Mandya News: ಮಂಡ್ಯಕ್ಕೆ ಕೃಷಿ ವಿವಿ, ಹೇಮಾವತಿ-ವಿಸಿ ನಾಲೆಗಳ ಆಧುನೀಕರಣ: ಸಿದ್ದರಾಮಯ್ಯ ಭರವಸೆ
ಮಂಡ್ಯದಲ್ಲಿ ನಡೆದ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಸಿಎಂ ಸಿದರಾಮಯ್ಯ ಹಲವಾರು ಭರವಸೆಗಳನ್ನು ನೀಡಿದರು.

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರವನ್ನು ಕೃಷಿ ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೇರಿಸಲು ನಮ್ಮ ಸರ್ಕಾರ ಸಿದ್ದವಿದೆ. ಇದಕ್ಕಾಗಿ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೇ ಮಂಡ್ಯ ಭಾಗ ರೈತರಿಗೆ ನೆರವಾಗಲು ಹೇಮಾವತಿ ಹಾಗೂ ವಿಸಿ ನಾಲೆಯನ್ನು ಆಧುನೀಕರಣಗೊಳಿಸಲಾಗುವುದು. ಕೃಷ್ಣರಾಜಸಾಗರವನ್ನು ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ದಿಪಡಿಸಲು ಬದ್ದರಾಗಿದ್ದೇವೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯದಲ್ಲಿ ಬುಧವಾರ ಆಯೋಜಿಸಿದ್ದ ಲೋಕಸಭೆ ಚುನಾವಣೆ ಪ್ರಜಾಧ್ವನಿ-2 ನೆರೆದಿದ್ದ ಜನಸಾಗರವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಹಲವಾರು ಭರವಸೆಗಳನ್ನು ನೀಡಿದರು.
ಮಂಡ್ಯದಲ್ಲಿ ಕೃಷಿ ವಿವಿ ಬೇಕು ಎನ್ನುವ ಬೇಡಿಕೆಯಿದೆ. ಈಗಾಗಲೇ ಇರುವ ಕೇಂದ್ರವನ್ನೇ ವಿಶ್ವವಿದ್ಯಾನಿಲಯ ದರ್ಜೆಗೇರಿಸಲಾಗುವುದು. ಇದಕ್ಕಾಗಿ ತಜ್ಞರ ಸಮಿತಿ ರಚಿಸಿ ವರದಿ ಪಡೆಯುತ್ತೇವೆ. ಇದಲ್ಲದೇ ಮಂಡ್ಯ ಭಾಗದ ರೈತರಿಗೆ ನೆರವಾಗುವ ಹೇಮಾವತಿ ಹಾಗೂ ವಿಸಿ ನಾಲೆಯನ್ನು ಆಧುನೀಕರಣ ಮಾಡಿ ಕಡೆಯ ಭಾಗದ ಜನರಿಗೂ ನೀರು ಕೊಡಲು ಮಾಡುತ್ತೇವೆ. ವಿಶ್ವವಿಖ್ಯಾತ ಕೆಆರ್‌ಎಸ್ ಪ್ರವಾಸೋದ್ಯಮ ಸ್ಥಳವನ್ನಾಗಿ ಪಿಪಿಪಿ ಮಾದರಿಯಲ್ಲಿ ಇನ್ನಷ್ಟು ಅಭಿವೃದ್ದಿಪಡಿಸಲು ಒತ್ತು ನೀಡಲಾಗುವುದು. ಮಂಡ್ಯ ಜನರ ಒಳಿತಿಗೋಸ್ಕರ ನಮ್ಮ ಸರ್ಕಾರ ಇದೆಲ್ಲವನ್ನೂ ಮಾಡಲಿದೆ ಎಂದು ಸಿಎಂ ಭರವಸೆ ನೀಡಿದರು.
ಮಂಡ್ಯ ಭಾಗದ ಜನರ ಜೀವನಾಡಿಯಾಗಿರುವ ಮೈಷುಗ್ಸರ್ಸ್ ಕಾರ್ಖಾನೆ ಹಳತಾಗಿದೆ. ಈ ಕಾರಣದಿಂದಲೇ ಹೊಸದಾಗಿಯೇ ಸಕ್ಕರೆ ಕಾರ್ಖಾನೆ ನಿರ್ಮಿಸಲು 50 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ನೀಡಿದ್ದೇವೆ. ಇದು ಮಂಡ್ಯದ ಬಗ್ಗೆ ನಮಗಿರುವ ಬದ್ದತೆ ಎಂದು ಹೇಳಿದರು.
ನಮ್ಮ ಸರ್ಕಾರ ಹೇಳಿದಂತೆಯೇ ನಡೆದುಕೊಂಡಿದೆ. ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಬಿಜೆಪಿಯವರು ನಮಗೆ ಮೋಸ ಮಾಡಿದರೂ ನಾವೂ 5 ಕೆಜಿ ಅಕ್ಕಿಯನ್ನು ಜನರಿಗೆ ನೀಡುತ್ತಿದ್ದೇವೆ. ಜತೆಗೆ ಹಣವನ್ನೂ ನೀಡುತ್ತಿದ್ದೇವೆ. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಜಾರಿಗೊಳಿಸಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಶಕ್ತಿ ತುಂಬಿದ್ದೇವೆ ಎಂದು ಹೇಳಿದರು.
ನರೇಂದ್ರ ಮೋದಿಯವರ ಅಚ್ಚೆ ದಿನ್ 10 ವರ್ಷ ಕಳೆದರೂ ಭಾರತೀಯರಿಗೆ ಬಂದಿಲ್ಲ. ರಾಜ್ಯದ ಜನತೆಗೆ ಅಚ್ಚೆ ದಿನ್ ಕಾಣಿಸಿಯೇ ಇಲ್ಲ. ಮೋದಿಯವರ ಕಾರಣದಿಂದ ಏರಿಕೆಯಾಗಿದ್ದ ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ-ಕಾಳು, ಅಡುಗೆ ಎಣ್ಣೆ ಸೇರಿ ಎಲ್ಲದರ ಬೆಲೆ ಏರಿಕೆ ನೀತಿಯಿಂದ ಹೈರಾಣಾಗಿದ್ದ ರಾಜ್ಯದ ಜನರ ಬದುಕಿನ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಇದರಿಂದ ರಾಜ್ಯದ ಪ್ರತಿ ಕುಟುಂಬಗಳಿಗೆ, ಪ್ರತಿ ತಿಂಗಳು 5 ರಿಂದ 6 ಸಾವಿರ ರೂಪಾಯಿ ಒದಗಿ ಬರುವಂಥಾ ನೆರವಿನ ಕಾರ್ಯಕ್ರಮಗಳನ್ನು ನೀಡಿದ್ದೇವೆ ಎಂದರು.
ರಾಜ್ಯದ ಜನರಿಗೆ ಅನ್ನಭಾಗ್ಯದ ಅಕ್ಕಿ ಕೊಡ ಕೊಡದಂತೆ ಮೋದಿಯವರ ಕೇಂದ್ರ ಸರ್ಕಾರ ತೊಂದರೆ ಕೊಟ್ಟರೂ ಕೂಡ ನಾವು ಅಕ್ಕಿ ಜೊತೆಗೆ ಹಣವನ್ನೂ ನಮ್ಮ ಜನರ ಬದುಕಿಗೆ ಕೊಡುತ್ತಿದ್ದೇವೆ ಎಂದರು.
ಕೊಟ್ಟ ಮಾತಿನಂತೆ ನಡೆದುಕೊಂಡವರು ಯಾರು ಎನ್ನುವುದನ್ನು ನಿಮ್ಮ ಹೃದಯಕ್ಕೆ ಕೇಳಿ ಕೊಳ್ಳಿ. ಅವರಿಗೆ ಮಾತ್ರ ನಿಮ್ಮ ಮತ ನೀಡಿ. ರಾಜ್ಯದಲ್ಲಿ ಬಿಜೆಪಿಯಿಂದ ಗೆದ್ದ 27 ಸಂಸದರು ರಾಜ್ಯದ ಸಮಸ್ಯೆಗಳ ಬಗ್ಗೆ ನೆಪಕ್ಕೂ ಧ್ವನಿ ಎತ್ತದೆ ರಾಜ್ಯದ ಜನರಿಂದ ಪಡೆದ ಮತಕ್ಕೆ ಅವಮಾನ ಮಾಡಿದರು. ಈ ಅವಮಾನಕ್ಕೆ ತಕ್ಕ ಉತ್ತರ ನೀಡಿ ರಾಜ್ಯದ ಜನತೆಯ ಪರವಾಗಿ ಧ್ವನಿ ಎತ್ತುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಮಂಡ್ಯ ಜನತೆಯ ಸ್ವಾಭಿಮಾನಿ ತಾಕತ್ತನ್ನು ತೋರಿಸಿ ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹೋದಲೆಲ್ಲಾ ಸುಳ್ಳು ಹೇಳುತ್ತಿದ್ದಾರೆ. ಧರ್ಮ, ಜಾತಿ ಹೆಸರಿನಲ್ಲಿ ಸಮಾಜವನ್ನು ಮೋದಿ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡವರಿಗೆ ನೀವು ಆಶಿರ್ವಾದ ಮಾಡಿ. ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಕುಮಾರಸ್ವಾಮಿಗೆ ಸೋಲಿನ ಭಯ
ಕುಮಾರಸ್ವಾಮಿ ಅವರು ಚನ್ನಪಟ್ಟಣ ಶಾಸಕರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸಬಹುದಿತ್ತು. ಸೋಲಿನ ಭಯದಿಂದ ಮಂಡ್ಯದಲ್ಲಿ ಸ್ಪರ್ಧಿಸಿದ್ದಾರೆ. ಅವರನ್ನು ಸೋಲಿಸಿ ಎಂದು ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗಳಿಸಿದೆ. ಅದನ್ನು ಮುಂದುವರಿಸಲಿದೆ. ಆದರೆ ಚುನಾವಣೆ ಬಳಿಕ ಈ ಯೋಜನೆ ಇರುವುದಿಲ್ಲ ಎಂದು ಬಿಜೆಪಿ ಪ್ರಚಾರ ಮಾಡುತ್ತಿದ್ದೇವೆ. ಜನರಿಗೋಸ್ಕರವೇ ಜಾರಿಗೊಳಿಸಿದ ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಸಚಿವರಾದ ಚಲುವರಾಯಸ್ವಾಮಿ, ಶಾಸಕ ನರೇಂದ್ರ ಸ್ವಾಮಿ ಮಾತನಾಡಿದರು.
