Mandya Food: ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ, ರಾಗಿಮುದ್ದೆ, ಮೊಸಪ್ಪಿನ ಸಾರು, ಉಪ್ಸಾರು, ಹುರುಳಿಕಾಳು ಬಸ್ಸಾರು ಸವಿಯಿರಿ-mandya news mandya kannada sahitya sammelana in 2024 december will serve local cuisines to participants kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mandya Food: ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ, ರಾಗಿಮುದ್ದೆ, ಮೊಸಪ್ಪಿನ ಸಾರು, ಉಪ್ಸಾರು, ಹುರುಳಿಕಾಳು ಬಸ್ಸಾರು ಸವಿಯಿರಿ

Mandya Food: ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ, ರಾಗಿಮುದ್ದೆ, ಮೊಸಪ್ಪಿನ ಸಾರು, ಉಪ್ಸಾರು, ಹುರುಳಿಕಾಳು ಬಸ್ಸಾರು ಸವಿಯಿರಿ

Mandya Sahitya Sammelana ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳು ಪಕ್ಕಾ ಲೋಕಲ್‌ ಮುದ್ದೆ ಉಪ್ಸಾರು( Mandya Food) ಸವಿಯಲಿದ್ದಾರೆ.

ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಅಪ್ಪಟ ಮಂಡ್ಯ ಊಟ ಇರಲಿದೆ.
ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಅಪ್ಪಟ ಮಂಡ್ಯ ಊಟ ಇರಲಿದೆ.

ಮಂಡ್ಯ: ಸಕ್ಕರೆಯ ನಾಡು ಮಂಡ್ಯ ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಅಕ್ಕರೆಯ ಊಟ ಹಾಕಲು ಅಣಿಯಾಗುತ್ತಿದೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಬಗೆಬಗೆಯ ಊಟ ಇರಲಿದೆ. ರಾಗಿಮುದ್ದೆ, ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಬೆಲ್ಲದ ಮಿಠಾಯಿ, ಬೆಲ್ಲದವಮೈಸೂರುಪಾಕ್, ಕಜ್ಜಾಯ, ರವೆ ಹುಂಡೆ, ಚಪಾತಿ, ಶೇಂಗಾ ಚಟ್ನಿ, ಒಬ್ಬಟ್ಟು, ಪೊಂಗಲ್, ಪುಳಿಯೋಗರೆ, ಜೋಳದ ರೊಟ್ಟಿ, ಹುರುಳಿಕಾಳು ಬಸ್ಸಾರು, ಮೊಳಕೆ ಕಾಳು ಸಾರು, ಮೊಸಪ್ಪಿನ ಸಾರು, ಉಪ್ಸಾರು.. ಸಹಿತ ನಾನಾ ಬಗೆಯ ಊಟೋಪಚಾರ ಅಣಿಗೊಳಿಸಲು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಹಾರ ಸಮಿತಿ ಮುಂದಾಗಿದೆ.

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಮಂಡ್ಯ ಸೊಗಡಿನ ರುಚಿಯಾದ ಆಹಾರವನ್ನು ಉಣಬಡಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಆಹಾರ ಸಮಿತಿ ಅಧ್ಯಕ್ಷರೂ ಆದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಾಬು ಬಂಡಿಸಿದ್ಧೇಗೌಡ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಅಹಾರ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಸಾಹಿತ್ಯ ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬರಿಗೂ ಯಾವುದೇ ತೊಂದರೆ ನೂಕು ನುಗ್ಗಲು ಉಂಟಾಗದಂತೆ 3 ದಿನಗಳ ಕಾಲ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ದೊರಕಬೇಕು. ಆಹಾರ ಬಿಸಿಯಾಗಿ ಸವಿಯುವ ಪ್ರತಿಯೊಬ್ಬರು ಮಂಡ್ಯ ಜಿಲ್ಲೆಯನ್ನು ಸದಾ ನೆನಪಿನಲ್ಲಿ ಇಡುವ ರೀತಿ ಇರಬೇಕು ಎಂದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರನ್ನು ಅತಿಥಿಗಳಾಗಿ ಬಹಳ ಆತ್ಮೀಯತೆಯಿಂದ ಸ್ವಾಗತಿಸಿ ಅತಿಥಿ ಸತ್ಕಾರ ಮಾಡಲು ಎಲ್ಲರೂ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಬೇಕು ಎಂದರು‌.

ಮೂರು ದಿನವೂ ರಾಗಿಮುದ್ದೆ, ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಬೆಲ್ಲದ ಮಿಠಾಯಿ, ಬೆಲ್ಲದವಮೈಸೂರುಪಾಕ್, ಕಜ್ಜಾಯ, ರವೆ ಹುಂಡೆ, ಚಪಾತಿ, ಶೇಂಗಾ ಚಟ್ನಿ, ಒಬ್ಬಟ್ಟು, ಪೊಂಗಲ್,ಪುಳಿಯೋಗರೆ, ಜೋಳದ ರೊಟ್ಟಿ, ಹುರುಳಿಕಾಳು ಬಸ್ಸಾರು, ಮೊಳಕೆ ಕಾಳು ಸಾರು, ಮೊಸಪ್ಪಿನ ಸಾರು, ಉಪ್ಸಾರು ಇರಲಿವೆ. ಅಲ್ಲದೇ ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಹೆಚ್ಚಿರುವುದರಿಂದ ತಂಪಾಗಿರಲು ಮೂರು ದಿನಗಳ ಕಾಲ ನಿಂಬೆಹಣ್ಣಿನ ಪಾನಕ, ಕಬ್ಬಿನ ಹಾಲು, ಹಿರಳಿಕಾಯಿ ಜ್ಯೂಸ್, ಖರಬೂಜದ ಪಾನಕ ಸೇರಿದಂತೆ ಸೂಕ್ತವಾದ ಪಾನಕ ನೀಡಲು ವ್ಯವಸ್ಥೆ ಮಾಡಿ ಎಂದರು.

ವಿವಿಧ ರೀತಿಯ ಆಹಾರ ಸಮ್ಮೇಳನದಲ್ಲಿ ಸದಸ್ಯರು ಸಮ್ಮೇಳನಕ್ಕೆ , ಮುಂತಾದ ವಿವಿಧ ರೀತಿಯ ತಿನಿಸುಗಳನ್ನು ಉಣಬಡಿಸುವ ಬಗ್ಗೆ ಚರ್ಚಿಸಲಾಯಿತು. ಬಾಳೆ ಎಲೆ ಊಟ ನೊಂದಣಿ ಮಾಡಿಕೊಂಡು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ವಿಶೇಷವಾಗಿ ಬಾಳೆ ಎಲೆ ಊಟದ ವ್ಯವಸ್ಥೆ ಮಾಡಬಹುದೇ ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಹುಸ್ಕೂರು, ಆಹಾರ ಸಮಿತಿ ಸದಸ್ಯ ಚಂದ್ರಶೇಖರ್, ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ ಎಂ ಬಾಬು, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ: ಮೀರಾ ಶಿವಲಿಂಗಯ್ಯ, ಸದಸ್ಯ ಕಾರ್ಯದರ್ಶಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣಕುಮಾರ್, ಸಂಚಾಲಕರು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ ಸೋಮಶೇಖರ್, ಗೌರವ ಕಾರ್ಯದರ್ಶಿ ವಿ. ಹರ್ಷ ಸಲಹೆಗಳನ್ನು ನೀಡಿದರು.

ಕನ್ನಡ ರಥಕ್ಕೆ ಭುವನಗಿರಿಯಲ್ಲಿ ಚಾಲನೆ

ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೆ.22 ರಿಂದ ಉತ್ತರಕನ್ನಡ ಜಿಲ್ಲೆ ಶಿರಸಿ ಸಮೀಪ ಇರುವ ಭುವನಗಿರಿಯಿಂದ ಹೊರಡುವ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ 87ದಿನಗಳ ಕಾಲ ಸಂಚರಿಸುತ್ತದೆ. ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಮೈಸೂರು ವಿಭಾಗಕ್ಕೆ ಸೇರಿದ ಮಂಡ್ಯ,ಮೈಸೂರು, ಹಾಸನ, ಚಾಮರಾಜನಗರ, ಕೊಡಗು, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ರಥಯಾತ್ರೆಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಸಂಚರಿಸುವ ರಥಕ್ಕೂ ಚಾಲನೆ ನೀಡಲಾಗುವುದು.ನಿರ್ಮಾಣವಾಗುವ ರಥ ಸುಸಜ್ಜಿತವಾಗಿರಬೇಕು ಎಂದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಹೊರಡುವ ರಥಯಾತ್ರೆ ಸಂಚರಿಸುವ ಜಿಲ್ಲೆಯ ತಾಲೂಕಿಗೆ ಅನುಗುಣವಾಗಿ ದಿನಗಳನ್ನು ನಿಗದಿಪಡಿಸಿ ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಮಿತಿಯ ಸದಸ್ಯರಿಗೆ ವಿವಿಧ ಜಿಲ್ಲೆಗಳ ಜವಾಬ್ದಾರಿ ವಹಿಸಲಾಯಿತು. ಜವಾಬ್ದಾರಿ ವಹಿಸಿಕೊಂಡಿರುವ ಸದಸ್ಯರು ಮತ್ತು ಅಧಿಕಾರಿಗಳು ಆಯಾ ಜಿಲ್ಲೆಯ ಮುಖ್ಯ ಜಿಲ್ಲಾಧಿಕಾರಿ,ಜಿಪಂ ಸಿಇಒ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಸಂಪರ್ಕಿಸಿ ಸಂಚರಿಸುವ ಮಾರ್ಗ,ಪ್ರಯಾಣ ದೂರ,ದಿನ,ತಂಗುವ ಸ್ಥಳಗಳನ್ನು ನಿರ್ಧರಿಸಬೇಕು ಎಂದರು.

ವೈವಿಧ್ಯಮಯ ಪ್ರಚಾರ

ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ಗ್ರಾಫಿಕ್ ಡಿಸೈನ್, ಸಾಮಾಜಿಕ‌ ಜಾಲತಾಣ ಮತ್ತು ಆ್ಯಪ್ ತಂತ್ರಜ್ಞಾನಗಳ ಮೂಲಕ ಪ್ರಚಾರ ನಡೆಸಲು ಅನುಕೂಲವಾಗುವಂತೆ ಪರಿಣತ ಕಂಪನಿಗಳಿಗೆ ತಮ್ಮ ಯೋಜನೆ ಮಂಡಿಸಲು ಅವಕಾಶ ನೀಡಿ,ಆಯಾ ಕ್ಷೇತ್ರದ ತಜ್ಞರು ವೀಕ್ಷಿಸಿದ ನಂತರ ಆಯ್ಕೆ ಮಾಡಿ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದು ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.