Mandya News: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಳಿಗೆ ತೆರೆಯಲು ಆನ್‌ಲೈನ್ ನೋಂದಣಿ, ಡಿ.13ರವರೆಗೆ ಉಂಟು ಅವಕಾಶ
Mandya Sahitya Sammelana: ಮಂಡ್ಯದಲ್ಲಿ ಮುಂದಿನವಾರ ಆರಂಭವಾಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಳಿಗೆಗಳನ್ನು ಪಡೆಯಲು ಆನ್‌ಲೈನ್ ಸೇವೆಗೆ ಚಾಲನೆ ದೊರೆತಿದೆ.
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ಆಯೋಜಿಸಲಾಗುವ ಪುಸ್ತಕ ಮಳಿಗೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಕಾಯ್ದಿರಿಸುವ ಆನ್ ಲೈನ್ ಮಳಿಗೆ ನೋಂದಣಿ ಜಾಲತಾಣಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು ಮೈಸೂರು ಹೆದ್ಧಾರಿಯ ಪಕ್ಕದಲ್ಲೇ ಸಿದ್ದತೆಗಳು ನಡೆದಿದ್ದು, ಮಳಿಗೆಗಳನ್ನು ಹಾಕಲಾಗುತ್ತಿದೆ. ಮುಂದಿನ ವಾರದ ಹೊತ್ತಿಗೆ ಸಿದ್ದತೆಗಳು ಪೂರ್ಣಗೊಳ್ಳಲಿದ್ದು. 491 ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ ಹಾಗೂ 284 ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಲಾಗುವುದು.
ಮಳಿಗೆಗಳನ್ನು ಕಾಯ್ದಿರಿಸಲು ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಕನ್ನಡ ಸಾಹಿತ್ಯ ಸಮ್ಮೇಳನದ ಆನ್ ಲೈನ್ ಪೋರ್ಟಲ್ https://kannadasahithyaparishattu.in/sammelana2024ರಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. 491 ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ, 284 ವಾಣಿಜ್ಯ ಮಳಿಗೆಗಳ ನೋಂದಣಿಗೆ ಅವಕಾಶವಿದೆ.
ಹೇಗಿರಲಿದೆ ನೋಂದಣಿ ವ್ಯವಸ್ಥೆ
ಡಿ.13ರವರೆಗೆ ಸ್ಟಾಲ್ ಗಳ ಆನ್ ಲೈನ್ ನೋಂದಣಿ ಮಾಡಿಕೊಳ್ಳಬಹುದಾಗಿದೆ. 10*10 ವಿಸ್ತೀರ್ಣದ ಮಳಿಗೆಗಳಿಗೆ 4 ಸಾವಿರ 10*15 ವಿಸ್ತೀರ್ಣದ ಮಳಿಗೆಗಳಿಗೆ 6 ಸಾವಿರ ರೂ. ನಿಗದಿಪಡಿಸಲಾಗಿದೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್ ಲೈನ್ ನೋಂದಣಿ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಂಡ್ಯ ಜಿಲ್ಲಾಡಳಿತ ತಿಳಿಸಿದೆ.
ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡವರಿಗೆ ಮಳಿಗೆಗಳನ್ನುಹಂಚಿಕೆ ಮಾಡಲಾಗುವುದು. ಸಮ್ಮೇಳನದ ವೇಳೆ ಅವರು ಮಳಿಗೆಗಳನ್ನು ಬಳಸಿಕೊಳ್ಳಬಹುದು. ಈಗಾಗಲೇ ಸಾಮಾನ್ಯ ಹಾಗೂ ವಾಣಿಜ್ಯ ಮಳಿಗೆಗಳಿಗೆ ಪ್ರತ್ಯೇಕ ದರಗಳನ್ನು ನಿಗದಿಮಾಡಲಾಗಿದ್ದು, ಆ ಮೊತ್ತವನ್ನು ಪಾವತಿಸಬೇಕು ಎಂದು ತಿಳಿಸಲಾಗಿದೆ.
ಸಚಿವರಿಂದ ಚಾಲನೆ
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಚಲುವರಾಯಸ್ವಾಮಿ ಅವರು ಇದೇ ವೇಳೆ ಸಾಂಕೇತಿಕವಾಗಿ ಆನ್ ಲೈನ್ ನೋಂದಣಿ ಮಾಡಿದ ವ್ಯಾಪಾರಿಗಳಿಗೆ ದೃಢೀಕರಣ ಪತ್ರವನ್ನು ನೀಡಿದರು.
ಆನ್ ಲೈನ್ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ 31 ಜಿಲ್ಲೆಗಳಿಂದ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆಯ ಸಾಹಿತ್ಯ, ಕಲೆ, ಸಂಸ್ಕೃತಿ, ಪರಂಪರೆ, ಕೃಷಿ, ಕೈಗಾರಿಕೆ ಇತ್ಯಾದಿ ಕ್ಷೇತ್ರಗಳ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಆಕರ್ಷಕವಾದ ವಸ್ತು ಪ್ರದರ್ಶನ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ರವಿಕುಮಾರ್, ರಮೇಶ್ ಬಾಬು ಬಂಡೀಸಿದ್ದೇಗೌಡರು, ದಿನೇಶ್ ಗೂಳಿಗೌಡರು, ಕಸಾಪ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಓ ಶೇಖ್ ತನ್ವೀರ್ ಆಸೀಫ್, ನಗರಸಭಾ ಅಧ್ಯಕ್ಷರಾದ ಪ್ರಕಾಶ್, ಮುಡಾ ಅಧ್ಯಕ್ಷರಾದ ನಹೀಮ್, ಕಸಾಪ ಜಿಲ್ಲಾ ಸಂಚಾಲಕರಾದ ಮೀರಾ ಶಿವಲಿಂಗಯ್ಯ, ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಹುಸ್ಕೂರು, ಅಪ್ಪಾಜಪ್ಪ ಸೇರಿದಂತೆ ನಗರಸಭಾ ಸದಸ್ಯರು, ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.