Mandya News: ಮಂಡ್ಯ ಜಿಲ್ಲೆಯಲ್ಲಿ ಪಟಾಕಿ ಅವಘಡ, ತಮಿಳುನಾಡಿನ ವ್ಯಕ್ತಿ ಸಾವು. ಇನ್ನಿಬ್ಬರಿಗೆ ಗಾಯ
ಮಂಡ್ಯ ಜಿಲ್ಲೆಯಲ್ಲಿ ಪಟಾಕಿ ಸಂಗ್ರಹಿಸಿಟ್ಟಿದ್ದ ಮನೆಯಲ್ಲಿ ಬೆಂಕಿ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿದ್ದಾರೆ.
ಮಂಡ್ಯ: ಊರ ಹಬ್ಬಕ್ಕೆಂದು ಬಂದು ಪಟಾಕಿ ಸಿಡಿಸಿ ಇನ್ನೊಂದು ಊರಿಗೆ ಹೋಗಲು ಅಣಿಯಾಗುತ್ತಿದ್ದಾಗ ಪಟಾಕಿ ಸಿಡಿದು ಕಾರ್ಮಿಕನೊಬ್ಬ ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಪಟಾಕಿ ಸಿಡಿತದ ರಭಸಕ್ಕೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಬೆಂಕಿ ಆವರಿಸಿದೆ. ಇದರಿಂದ ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೂ ಅಲ್ಲದೇ ಪಟಾಕಿ ಸಿಡಿತದಿಂದ ಇನ್ನೂ ಹಲವು ಮನೆಗಳಿಗೆ ಬೆಂಕಿ ಬೀಳುವುದನ್ನು ತಪ್ಪಿಸಿ ಭಾರೀ ಅನಾಹುತ ಆಗುವುದನ್ನು ಅಗ್ನಿ ಶಾಮಕದಳದ ಸಿಬ್ಬಂದಿ ತಡೆದಿದ್ದಾರೆ.
ಮಂಡ್ಯ ತಾಲ್ಲೂಕಿ ಎಚ್.ಕೆಬ್ಬಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ತಮಿಳುನಾಡು ಮೂಲದ ರಮೇಶ್( 67) ಎಂಬಾತ ಜೀವ ಕಳೆದುಕೊಂಡಿದ್ದಾನೆ. ತಮಿಳುನಾಡಿನಿಂದಲೇ ಬಂದಿದ್ದ ಇನ್ನೂ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಊರ ಹಬ್ಬಗಳಲ್ಲಿ ಪಟಾಕಿ ಸಿಡಿಸುವ ಸಂಪ್ರದಾಯ ಮೊದಲಿನಿಂದಲೂ ಇದೆ. ಜಾತ್ರೆಯ ಒಂದು ದಿನ ರಾತ್ರಿ ಭಾರೀ ಪ್ರಮಾಣದಲ್ಲಿಯೇ ಸಿಡಿಮದ್ದುಗಳನ್ನು ಸಿಡಿಸಲಾಗುತ್ತದೆ. ಇದಕ್ಕಾಗಿ ತಮಿಳುನಾಡಿನಿಂದ ಪಟಾಕಿ ತಂದು ಇಲ್ಲಿ ಸಿಡಿಸುವ ಗುತ್ತಿಗೆ ಪಡೆಯುವಂತಹ ತಂಡಗಳೂ ಇವೆ. ಹಲವಾರು ವರ್ಷಗಳಿಂದಲೂ ತಂಡಗಳು ಮಂಡ್ಯ ಜಿಲ್ಲೆಗೆ ಆಗಮಿಸಿದರೆ ಏಳೆಂಟು ಜಾತ್ರೆಗಳಲ್ಲಿ ಪಟಾಕಿ ಸಿಡಿಸಿ ಹೋಗುವುದು ನಡೆದುಕೊಂಡು ಬಂದಿದೆ.
ಎಚ್. ಕೆಬ್ಬಳ್ಳಿ ಗ್ರಾಮದಲ್ಲೂ ಕಾಲ ಭೈರವೇಶ್ವರ ಜಾತ್ರಾ ಮಹೋತ್ಸವ ಈ ವರ್ಷವೂ ನಡೆದಿದೆ. ಇದರ ಭಾಗವಾಗಿಯೇ ಭಾನುವಾರ ರಾತ್ರಿ ಪಟಾಕಿ ಸಿಡಿಸಿ ಜಾತ್ರೆಯನ್ನು ಸಡಗರದಿಂದ ಆಚರಿಸಲಾಗಿತ್ತು. ನಲವತ್ತು ವರ್ಷದಿಂದ ಇದೇ ಗ್ರಾಮಕ್ಕೆ ಪಟಾಕಿ ಸಿಡಿಸಲು ಆಗಮಿಸುವ ರಮೇಶ್ ಹಾಗೂ ಅವರ ತಂಡದವರು ಈ ಬಾರಿಯೂ ಆಗಮಿಸಿದ್ದರು. ಗ್ರಾಮದಲ್ಲಿಯೇ ಮನೆಯೊಂದಲ್ಲಿ ಪಟಾಕಿಗಳನ್ನು ಸಂಗ್ರಹಿಸಿಕೊಂಡಿದ್ದರು. ಸಿಡಿಸುವ ಚಟುವಟಿಕೆ ಗ್ರಾಮದಲ್ಲಿ ಮುಗಿದಿದ್ದರಿಂದ ಸೋಮವಾರ ಬೇರೆ ಊರಿಗೆ ಹೋಗಲು ರಮೇಶ್ ಮತ್ತವರ ತಂಡದವರು ಅಣಿಯಾಗುತ್ತಿದ್ದರು. ಕೆಲವರು ಮುಂದೆ ಹೋಗಿದ್ದರು. ಉಳಿದವರು ಗಾಡಿಗೆ ಪಟಾಕಿ ತುಂಬಿಕೊಂಡು ಹೋಗಲು ಅಣಿಯಾಗುವಾಗ ಆಕಸ್ಮಿಕ ಬೆಂಕಿ ತಗುಲಿ ಪಟಾಕಿ ಸಿಡಿದಿದೆ. ಪಟಾಕಿ ಸಿಡಿದ ರಭಸಕ್ಕೆ ಒಳಭಾಗದಲ್ಲಿ ಸಿಲುಕಿಕೊಂಡಿದ್ದ ರಮೇಶ್ ಎಂಬಾತ ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡರು.
ವಿಷಯ ತಿಳಿದು ಅಗ್ನಿ ಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದರು. ಅಲ್ಲದೇ ನೆರೆ ಹೊರೆಯ ಮನೆಗಳಿಗೂ ಅನಾಹುತ ಆಗದಂತೆ ನೋಡಿಕೊಂಡರು. ಘಟನಾ ಸ್ಥಳಕ್ಕೆ ಮೈಸೂರು ಪ್ರಾಂತ್ಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ.ಎಸ್ ಜಯರಾಮಯ್ಯ, ಮೈಸೂರು ವಲಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪಿ ಚಂದನ್, ಮಂಡ್ಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ ಬಿ ಎಂ, ಮಂಡ್ಯ ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್ ಸ್ಥಳಕ್ಕೆ ಆಗಮಿಸಿದ್ದರು.
ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಹಾಗೂ ಪೊಲೀಸರು ಭೇಟಿ ನೀಡಿದ್ದರು. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಗ್ರಾಮದಲ್ಲಿ ಜಾತ್ರೆಗೆ ಪ್ರತಿವರ್ಷ ಪಟಾಕಿ ಸಿಡಿಸುತ್ತಾರೆ. ಈ ಬಾರಿಯೂ ತಮಿಳುನಾಡಿನಿಂದ ಪಟಾಕಿ ತಂದವರು ಸಿಡಿಸಿ ಹೊರಡುವ ಮುನ್ನ ದುರ್ಘಟನೆ ಸಂಭವಿಸಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಎಷ್ಟು ಪಟಾಕಿಯಿತ್ತು, ದುರ್ಘಟನೆಗೆ ಕಾರಣ ಏನು ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮಂಡ್ಯ ಎಸ್ಪಿ ಯತೀಶ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮುನ್ನೆಚ್ಚರಿಕೆ ವಹಿಸಿದರೂ ಪಟಾಕಿ ಸಿಡಿತದ ದುರಂತದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕಳೆದ ವರ್ಷ ಆನೆಕಲ್ ಬಳಿ ಅತ್ತಿಬೆಲೆಯಲ್ಲಿ ಪಟಾಕಿ ಸಿಡಿದು ಹಲವರು ಜೀವ ಕಳೆದುಕೊಂಡಿದ್ದರು. ಈಗ ಮಂಡ್ಯದಲ್ಲಿ ದುರ್ಘಟನೆ ವರದಿಯಾಗಿದೆ.
ವಿಭಾಗ