ಕನ್ನಡ ಸುದ್ದಿ  /  ಕರ್ನಾಟಕ  /  Mandya Result: ಮಂಡ್ಯ ಕ್ಷೇತ್ರದಲ್ಲಿ ಕೈ ಬಲದ ವಿರುದ್ದ ಗೆದ್ದ ಕುಮಾರಸ್ವಾಮಿ, ಮಗನ ಸೋಲಿನ ಸೇಡು ತೀರಿಸಿಕೊಂಡ ಎಚ್ಡಿಕೆ

Mandya Result: ಮಂಡ್ಯ ಕ್ಷೇತ್ರದಲ್ಲಿ ಕೈ ಬಲದ ವಿರುದ್ದ ಗೆದ್ದ ಕುಮಾರಸ್ವಾಮಿ, ಮಗನ ಸೋಲಿನ ಸೇಡು ತೀರಿಸಿಕೊಂಡ ಎಚ್ಡಿಕೆ

ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಜೆಡಿಎಸ್‌ ಪಾಲಿಗೆ ಪ್ರತಿಷ್ಠೆ ಭಾರೀ ಪ್ರತಿಷ್ಠೆ ಎನಿಸಿದ್ದ ಮಂಡ್ಯ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ನ ಅಭ್ಯರ್ಥಿ ಸ್ಟಾರ್‌ಚಂದ್ರು ಅವರನ್ನು 284620 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಮಂಡ್ಯ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಗೆದ್ದಿದ್ದಾರೆ ಕುಮಾರಸ್ವಾಮಿ
ಮಂಡ್ಯ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಗೆದ್ದಿದ್ದಾರೆ ಕುಮಾರಸ್ವಾಮಿ

ಮಂಡ್ಯ: ಈ ಬಾರಿ ಮಂಡ್ಯ ಲೋಕಸಭೆ ಚುನಾವಣೆಯ ಫಲಿತಾಂಶ ಜೆಡಿಎಸ್‌ ಪರವಾಗಿದೆ. ಹಿಂದಿನ ಅವಧಿಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಸೋತಿದ್ದ ಕಾರಣದಿಂದ ಮಗನ ಬದಲು ತಾವೇ ನಿಂತು ಕುಮಾರಸ್ವಾಮಿ ಅವರು ಗೆದ್ದು ಹಿಂದಿನ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ಹಾಗೂ ಸಾಲಿಗ್ರಾಮ ತಾಲ್ಲೂಕುಗಳನ್ನು ಒಳಗೊಂಡ ಮಂಡ್ಯ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯೇ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಇಲ್ಲಿ ಕಾಂಗ್ರೆಸ್‌ ಶಕ್ತಿ ಪ್ರಬಲವಾಗಿದ್ದು, ರಾಜಕೀಯ ತಂತ್ರಗಾರಿಕೆ, ಅನುಕಂಪದ ಮೇಲೆ ಜೆಡಿಎಸ್‌ನ ಕುಮಾರಸ್ವಾಮಿ ಗೆದ್ದಿದ್ದಾರೆ. ಬಹುಕೋಟಿ ಕುಳ ಸ್ಟಾರ್‌ ಚಂದ್ರು ತಮ್ಮೆಲ್ಲ ಶಕ್ತಿ ಧಾರೆ ಎರೆದರೂ, ಕಾಂಗ್ರೆಸ್‌ ಇಲ್ಲಿಗೆ ರಾಹುಲ್‌ಗಾಂಧಿ ಅವರನ್ನು ಕರೆ ತಂದರೂ ಗೆಲ್ಲಲು ಆಗಿಲ್ಲ.

ಇಡೀ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಫಲಿತಾಂಶ ಏನಾಗುತ್ತದೋ ಎನ್ನುವ ಕುತೂಹಲವಿತ್ತು. ಕಳೆದ ಬಾರಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಮಾತ್ರವಲ್ಲದೇ ಬಿಜೆಪಿ, ಜೆಡಿಎಸ್‌ ನವರ ಬೆಂಬಲ ಪಡೆದು ಸುಮಲತಾ ಗೆದ್ದು ಇತಿಹಾಸ ನಿರ್ಮಿಸಿದ್ದರು. ಈ ಬಾರಿ ಅವರು ಬಿಜೆಪಿಗೆ ಸೇರಿದರೂ ಜೆಡಿಎಸ್‌ನೊಂದಿಗೆ ಮೈತ್ರಿ ಏರ್ಪಟ್ಟಿತ್ತು.

ಸುಮಲತಾ ಅವರಿಗೆ ಟಿಕೆಟ್‌ ಸಿಗುತ್ತದೆಯೋ ಇಲ್ಲವೋ ಎನ್ನುವ ಗೊಂದಲ ನಡುವೆಯೇ ಎಲ್ಲವನ್ನೂ ಬಗೆಹರಿಸಿ ಕುಮಾರಸ್ವಾಮಿ ಅವರೇ ಕಣಕ್ಕಿಳಿದಿದ್ದರು. ಹೀಗಿದ್ದರೂ ಬೆಂಬಲ ಸೂಚಿಸಿದ ಸುಮಲತಾ ಪ್ರಚಾರಕ್ಕೆ ಬಂದಿರಲಿಲ್ಲ. ಇವೆಲ್ಲದರ ನಡುವೆ ಕುಮಾರಸ್ವಾಮಿ ಭಾರೀ ಅಂತರದಲ್ಲಿ ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗಲು ಅಣಿಯಾಗುತ್ತಿದ್ದಾರೆ.

ಜೆಡಿಎಸ್‌ ಗೆಲುವಿನ ಕಾರಣ

  • ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದು ಫಲ ನೀಡಿತು
  • ಅನುಕಂಪವೂ ಅವರಿಗೆ ಕೈ ಹಿಡಿಯಿತು
  • ಜೆಡಿಎಸ್‌ ಬಿಜೆಪಿ ಒಗ್ಗಟ್ಟಾಗಿ ಕೆಲಸ ಮಾಡಿದರು
  • ಇದು ಜೆಡಿಎಸ್‌ ಭದ್ರಕೋಟೆ ಎನ್ನುವ ಬಲ

ಕಾಂಗ್ರೆಸ್‌ ಸೋತಿದ್ದೇಕೆ

  • ಕಾಂಗ್ರೆಸ್‌ನ ಅತಿಯಾದ ಆತ್ಮವಿಶ್ವಾಸ
  • ಕೋಟಿ ಕುಳ ಒಬ್ಬರಿಗೆ ಅವಕಾಶ ನೀಡಿದ ಅಸಮಾಧಾನ
  • ಗಂಭೀರವಾಗಿ ಪ್ರಚಾರ ಮಾಡದೇ ಇದ್ದುದು

ಮಂಡ್ಯ ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಮಂಡ್ಯ

ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ( ಜೆಡಿಎಸ್):851881 ಮತಗಳು

ಸ್ಟಾರ್‌ ಚಂದ್ರು (ಕಾಂಗ್ರೆಸ್‌): 567261 ಮತಗಳು

ಮಂಡ್ಯ ಎಂದರೆ

ರಾಜಕಾರಣದಲ್ಲಿ ಮಂಡ್ಯಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಎಲ್ಲವನ್ನೂ ರಾಜಕಾರಣದ ನೆಲೆಯಲ್ಲಿ ನೋಡುವ ಮಂಡ್ಯದ ಮತದಾರರು ಬೇಕೆಂದರೆ ಗೆಲ್ಲಿಸಿ ಮೆರೆಸುತ್ತಾರೆ. ಬೇಡವೆಂದರೆ ಸೋಲಿಸಿ ಮನೆಯಲ್ಲಿ ಕೂರಿಸುತ್ತಾರೆ. ಸ್ವಾಭಿಮಾನದ ರಾಜಕಾರಣಕ್ಕೆ ಮಂಡ್ಯ ಹೆಸರುವಾಸಿ. ಇಲ್ಲಿಂದ ಘಟಾನುಘಟಿಗಳೇ ಸಂಸದರಾಗಿದ್ದಾರೆ. ಕೆ.ವಿ.ಶಂಕರಗೌಡ, ಎಸ್.ಎಂ.ಕೃಷ್ಣ, ಜಿ.ಮಾದೇಗೌಡ, ಕೆಆರ್‌ಪೇಟೆ ಕೃಷ್ಣ, ಅಂಬರೀಷ್‌ ಸಂಸದರಾಗಿದ್ದಾರೆ. ನಟಿ ಸುಮಲತಾ ಅಂಬರೀಷ್‌ ಹಾಗೂ ರಮ್ಯಾ ಕೂಡ ಈ ಕ್ಷೇತ್ರದ ಪ್ರತಿನಿಧಿಗಳು. ಇಲ್ಲಿ ಕಾಂಗ್ರೆಸ್‌, ಜನತಾದಳ ಗೆದ್ದಿವೆ. ಕಳೆದ ಬಾರಿ ಪಕ್ಷೇತರರಾಗಿ ಸುಮಲತಾ ಗೆದ್ದಿದ್ದು ಇಲ್ಲಿನ ವಿಶೇಷ. ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್‌ ಕುಮಾರಸ್ವಾಮಿ ಕಳೆದ ಬಾರಿ ಸೋತಿದ್ದರು.

ಕುಮಾರಸ್ವಾಮಿ ಪರಿಚಯ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪುತ್ರ ಎಚ್‌.ಡಿ.ಕುಮಾರಸ್ವಾಮಿ. ಹತ್ತು ವರ್ಷದ ನಂತರ ಎಚ್‌.ಡಿ.ಕುಮಾರಸ್ವಾಮಿ ಅವರು ಲೋಕಸಭೆ ಪ್ರವೇಶಿಸುತ್ತಿದ್ದಾರೆ. ಈ ಹಿಂದೆ ಕನಕಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಅವರು ಸಂಸದರಾಗಿದ್ದರು. ಹೆಚ್ಚು ಬಾರಿ ವಿಧಾನಸಭೆಯಲ್ಲಿಯೇ ಇರುವ ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದ ಅನುಭವ ಹೊಂದಿದಾರೆ. ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್‌ ಮೈತ್ರಿಯೊಂದಿಗೆ. ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿ ಕೆಲಸ ಮಾಡುತ್ತಿದ್ದಾರೆ. ಹಾಲಿ ಚನ್ನಪಟ್ಟಣದ ಶಾಸಕರು. ಕೊನೆ ಕ್ಷಣದಲ್ಲಿ ಮಂಡ್ಯ ಕ್ಷೇತ್ರದಿಂದ ತಾವೇ ಲೋಕಸಭಾ ಚುನಾವಣೆಗೆ ಕಣಕ್ಕಿಳಿದರು ಕುಮಾರಸ್ವಾಮಿ.

(Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.)

ಟಿ20 ವರ್ಲ್ಡ್‌ಕಪ್ 2024