ಕನ್ನಡ ಸುದ್ದಿ  /  ಕರ್ನಾಟಕ  /  Krs Dam Level: ಕೊಡಗು ಮಳೆಯಿಂದ 100 ಅಡಿ ತಲುಪಿದ ಕೃಷ್ಣರಾಜಸಾಗರ, ಕಳೆದ ವರ್ಷ ಎಷ್ಟಿತ್ತು ನೀರಿನ ಪ್ರಮಾಣ

KRS Dam Level: ಕೊಡಗು ಮಳೆಯಿಂದ 100 ಅಡಿ ತಲುಪಿದ ಕೃಷ್ಣರಾಜಸಾಗರ, ಕಳೆದ ವರ್ಷ ಎಷ್ಟಿತ್ತು ನೀರಿನ ಪ್ರಮಾಣ

Mandya News ಕೃಷ್ಣರಾಜಸಾಗರ ಜಲಾಶಯಕ್ಕೆ ಉತ್ತಮ ನೀರು( KRS Dam) ಹರಿದು ಬರುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟವು ನೂರು ಅಡಿಯನ್ನು ತಲುಪಿದೆ.

ಕೆಆರ್‌ಎಸ್‌ ಜಲಾಶಯ ನೀರಿನ ಮಟ್ಟವು ನೂರು ಅಡಿ ತಲುಪಿದೆ.
ಕೆಆರ್‌ಎಸ್‌ ಜಲಾಶಯ ನೀರಿನ ಮಟ್ಟವು ನೂರು ಅಡಿ ತಲುಪಿದೆ.

ಮಂಡ್ಯ: ಕೊಡಗಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಮಂಡ್ಯ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾಣುತ್ತಿದೆ. ಅದೂ ಕಳೆದ ಮುಂಗಾರು ಹಂಗಾಮಿನಲ್ಲಿ ಪೂರ್ಣ ತುಂಬದೇ ಆತಂಕ ಸೃಷ್ಟಿಸಿದ್ದ ಕೃಷ್ಣರಾಜಸಾಗರ ಜಲಾಶಯ ಈ ಬಾರಿ ಜುಲೈ ಮೊದಲ ವಾರದಲ್ಲೇ ನೂರು ಅಡಿ ತಲುಪಿದೆ. ನಿರಂತರವಾಗಿ ಮಳೆಯಾದ ಪರಿಣಾಮ ಕಾವೇರಿ ನದಿ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಲೇ ಇದೆ. ಸತತ ಹದಿನೈದು ದಿನಗಳಿಂದ ಮಳೆ ಸುರಿಯುತ್ತಿದೆ. ಒಂದೆರಡು ದಿನ ಬಿಡುವು ಕೊಟ್ಟರೂ ಕೆಆರ್‌ಎಸ್‌ ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣದಲ್ಲಿ ಇಳಿಕೆಯೇನೂ ಕಂಡು ಬಂದಿಲ್ಲ. ಹತ್ತು ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರು ಒಳ ಬರುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ ಏರಿಕೆ ಕಂಡಿದೆ. ಹಿಂದಿನ ವರ್ಷಕ್ಕೆ ಇದೇ ದಿನಕ್ಕೆ ಹೋಲಿಸಿದರೆ ಜಲಾಶಯದಲ್ಲಿ 22 ಅಡಿ ನೀರು ಸಂಗ್ರಹವಾಗಿದೆ.

ಕೃಷ್ಣರಾಜಸಾಗರ ಜಲಾಶಯ ಹಿಂದೆಲ್ಲಾ ಆಗಸ್ಟ್‌ ವೇಳೆ ತುಂಬಿದ ಉದಾಹರಣೆ ಇದೆ. ಮಧ್ಯೆ ನಾಲ್ಕೈದು ಅವಧಿಯಲ್ಲಿ ತುಂಬದ ಉದಾಹರಣೆಗಳೂ ಇವೆ. ಒಂದು ವರ್ಷ ತುಂಬದೇ ಇದ್ದರೆ ಮುಂದಿನ ಮೂರ್ನಾಲ್ಕು ವರ್ಷ ಉತ್ತಮ ಮಳೆಯಾಗಿ ತುಂಬಿದ ಸನ್ನಿವೇಶಗಳನ್ನೂ ಕಂಡಿದ್ದೇವೆ. ಕಳೆದ ವರ್ಷ ಕೆಆರ್‌ಎಸ್‌ ನೂರು ಅಡಿ ತುಂಬುವುದು ಪ್ರಯಾಸ ಎನ್ನುವಷ್ಟರ ಮಟ್ಟಿಗೆ ಮಳೆ ಕೊರತೆ ಎದುರಾಗಿತ್ತು. ಕೊಡಗಿನಲ್ಲಿ ಹಾಗೂ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯಾಗಿರಲೇ ಇಲ್ಲ. ಇದರಿಂದಾಗಿ ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಕೊರತೆಯಾಗಿತ್ತು.ಕೊನೆಗೆ ಮುಂಗಾರು ಕೃಪೆ ತೋರಿದ್ದರಿಂದ ನೂರು ಅಡಿ ದಾಟಿತ್ತು. 113 ಅಡಿ ವರೆಗೂ ಮಾತ್ರ ಜಲಾಶಯದ ಗರಿಷ್ಠ ಮಟ್ಟ ತಲುಪಿ 11 ಅಡಿ ಕೊರತೆ ಉಂಟಾಗಿತ್ತು. ಆದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ವಹಣೆ ಮಾಡಿದ್ದರಿಂದ ಭಾರೀ ಸಮಸ್ಯೆಯೇನೂ ಈ ಭಾಗದಲ್ಲಿ ಕುಡಿಯುವ ನೀರಿಗೆ ಆಗಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿಯೇ ಇದೆ. ಜುಲೈ ಮೊದಲ ವಾರದಲ್ಲಿಯೇ ಜಲಾಶಯದಲ್ಲಿ ಗಣನೀಯ ನೀರು ಕಂಡು ಬಂದು ನೀರಿನ ಮಟ್ಟವು ನೂರು ಅಡಿ ತಲುಪಿದೆ. ಸತತ ಮಳೆಯಿಂದಾಗಿ ಜಲಾಶಯಕ್ಕೆ ನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಇದು ನೂರು ಅಡಿ ಮಟ್ಟ ತಲುಪುವಂತೆ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಜಲಾಶಯದಲ್ಲಿ ಗುರುವಾರ ಬೆಳಿಗ್ಗೆ ಹೊತ್ತಿಗೆ 99.30 ಅಡಿ ಇದ್ದ ನೀರಿನ ಮಟ್ಟವು ಸಂಜೆ ಹೊತ್ತಿಗೆ ನೂರು ಅಡಿಗೆ ತಲುಪಿತು. ಜಲಾಶಯಕ್ಕೆ ಈಗಲೂ 11189 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಜಲಾಶಯದಲ್ಲಿ 22.267 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಸಂಗ್ರಹಿಸಬಹುದಾದ ನೀರಿನ ಸಾಮರ್ಥ್ಯ 49.452 ಟಿಎಂಸಿ. ಸದ್ಯ ಜಲಾಶಯದಿಂದ 540 ಕ್ಯೂಸೆಕ್‌ ನೀರನ್ನು ಮಾತ್ರ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹರಿಸಲಾಗುತ್ತಿದೆ.

ಹತ್ತು ದಿನದ ಹಿಂದೆ ಅಂದರೆ 2024ರ ಜೂನ್‌ 25ರಂದು ಜಲಾಶಯದ ನೀರಿನ ಮಟ್ಟ 87.72 ಅಡಿ ಇತ್ತು. ಒಳ ಹರಿವು ಹೆಚ್ಚಿದ್ದರಿಂದ ವಾರದೊಳಗೆ ಹತ್ತು ಅಡಿ ನೀರು ಹರಿದು ಬಂದಿದೆ. ಈವರೆಗೂ ಸುಮಾರು 30 ಅಡಿ ನೀರು ಈ ಹಂಗಾಮಿನಲ್ಲಿ ಹರಿದು ಬಂದಿದೆ. ತುಂಬಲು ಇನ್ನೂ 24 ಅಡಿ ಬೇಕು. ಇದೇ ಪ್ರಮಾಣದಲ್ಲಿ ಮಳೆಯಾದರೆ ಜಲಾಶಯ ಮಾಸಾಂತ್ಯದಲ್ಲಿ ತುಂಬಬಹುದು ಎನ್ನುವುದು ಅಧಿಕಾರಿಗಳ ವಿವರಣೆ.

ಕಳೆದ ವರ್ಷ ಇನ್ನು ಮಳೆ ಚುರುಕಾಗಿರಲಿಲ್ಲ. ಈ ಕಾರಣದಿಂದ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟವು 78.22 ಅಡಿ ಮಾತ್ರ ಇತ್ತು. ಹತ್ತು ಟಿಎಂಸಿ ನೀರು ಮಾತ್ರ ಇತ್ತು. ಈ ಬಾರಿ ಎರಡು ಪಟ್ಟು ಜಾಸ್ತಿಯಿದೆ. ನೂರು ಅಡಿ ಕೂಡ ಬೇಗನೇ ತುಂಬಿದೆ. ಇದು ಮಂಡ್ಯ, ಮೈಸೂರು ಭಾಗದ ಜನರ ಜತೆಗೆ ಬೆಂಗಳೂರು ಜನರಿಗೂ ನೆಮ್ಮದಿ ತಂದಿದೆ.