KRS Dam: ತುಂಬಿದ ಕೆಆರ್‌ಎಸ್‌, ಕಬಿನಿ ಜಲಾಶಯಗಳಿಗೆ ಸಿಎಂ ಜುಲೈ 27 ಕ್ಕೆ ಬಾಗಿನ ಅರ್ಪಣೆ, ಕಾವೇರಿಯಲ್ಲೂ ಗಂಗಾರತಿ ಮಾದರಿ ಪೂಜೆ-mandya news dcm dk shivakumar visited krs dam site cm offer bagina on july 27 cauvery aarti planned kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Krs Dam: ತುಂಬಿದ ಕೆಆರ್‌ಎಸ್‌, ಕಬಿನಿ ಜಲಾಶಯಗಳಿಗೆ ಸಿಎಂ ಜುಲೈ 27 ಕ್ಕೆ ಬಾಗಿನ ಅರ್ಪಣೆ, ಕಾವೇರಿಯಲ್ಲೂ ಗಂಗಾರತಿ ಮಾದರಿ ಪೂಜೆ

KRS Dam: ತುಂಬಿದ ಕೆಆರ್‌ಎಸ್‌, ಕಬಿನಿ ಜಲಾಶಯಗಳಿಗೆ ಸಿಎಂ ಜುಲೈ 27 ಕ್ಕೆ ಬಾಗಿನ ಅರ್ಪಣೆ, ಕಾವೇರಿಯಲ್ಲೂ ಗಂಗಾರತಿ ಮಾದರಿ ಪೂಜೆ

Mandya News ಬಹುತೇಕ ತುಂಬಿರುವ ಕೆಆರ್‌ಎಸ್‌ ಜಲಾಶಯ( KRS Reservoir) ಗೆ ಡಿಸಿಎಂ ಡಿಕೆ ಶಿವಕುಮಾರ್(‌ DK Shivakumar) ಭೇಟಿ ನೀಡಿದ್ದರು.

ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಸಚಿವ ಚಲುವರಾಯಸ್ವಾಮಿ ಅವರು ತುಂಬಿರುವ ಕೆಆರ್‌ಎಸ್‌ ಜಲಾಶಯವನ್ನು ವೀಕ್ಷಿಸಿದರು.
ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಸಚಿವ ಚಲುವರಾಯಸ್ವಾಮಿ ಅವರು ತುಂಬಿರುವ ಕೆಆರ್‌ಎಸ್‌ ಜಲಾಶಯವನ್ನು ವೀಕ್ಷಿಸಿದರು.

ಮಂಡ್ಯ: ಕೊಡಗಿನಲ್ಲಿನ ಭಾರೀ ಮಳೆಯಿಂದಾಗಿ ಈಗಾಗಲೇ ಬಹುತೇಕ ತುಂಬಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಹಾಗೂ ಕಳೆದ ತಿಂಗಳೇ ತುಂಬಿರುವ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 27ರ ಶನಿವಾರದಂದು ಬಾಗಿನ ಅರ್ಪಣೆ ಮಾಡುವ ಕಾರ್ಯಕ್ರಮಗಳು ನಿಗದಿಯಾಗಿವೆ. ಹಿಂದಿನ ವರ್ಷ ಬರ ಹಾಗೂ ಮಳೆ ಕೊರತೆಯಿಂದ ಜಲಾಶಯ ತುಂಬಿರಲಿಲ್ಲ, ಈ ಕಾರಣದಿಂದಾಗಿ ಬಾಗಿನ ಅರ್ಪಣೆಯಾಗಿರಲಿಲ್ಲ. ಅದೇ ರೀತಿ ಕೃಷ್ಣರಾಜ ಸಾಗರದ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ವಾರಣಾಸಿ ಗಂಗಾರತಿ ಮಾದರಿಯಲ್ಲಿಯೇ ಕಾವೇರಿ ಆರತಿ ಮಾಡಲು ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದ್ದು, ಮುಖ್ಯಮಂತ್ರಿಗಳು ಸದ್ಯವೇ ಇದನ್ನು ಪ್ರಕಟಿಸುವ ಸಾಧ್ಯತೆಯಿದೆ.

ಸಿಎಂ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಪೂರಕವಾಗಿ ಸೋಮವಾರ ಕೃಷ್ಣರಾಜಸಾಗರ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಭೇಟಿ ನೀಡಿದ್ದರು. ಜಲಾಶಯದ ನೀರಿನ ಮಟ್ಟ, ಹೊರ ಹರಿವು ಹಾಗೂ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.

ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರೈತರ ಜೀವನಾಡಿಯಾಗಿರುವ ಕಾವೇರಿ ತಾಯಿಗೆ ಪುಣ್ಯ ಕ್ಷೇತ್ರ ವಾರಣಾಸಿಯಲ್ಲಿ ಮಾಡುವ ಗಂಗಾರತಿ ಮಾದರಿಯ ರೀತಿ ಕಾವೇರಿ ಆರತಿ ಮಾಡಲು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.

ಕಾವೇರಿ ಆರತಿಯನ್ನು ಪ್ರಾರಂಭಿಸಲು ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಸ್ಥಳೀಯ ಶಾಸಕರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ತಂಡ ರಚಿಸಿ ಕಾವೇರಿ ಆರತಿ ಪ್ರಾರಂಭಿಸಲು ಒಂದು ತಿಂಗಳೊಳಗೆ ವರದಿ ನೀಡಲು ತಿಳಿಸಲಾಗುವುದು ಎಂದರು.

1657 ಕೆರೆಗಳನ್ನು ತುಂಬಿಸಲು ಕ್ರಮ

ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಕೆ.ಆರ್.ಎಸ್. ಜಲಾಶಯ ಭರ್ತಿಯಾಗುತ್ತಿದೆ. ಜಲಾಶಯದಿಂದ ನೀರು ಬಿಡುಗಡೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ 1657 ಕೆರೆಗಳನ್ನು ತುಂಬಿಸಲಾಗುವುದು ಎಂದು ಡಿಕೆಶಿ ಹೇಳಿದರು.

ರೈತರ ಹಿತಕಾಯಲು ಸದಾ ಬದ್ಧ

ನಮ್ಮ ಸರ್ಕಾರ ರೈತಪರವಾದ ಸರ್ಕಾರವಾಗಿದ್ದು, ಯಾವುದೇ ತೊಂದರೆ ಬಂದರೂ ರೈತರ ಹಿತ ಕಾಯಲು ಸದಾ ಬದ್ಧವಾಗಿರುತ್ತೇವೆ. ಕೃಷಿ ಸಚಿವರು ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿ ಎರಡು ಲಕ್ಷ ಹೆಕ್ಟೇರ್ ಬಿತ್ತನೆಯ ಕಾರ್ಯಕ್ರಮ ರೂಪಿಸಿದ್ದು, 5,90,000 ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ 27 ಲಕ್ಷ ಟನ್ ರಸಗೊಬ್ಬರವನ್ನು ಸಹ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಉಂಟಾಗದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 30 ಲಕ್ಷ ರೈತರಿಗೆ 25 ಸಾವಿರ ಕೋಟಿ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಣೆ ಮಾಡಲಾಗಿದೆ ಎನ್ನುವುದು ಡಿಕೆಶಿ ನೀಡಿದ ವಿವರಣೆ.

ಬೃಂದಾವನ ಅಮ್ಯೂಸ್‌ಮೆಂಟ್ ಪಾರ್ಕ್

ಕೆ.ಆರ್.ಎಸ್ ನಲ್ಲಿರುವ ಮ್ಯೂಸಿಕಲ್ ಪಾರ್ಕ್ ನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಹೊಸ ರೂಪ ನೀಡಲು ಈಗಾಗಲೇ ತಾಂತ್ರಿಕ ವರದಿಯನ್ನು ಪಡೆಯಲಾಗಿದೆ. ಬೃಂದಾವನ ಅಮ್ಯುಸ್‌ಮೆಂಟ್ ಪಾರ್ಕ್ ನ್ನು ಪಿ.ಪಿ.ಪಿ ಮಾದರಿಯಲ್ಲಿ ಟೆಂಡರ್ ಕರೆದು ರೂಪಿಸಲಾಗುವುದು. ಈ ಪಾರ್ಕ್ ನಿಂದ ಸುಮಾರು 8 ರಿಂದ 10 ಸಾವಿರ ಸ್ಥಳೀಯ ಜನರಿಗೆ ಉದ್ಯೋಗ ಸಿಗಲಿದೆ ಎಂದು ಹಿಂದಿನ ಯೋಜನೆ ಕುರಿತು ಪ್ರಸ್ತಾಪಿಸಿದರು.

ಪರಿಶೀಲನೆಯ ವೇಳೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸಾಮಿ, ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮದ್ದೂರು ಶಾಸಕ ಕೆ.ಎಂ. ಉದಯ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಅಧೀಕ್ಷಕ ಇಂಜಿನಿಯರ್ ರಘುರಾಮ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

mysore-dasara_Entry_Point