ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯ ಜಮೀನು ಪರಭಾರೆ ವಾಪಸ್, ಅನ್ಯಕ್ರಾಂತ ಮಾಡಿದ್ದರೆ ಕ್ರಿಮಿನಲ್ ಮೊಕದ್ದಮೆ: ಮುಜರಾಯಿ ಇಲಾಖೆ ಸೂಚನೆ
ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲಕ್ಕೆ ಸೇರಿದ ಎಲ್ಲಾ ಜಮೀನುಗಳನ್ನು ಮರಳಿ ಪಡೆಯುವ ಪ್ರಕ್ರಿಯೆಯನ್ನು ಧಾರ್ಮಿಕ ದತ್ತಿ ಇಲಾಖೆ ಆರಂಭಿಸಿದೆ.
ಮಂಡ್ಯ: ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಮಂಡ್ಯ ಜಿಲ್ಲೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಸರ್ವೇ ನಂಬರಿನ ಎಲ್ಲಾ ಜಮೀನುಗಳು ದೇವಾಲಯದ ಹೆಸರಿಗೆ ಒಂದು ವಾರದೊಳಗೆ ಖಾತೆಯಾಗಬೇಕು. ಕಂದಾಯ ಇಲಾಖೆ ವಿವಿಧ ಹಂತದ ಅಧಿಕಾರಿಗಳಿಂದ ಮೇಲುಕೋಟೆ ದೇವಾಲಯಕ್ಕೆ ಸೇರಿ ಪರಭಾರೆಯಾಗಿದ್ದ ಜಮೀನುಗಳನ್ನು ಕೂಡಲೆ ಹಿಂದಕ್ಕೆ ಪಡೆಯಬೇಕು. ಮೇಲುಕೋಟೆಯಲ್ಲಿ ದೇವಾಲಯಕ್ಕೆ ಸೇರಿದ ಜಮೀನನ್ನು ಉಳುವವವನಿಗೆ ಭೂಮಿ ಯೋಜನೆಯಲ್ಲಿ ಭೂನ್ಯಾಯಮಂಡಳಿಯಲ್ಲಿ ತೀರ್ಮಾನಿಸಿ ಖಾತೆ ಮಾಡಿಕೊಂಡಿದ್ದಾರೆ. ಇದು ಕಾನೂನು ವಿರೋಧಿ ಕ್ರಮವಾಗಿದೆ ಸುಪ್ರೀಂಕೋರ್ಟ್ ಆದೇಶದಂತೆ ಇಂತಹ ಜಮೀನುಗಳನ್ನು ದೇವಾಲಯದ ವಶಕ್ಕೆ ಮರಳಿ ಪಡೆಯಬೇಕಾಗಿದ್ದು ಖಾತೆಗಳನ್ನು ರದ್ದುಮಾಡಿ ಜಮೀನುಗಳನ್ನು ಚೆಲುವನಾರಾಯಣನ ಆಸ್ತಿಯಾಗಿ ಉಳಿಸಿಕೊಳ್ಳಬೇಕು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ನೀಡಿದೆ.
ದೇವಾಲಯದ ಜಮೀನುಗಳನ್ನು ಅನ್ಯಕ್ರಾಂತ ಉದ್ದೇಶಗಳಿಗೆ ಖಾತೆಮಾಡಿಕೊಟ್ಟಿದ್ದರೆ ಅಂತಹ ಕಂದಾಯ ಇಲಾಖಾ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ಇಂತಹ ಜಮೀನುಗಳಿದ್ದರೆ ಹಾಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಖಾತೆ ರದ್ದುಮಾಡಿ ಉಪವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದು ಸರ್ಕಾರದ ಕಟ್ಟುನಿಟ್ಟಿನ ತೀರ್ಮಾನವೂ ಹೌದು.
ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನುಗಳ ಸ್ಥಳಕ್ಕೆ ಭೇಟಿ ನೀಡಿದ ಧಾರ್ಮಿಕದತ್ತಿ ಇಲಾಖೆ ಆಯುಕ್ತ ಡಾ.ಎಂ.ವಿ. ವೆಂಕಟೇಶ್ ಕಂದಾಯ ಇಲಾಖೆ ಅಧಿಕಾರಿಗಳಿಂದ ಜಮೀನುಗಳ ವಿವರ ಪಡೆದು ಪರಿಶೀಲನೆ ನಡೆಸಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಏನಿದು ಭೂ ವಿವಾದ
ಚೆಲುವನಾರಾಯಣಸ್ವಾಮಿಗೆ ಸೇರಿದ ಜಮೀನು ಮೇಲುಕೋಟೆ, ಕೆ.ಆರ್.ಪೇಟೆ ತಾಲ್ಲೂಕು ಮೈಲನಹಳ್ಳಿ ಹಾಗೂ ಮೈಸೂರು ಕೆಸರೆ ಬಳಿಯಿರುವ ದಾಖಲೆಗಳಿವೆ. ಇದೆಲ್ಲವನ್ನೂ ಮರಳಿ ಮೇಲುಕೋಟೆ ದೇವಾಲಯದ ಹೆಸರಿಗೆ ಸೇರಿಸುವ ಕಾರ್ಯ ನಡೆದಿದೆ. ಮೇಲುಕೋಟೆ ಸಂಸ್ಕೃತ ಸಂಶೋಧನಾ ಸಂಸ್ಥೆಗೆ ಮಂಜೂರು ಮಾಡಿದ್ದ ಅಗತ್ಯವಿರುವ ಜಮೀನನ್ನು ಸಂಸ್ಥೆಗೆ ಉಳಿಸಿ ಉಳಿಕೆ ಜಮೀನನ್ನು ದೇವಾಲಯದ ವಶಕ್ಕೆ ಪಡೆಯುವ ಸಂಬಂಧವೂ ಸೂಚನೆ ನೀಡಲಾಗಿದೆ. ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನುಗಳು ಕರ್ನಾಟಕದ ಯಾವುದೇ ಸ್ಥಳದಲ್ಲಿದ್ದರೂ ಮಾಹಿತಿ ನೀಡಬಹುದು.
ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಜಮೀನುಗಳನ್ನು ದೇವಾಲಯದ ಹೆಸರಿಗೆ ಇಂದೀಕರಿಸಬೇಕು. ಗ್ರಾಮಪಂಚಾಯಿತಿ ದೇವಾಲಯದ ಜಮೀನಿನಲ್ಲಿ ಬೇರೆ ಯಾರಿಗಾದರೂ ಖಾತೆ ಮಾಡಿಕೊಟ್ಟಿದ್ದರೆ ತಕ್ಷಣ ರದ್ದುಮಾಡಿ ವರದಿ ಮಾಡಬೇಕು. ಈ ನಿಟ್ಟಿನಲ್ಲಿ ಮೇಲುಕೋಟೆ ಗ್ರಾಮಪಂಚಾಯಿತಿಗೆ ತಕ್ಷಣವೇ ಪತ್ರಬರೆಯಿರಿ. ಜಮೀನುಗಳನ್ನು ಇಂದೀಕರಿಸಿದ ಮಾಹಿತಿಯನ್ನೂ ತಕ್ಷಣ ನೀಡಬೇಕು ಎಂದು ಆದೇಶಿಸಲಾಗಿದೆ.
ಸಿಎಟಿ ಮೊರೆ ಹೋಗಲು ಸೂಚನೆ
ಮೇಲುಕೋಟೆಯಲ್ಲಿ ದೇವಾಲಯಕ್ಕೆ ಸೇರಿದ ಜಮೀನನ್ನು ಉಳುವವವನಿಗೆ ಭೂಮಿ ಯೋಜನೆಯಲ್ಲಿ ಭೂನ್ಯಾಯಮಂಡಳಿಯಲ್ಲಿ ತೀಮರ್ಾನಿಸಿ ಖಾತೆಮಾಡಿಕೊಂಡಿದ್ದಾರೆ. ಇದು ಕಾನೂನು ವಿರೋಧಿ ಕ್ರಮವಾಗಿದೆ ಸುಪ್ರೀಂಕೋರ್ಟ್ ಆದೇಶದಂತೆ ಇಂತಹ ಜಮೀನುಗಳನ್ನು ದೇವಾಲಯದ ವಶಕ್ಕೆ ಮರಳಿಪಡೆಯಬೇಕಾಗಿದ್ದು, ಖಾತೆಗಳನ್ನು ರದ್ದುಮಾಡಿ ಜಮೀನುಗಳನ್ನು ಚೆಲುವನಾರಾಯಣನ ಆಸ್ತಿಯಾಗಿ ಉಳಿಸಿಕೊಳ್ಳಲು ಸಿಎಟಿಯಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕರಣ ದಾಖಲಿಸಬೇಕು ಎನ್ನುವ ನಿರ್ದೇಶನವನ್ನೂ ಧಾರ್ಮಿಕ ದತ್ತಿ ಇಲಾಖೆ ನೀಡಿದೆ.
ಇತರೆಡೆ ಇದ್ದರೂ ದೂರು ನೀಡಿ
ರಾಜ್ಯಸರ್ಕಾರದ ತೀರ್ಮಾನದಂತೆ ಪರಭಾರೆಯಾಗಿದ್ದ ದೇಗುಲಗಳ ಜಮೀನುಗಳನ್ನು ಆಯಾಯ ದೇವಾಲಯದ ಹೆಸರಿಗೆ ಇಂದೀಕರಿಸುವ ಆಂದೋಲನವನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿಯ ಕಾರ್ಯಕ್ರಮವಾಗಿದ್ದು, ಇದಕ್ಕಾಗಿಯೇ ಇಲಾಖೆಯಲ್ಲಿ ಕಾನೂನು ವಿಭಾಗ ಆರಂಭಿಸಲಾಗಿದೆ. ಈವರೆಗೆ 12 ಸಾವಿರ ಎಕರೆ ಭೂಮಿಯನ್ನು ವಿವಿಧ ದೇಗುಲಗಳ ಹೆಸರಿಗೆ ಇಂದೀಕರಿಸುವ ಕಾರ್ಯಮಾಡಲಾಗಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ. ಯಾವುದೇ ಮುಜರಾಯಿ ದೇವಾಲಯಗಳ ಜಮೀನುಗಳು ಈ ರೀತಿಯಲ್ಲಿ ಪರಭಾರೆಯಾಗಿದ್ದರೆ ಇಲ್ಲವೇ ಅನ್ಯಕ್ರಾಂತ ಆಗಿರುವ ಕುರಿತು ಭಕ್ತರು ಧಾರ್ಮಿಕದತ್ತಿ ಇಲಾಖೆಗೆ ದಾಖಲೆ ಸಹಿತವಾಗಿ ದೂರು ನೀಡಿದರೆ ಮತ್ತೆ ದೇವಾಲಯದ ವಶಕ್ಕೆ ಪಡೆಯಲಾಗುತ್ತದೆ ಎನ್ನುವುದು ಧಾರ್ಮಿಕದತ್ತಿ ಇಲಾಖೆ ಆಯುಕ್ತ ಡಾ.ಎಂ.ವಿ. ವೆಂಕಟೇಶ್ ನೀಡುವ ವಿವರಣೆ.