Mandya News: ತೀವ್ರಗೊಂಡ ಕಾವೇರಿ ಹೋರಾಟ; ಮಂಡ್ಯ ಬಳಿ ರೈತಸಂಘದ ಕಾರ್ಯಕರ್ತರ ಬಂಧನ
Cauvery Water: ಎತ್ತಿನಗಾಡಿನಗಳೊಂದಿಗೆ ಆಗಮಿಸಿದ ರೈತರು ಹೆದ್ದಾರಿ ಕಡೆಗೆ ನುಗ್ಗಲು ಪ್ರಯತ್ನಿಸಿದರೂ ಪೊಲೀಸರು ಅವಕಾಶ ನೀಡಿಲ್ಲ. ಹೆದ್ದಾರಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಪೊಲೀಸರು ಹೇಳಿದರು.ಈ ವೇಳೆ ಕೆಲಹೊತ್ತು ಮಾತಿನ ಚಕಮಕಿ ನಡೆದರೂ ಬೆಂಗಳೂರು ಮೈಸೂರು ಹೆದ್ದಾರಿಯತ್ತ ಹೋಗಲು ಅವಕಾಶ ಕೊಡಲಿಲ್ಲ.
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಬೆಂಗಳೂರು ಮೈಸೂರು ಹೆದ್ದಾರಿಯ ಇಂಡುವಾಳು ಗ್ರಾಮದಲ್ಲಿ ಮಂಗಳವಾರ ರೈತರು ಪ್ರತಿಭಟನೆ ನಡೆಸಿದರು. ಈ ವೇಳೆ ಹೆದ್ದಾರಿ ತಡೆಗೆ ಮುಂದಾದ ಐವತ್ತಕ್ಕೂ ಹೆಚ್ಚು ರೈತ ಮುಖಂಡರನ್ನು ಬಂಧಿಸಲಾಯಿತು.
ಎತ್ತಿನಗಾಡಿನಗಳೊಂದಿಗೆ ಆಗಮಿಸಿದ ರೈತರು ಹೆದ್ದಾರಿ ಕಡೆಗೆ ನುಗ್ಗಲು ಪ್ರಯತ್ನಿಸಿದರೂ ಪೊಲೀಸರು ಅವಕಾಶ ನೀಡಿಲ್ಲ. ಹೆದ್ದಾರಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಪೊಲೀಸರು ಹೇಳಿದರು. ಈ ವೇಳೆ ಕೆಲಹೊತ್ತು ಮಾತಿನ ಚಕಮಕಿ ನಡೆದರೂ ಬೆಂಗಳೂರು ಮೈಸೂರು ಹೆದ್ದಾರಿಯತ್ತ ಹೋಗಲು ಅವಕಾಶ ಕೊಡಲಿಲ್ಲ. ಕೊನೆಗೆ ನುಗ್ಗಲು ಯತ್ನಿಸಿದವರನ್ನು ಬಂಧಿಸಿದರು. ನಂತರ ಇಂಡುವಾಳಿನಲ್ಲಿಯೇ ಪ್ರತಿಭಟನೆ ಮುಂದುವರಿಯಿತು.
ಈ ವೇಳೆ ಮಾತನಾಡಿದ ರೈತ ಮುಖಂಡರು, ಈ ಬಾರಿ ಮಳೆಯಾಗದೇ ನಮ್ಮ ಜಲಾಶಯ ತುಂಬಿಲ್ಲ. ಕೆಆರ್‌ಎಸ್ ತುಂಬಲೇ ಇಲ್ಲ. ನಮಗೆ ಅಲ್ಪಾವಧಿ ಬೆಳೆ ಬೆಳೆಯುವಂತೆ ಹೇಳಿ ತಮಿಳುನಾಡಿಗೆ ಹರಿಸಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು. ಕೂಡಲೇ ನೀರು ಸ್ಥಗಿತಗೊಳಿಸಿ ವಸ್ತುಸ್ಥಿತಿಯನ್ನು ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ಪ್ರಾಧಿಕಾರಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಕೆಆರ್ ಎಸ್ ನೀರು ಕೊಂಚ ಇಳಿಕೆ
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟವೂ ಕುಸಿಯುತ್ತಿದೆ. ಈ ಬಾರಿ ಜಲಾಶಯ ತುಂಬಲು ಹತ್ತು ಅಡಿ ನೀರಿನ ಕೊರತೆ ಎದುರಿಸಬೇಕಾಯಿತು. ಇದರ ನಡುವೆ ತಮಿಳುನಾಡು ಒತ್ತಡದ ನಂತರ ಜಲಾಶಯದಿಂದ ನಿರಂತರವಾಗಿ ಹದಿನೈದು ದಿನದಿಂದ ನೀರು ಹರಿಬಿಡಲಾಗುತ್ತಿದೆ. ಇದರಿಂದ ಜಲಾಶಯ ನೀರಿನ ಮಟ್ಟ ಕುಸಿಯುತ್ತಲೇ ಇದೆ. ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ ಸೇರಿದಂತೆ ಹಲವು ಕಡೆ ಪ್ರತಿಭಟನೆ ನಡೆದ ನಂತರ ನೀರು ಹರಿಸುವುದನ್ಬು ನಿಲ್ಲಿಸುವುದಾಗಿ ಸರ್ಕಾರ ಹೇಳಿತ್ತು. ಶ್ರೀರಂಗ ಪಟ್ಟಣ ಶಾಸಕ ರಮೇಶ್ ಬಂಡಿ ಸಿದ್ದೇಗೌಡ ಕೂಡ ನೀರು ಸ್ಥಗಿತಗೊಳಿಸುವುದಾಗಿ ಹೇಳಿದ್ದರು. ಆದರೂ ಜಲಾಶಯದಿಂದ ನೀರು ಹೊರ ಹೋಗುತ್ತಿರುವುದು ಮೂರು ಸಾವಿರ ಕ್ಯೂಸೆಕ್ ತಗ್ಗಿದೆ. ಮಂಗಳವಾರ ಬೆಳಿಗ್ಗೆಯೂ
ಜಲಾಶಯದಿಂದ 13457 ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. ಇದರಲ್ಲಿ ನದಿಗೆ 10841 ಕ್ಯೂಸೆಕ್ ಇದ್ದರೆ ಉಳಿಕೆ ನೀರು ನಾಲೆಗಳಿಗೆ ಬಿಡಲಾಗುತ್ತಿದೆ. ವಿಸಿ ನಾಲೆಗೆ 2008 ಕ್ಯೂಸೆಕ್, ಬಲದಂಡೆ ನಾಲೆಗೆ 100 ಕ್ಯೂಸೆಕ್, ಎಡದಂಡ ನಾಲೆಗೆ 58 ಕ್ಯೂಸೆಕ್, ದೇವರಾಜ ಅರಸ್ ನಾಲೆಗೆ 400 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 104.90ಅಡಿಯಿದೆ. ಗರಿಷ್ಢ ಮಟ್ಟ 124.80 ಅಡಿ.ಸದ್ಯ ಜಲಾಶಯದಲ್ಲಿ 26.899 ಟಿಎಂಸಿ ನೀರು ಲಭ್ಯವಿದೆ. ಬಳಸಲು ಯೋಗ್ಯ 18.520 ಟಿಎಂಸಿ. ಸದ್ಯ ಜಲಾಶಯಕ್ಕೆ ಒಳಹರಿವು 5269 ಕ್ಯೂಸೆಕ್ ನಷ್ಟಿದೆ.
ಕಬಿನಿಯಿಂದಲೂ ಹರಿಯುತ್ತಿದೆ ನೀರು
ಕೇರಳದಲ್ಲೂ ಮಳೆ ಬಹುತೇಕ ತಗ್ಗಿರುವುದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯದಿಂದ ಹೊರ ಹೋಗುತ್ತಿರುವ ನೀರಿನ ಪ್ರಮಾಣದಲ್ಲಿ ಇಳಿಕೆಯೇನೂ ಭಾರೀ ಕಂಡಿಲ್ಲ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ ಕುಸಿಯುತ್ತಲೇ ಇದೆ. ಕಬಿನಿ ಜಲಾಶಯಕ್ಕೆ ಮಂಗಳವಾರ ಬೆಳಿಗ್ಗೆಯೂ 4825 ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. ಇದರಲ್ಲಿ ನದಿ ಮೂಲಕ 2500 ಕ್ಯೂಸೆಕ್, ಕಬಿನಿ ಎಡದಂಡೆ ನಾಲೆಗೆ 25 ಕ್ಯೂಸೆಕ್, ಬಲದಂಡೆ ನಾಲೆಗೆ 2300 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಹೊಳೆ ಮೂಲಕ ಸೋಮವಾರದವರೆಗೂ 5000 ಕ್ಯೂಸೆಕ್ ನೀರು ಹರಿಸಿದರೂ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ 2500 ಕ್ಯೂಸೆಕ್ ಗೆ ಇಳಿಸಲಾಗಿದೆ.
ಸದ್ಯ ಕಬಿನಿ ಜಲಾಶಯದ ನೀರಿನ ಮಟ್ಟ 2276.40 ಅಡಿಗೆ ಕುಸಿದಿದೆ.ಜಲಾಶಯದ ಗರಿಷ್ಠ ಮಟ್ಟ 2284 ಅಡಿ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶವಿದ್ದು, ಸದ್ಯ 15.03 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಬಳಕೆಗೆ ಲಭ್ಯ ಇರುವುದು 5.22(ಲೈವ್ ಸ್ಟೋರೇಜ್) ಟಿಎಂಸಿ ನೀರು ಮಾತ್ರ. ಕಬಿನಿ ಬೇಗನೇ ತುಂಬುವ ಜಲಾಶಯ. ಈ ಬಾರಿ ಜುಲೈ ಅಂತ್ಯಕ್ಕೆ ತುಂಬಿತ್ತು. ಅದೇ ರೀತಿ ತುಂಬಿದ ಬಳಿಕ ಹೆಚ್ಚು ನೀರು ತಮಿಳುನಾಡಿಗೆ ಹರಿದಿದೆ. ಬೆಂಗಳೂರು, ಮೈಸೂರಿಗೂ ಕುಡಿಯುವುದಕ್ಕೂ ಇಲ್ಲಿಂದಲೇ ನೀರು ಹರಿಸಲಾಗುತ್ತದೆ. ಕಬಿನಿ ನದಿಯಾಗಿ ತಿ. ನರಸೀಪುರ ಪಟ್ಟಣದವರೆಗೆ ಹರಿದು ಆನಂತರ ಕಾವೇರಿ ನದಿಗೆ ಸೇರುತ್ತದೆ. ಅಲ್ಲಿಂದ ಮುಂದೆ ಕಾವೇರಿ ನದಿ ಚಾಮರಾಜನಗರ, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಹರಿದು ತಮಿಳುನಾಡು ಸೇರುತ್ತದೆ.