Mandya News: ಮಂಡ್ಯ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 180 ಬಾಲ್ಯವಿವಾಹ ಪ್ರಕರಣ, 75ರಲ್ಲಿ ಎಫ್‌ಐಆರ್ ದಾಖಲು
ಮಂಡ್ಯ ಜಿಲ್ಲೆಯಲ್ಲಿ( Mandya) ಬಾಲ್ಯ ವಿವಾಹದ( Child marriage) ಪ್ರಕರಣಗಳು ಅಧಿಕವಾಗಿವೆ. ಈ ಕುರಿತು ಮಂಡ್ಯ ಜಿಲ್ಲಾಡಳಿತವೂ ಮುನ್ನೆಚ್ಚರಿಕೆ ವಹಿಸಿದೆ.

ಮಂಡ್ಯ: ಹೆಣ್ಣು ಭ್ರೂಣ ಹತ್ಯೆಯಿಂದ ಸದ್ದು ಮಾಡುತ್ತಿರುವ ಮಂಡ್ಯ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 180 ಪ್ರಕರಣಗಳು ವರದಿಯಾಗಿದ್ದು,105 ಬಾಲ್ಯ ವಿವಾಹವನ್ನು ತಡೆಯಲಾಗಿದ್ದು, 75 ಬಾಲ್ಯ ವಿವಾಹ ಪ್ರಕರಣಗಳ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. ಶಾಲೆ ಮುಗಿಸುವ ಮುನ್ನವೇ ಮದುವೆ ಮುಗಿಸಿ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳಬೇಕು ಎನ್ನುವ ಪೋಷಕರ ಮನಸ್ಥಿತಿಯಿಂದಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಲೂ ಬಾಲ್ಯ ವಿವಾಹ ಪ್ರಕರಣಗಳೂ ವರದಿಯಾಗುತ್ತಲೇ ಇವೆ. ಜಾಗೃತಿ ಮೂಡಿಸುತ್ತಿರುವ ನಡುವೆ, ಶಾಲೆಗೆ ಹೋಗಬೇಕು ಎನ್ನುವ ಮಕ್ಕಳ ಉತ್ಕಟ ಬಯಕೆಯ ಮಧ್ಯೆಯೂ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಮಂಡ್ಯ ಜಿಲ್ಲಾಡಳಿತವೂ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಶಾಲೆ, ಕಾಲೇಜಿಗೆ ಹೋಗುವುದನ್ನು ತಪ್ಪಿಸಿಕೊಳ್ಳದಂತೆ ಕಣ್ಗಾವಲು ಇಡಲು ಮುಂದಾಗಿದೆ.
ಬಾಲ್ಯ ವಿವಾಹ ನಡೆದ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ, ಬಾಲ್ಯ ವಿವಾಹ ನಡೆಯದಂತೆ ಜನರಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ಬಾಲ್ಯ ವಿವಾಹಗಳು ಜರುಗುವ ಹಾಗೂ ಪದೇ ಪದೇ ಮರುಕಳಿಸುವಂತಹ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ಬಾಲ್ಯ ವಿವಾಹವು ಒಂದು ಸಾಮಾಜಿಕ ಪಿಡುಗಾಗಿದೆ. ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲಿ ಒಂದು ಸಮಿತಿ ರಚಿಸಿ ಬಾಲ್ಯ ವಿವಾಹ ಜರುಗಲಿಕ್ಕೆ ಕಾರಣಗಳೇನು ಎಂಬ ಸಮೀಕ್ಷೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎನ್ನುವುದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ನೀಡುವ ವಿವರಣೆ.
ಒಂದು ವರ್ಷದ ಅವಧಿಯಲ್ಲಿಯೇ ಮಂಡ್ಯ - 42, ಮದ್ದೂರು - 15, ಮಳವಳ್ಳಿ - 20, ಶ್ರೀರಂಗಪಟ್ಟಣ - 26, ಪಾಂಡವಪುರ - 25, ನಾಗಮಂಗಲ - 13, ಕೆ ಆರ್ ಪೇಟೆ - 39 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಒಟ್ಟು 105 ಬಾಲ್ಯ ವಿವಾಹವನ್ನು ತಡೆಯಲಾಗಿದ್ದು, 75 ಬಾಲ್ಯ ವಿವಾಹ ಪ್ರಕರಣಗಳ ಮೇಲೆ ಎಫ್ ಐ ಆರ್ ದಾಖಲಾಗಿವೆ.
ಪೋಷಕರು, ಮದುವೆಗೆ ಪ್ರೇರೇಪಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಬಾಲ್ಯ ವಿವಾಹ ಸಮಾಜದ ಪಿಡುಗಾಗಿದ್ದು, ಇದನ್ನು ತಡೆಗಟ್ಟಲು ಹೆಚ್ಚು ಜಾಗೃತಿ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸಬೇಕು. ಜಿಲ್ಲೆಯಲ್ಲಿ ಶಾಲೆ ಬಿಟ್ಟ ಹೆಣ್ಣು ಮಕ್ಕಳ ಬಗ್ಗೆ ಹಾಗೂ ನಿರಂತರ ಶಾಲೆಗೆ ಗೈರು ಹಾಜರಾಗುವ ಮಕ್ಕಳ ಬಗ್ಗೆ ಗಮನವಹಿಸಿ ಮಾಹಿತಿ ನೀಡಬೇಕು ಎನ್ನುವ ಸೂಚನೆಯನ್ನೂ ನೀಡಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ 18 ವರ್ಷದೊಳಗಿರುವ ಹೆಣ್ಣುಮಕ್ಕಳ ಸಂಖ್ಯೆಯ ಬಗ್ಗೆ ಮಾಹಿತಿ ಪಡೆದು, ಅಂತಹ ಹೆಣ್ಣು ಮಕ್ಕಳು ಹಾಗೂ ಪೋಷಕರಿಗೆ ಮುಂಚಿತವಾಗಿಯೇ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸುವ ಮೂಲಕ ಬಾಲ್ಯ ವಿವಾಹವನ್ನು ತಡೆಗಟ್ಟಬೇಕು. ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಲ್ಲಿ ಆಶಾ ಕಾರ್ಯಕರ್ತೆಯರು, ಶಾಲಾ ಹಾಗೂ ಅಂಗನವಾಡಿ ಶಿಕ್ಷಕರು ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಜಿಲ್ಲೆಯ ಸಾರ್ವಜನಿಕರು ಕೂಡ ಬಾಲ್ಯ ವಿವಾಹಗಳು ಜರುಗದಂತೆ ನೋಡಿಕೊಳ್ಳಬೇಕು ಎನ್ನುವುದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್ ಸೂಚನೆ.
Wildlife Photography: ಹಾರುವ ಕೃಷ್ಣಮೃಗ, ಜಿಂಕೆಗಳ ಮಿಲನ ಮಹೋತ್ಸವ; ಮಧುಸೂಧನ್ ವನ್ಯಜೀವಿ ವಿಭಿನ್ನ ಚಿತ್ರಗಳಿಗೆ ಬಹುಮಾನ
ಜಿಲ್ಲಾ ಮಕ್ಕಳ ಸಹಾಯವಾಣಿ - 1098
2011 ರಿಂದ ಆಗಸ್ಟ್ - 2023 ರ ವರೆಗೆ ಮಕ್ಕಳ ಸಹಾಯವಾಣಿಯ ಸ್ವಯಂಸೇವಾ ಸಂಸ್ಥೆಯ ಮುಖಾಂತರ ನಡೆಯುತ್ತಿತ್ತು, ಸೆಪ್ಟೆಂಬರ್ - 2023 ರಿಂದ ಮಕ್ಕಳ ಸಹಾಯವಾಣಿಯು ಕೇಂದ್ರ ಪುರಸ್ಕೃತ ಯೋಜನೆಯಾದ ಮಿಷನ್ ವಾತ್ಸಲ್ಯ ಯೋಜನೆಯ ಮಾರ್ಗಸೂಚಿಯನ್ವಯ ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
2023 - ಸೆಪ್ಟೆಂಬರ್ ತಿಂಗಳಿಂದ 2024 ರ ಮಾರ್ಚ್ - 2024 ರವರೆಗೆ ಮಕ್ಕಳ ಸಹಾಯವಾಣಿ - 1098 ಗೆ ಒಟ್ಟು 365 ಪ್ರಕರಣಗಳು ದಾಖಲಾಗಿದ್ದು, ಶೈಕ್ಷಣಿಕ ಸಮಸ್ಯೆ - 84, ಬಾಲ್ಯ ವಿವಾಹ - 78, ಕೌಟುಂಬಿಕ ಸಮಸ್ಯೆ - 11, ವೈದ್ಯಕೀಯ ಸಮಸ್ಯೆ - 1, ಪ್ರಾಯೋಜಕತ್ವ - 59, ದೈಹಿಕ ಹಿಂಸೆ - 34, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ - 10, ಬಾಲಕಾರ್ಮಿಕ - 9, ಕಾಣೆಯಾದ ಮಕ್ಕಳು - 30, ಭಿಕ್ಷಾಟಣೆ - 8, ಆಪ್ತ ಸಮಾಲೋಚನೆ - 5, ಇತರೆ - 36 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.

ವಿಭಾಗ