Gaganachukki Falls: ಮುಂದಿನ ವಾರಾಂತ್ಯಕ್ಕೆ ಮಂಡ್ಯ ಗಗನಚುಕ್ಕಿ ಜಲಪಾತೋತ್ಸವಕ್ಕೆ ಅಣಿಯಾಗಿ, ಬೆಳಕಿನಲ್ಲಿ ಆಕರ್ಷಿಸಲಿದೆ ಕಾವೇರಿ ತೀರದ ಜಲಪಾತ
ಕನ್ನಡ ಸುದ್ದಿ  /  ಕರ್ನಾಟಕ  /  Gaganachukki Falls: ಮುಂದಿನ ವಾರಾಂತ್ಯಕ್ಕೆ ಮಂಡ್ಯ ಗಗನಚುಕ್ಕಿ ಜಲಪಾತೋತ್ಸವಕ್ಕೆ ಅಣಿಯಾಗಿ, ಬೆಳಕಿನಲ್ಲಿ ಆಕರ್ಷಿಸಲಿದೆ ಕಾವೇರಿ ತೀರದ ಜಲಪಾತ

Gaganachukki Falls: ಮುಂದಿನ ವಾರಾಂತ್ಯಕ್ಕೆ ಮಂಡ್ಯ ಗಗನಚುಕ್ಕಿ ಜಲಪಾತೋತ್ಸವಕ್ಕೆ ಅಣಿಯಾಗಿ, ಬೆಳಕಿನಲ್ಲಿ ಆಕರ್ಷಿಸಲಿದೆ ಕಾವೇರಿ ತೀರದ ಜಲಪಾತ

Mandya Tourism ಮಂಡ್ಯ ಜಿಲ್ಲೆ ಶಿವನಸಮುದ್ರದಲ್ಲಿ ಗಗನಚುಕ್ಕಿ ಜಲಪಾತೋತ್ಸವ ಮುಂದಿನ ವಾರ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಲಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತವನ್ನು ವೀಕ್ಷಿಸಲು ವಿಶೇಷ ಉತ್ಸವ ಆಯೋಜಿಸಲಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತವನ್ನು ವೀಕ್ಷಿಸಲು ವಿಶೇಷ ಉತ್ಸವ ಆಯೋಜಿಸಲಾಗಿದೆ.

ಮಂಡ್ಯ: ಕಳೆದ ತಿಂಗಳು ಚಾಮರಾಜನಗರ ಜಿಲ್ಲೆಯವರು ಭರಚುಕ್ಕಿ ಉತ್ಸವವನ್ನು ಒಂದು ದಿನದ ಮಟ್ಟಿಗೆ ಆಯೋಜಿಸಿ ತುಂಬಿದ್ದ ಕಾವೇರಿ ನದಿಯ ವೈಭವ ಹಾಗೂ ಭರಚುಕ್ಕಿ ಜಲಪಾತದ ವೈಭವವನ್ನು ಉಣಬಡಿಸಿದ್ದರು. ಈಗ ಅಲ್ಲಿಂದ ಅನತಿ ದೂರದಲ್ಲಿಯೇ ಇರುವ ಗಗನಚುಕ್ಕಿ ಜಲಪಾತೋತ್ಸವದ ಸಡಗರ. ಮಂಡ್ಯ ಜಿಲ್ಲಾಡಳಿತದ ವತಿಯಿಂದ ಮಳವಳ್ಳಿ ತಾಲ್ಲೂಕಿನಲ್ಲಿ ಗಗನಚುಕ್ಕಿ ಜಲಪಾತೋತ್ಸವವನ್ನು ಸೆಪ್ಟೆಂಬರ್ 14 ಹಾಗೂ 15 ರಂದು ಆಯೋಜಿಸಲಾಗಿದೆ. ಮುಂದಿನ ವಾರಾಂತ್ಯವನ್ನು ಕಳೆಯಲು ಗಗನಚುಕ್ಕಿ ಜಲಪಾತೋತ್ಸವ ವಿಶೇಷ ತಾಣವಾಗಿರಲಿದೆ. ಲೇಸರ್‌ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರವಾಸಿಗರ ಆಕರ್ಷಣೆಯಾಗಲಿವೆ. ಇದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸಹಿತ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರಿಗೆ ಸೌಲಭ್ಯಗಳನ್ನು ಶಿವನಸಮುದ್ರ ಬಳಿ ಒದಗಿಸಲಾಗುತ್ತದೆ. ಪಾರ್ಕಿಂಗ್‌ ವ್ಯವಸ್ಥೆಯನ್ನು ಮಾಡಲಾಗಿದೆ.

ಎರಡು ದಿನಗಳ ಕಾಲ ನಡೆಯುವ ಗಗನಚುಕ್ಕಿ ಜಲಪಾತೋತ್ಸವದ ಹಿನ್ನಲೆ ಆಗಮಿಸುವ ಸಾರ್ವಜನಿಕರಿಗೆ ಕಾರ್ಯಕ್ರಮದ ಜೊತೆಗೆ ಉಚಿತ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಊಟದ ವ್ಯವಸ್ಥೆ ಮಾಡಲಾಗಿದೆ. ಪರಿಸರದ ಸೌಂದರ್ಯ ಸವಿಯುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಬೆಳಿಗ್ಗೆಯಿಂದ ರಾತ್ರಿಯವರೆಗೆ ಇರುತ್ತದೆ ಎನ್ನುವುದು ಗಗನಚುಕ್ಕಿ ಜಲಪಾತೋತ್ಸವ ಆಯೋಜನೆ ನೇತೃತ್ವ ವಹಿಸಿರುವ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ವಿವರಣೆ.

ಸಿಎಂ ಉದ್ಘಾಟನೆ

ಸೆಪ್ಟೆಂಬರ್ 14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು, ಇದರೊಂದಿಗೆ ಲೇಜರ್ ಹಾಗೂ ಲೈಟಿಂಗ್ ಗಗಳನ್ನು ಸಹ ಉದ್ಘಾಟಿಸುವರು. ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗಿದ್ದು, ಬೆಳಗಿನ ಕಾರ್ಯಕ್ರಮವನ್ನು ಸ್ಥಳೀಯ ಕಲಾವಿದರಿಗೆ ನೀಡಲಾಗಿದೆ. ಖ್ಯಾತ ಸಂಗೀತ ಸಂಯೋಜಕ ರವಿ ಬಸ್ರೂರು ಅವರು ಇದೇ ಮೊದಲ ಬಾರಿಗೆ ಲೈವ್ ಆಗಿ ಸೆ.15 ರಂದು ಕಾರ್ಯಕ್ರಮ ನೀಡುತ್ತಿದ್ದಾರೆ.

ಏನೇನು ಕಾರ್ಯಕ್ರಮಗಳು ಎರಡು ದಿನ ಇವೆ

ಸೆಪ್ಟೆಂಬರ್ 14 ರಂದು ಶನಿವಾರ ಬೆಳಿಗ್ಗೆ 11 ರಿಂದ ಮದ್ಯಾಹ್ನ 2 ಗಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ

ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.30 ಗಂಟೆವರೆಗೆ ನಾಗೇಶ್ ಕಂದೇಕಾಲ ಮತ್ತು (ಕಲಾವತಿ ದಯಾನಂದ್, ಅಜಯ್ ವಾರಿಯರ್, ಜೋಗಿ ಸುನಿತಾ, ಚಿಂತನ್ ವಿಕಾಸ್, ಸುಹನಾ ಸೈಯದ್) ಇವರಿಂದ ಭಾವಗೀತೆಗಳು.

ಸಂಜೆ 4.30 ರಿಂದ 6 ಗಂಟೆವರೆಗೆ ಪ್ರಖ್ಯಾತ ಕಾಮಿಡಿ ಕಿಲಾಡಿಗಳು ಕಲಾವಿದರಿಂದ ಹಾಸ್ಯ ಮನರಂಜನೆ.ಸಂಜೆ 7 ಗಂಟೆಯಿಂದ ರಾತ್ರಿ 10.30 ರವರೆಗೆ ಮಣಿಕಾಂತ್ ಕದ್ರಿ, ಚಂದನ್ ಶೆಟ್ಟಿ, ಹಂಸಿಕಾ ಅಯ್ಯರ್ ತಂಡದವರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ.

15 ರಂದು ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 2 ಗಂಟೆವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು,ಮಧ್ಯಾಹ್ನ 2 ರಿಂದ ಸಂಜೆ 4.30 ಗಂಟೆವರೆಗೆ ಪ್ರಖ್ಯಾತ ಜಿ-ಸರಿಗಮಪ ತಂಡದವರಿಂದ ಸಂಗೀತ ಕಾರ್ಯಕ್ರಮ.

ಸಂಜೆ 4.30 ರಿಂದ 6 ಗಂಟೆವರೆಗೆ ಪ್ರಖ್ಯಾತ ಕಲರ್ಸ್-ಗಿಚ್ಚಿ ಗಿಲಿಗಿಲಿ ತಂಡದವರಿಂದ ಹಾಸ್ಯ ಕಾರ್ಯಕ್ರಮ. 6 ರಿಂದ ರಾತ್ರಿ 10.30 ಗಂಟೆವರೆಗೆ ರವಿ ಬಸ್ರೂರ್ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮಗಳು ನಡೆಯಲಿವೆ.

ಪ್ರವಾಸಿ ತಾಣ ಅಭಿವೃದ್ಧಿ

ಗಗನಚುಕ್ಕಿಯನ್ನು ಪ್ರಸಿದ್ಧ ಪ್ರವಾಸಿತಾಣವಾಗಿಸಲು ಹಾಗೂ ಹೆಚ್ಚಿನ ಯುವಜನರನ್ನು ಆಕರ್ಷಿಸಲು ಜಲಪಾತೋತ್ಸವದಂತಹ ಕಾರ್ಯಕ್ರಮ ಅವಶ್ಯಕವಾಗಿದೆ. ಗಗನ ಚುಕ್ಕಿಯನ್ನು ಬೃಹತ್ ಆಕರ್ಷಣೀಯ ಕೇಂದ್ರವನ್ನಾಗಿಸಲು ವಿವಿಧ ಕ್ರೀಡಾ ಚಟುವಟಿಕೆಗಳು ಹಾಗೂ ಇಲ್ಲಿ ಸಿಗುವ ಸೌಲಭ್ಯದೊಂದಿಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ. ಈ ಯೋಜನೆ ಅನುಷ್ಠಾನಗೊಂಡರೆ ಹಲವಾರು ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಎನ್ನುತ್ತಾರೆ ಶಾಸಕ ನರೇಂದ್ರ ಸ್ವಾಮಿ.

ಏಷಿಯಾದಲ್ಲೇ ಮೊದಲು ಜಲ ವಿದ್ಯುತ್ ಉತ್ಪದಾನೆ ಮಾಡಿದ ಹೆಗ್ಗಳಿಕೆ ಶಿವನಸಮುದ್ರ ವಿದ್ಯುತ್ ಕೇಂದ್ರಕ್ಕೆ ಸಲ್ಲುತ್ತದೆ. ಮೈಸೂರು-ಮಂಡ್ಯ- ಚಾಮರಾಜನಗರ ಜಿಲ್ಲೆಗಳಲ್ಲಿ ಇರುವ ಪ್ರವಾಸಿ ಸ್ಥಳಗಳ ಪ್ರವಾಸಿ ಸರ್ಕೂಟ್ ರಚಿಸಬೇಕು. ಇದಲ್ಲದೇ ಸುತ್ತ ನೀರಿರುವ ಐಲ್ಯಾಂಡ್ ಪ್ರದೇಶ ಗಗನ ಚುಕ್ಕಿಯಲ್ಲಿದ್ದು, ಇಲ್ಲಿ ಸಾಕು ಪ್ರಾಣಿಗಳ ಪ್ರಾಣಿ ಸಂಗ್ರಹಾಲಯ, ಸುತ್ತ ವಾಕಿಂಗ್ ಪಾಥ್ ನಿರ್ಮಿಸಲು ಚಿಂತಿಸಲಾಗುತ್ತಿದ್ದು, ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಮಂಡ್ಯ ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ, ಕಲಾವಿದ ಪ್ರಕಾಶ ಚಿಕ್ಕಪಾಳ್ಯ ಹಾಜರಿದ್ದರು.

Whats_app_banner