Melkote News: ಮೇಲುಕೋಟೆಯಲ್ಲಿ ಫೆಬ್ರವರಿ 5ರಂದು ಶ್ರೀಚೆಲುವನಾರಾಯಣನ ರಥಸಪ್ತಮಿ, 800 ಕಲಾವಿದರಿಂದ ಜನಪದ ಕಾರ್ಯಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  Melkote News: ಮೇಲುಕೋಟೆಯಲ್ಲಿ ಫೆಬ್ರವರಿ 5ರಂದು ಶ್ರೀಚೆಲುವನಾರಾಯಣನ ರಥಸಪ್ತಮಿ, 800 ಕಲಾವಿದರಿಂದ ಜನಪದ ಕಾರ್ಯಕ್ರಮ

Melkote News: ಮೇಲುಕೋಟೆಯಲ್ಲಿ ಫೆಬ್ರವರಿ 5ರಂದು ಶ್ರೀಚೆಲುವನಾರಾಯಣನ ರಥಸಪ್ತಮಿ, 800 ಕಲಾವಿದರಿಂದ ಜನಪದ ಕಾರ್ಯಕ್ರಮ

Melkote News: ಮಂಡ್ಯ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ತಾಣ ಮೇಲುಕೋಟೆಯಲ್ಲಿ 2025ರ ರಥಸಪ್ತಮಿ ಫೆಬ್ರವರಿ 5ರಂದು ನಡೆಯಲಿದ್ದು, ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಲಿದೆ.

ಮೇಲುಕೋಟೆಯಲ್ಲಿ ರಥಸಪ್ತಮಿ ಹಾಗೂ ಕಲಾ ತಂಡಗಳ ಪ್ರದರ್ಶನ
ಮೇಲುಕೋಟೆಯಲ್ಲಿ ರಥಸಪ್ತಮಿ ಹಾಗೂ ಕಲಾ ತಂಡಗಳ ಪ್ರದರ್ಶನ

ಮೇಲುಕೋಟೆ : ಭಾರತೀಯಸಂಸ್ಕೃತಿಯ ಜೀವನಾಡಿಯಾಗಿರುವ ಜಾನಪದಕಲೆಗಳಿಗೆ ಮೂರು ದಶಕಗಳಿಂದ ವೇದಿಕೆಯಾದ ಮಂಡ್ಯ ಜಿಲ್ಲೆಯ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ಜಾನಪದ ಜಾತ್ರೆ, ರಥಸಪ್ತಮಿ ಮಹೋತ್ಸವ ಫೆಬ್ರವರಿ 5ರಂದು ನಡೆಯಲಿದೆ. ರಥಸಪ್ತಮಿಯ ಬುದವಾರ ಮುಂಜಾನೆ 6 ಗಂಟೆಗೆ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಗೆ ಸ್ವರ್ಣಲೇಪಿತ ಸೂರ್ಯಮಂಡಲ ವಾಹನೋತ್ಸವದ ವೇಳೆ ಸ್ಥಾನೀಕಂನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿರುವ 26ನೇ ವರ್ಷದ ರಾಜ್ಯಮಟ್ಟದ ಜಾನಪದ ಕಲಾಮೇಳದಲ್ಲಿ 60ಕ್ಕೂ ಹೆಚ್ಚುತಂಡಗಳ 800ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡು ಅಭೂತಪೂರ್ವ ಕಲಾರಾಧನೆಯ ಸೇವೆ ಮಾಡಲಿದ್ದಾರೆ.

ರಥಸಪ್ತಮಿ ದಿನದಂದು ಚೆಲುವನಾರಾಯಣಸ್ವಾಮಿಯ ಮೆರವಣಿಗೆ ಮೇಲುಕೋಟೆಯಲ್ಲಿ ನಡೆಯಲಿದೆ. ಅಂದು ವಿಶೇಷ ಪೂಜೆ,ಧಾರ್ಮಿಕ ವಿಧಿ ವಿಧಾನಗಳ ಜತೆಯಲ್ಲಿ ಕಲಾ ಸೇವೆಯೂ ವಿಶಿಷ್ಟವಾಗಿ ಇರುತ್ತದೆ.

ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸುವ ಕಲಾವಿದರು ದಸರಾ ಮೆರವಣಿಗೆಯನ್ನು ನೆನಪಿಸುವಂತೆ ತಮ್ಮ ತಂಡದೊಂದಿಗೆ ರಥಸಪ್ತಮಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ವರ್ಷದಿಂದ ವರ್ಷಕ್ಕೆ ಕಲಾ ತಂಡಗಳು ಹಾಗೂ ಕಲಾವಿದರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ.

60 ಜಾನಪದ ಕಲಾತಂಡಗಳ 800 ಮಂದಿಕಲಾವಿದರು

ಅಂದು ಮುಂಜಾನೆ ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಜಾನಪದಜಾತ್ರೆ ನಡೆಯಲಿದ್ದು ಮೇಲುಕೋಟೆಯ ಚತುರ್ವೀದಿಗಳೇ ಜಾನಪದಕಲೆಗಳಿಗೆ ವೇದಿಕೆಯಾಗಲಿದೆ. ತಮಟೆ, ನಗಾರಿ, ಚಂಡೆಗಳ ನಿನಾದ ಮೈನವಿರೇಳುವಂತೆ ಮಾಡುತ್ತದೆ. ಗಾರುಡಿಗೊಂಬೆಗಳ ನರ್ತನ ನೋಡುಗರನ್ನು ಜನಪದಲೋಕಕ್ಕೆ ಕರೆದೊಯ್ಯುತ್ತದೆ.

ಈ ವರ್ಷದ ಕಲಾಮೇಳದಲ್ಲಿ ಕೇರಳದ ಚೆಂಡೆಮೇಳ, ಮಾರೇಹಳ್ಳಿಯ ಚಿಲಿಪಿಲಿಗೊಂಬೆ, ಕೊತ್ತತ್ತಿಯ ಮರಗಾಲುಕುಣಿತ, ಚಿಕ್ಕಮಗಳೂರಿನ ಹುಲಿವೇಷ, ಕೀಲುಕುದುರೆ, ಕರಗದನೃತ್ಯ, ಮೈಸೂರು ನಗಾರಿ, ಹುಬ್ಬಳ್ಳಿಯ ಜಗ್ಗಲಿಗೆ ಮೇಳ, ಸಾಂಬಾಳ್‌ ನೃತ್ಯ, ಲಕ್ಷ್ಮೀಸಾಗರದ ನಾಸಿಕ್‌ಡೋಲ್‌, ಹಾಸನದ ಕರಡಿಮಜಲು, ಮಂಡ್ಯಜಿಲ್ಲೆಯ ನಂದಿಕಂಬ, ಪಟಕುಣಿತ ಭಾಗವಹಿಸಲಿವೆ.

ಇದಲ್ಲದೇ ಗಾರುಡಿಗೊಂಬೆ, ಹುಲಿವೇಷ, ವೀರಗಾಸೆ. ಕೋಲಾಟ, ಡೊಳ್ಳುಕುಣಿತ, ಜಾಂಜ್‌ ಮೇಳ, ಸೋಮನ ಕುಣಿತ. ಚಕ್ರಾದಿ ಬಳೆ, ಖಡ್ಗಪವಾಡ, ವೀರಭದ್ರನ ಕುಣಿತ, ಶಾಲಾ ಮಕ್ಕಳ 101ಕಳಶ, ವೀರಮಕ್ಕಳಕುಣಿತ, ಕಂಸಾಳೆ, ನಾದಸ್ವರ, ಚಂಡೆನಗಾರಿ, ಜಡೆಕೋಲಾಟ, ಭಾಗವಂತಿಕೆಮೇಳ, ದಾಸಯ್ಯರದರ್ಶನ, ಮಹಿಳಾಡೊಳ್ಳು, ರಾಮನಗರದ ಯಕ್ಷಗಾನಗೊಂಬೆಗಳು, ಕೋಳಿನೃತ್ಯ, ಕರಡಿಕುಣಿತ ಸೇರಿದಂತೆ ಗ್ರಾಮೀಣ ಸಂಸ್ಕೃತಿ ಅನಾವರಣಗೊಳಿಸುವ ಕರ್ನಾಟಕದ ಪ್ರಮುಖ ಜಾನಪದ ಕಲಾಪ್ರಕಾರಗಳ ಬಹುತೇಕ ತಂಡಗಳು ಭಾಗವಹಿಸುತ್ತಿವೆ.

ಮಹಿಳಾ ಕಲಾತಂಡಗಳ ವೈಭವ

ಈ ವರ್ಷ ಕಲಾಮೇಳದಲ್ಲಿ ಮಹಿಳಾ ಕಲಾತಂಡಗಳು ಮೇಳೈಸಲಿದೆ. ಮಹಿಳಾಚಂಡೆ, ಕೋಲಾಟ, ಯಕ್ಷಗಾನ ವೈಭವ, ಮಹಿಳಾ ಡೊಳ್ಳುಕುಣಿತ, ಮಹಿಳಾ ವೀರಗಾಸೆ, ಮಹಿಳಾ ಕೋಲಾಟ ವಿದ್ಯಾರ್ಥಿನಿಯರ ಕಳಸ ತಂಡ ಹೀಗೆ 200ಕ್ಕೂ ಹೆಚ್ಚು ಮಹಿಳಾ ಕಲಾವಿದರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ

ಪಾಂಡವಪುರ ಜಿಜೆಸಿ ಮಕ್ಕಳ ಬ್ಯಾಂಡ್ ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಬಳಿಘಟ್ಟ, ಅಮೃತಿ, ಮೇಲುಕೋಟೆಯ ವಿವಿಧ ಶಾಲೆಯ ಮಕ್ಕಳು ಸಹ ಭಾಗವಹಿಸಿ ಪ್ರತಿಬೆಯನ್ನು ಅನಾವರಣ ಮಾಡಲಿದ್ದಾರೆ ಎನ್ನುತ್ತಾರೆ ಕಲಾಮೇಳದ ಸಂಘಟಕರಾದ ಸೌಮ್ಯಸಂತಾನಂ ಹಾಗೂ ಕಲಾವಿದ ಕದಲಗೆರೆ ಶಿವಣ್ಣಗೌಡ.

ಉಸ್ತುವಾರಿ ಸಚಿವರ ಚಾಲನೆ

ಮಂಡ್ಯಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ದಂಪತಿಗಳು ಕಲಾಮೇಳ ಉದ್ಘಾಟಿಸಲಿದ್ದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆವಹಿಸಲಿದ್ದಾರೆ. ರಾಜ್ಯಮಟ್ಟದ ಜಾನಪದಕಲಾಮೇಳದಲ್ಲಿ ಕನರ್ಾಟಕದ ಎಲ್ಲಾ ಪ್ರಮುಖ ಜಾನಪದ ಕಲಾಪ್ರಕಾರಗಳ ಜೊತೆಗೆಕೇರಳದ ತಂಡಗಳು ಭಾಗವಹಿಸಲಿದೆ. ಸವರ್ಣಲೇಪಿತ ಸೂರ್ಯಮಂಡಲ ವಾಹನೋತ್ಸವ ಸಂಭ್ರಮದ ಕ್ಷಣದ ಜೊತೆಗೆ ನೂರಾರು ಕಲಾವಿದರ ಜಾನಪದ ಕಲಾವೈಭವ ಆಕರ್ಷಕವಾಗಿರಲಿದೆ ಎಂದು ಯತಿರಾಜದಾಸ ಗುರುಪೀಠದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್‌ ಗುರೂಜಿ ತಿಳಿಸಿದ್ದಾರೆ.

Whats_app_banner