ಕನ್ನಡ ಸುದ್ದಿ  /  ಕರ್ನಾಟಕ  /  ಹನುಮ ಧ್ವಜ ವಿವಾದ 24 ಜನರ ಬಂಧನ; ಮಂಡ್ಯ ಕೆರಗೋಡು ಗ್ರಾಮದಲ್ಲಿ ಪ್ರತಿಭಟನೆ ತೀವ್ರ, 10 ಅಂಶಗಳ ವಿವರಣೆ

ಹನುಮ ಧ್ವಜ ವಿವಾದ 24 ಜನರ ಬಂಧನ; ಮಂಡ್ಯ ಕೆರಗೋಡು ಗ್ರಾಮದಲ್ಲಿ ಪ್ರತಿಭಟನೆ ತೀವ್ರ, 10 ಅಂಶಗಳ ವಿವರಣೆ

Mandya Hanuman Flag Incident: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಪ್ರಕರಣಕ್ಕೆ ಈಗ ರಾಜಕೀಯ ಬಣ್ಣ ಸಿಕ್ಕಿದೆ. ಸ್ಥಳೀಯ ಶಾಸಕರ ವಿರುದ್ಧ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾಡಳಿತದ ನಡೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದು, ಬಿಜೆಪಿ, ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟನಾ ಪಾದಯಾತ್ರೆ ನಡೆಸಿದರು.

ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ಪ್ರತಿಭಟನೆ
ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ಪ್ರತಿಭಟನೆ (@Jaggesh2)

ಮಂಡ್ಯ/ ಬೆಂಗಳೂರು: ಮಂಡ್ಯ ತಾಲೂಕು ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಬಳಿಕ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಆರಂಭವಾಗಿರುವ ಪ್ರತಿಭಟನೆ ಕರ್ನಾಟಕದಾದ್ಯಂತ ಹಬ್ಬತೊಡಗಿದೆ.

ಟ್ರೆಂಡಿಂಗ್​ ಸುದ್ದಿ

ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ, ಬಾಲರಾಮನ ಪ್ರತಿಷ್ಠಾ ಮಹೋತ್ಸವದ ನಿಮಿತ್ತ ಹಿಂದೂಗಳು ಬೃಹತ್ ಹನುಮ ಧ್ವಜವನ್ನು ಹಾರಿಸಿದ್ದರು. ಗ್ರಾಮ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಬಹುತೇಕ ಸದಸ್ಯರು ಹನುಮ ಧ್ವಜ ಹಾರಿಸಿದ್ದನ್ನು ಸಮರ್ಥಿಸಿಕೊಂಡ ಕಾರಣ, ವಿರೋಧವನ್ನು ಅಲ್ಲೇ ತಣ್ಣಗಾಗಿಸುವ ಪ್ರಯತ್ನ ನಡೆಯಿತು.

ಆದರೆ, ಮಂಡ್ಯ ಜಿಲ್ಲಾಡಳಿತದಿಂದ ತಾಲೂಕು ಆಡಳಿತಕ್ಕೆ ಮೌಖಿಕ ಸೂಚನೆ ಬಂದ ಪ್ರಕಾರ, ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಪೊಲೀಸ್ ಬಲದೊಂದಿಗೆ ಹನುಮ ಧ್ವಜವನ್ನು ಕೆಳಕ್ಕೆ ಇಳಿಸಿದ್ದರು. ಶನಿವಾರ ತಡರಾತ್ರಿ ನಡೆದ ಈ ವಿದ್ಯಮಾನ ಪ್ರತಿಭಟನೆಗೆ ಕಾರಣವಾಯಿತು. ರಾಜಕೀಯವಾಗಿ ಗಮನಸೆಳೆಯಿತು ಕೂಡ.

ನಿನ್ನೆ (ಜ.28) ಕೆರಗೋಡಿನಲ್ಲಿ ನಡೆದ ಘಟನೆ ವಿರೋಧಿಸಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಕೆರಗೋಡು ಹನುಮ ಧ್ವಜ ವಿವಾದ ಪ್ರಕರಣ ಇದುವರೆಗೆ ಏನೇನಾಯಿತು 10 ಅಂಶಗಳ ವಿವರಣೆ

1) ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ನಿಮಿತ್ತ ಜನವರಿ 22ರಂದು ಗ್ರಾಮದ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ತೀರ್ಮಾನಿಸಿದ ಕೆರೆಗೋಡು ಗ್ರಾಮಸ್ಥರು, ಈ ಕುರಿತು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ಮೂಲಕ ಗ್ರಾಮ ಪಂಚಾಯಿತಿಗೆ ಮನವಿಯನ್ನೂ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಅನುಮತಿ ಪತ್ರ ಪಡೆದ ಗ್ರಾಮಸ್ಥರು ಹನುಮ ಧ್ವಜ ಹಾರಿಸಿದರು.

2) ಗ್ರಾಮ ಪಂಚಾಯಿತಿಯ ಅಧೀನದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಿದ್ದ ವಿಚಾರ ಗ್ರಾಮ ಪಂಚಾಯತಿ​ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಿಸಿದ್ದರ ಪರವಾಗಿ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಪಂ​ ಸದಸ್ಯರು ನಡಾವಳಿ ರಚಿಸಿ, ವಿವಾದ ಇತ್ಯರ್ಥ ಪಡಿಸಿದ್ದರು.

3) ವಿರೋಧ ವ್ಯಕ್ತಪಡಿಸಿದವರು ಜಿಲ್ಲಾಡಳಿತದ ಗಮನಸೆಳೆದರು. ಸರ್ಕಾರಿ ಜಾಗದಲ್ಲಿ ಹಾರಿಸಿರುವ ಹನುಮ ಧ್ವಜ ತೆರವುಗೊಳಿಸಬೇಕು ಎಂದು ಮಂಡ್ಯ ಜಿಲ್ಲಾಡಳಿತವು ತಾಲೂಕು ಆಡಳಿತಕ್ಕೆ ಮೌಖಿಕ ಆದೇಶ ನೀಡಿತ್ತು. ಅದರಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹನುಮ ಧ್ವಜ ತೆರವು ಮಾಡಲು ಗ್ರಾಮಕ್ಕೆ ಶನಿವಾರ (ಜ.27) ಬಂದರು. ಪ್ರತಿಭಟನೆ ಕಾರಣ ಹಿಂದಿರುಗಿದರು.

4) ಮಂಡ್ಯ ಎಸಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರು ಭಾನುವಾರ (ಜ.28) ನಸುಕಿನ 3 ಗಂಟೆಗೆ ಕೆರಗೋಡಿಗೆ ಆಗಮಿಸಿದರು. ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ, ಸೆಕ್ಷನ್ 144 ಜಾರಿಗೊಳಿಸಿ, ಲಾಠಿ ಚಾರ್ಜ್‌ ಮಾಡಿ ಹನುಮ ಧ್ವಜ ಕೆಳಗಿಳಿಸಿದರು. ಪ್ರಕರಣ ಸಂಬಂಧ 24 ಜನರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

5) ಈ ವಿದ್ಯಮಾನದಿಂದ ಕೆರಳಿದ ಗ್ರಾಮಸ್ಥರು ಮತ್ತೆ ಬೀದಿಗಿಳಿದು ಪ್ರತಿಭಟನೆ ಶುರುಮಾಡಿದರು. ಪೊಲೀಸರು ಅವರನ್ನು ಚದುರಿಸಲು ಪ್ರಯತ್ನಿಸಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಈ ನಡುವೆ, ಈ ವಿದ್ಯಮಾನ ರಾಜಕೀಯ ಗಮನಸೆಳೆಯಿತು. ಬಿಜೆಪಿ ನಿಯೋಗ ಗ್ರಾಮಕ್ಕೆ ಭೇಟಿ ನೀಡಿತು. ಗ್ರಾಮಸ್ಥರು ಶಾಸಕ ರವಿಕುಮಾರ್ ಅವರ ಫ್ಲೆಕ್ಸ್‌ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

6) ಕೆರಗೋಡಿನ ಕಡೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು ಪಾದಯಾತ್ರೆ ನಡೆಸಿ ಪ್ರತಿಭಟನೆ ಮಾಡಿದರು. ಕೆರಗೋಡು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಮಂಡ್ಯ ಜಿಲ್ಲಾಕಾರಿ ಕಚೇರಿಗೆ ಮುತ್ತಿಗೆ ಹಾಕುವುದಕ್ಕಾಗಿ ಪಾದಯಾತ್ರೆ ಶುರುಮಾಡಿದರು.

7) ಮಾಜಿ ಸಚಿವ ಸಿ.ಟಿ.ರವಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಸೇರಿ ಹಲವು ಮುಖಂಡರು ಪ್ರತಿಭಟನಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇಂದಿನ ಪ್ರತಿಭಟನೆಗೆ ಜೆಡಿಎಸ್ ಕೂಡ ಕೈ ಜೋಡಿಸಿದ್ದು ವಿಶೇಷವಾಗಿತ್ತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಹೆಚ್.ಟಿ.ಮಂಜುನಾಥ್, ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಅನ್ನದಾನಿ, ತಮ್ಮಣ್ಣ, ಜನಾರ್ದನ ರೆಡ್ಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿ ಹಲವರು ಪಾಲ್ಗೊಂಡಿದ್ದರು.

8) ಮಂಡ್ಯದ ಕೆರಗೋಡುನಲ್ಲಿ ಹನುಮಧ್ವಜದ ವಿಷಯದಲ್ಲಿ ಪೊಲೀಸರು, ರಾಜ್ಯ ಕಾಂಗ್ರೆಸ್ ಸರಕಾರದ ವರ್ತನೆ ಅಕ್ಷಮ್ಯ, ಅನಾಗರೀಕ. ಕಾಂಗ್ರೆಸ್‌ʼನ ಕಣಕಣದಲ್ಲೂ ಜನದ್ವೇಷವೇ ತುಂಬಿದೆ. ಆ ಮನಃಸ್ಥಿತಿಯನ್ನು ಮತ್ತೆಮತ್ತೆ ರುಜುವಾತು ಮಾಡುತ್ತಿದೆ. ಮುಗ್ಧ ಯುವಕರ ಮೇಲೆ ಲಾಠಿಚಾರ್ಜ್ ಮಾಡುವವರೆಗೂ ಆ ದ್ವೇಷ ಬಂದು ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

9) ನಾನೂ ಒಬ್ಬ ಹಿಂದೂ, ಎಲ್ಲ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ. ಸಂವಿಧಾನದಲ್ಲಿ ಹೇಳಿರುವಂತೆ ಜಾತ್ಯತೀತ ಎಂದರೆ ಸಹಬಾಳ್ವೆ ಸಹಿಷ್ಣುತೆ. ನಮಗೆ ಅದರಲ್ಲಿ ನಂಬಿಕೆ ಇದೆ. ಬಿಜೆಪಿಯವರು ಅನಗತ್ಯ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದಿದ್ದು, ಅದನ್ನೇ ಹಾರಿಸಬೇಕು. ಜಿಲ್ಲಾಡಳಿತ ತೆಗೆದುಕೊಂಡ ಕ್ರಮ ಸರಿಯಾಗೇ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

10) ಕೆರಗೋಡು ಗ್ರಾಮದಲ್ಲಿ ಪ್ರತಿಭಟನೆ ಮುಂದುವರಿದಿದೆ. ಸೆಕ್ಷನ್ 144 ಜಾರಿಯಲ್ಲಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್‌ ಪಡೆಯ ತುಕಡಿಗಳು ಸೇರಿದಂತೆ ಹೆಚ್ಚಿನ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ.

ಟಿ20 ವರ್ಲ್ಡ್‌ಕಪ್ 2024