ಕನ್ನಡ ಸುದ್ದಿ  /  Karnataka  /  Mandya News After Tumkur Hassan Now Registration For Copra Procurement At Mandya District From March 4th Kub

Mandya News: ತುಮಕೂರು, ಹಾಸನ ನಂತರ ಮಂಡ್ಯದಲ್ಲೂ ಉಂಡೆ ಕೊಬ್ಬರಿಗೆ ನೋಂದಣಿ, ಪ್ರಕ್ರಿಯೆ ಹೀಗೆ

ಒಣ ಕೊಬ್ಬರಿ ಖರೀದಿ ಪ್ರಕ್ರಿಯೆ ಈಗ ಮಂಡ್ಯ ಜಿಲ್ಲೆಯಲ್ಲಿ ಆರಂಭವಾಗವಾಗುತ್ತಿದ್ದು, ಇದಕ್ಕಾಗಿ ರೈತರಿಗೆ ಹಲವಾರು ಸೂಚನೆಗಳನ್ನು ನೀಡಲಾಗಿದೆ.

ಮಂಡ್ಯ ಜಿಲ್ಲೆಯಲ್ಲೂ ಒಣ ಕೊಬ್ಬರಿ ಖರೀದಿಗೆ ಸೋಮವಾರದಿಂದ ನೋಂದಣಿ ಶುರುವಾಗಲಿದೆ.
ಮಂಡ್ಯ ಜಿಲ್ಲೆಯಲ್ಲೂ ಒಣ ಕೊಬ್ಬರಿ ಖರೀದಿಗೆ ಸೋಮವಾರದಿಂದ ನೋಂದಣಿ ಶುರುವಾಗಲಿದೆ.

ಮಂಡ್ಯ: ತುಮಕೂರು, ಹಾಸನದ ನಂತರ 2024 ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ರೈತರಿಂದ ನೇರವಾಗಿ ಖರೀದಿಸಲು ಮಂಡ್ಯ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ರೈತರ ನೋಂದಣಿಯನ್ನು ಎನ್‌ಐಸಿ ತಂತ್ರಾಂಶದಲ್ಲಿ ಫ್ರೂಟ್ಸ್‌ ಐಡಿ ಮೂಲಕ ನಿರ್ವಹಿಸಲಾಗುವುದು. ರೈತರ ನೋಂದಣಿ ಪ್ರಕ್ರಿಯೆಯು ಮಾರ್ಚ್ 04 ರಿಂದ ಬೆಳಗ್ಗೆ 8ಕ್ಕೆ ಪ್ರಾರಂಭವಾಗುತ್ತದೆ. ಪ್ರತಿ ದಿನ ಸಮಯ ಬೆಳಗ್ಗೆ 8.00 ರಿಂದ ಸಂಜೆ 6.00 ಗಂಟೆಯವರೆಗೂ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ರೈತರು ಸರ್ಕಾರದ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮಂಡ್ಯ, ಪಾಂಡವಪುರ ಮತ್ತು ಮದ್ದೂರಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತದ ಶಾಖಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ತುಮಕೂರು ಹಾಗೂ ಹಾಸನ ಜಿಲ್ಲೆಯಲ್ಲಿ ಕೊಬ್ಬರಿ ಬೆಳೆಗಾರರ ನೋಂದಣಿ ವಿಚಾರದಲ್ಲಿ ಬೋಗಸ್‌ ಪ್ರಕ್ರಿಯೆಗಳು ನಡೆದಿವೆ. ರೈತರೇ ಅಲ್ಲದವರನ್ನು ನೋಂದಣಿ ಮಾಡಿಸಿ ಹತ್ತಕ್ಕೂ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಕುರಿತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ್‌ ಅವರು ಸದನದಲ್ಲಿಯೇ ಘೋಷಣೆ ಮಾಡಿದ್ದರು. ಆನಂತರ ಮಂಡ್ಯದಲ್ಲಿ ಎಚ್ಚರಿಕೆ ವಹಿಸಿ ನೋಂದಣಿ ಮಾಡಲು ಅಧಿಕಾರಿಗಳು ಮುಂದಾಗಿದ್ಧಾರೆ.

ಇಲ್ಲಿವೆ ಕೆಲವು ಸೂಚನೆಗಳು

  • ರೈತರು ತಮ್ಮ ಫ್ರೂಟ್ಸ್‌ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ನೋಂದಣಿ ಕೇಂದ್ರಕ್ಕೆ ತರುವುದು. ರೈತರ ನೋಂದಣಿಯನ್ನು ಆಧಾರ್‌ ಬಯೋಮೆಟ್ರಿಕ್‌ ಮೂಲಕ ಕೈಗೊಳ್ಳಲಾಗುವುದು. ರೈತ ಬಾಂಧವರು ಖರೀದಿ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ಸಾವಧಾನವಾಗಿ ನಿಂತು ನೋಂದಣಿ ಮಾಡಿಸುವುದು.
  • ನೋಂದಣಿಗೆ ಸಂಬಂಧಿಸಿದಂತೆ. ಮಂಡಳಿಯಿಂದ ಯಾವುದೇ ಟೋಕನ್ ರೈತರಿಗೆ ವಿತರಿಸಲಾಗುವುದಿಲ್ಲ.
  • ಸರ್ಕಾರದ ಯೋಜನೆಯು ನೈಜ ರೈತರಿಗೆ ದೊರಕಿಸಿಕೊಡುವ ಸದುದ್ದೇಶದಿಂದ ರೈತರ ಎಫ್‌ಐಡಿ ಯಲ್ಲಿನ ಹೆಸರು ಮತ್ತು ಪಹಣಿಯಲ್ಲಿರುವ ಹೆಸರು ತಾಳೆ/ಹೋಂದಣಿಕೆಯಾಗದಿದ್ದಲ್ಲಿ ಅಂತಹ ರೈತರು ತೆಂಗು ಬೆಳೆ ಬೆಳೆದಿರುವ ಬಗ್ಗೆ/ಉಂಡೆ ಕೊಬ್ಬರಿ ಇರುವ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್‌ರವರಿಂದ ದೃಡೀಕರಣ ಪಡೆದು ಖರೀದಿ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಿದ್ದಲ್ಲಿ ಮಾತ್ರ ನೋಂದಣಿ ಮಾಡಲಾಗುವುದು.

ಇದನ್ನೂ ಓದಿರಿ: ಬಿಗ್‌ಬಾಸ್‌ ಸ್ಪರ್ಧಿ ತುಕಾಲಿ ಸಂತೋಷನ ಗೋಲ್ಡನ್‌ ಟೈಮ್‌ ಶುರು; ಚಿನ್ನದ ಚೈನ್‌ ಬಳಿಕ, ಮನೆಗೆ ಬಂತು ಹೊಸ ಕಾಸ್ಟ್ಲೀ ಕಾರು

  • ನೋಂದಣಿಯಾದ ರೈತರಿಂದ ಮಾತ್ರ ಎಫ್.ಎ.ಕ್ಕೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಪ್ರತಿ ಕ್ವಿಂಟಾಲ್‌ ಬೆಂಬಲ ಬೆಲೆ ದರ ರೂ.12000/- ರಂತೆ ಖರೀದಿಸಲಾಗುವುದು.
  • ಪ್ರತಿ ಎಕರೆಗೆ 06 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಮಾತ್ರ ಖರೀದಿಸಲಾಗುವುದು.
  • ನೋಂದಣಿಯಾದ ರೈತರಿಗೆ ಯಾವ ದಿನಾಂಕದಂದು ಉಂಡೆ ಕೊಬ್ಬರಿಯನ್ನು ಖರೀದಿ ಕೇಂದ್ರಗಳಿಗೆ ತರಬೇಕು ಎಂದು ಖರೀದಿ ಅಧಿಕಾರಿಗಳು ರೈತರಿಗೆ ತಿಳಿಸುತ್ತಾರೆ. ಅದೇ ದಿನಾಂಕದಂದು ರೈತರು ತಮ್ಮ ದಾಸ್ತಾನನ್ನು ಖರೀದಿ ಕೇಂದ್ರಕ್ಕೆ ತರುವುದು.
  • ಎಫ್.ಎ.ಕ್ಯೂ. ಗುಣಮಟ್ಟದ ಉಂಡೆ ಕೊಬ್ಬರಿಯನ್ನು ರೈತರಿಂದ ಮಾತ್ರ ಮಂಡಳಿಯು ಖರೀದಿಸುತ್ತದೆ. ಕಳಪೆ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲಾಗುವುದಿಲ್ಲ.

ಇದನ್ನೂ ಓದಿರಿ: Lok Sabha Elections 2024: ಲೋಕಸಭೆ ಚುನಾವಣೆ ಬಿಜೆಪಿ ಪಟ್ಟಿ ಬಿಡುಗಡೆ, ಕರ್ನಾಟಕದ ಒಂದೇ ಹೆಸರು ಪ್ರಕಟಿಸಿಲ್ಲ ಏಕೆ

  • ಕಳಪೆ ಗುಣಮಟ್ಟದ ಕಾರಣ ದಾಸ್ತಾನು ತಿರಸ್ಕೃತಗೊಂಡಲ್ಲಿ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ದಾಸ್ತಾನನ್ನು ವಾಪಸ್ಸು ತೆಗೆದುಕೊಂಡು ಹೋಗುವುದು.
  • ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯವನ್ನು ಡಿಬಿಟಿ ಮೂಲಕ ಪಾವತಿಸಲಾಗುವುದು.

IPL_Entry_Point

ವಿಭಾಗ