಿರುತ್ತಾರೆ.
ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಸ್ಥಳಗಳಾದ, ಮುಖ್ಯ ವೇದಿಕೆ, ಊಟದ ಸ್ಥಳ, ಪುಸ್ತಕ ಮಳಿಗೆ, ವಸ್ತು ಸಂಗ್ರಹಾಲಯ, ನೋಂದಣಿ ಸ್ಥಳಗಳು ಮುಂತಾದ ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅವುಗಳ ಮಾನಿಟರಿಂಗ್ ವ್ಯವಸ್ಥೆ ಇರಲಿದ್ದು, ಸಮ್ಮೇಳನದ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿ ಸಂಚಾರ ನಿರ್ವಹಣೆಗೆ 5 ಡೋನ್ ಹಾಗೂ 21 ಹ್ಯಾಂಡಿ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. 10 ಕಡೆಗಳಲ್ಲಿ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆ ಏರ್ಪಡಿಸಿರುವುದಾಗಿ ಮಂಡ್ಯ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.