KRS Dam Level:ಕೃಷ್ಣರಾಜಸಾಗರ ಜಲಾಶಯಕ್ಕೆ ಮತ್ತಷ್ಟು ನೀರು: ಕಬಿನಿ ಜಲಾಶಯದಲ್ಲೂ ಕೊಂಚ ಏರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Krs Dam Level:ಕೃಷ್ಣರಾಜಸಾಗರ ಜಲಾಶಯಕ್ಕೆ ಮತ್ತಷ್ಟು ನೀರು: ಕಬಿನಿ ಜಲಾಶಯದಲ್ಲೂ ಕೊಂಚ ಏರಿಕೆ

KRS Dam Level:ಕೃಷ್ಣರಾಜಸಾಗರ ಜಲಾಶಯಕ್ಕೆ ಮತ್ತಷ್ಟು ನೀರು: ಕಬಿನಿ ಜಲಾಶಯದಲ್ಲೂ ಕೊಂಚ ಏರಿಕೆ

Karnataka Dams water Level ಕರ್ನಾಟಕದ ಕೆಲ ಭಾಗದಲ್ಲಿ ಕಳೆದ ವಾರ ಮಳೆಯಾಗಿದ್ದರಿಂದ ಜಲಾಶಯಗಳು ಕೊಂಚ ಚೇತರಿಕೆ ಕಂಡಿವೆ. ಕಾವೇರಿ ಕೊಳ್ಳದ ಕೆಆರ್‌ಎಸ್‌, ಕಬಿನಿ, ಹಾರಂಗಿ ಜಲಾಶಯಕ್ಕೂ ನೀರು ಹರಿದು ಬಂದಿದೆ.

ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ನೂರು ಅಡಿಯ ಮೇಲೆಯೇ ಇದೆ.
ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ನೂರು ಅಡಿಯ ಮೇಲೆಯೇ ಇದೆ.

ಮೈಸೂರು: ಕಳೆದ ವಾರ ಕೊಡಗು ಹಾಗು ಕೇರಳದಲ್ಲಿ ಸುರಿದ ಮಳೆಯ ನೀರು ಇನ್ನೂ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಿಗೆ ಹರಿದು ಬರುತ್ತಲೇ ಇದೆ. ಇದರಿಂದ ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಾಣುತ್ತಲೇ ಇದೆ.

ಕಾವೇರಿ ಜಲವಿವಾದ ಶುರುವಾರ ಎರಡು ತಿಂಗಳಲ್ಲಿ ಜಲಾಶಯಗಳಿಗೆ ಹರಿದು ಬರುವ ಅತ್ಯಲ್ಪ ನೀರು ಕೂಡ ಈಗ ಜೀವಜಲದಂತೆಯೇ ಕಾಣುತ್ತಿದೆ. ಒಂದು ವಾರದಿಂದ ಒಳ ಹರಿವಿನ ಪ್ರಮಾಣದಲ್ಲಿ ಏರಿಳಿತವಾಗಿದ್ದರೂ ಜಲಾಶಯದ ನೀರಿನ ಮಟ್ಟದಲ್ಲಿ ಮಾತ್ರ ಏರಿಕೆ ಕಂಡು ಬಂದಿದೆ.

ತಮಿಳುನಾಡಿಗೆ ಮೂರು ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಕಾವೇರಿ ನೀರು ಮೇಲುಸ್ತುವಾರಿ ಪ್ರಾಧಿಕಾರ ಸೂಚನೆ ನೀಡಿದ ನಂತರ ಹಿಂದೆ ಹೋಗುತ್ತಿದ್ದ ನೀರಿನ ಪ್ರಮಾಣ ತಗ್ಗಿದೆ. ಇದರ ನಡುವೆ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದರಿಂದ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.

ನೂರು ಅಡಿಯಲ್ಲೇ ಕೆಆರ್‌ಎಸ್‌

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ನೀರಿನ ಮಟ್ಟ ನೂರು ಅಡಿಯನ್ನು ದಾಟಿ ಅದೇ ಮಟ್ಟವನ್ನು ಒಂದು ವಾರದಿಂದ ಕಾಪಾಡಿಕೊಂಡಿದೆ. ಭಾನುವಾರ ಬೆಳಿಗ್ಗೆ ಹೊತ್ತಿಗೆ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ101.20 ಅಡಿಯಷ್ಟಿತ್ತು. ಜಲಾಶಯದ ಗರಿಷ್ಠ ಮಟ್ಟ 124.80. ಜಲಾಶಯಕ್ಕೆ ಈಗ 3682 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣ ನಾಲೆಗಳಿಗೆ ಸೇರಿದಂತೆ 3719 ಕ್ಯೂಸೆಕ್‌.

ಜಲಾಶಯದಲ್ಲಿ ಸದ್ಯ 23.765 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ ಬಳಸಲು ಅವಕಾಶ ಇರುವಂತದ್ದು 15.386 ಟಿಎಂಸಿ ನೀರು ಮಾತ್ರ, ಜಲಾಶಯದಲ್ಲಿ ಸಂಗ್ರಹಕ್ಕೆ ಅವಕಾಶ ಇರುವಂತದ್ದು 49.452 ಟಿಎಂಸಿ ನೀರು.

ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ನೂರು ಅಡಿಗಿಂತ ಅಧಿಕವಾಗಿಯೇ ಇದೆ. ನಮ್ಮ ಭಾಗದ ನಾಲೆಗಳಿಗೂ ನೀರು ಹರಿಸಲಾಗುತ್ತಿದೆ. ತಮಿಳುನಾಡಿಗೆ ಹೋಗುತ್ತಿರುವ ಪ್ರಮಾಣ ಕಡಿಮೆಯೇ. ನೀರು ನಿರ್ವಹಣೆ ನಿಟ್ಟಿನಲ್ಲಿ ಜಲಸಂಪನ್ಮೂಲಕ ಇಲಾಖೆ ಹೆಚ್ಚಿನ ಗಮನವನ್ನು ನೀಡುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಕಬಿನಿಗೂ ನೀರು

ಕೇರಳ ಭಾಗದಲ್ಲಿನ ಮಳೆಯಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲೂ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಭಾನುವಾರ ಬೆಳಿಗ್ಗೆ ಹೊತ್ತಿಗೆ ಜಲಾಶುದ ನೀರಿನ ಮಟ್ಟ 2276.65 ಅಡಿಯಷ್ಟಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ. ಸದ್ಯ ಜಲಾಶಯಕ್ಕೆ 1972 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ ನದಿ ಮೂಲಕ 1000 ಕ್ಯೂಸೆಕ್‌ ನಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ಈ ನೀರು ಬಹುತೇಕ ತಮಿಳುನಾಡು ಹಾಗೂ ಬೆಂಗಳೂರು, ಮೈಸೂರು ಕುಡಿಯುವ ನೀರಿಗೆ ಹೋಗುತ್ತಿದೆ. ಕಬಿನಿ ಭಾಗದ ನಾಲೆಗಳಿಗೆ ನೀರು ಹರಿಸುತ್ತಿಲ್ಲ.

ಜಲಾಶಯದಲ್ಲಿ ಸದ್ಯ 15.17 ಟಿಎಂಸಿ ನೀರು ಸಂಗ್ರಹವಾಗಿದೆ. ಬಳಸಲು 5.36 ಟಿಎಂಸಿ ನೀರು ಲಭ್ಯವಿದೆ. ಜಲಾಶಯದಲ್ಲಿ ಸಂಗ್ರಹಿಸಬಹುದಾದ ಗರಿಷ್ಠ ನೀರಿನ ಮಟ್ಟ 19.52 ಟಿಎಂಸಿ.

ಕೇರಳದಲ್ಲಿ ಹಿಂದಿನ ವಾರ ಮಳೆಯಾಗಿದ್ದರಿಂದ ನಮ್ಮ ಜಲಾಶಯಕ್ಕೆ ನೀರು ಬಂದಿದೆ. ಈಗ ಒಳ ಹರಿವಿನ ಪ್ರಮಾಣದಲ್ಲಿ ತಗ್ಗಿದರೂ ಹಿಂದಿನ ವರ್ಷ ಇದೇ ಅವಧಿಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಈ ಬಾರಿ ನೀರು ಹರಿದು ಬರುತ್ತಿದೆ. ನಾಲೆಗಳಿಗೂ ಕಟ್ಟು ನೀರನ್ನು ಹದಿನೈದು ದಿನ ಬಿಟ್ಟು ಒಮ್ಮೆಮ್ಮೊ ಹರಿಸಲಾಗುತ್ತಿದೆ ಎನ್ನುತ್ತಾರೆ ಕಬಿನಿ ಜಲಾಶಯ ಅಧಿಕಾರಿಗಳು.

ಹಾರಂಗಿಗೂ ನೀರು

ಕೊಡಗಿನಲ್ಲಿ ಮಳೆಯಾಗಿದ್ದರಿಂದ ಹಾರಂಗಿ ಜಲಾಶಯಕ್ಕೂ ನೀರು ಬಂದಿದೆ. ಸದ್ಯ ಹಾರಂಗಿ ಜಲಾಶಯದ ನೀರಿನ ಮಟ್ಟ 2856.09 ಅಡಿಯಷ್ಟಿದೆ. ಒಳ ಹರಿವಿನ ಪ್ರಮಾಣ 2240 ಕ್ಯೂಸೆಕ್‌ ಇದ್ದರೆ, ಹೊರ ಹರಿವು 1000 ಕ್ಯೂಸೆಕ್‌ ಇದೆ. ಇದು ನದಿ ಮೂಲಕ ಬಿಡಲಾಗುತ್ತಿದೆ. 150 ಕ್ಯೂಸೆಕ್‌ ನಾಲೆಗಳ ಮೂಲಕ ಹರಿಸಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 7.51 ಟಿಎಂಸಿ ನೀರು ಹಾರಂಗಿ ಜಲಾಶಯದಲ್ಲಿದೆ. ಇಲ್ಲಿಂದ ಹೊರ ಬಿಡುವ ನೀರು ಕಾವೇರಿ ನದಿ ಸೇರಿ ನಂತರ ಕೃಷ್ಣರಾಜಸಾಗರ ಜಲಾಶಯವನ್ನು ಸೇರುತ್ತದೆ.

ಅರ್ಧ ತುಂಬಿರುವ ತುಂಗಭದ್ರಾ

ವಿಜಯನಗರ ಜಿಲ್ಲೆ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲೂ ಈಗ ಅರ್ಧದಷ್ಟು ನೀರು ಮಾತ್ರ ತುಂಬಿದೆ.

ಜಲಾಶಯದ ಗರಿಷ್ಠ ಮಟ್ಟ 1633 ಅಡಿಯಿದ್ದರೆ, ಸಂಗ್ರಹವಾಗಿರುವ ಪ್ರಮಾಣ 1616.28 ಅಡಿಯಷ್ಟು. ಜಲಾಶಯಕ್ಕೆ 2075 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದರೆ, 9356 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

ತುಂಗಭದ್ರ ಜಲಾಶಯದಲ್ಲಿ 105.788 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದ್ದು, ಸದ್ಯ 51.519ಟಿಎಂಸಿ ನೀರು ಸಂಗ್ರಹವಾಗಿದೆ.

ಬಹುತೇಕ ತುಂಬಿರುವ ಆಲಮಟ್ಟಿ

ವಿಜಯಪುರ ಜಿಲ್ಲೆಯ ಲಾಲ್‌ಬಹದ್ದೂರು ಶಾಸ್ತ್ರಿ ಜಲಾಶಯ ಬಹುತೇಕ ತುಂಬಿದಂತೆಯೇ ಇದೆ. ಕರ್ನಾಟಕದಲ್ಲಿ ಅತಿ ಬೇಗ ತುಂಬಿದ ಹಾಗೂ ಈವರೆಗೂ ಹೆಚ್ಚು ನೀರು ಸಂಗ್ರಹವಾಗಿರುವ ಜಲಾಶಯಗಳಲ್ಲಿ ಆಲಮಟ್ಟಿ ಜಲಾಶಯವೇ ಮುಂಚೂಣಿಯಲ್ಲಿದೆ.

ಜಲಾಶಯದಲ್ಲಿ ಸದ್ಯ 519.14 ಮೀಟರ್‌ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್.‌ ಜಲಾಶಯಕ್ಕೆ 11,901 ಕ್ಯೂಸೆಕ್‌ ನೀರು ಹರಿದುಬರುತ್ತಿದೆ. ಜಲಾಶಯದಲ್ಲಿ 115.221 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹಇಲು ಅವಕಾಶವಿದೆ.

Whats_app_banner