ಮಂಡ್ಯದ ವಿಸಿ ನಾಲೆಗೆ ನಾಲ್ವರು ಪ್ರಯಾಣಿಕರಿದ್ದ ಕಾರು ಪಲ್ಟಿ; ವ್ಯಕ್ತಿ ಸಾವು, ಇಬ್ಬರು ನಾಪತ್ತೆ
ಮಂಡ್ಯದ ವಿಸಿ ನಾಲೆಗೆ ಕಾರು ಬಿದ್ದು ಒಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಒಟ್ಟು ನಾಲ್ವರ ಪೈಕಿ ಇನ್ನಿಬ್ಬರು ಪತ್ತೆಯಾಗಿಲ್ಲ. ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳೀಯರ ನೆರವಿನಿಂದ ಈಜಿ ದಡ ಸೇರಿ ಬದುಕುಳಿದಿದ್ದಾರೆ.

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕಾರೊಂದು ವಿಸಿ ನಾಲೆಗೆ ಬಿದ್ದು, ಒಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಒಟ್ಟು ನಾಲ್ವರ ಪೈಕಿ ಇನ್ನಿಬ್ಬರ ಪತ್ತೆಯಾಗಿಲ್ಲ. ಹೀಗಾಗಿ ಆ ಇಬ್ಬರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತಿಬ್ಬನಹಳ್ಳಿ ಗ್ರಾಮದ ಬಳಿ ವೇಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳೀಯರ ನೆರವಿನಿಂದ ಈಜಿ ದಡ ಸೇರಿ ಬದುಕುಳಿದಿದ್ದಾರೆ. ನಾಪತ್ತೆಯಾಗಿದ್ದ ಇಬ್ಬರಿಗಾಗಿ ಪತ್ತೆಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ.
ಕಾರಿನಲ್ಲಿದ್ದ ನಾಲ್ವರು ಮಂಡ್ಯ ಜಿಲ್ಲೆಯವರೇ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪಾಂಡವಪುರದಿಂದ ಮಂಡ್ಯದತ್ತ ಬರುವಾಗ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಕಾರು ನಾಲೆ ನೀರಿಗೆ ಬಿದ್ದ ಕೂಡಲೇ ಸ್ಥಳೀಯರು ಸ್ಥಳದಲ್ಲಿ ಸೇರಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಾಲೆ ಆಳವಾಗಿದ್ದು, ಸ್ಥಳೀಯರು ಆಗಮಿಸಿ ಕಾರನ್ನು ಮೇಲೆತ್ತಲು ಪ್ರಯತ್ನಿಸಲಾಗಿದೆ.
ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿವೆ. ನಾಲೆಯಲ್ಲಿ ನೀರು ವೇಗವಾಗಿ ಹರಿಯುತ್ತಿದೆ. ನೀರಿಗೆ ಬಿದ್ದ ಕಾರು ಇನ್ನೂ ಸಿಕ್ಕಿಲ್ಲ. ಕಾರು ನೀರಿನ ಆಳದಲ್ಲಿ ಸಿಲಿಕಿದೆಯೇ ಅಥವಾ ನೀರಿನೊಂದಿಗೆ ಕೊಚ್ಚಿ ಹೋಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ ಕಾರಿನಲ್ಲಿರುವ ಇಬ್ಬರು ವ್ಯಕ್ತಿಗಳು ಅದರೊಳಗೆ ಸಿಲಿಕಿದ್ದಾರೆಯೇ ಅಥವಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಸಿಗಬೇಕಿದೆ. ಸ್ಥಳಕ್ಕೆ ಕ್ರೇನ್ ಕರೆಸಿ ರಕ್ಷಣ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಹಿಂದೆಯೂ ನಡೆದಿತ್ತು ದುರಂತ
ಮಂಡ್ಯದಲ್ಲಿ ನಾಲೆಗೆ ವಾಹನ ಬಿದ್ದಿರುವ ಘಟನೆ ಇದೇ ಮೊದಲಲ್ಲ. ತಿಬ್ಬನಹಳ್ಳಿಯ ವಿಶ್ವೇಶ್ವರಯ್ಯ ನಾಲೆಗೆ 2023ರ ಜುಲೈ 23ರಂದು ಕಾರೊಂದು ಬಿದ್ದಿತ್ತು. ಈಗ ಇದೇ ಸ್ಥಳದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮೇಲಿಂದ ಮೇಲೆ ಹಲವು ದುರಂತಗಳು ಸಂಭವಿಸಿದರೂ, ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ.
ಜಿಲ್ಲೆಯ ಹಲವೆಡೆ ವಿಸಿ ನಾಲೆ ಇರುವ ಪಕ್ಕದಲ್ಲೇ ಮಾರ್ಗಗಳಿವೆ. ಹಲವಾರು ವಾಹನಗಳು ನಾಲೆಗೆ ಉರುಳಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಕಡೆ ಇಂತಹ ನಾಲೆಗಳಿಗೆ ತಡೆಗೋಡೆಗಳೇ ಇಲ್ಲ. ಆದರೂ, ಸುರಕ್ಷತಾ ಕ್ರಮಗಳು ಕೈಗೊಳ್ಳಲಾಗುತ್ತಿಲ್ಲ. ನಾಲೆಗಳು ಆಳವಾಗಿದ್ದು ಅಪಾರ ಪ್ರಮಾಣದ ನೀರು ಕೂಡಾ ಇರುತ್ತವೆ. ಜಿಲ್ಲಾಡಳಿತ, ಅಧಿಕಾರಿಗಳು ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಾರಿನಲ್ಲೇ ಶವ ಪತ್ತೆ
ಸಂಜೆಯ ವೇಳೆಗೆ ಕಾರನ್ನು ಮೇಲೆತ್ತಲಾಗಿದೆ. ನಾಪತ್ತೆಯಾಗಿದ್ದ ಇಬ್ಬರಲ್ಲಿ ಒಬ್ಬರ ಮೃತದೇಹ ಕಾರಿನಲ್ಲೇ ಪತ್ತೆಯಾಗಿದೆ. ಇದರೊಂದಿಗೆ ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಸಾವನ್ನಪಿದಂತಾಗಿದೆ. ಒಬ್ಬರನ್ನು ಆರಂಭದಲ್ಲೇ ರಕ್ಷಿಸಲಾಗಿತ್ತು. ಇನ್ನೊಬ್ಬರ ಶವ ಪತ್ತೆಯಾಗಬೇಕಿದೆ.
