ಕನ್ನಡ ಸುದ್ದಿ  /  ಕರ್ನಾಟಕ  /  ಮಂಡ್ಯ: ಪಾಂಡವಪುರದಲ್ಲಿ ಭ್ರೂಣಹತ್ಯೆ ಪ್ರಕರಣ ಬೆಳಕಿಗೆ, ಆಂಬುಲೆನ್ಸ್ ಚಾಲಕ ಸೇರಿ 4 ಆರೋಪಿಗಳ ಬಂಧನ

ಮಂಡ್ಯ: ಪಾಂಡವಪುರದಲ್ಲಿ ಭ್ರೂಣಹತ್ಯೆ ಪ್ರಕರಣ ಬೆಳಕಿಗೆ, ಆಂಬುಲೆನ್ಸ್ ಚಾಲಕ ಸೇರಿ 4 ಆರೋಪಿಗಳ ಬಂಧನ

ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಆಂಬುಲೆನ್ಸ್ ಚಾಲಕ ಸೇರಿ 4 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಮೈಸೂರಿನ ಮಹಿಳೆಯೊಬ್ಬರ ಗರ್ಭಪಾತ ಮಾಡಿಸುತ್ತಿರುವಾಗಲೇ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ವಿವರ ವರದಿ ಇಲ್ಲಿದೆ.

ಪಾಂಡವಪುರದಲ್ಲಿ ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಆಂಬುಲೆನ್ಸ್ ಚಾಲಕ ಸೇರಿ 4 ಆರೋಪಿಗಳ ಬಂಧನವಾಗಿದೆ. ಭ್ರೂಣ ಹತ್ಯೆ ನಡೆಯುತ್ತಿತ್ತು ಎನ್ನಲಾದ ಪಾಂಡವಪುರದ ವಸತಿ ಗೃಹ (ಎಡ ಚಿತ್ರ).
ಪಾಂಡವಪುರದಲ್ಲಿ ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಆಂಬುಲೆನ್ಸ್ ಚಾಲಕ ಸೇರಿ 4 ಆರೋಪಿಗಳ ಬಂಧನವಾಗಿದೆ. ಭ್ರೂಣ ಹತ್ಯೆ ನಡೆಯುತ್ತಿತ್ತು ಎನ್ನಲಾದ ಪಾಂಡವಪುರದ ವಸತಿ ಗೃಹ (ಎಡ ಚಿತ್ರ).

ಮಂಡ್ಯ: ಭ್ರೂಣ ಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದು, ಮಂಡ್ಯ ತಾಲೂಕು ಹಾಡ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ ಪ್ರಕರಣದ ಬಳಿಕ ಈಗ ಪಾಂಡವಪುರದಲ್ಲಿ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಪಾಂಡವಪುರ ತಾಲೂಕು ಆರೋಗ್ಯ ಇಲಾಖೆ ವಸತಿ ಗೃಹ ಬಳಕೆಯಾಗಿದೆ. ಈ ಸಂಬಂಧ ಪೊಲೀಸರು ಆಂಬುಲೆನ್ಸ್ ಚಾಲಕ ಸೇರಿ 4 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಂಧಿತರನ್ನು ಆಂಬುಲೆನ್ ಚಾಲಕ ಆನಂದ್ (37), ಹೊರಗುತ್ತಿಗೆ ಡಿ-ಗ್ರೂಪ್ ಸಿಬ್ಬಂದಿ ಅಶ್ವಿನಿ (32), ಆಕೆಯ ತಾಯಿ ಸತ್ಯಮ್ಮ (54), ಪಾಂಡವಪುರದ ಖಾಸಗಿ ನರ್ಸಿಂಗ್ ಹೋಮ್‌ನ ಡಿ-ಗ್ರೂಪ್ ಸಿಬ್ಬಂದಿ ಗಿರಿಜಮ್ಮ (48) ಎಂದು ಗುರುತಿಸಲಾಗಿದೆ. ಈ ಪೈಕಿ ಅಶ್ವಿನಿ ಎಂಬಾಕೆ ಆನಂದ್‌ನ ಪತ್ನಿ. ಅಶ್ವಿನಿಯ ತಾಯಿ ಸತ್ಯಮ್ಮ. ಪ್ರಸವ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದ ಗಿರಿಜಮ್ಮ ಇವರೊಂದಿಗೆ ಕೈ ಜೋಡಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಾಂಡವಪುರದಲ್ಲಿ ಭ್ರೂಣ ಹತ್ಯೆ ಪ್ರಕರಣ - ಏನಿದು ಘಟನೆ

ಪಾಂಡವಪುರ ತಾಲೂಕು ಆರೋಗ್ಯ ಇಲಾಖೆ ವಸತಿ ಗೃಹವನ್ನು ಆಂಬುಲೆನ್ಸ್ ಚಾಲಕ ಆನಂದ್‌ಗೆ ವಾಸಕ್ಕಾಗಿ ನೀಡಲಾಗಿತ್ತು. ಅಲ್ಲಿ ಆನಂದ್‌ ಮತ್ತು ಆತನ ಪತ್ನಿ ಅಶ್ವಿನಿ, ಆಕೆಯ ತಾಯಿ ಸತ್ಯಮ್ಮ ವಾಸವಿದ್ದರು. ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್‌ ನೌಕರಳಾಗಿ ಅಶ್ವಿನಿ ಕೆಲಸ ಮಾಡುತ್ತಿದ್ದರು. ಅವರಿಗೆ ಇನ್ನೊಂದು ಖಾಸಗಿ ಆಸ್ಪತ್ರೆಯ ಡಿ ಗ್ರೂಪ್‌ ನೌಕರಳಾಗಿದ್ದ ಗಿರಿಜಮ್ಮ ಪರಿಚಯವಾಗಿದ್ದರು.

ಆರು ತಿಂಗಳಿಂದ ಈ ವಸತಿ ಗೃಹದಲ್ಲಿ ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪ ಸ್ಥಳೀಯವಾಗಿ ಕೇಳಿಬಂದಿದೆ. ಆನಂದ್ ಅಶ್ವಿನಿ ದಂಪತಿ ಗರ್ಭಪಾತ ಮಾಡಲು ಇಚ್ಛಿಸುವ ಗರ್ಭಿಣಿಯರನ್ನು ರಹಸ್ಯವಾಗಿ ತಮ್ಮ ವಸತಿ ಗೃಹಕ್ಕೆ ಕರೆತರುತ್ತಿದ್ದರು. ಅಲ್ಲಿ ಗಿರಿಜಮ್ಮ ಅವರ ನೆರವಿನೊಂದಿಗೆ ಗರ್ಭಪಾತ ಮಾಡಿಸುತ್ತಿದ್ದರು ಎಂಬುದು ಆರೋಪದ ತಿರುಳು.

ಪಾಂಡವಪುರದಲ್ಲಿ ಭ್ರೂಣ ಹತ್ಯೆ ಪ್ರಕರಣ ಬಹಿರಂಗವಾದುದು ಹೀಗೆ

ಮೈಸೂರು ಮೂಲದ ಗರ್ಭಿಣಿಯೊಬ್ಬರು ಭಾನುವಾರ ತಡರಾತ್ರಿ ಈ ವಸತಿಗೃಹಕ್ಕೆ ಆಗಮಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ ಕೆ ಮೋಹನ್ ಅವರಿಗೆ ರಾತ್ರಿ 11 ಗಂಟೆಗೆ ಫೋನ್ ಮೂಲಕ ವಿಷಯ ತಿಳಿಸಿದ್ದರು. ಕೂಡಲೇ ಅವರು ಪಾಂಡವಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಅರವಿಂದ್ ಅವರಿಗೆ ಮಾಹಿತಿ ನೀಡಿ ದಾಳಿ ನಡೆಸುವಂತೆ ಸೂಚಿಸಿದ್ದರಿಂದ ಅವರು ಸ್ಥಳೀಯ ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿದಾಗ ಗರ್ಭಿಣಿಗೆ ಅಬಾರ್ಷನ್ ಮಾಡುವ ಪ್ರಕ್ರಿಯೆ ನಡೆದಿತ್ತು ಎಂದು ಮೂಲಗಳು ತಿಳಿಸಿದ್ದಾಗಿ ಕನ್ನಡ ಪ್ರಭ ವರದಿ ಮಾಡಿದೆ.

ಇದಾದ ಬೆನ್ನಿಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ. ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಬೆಟ್ಟಸ್ವಾಮಿ ಅವರು ಕೂಡ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಗರ್ಭಪಾತದ ಮಾತ್ರೆಗಳು, ಸಿರಿಂಜ್, ಡ್ರಿಪ್ ಸೇರಿ ಭ್ರೂಣ ಸುಗಮವಾಗಿ ಹೊರಬರುವಂತೆ ನೀಡುವ ಔಷಧಗಳು ಪತ್ತೆಯಾಗಿವೆ. ಅವೆಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೂರನೇ ಮಗುವೂ ಹೆಣ್ಣು ಎಂದು ಗರ್ಭಪಾತ ಮಾಡಿಸಲು ಬಂದಿದ್ದ ದಂಪತಿಯನ್ನು ಕೂಡಲೇ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಅರ್ಧಂಬರ್ಧ ಆಗಿದ್ದ ಗರ್ಭಪಾತವನ್ನು ಸುಗಮವಾಗಿ ಮಾಡಿದ್ದು, ಆ ಮಹಿಳೆಯ ಆರೋಗ್ಯವಾಗಿರುವಂತೆ ಡಾಕ್ಟರ್ ನೋಡಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.

IPL_Entry_Point