Mandya News: ಮಂಡ್ಯದಲ್ಲಿ ಮೈಷುಗರ್‌ ಹೊಸ ಕಾರ್ಖಾನೆ, ಹಳೆ ಜಾಗದಲ್ಲಿ ಸಾಫ್ಟ್‌ವೇರ್‌ ಪಾರ್ಕ್‌ !
ಕನ್ನಡ ಸುದ್ದಿ  /  ಕರ್ನಾಟಕ  /  Mandya News: ಮಂಡ್ಯದಲ್ಲಿ ಮೈಷುಗರ್‌ ಹೊಸ ಕಾರ್ಖಾನೆ, ಹಳೆ ಜಾಗದಲ್ಲಿ ಸಾಫ್ಟ್‌ವೇರ್‌ ಪಾರ್ಕ್‌ !

Mandya News: ಮಂಡ್ಯದಲ್ಲಿ ಮೈಷುಗರ್‌ ಹೊಸ ಕಾರ್ಖಾನೆ, ಹಳೆ ಜಾಗದಲ್ಲಿ ಸಾಫ್ಟ್‌ವೇರ್‌ ಪಾರ್ಕ್‌ !

My Sugar ಮಂಡ್ಯದಲ್ಲಿರುವ ಸರ್ಕಾರಿ ಸ್ವಾಮ್ಯದ ಮೈಷುಗರ್‌ ಸಕ್ಕರೆ ಕಾರ್ಖಾನೆ ಹೊಸ ಘಟಕಕ್ಕೆ ಬಜೆಟ್‌ ನಲ್ಲಿ ಘೋಷಣೆಯಾಗಿದೆ. ಹಳೆಯ ಘಟಕವನ್ನು ಸಾಫ್ಟ್‌ವೇರ್‌ ಪಾರ್ಕ್‌ ಮಾಡುವ ಕುರಿತು ಚರ್ಚೆಗಳು ನಡೆದಿವೆ.

ಮೈಷುಗರ್ಸ್‌ಗೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಸಭೆ ನಡೆಸಿದರು.
ಮೈಷುಗರ್ಸ್‌ಗೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಸಭೆ ನಡೆಸಿದರು.

ಮಂಡ್ಯ: ‍ಈ ಬಾರಿಯ ಕರ್ನಾಟಕ ಬಜೆಟ್‌ ನಲ್ಲಿ ಮೈಷುಗರ್‌ನ ಹೊಸ ಕಾರ್ಖಾನೆ ಘೋಷಣೆಯಾಗಿದೆ. ಹೊಸ ಕಾರ್ಖಾನೆ ಎಲ್ಲಿ ನಿರ್ಮಾಣವಾಗಲಿದೆ. ಎಷ್ಟು ಸಾಮರ್ಥ್ಯದ ಸಕ್ಕರೆ ಕಾರ್ಖಾನೆ ಇದು, ಹಳೆಯ ಕಾರ್ಖಾನೆ ಏನು ಮಾಡಲಾಗುತ್ತದೆ ಎನ್ನುವ ಚರ್ಚೆಗಳು ನಡೆದಿವೆ. ಆದರೆ ತತ್‌ಕ್ಷಣದಲ್ಲಿಯೇ ಹಳೆಯ ಕಾರ್ಖಾನೆಯೇನು ಬಂದ್‌ ಆಗುವುದಿಲ್ಲ. ಹೊಸ ಕಾರ್ಖಾನೆ ಸ್ಥಾಪನೆಗೆ ಇನ್ನೂ ಕೆಲವು ವರ್ಷಗಳು ಬೇಕಾಗುತ್ತದೆ. ಈ ಕುರಿತಾದ ಹಲವಾರು ಪ್ರಶ್ನೆಗಳಿಗೆ ಕರ್ನಾಟಕದ ಕೃಷಿ ಸಚಿವರೂ ಆಗಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಗುರುವಾರ ಮಂಡ್ಯದಲ್ಲಿ ಉತ್ತರ ನೀಡಿದರು.

ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಮಂಡ್ಯ ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ 2024-25 ನೇ ಸಾಲಿನಲ್ಲಿ ಕಬ್ಬು ಅರೆಸುವ ಸಂಬಂಧ ಹಾಗೂ ಟ್ರಯಲ್ ಬ್ಲಾಸ್ಟ್ ಸಂಬಂಧ ಸಭೆ ನಡೆಸಿ ದ ಚಲುವರಾಯಸ್ವಾಮಿ ಮಾತನಾಡಿದರು.

ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನೂ ಸ್ಥಳ ಯಾವುದೇ ಸ್ಥಳ ನಿಗದಿಯಾಗಿಲ್ಲ ಹಾಗೂ ಮೈಶುಗರ್ ಸಕ್ಕರೆ ಕಾರ್ಖಾನೆ ಸ್ಥಳದಲ್ಲಿ ಹೊಸ ಸಾಫ್ಟವೇರ್ ಪಾರ್ಕ್ ನಿರ್ಮಾಣ ಮಾಡುವ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಶಾಸಕ ರವಿಕುಮಾರ್‌ ಗಣಿಗ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಸಾಫ್ಟ್‌ವೇರ್‌ ಪಾರ್ಕ್‌ ಸಹಿತ ಹೊಸ ಯೋಜನೆಗಳನ್ನು ರೂಪಿಸುತ್ತಾರೆ. ಅದನ್ನೂ ಸಹ ಎಲ್ಲರೊಂದಿಗೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎನ್ನುವುದು ಸಚಿವರ ಸ್ಪಷ್ಟನೆ.

ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲು ಸರ್ಕಾರ ನೀಡುವ ಅನುದಾನದೊಂದಿಗೆ. ಸಕ್ಕರೆ ಕಾರ್ಖಾನೆಯಿಂದ ಸಾಲ ಪಡೆಯಲು ಅನುದಾನ ಕ್ರೋಡೀಕರಿಸಲು ಇರುವ ಸೌಲಭ್ಯಗಳ ಬಗ್ಗೆ ಯೋಜನೆ ರೂಪಿಸಿ ಎಲ್ಲರ ಅಭಿಪ್ರಾಯ ಪಡೆದು ನಂತರ ತೀರ್ಮಾನ ಕೈಗೊಳ್ಳಲಾಗುವುದು. ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಇರುವ ಯಂತ್ರಗಳು ಅವುಗಳ ಸ್ಥಿತಿಗತಿಗಳ ಬಗ್ಗೆ ತಾಂತ್ರಿಕ ವರದಿ ಪಡೆದು, ಅವುಗಳ ಬಗ್ಗೆ ರೈತರ ಮುಖಂಡರೊಂದಿಗೆ ಚರ್ಚಿಸಿ ಇರುವ ಸಕ್ಕರೆ ಕಾರ್ಖಾನೆಯ ಸುಧಾರಿಸುವ ಬಗ್ಗೆ ಅಥವಾ ಹೊಸ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಬಗ್ಗೆ ಸೂಕ್ತ ನಿರ್ಣಾಯ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು. ಕೃಷಿ ಸಚಿವನಾಗಿ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸದಾ ಚಿಂತನೆ ನಡೆಸುತ್ತೇನೆ ಎಂಬುದು ಚಲುವರಾಯಸ್ವಾಮಿ ಅವರ ಭರವಸೆ.

ಮೈ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಹಲವಾರು ಲೋಪಗಳು ಉಂಟಾಗಿವೆ ಎಂದು ದೂರುಗಳಿವೆ. ಅವುಗಳ ಬಗ್ಗೆ ಪರಿಶೀಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಮೈ ಶುಗರ್ ಸಕ್ಕರೆ ಕಾರ್ಖಾನೆಯ ಮಂಡ್ಯ ಕಚೇರಿಯಲ್ಲಿ ಕಾರ್ಯನಿರ್ವಹಿಸುವಂತಹ ಎಂ.ಡಿ ಅವರನ್ನು ನಿಯೋಜಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎನ್ನುವ ಉತ್ತರವನ್ನೂ ಸಚಿವರು ಇದೇ ವೇಳೆ ನೀಡಿದರು.

ಜಿಲ್ಲೆಯಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವಿಕೆಯನ್ನು ಜೂನ್ ಮಾಹೆಯಿಂದ ಪ್ರಾರಂಭಿಸಲಾಗುವುದು .ಈಗಾಗಲೇ 1,55,000 ಮೆಟ್ರಿಕ್ ಟನ್ ಕಬ್ಬನ್ನು ನುರಿಸಲು ರೈತರ ಜೊತೆ ಒಪ್ಪಂದವಾಗಿದೆ. ಜೂನ್ ಮಾಹೆಯಿಂದ 4 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕೆಆರ್‌ಎಸ್‌ ಟ್ರಯಲ್‌ ಬ್ಲಾಸ್ಟ್‌

ಕೃಷ್ಣರಾಜಸಾಗರ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲೇಬೇಕು ಎಂಬುದು ಜಿಲ್ಲಾಡಳಿತ ಅಥವಾ ಸರ್ಕಾರದ ನಿರ್ಧಾರವಲ್ಲ ಅದು ನ್ಯಾಯಾಲಯದ ಆದೇಶ. ಟ್ರಯಲ್ ಬ್ಲಾಸ್ಟನಿಂದ ಕೆ.ಆರ್.ಎಸ್ ಜಲಾಶಯಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ತಾಂತ್ರಿಕ ವರದಿ ಇದೆ. ಗಣಿಗಾರಿಕೆಯನ್ನು ಕೆ.ಆರ್.ಎಸ್ ನ 20 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ಟ್ರಯಲ್ ಬ್ಲಾಸ್ಟ್ ನಂತರ ಇದರ ವ್ಯಾಪ್ತಿ ಕಡಿಮೆಯಾಗಬಹುದು ಎಂದು ರೈತರಲ್ಲಿ ಆತಂಕವಿದೆ. ಟ್ರಯಲ್ ಬ್ಲಾಸ್ಟ್ ಕುರಿತಂತೆ ಅಡ್ವೋಕೇಟ್ ಜನರಲ್ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಬಾಕಿ ವಿತರಣೆ

ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು ಅವರ ಪ್ರಕಾರ, ಮೈಷುಗರ್ಸ್‌ನಲ್ಲಿ 2023-24 ನೇ ಸಾಲಿನಲ್ಲಿ 2,41,305 ಮೆಟ್ರಿಕ್ ಟನ್ ಕಬ್ಬನ್ನು ನುರಿಸಿ 1,67,926 ಕ್ವಿಂಟಾಲ್ ಸಕ್ಕರೆಯನ್ನು ಉತ್ಪಾದನೆಯಾಗಿರುತ್ತದೆ. 15,741.20 ಮೆ. ಟನ್ ಕಾಕಂಬಿ, 6,450 ಮೆ. ಟನ್ ಪ್ರೆಸ್ ಮಡ್ಡಿ ಮತ್ತು 68,680 ಮೆ. ಟನ್ ಬ್ಯಾಗ್ಯಾಸ್ ಉತ್ಪಾದನೆಯಾಗಿದೆ ಎಂದರು.

2023 -24ನೇ ಸಾಲಿನಲ್ಲಿ ಸೆಪ್ಟೆಂಬರ್ 15 ರಂದು ಟರ್ಬೈನನ್ನು ಚಾಲನೆಗೊಳಿಸಿ 12,21,000 ಯೂನಿಟ್ಸ್ ವಿದ್ಯುತ್ ಉತ್ಪಾದಿಸಿ, 7,27,800 ಯೂನಿಟ್ಸ್ ಕಬ್ಬು ನುರಿಸುವ ಕಾರ್ಯಕ್ಕೆ ಬಳಸಿಕೊಂಡು ಉಳಿದ 4,93,200 ಯೂನಿಟ್ಸ್ ರಫ್ತು ಮಾಡಲಾಗಿದೆ. ಚೆಸ್ಕಾಂ ಕಂಪನಿಗೆ ವಿದ್ಯುತ್ ಬಿಲ್ ಬಾಕಿ 5 ಕೋಟಿ ರೂಗಳನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.

2023 ರ ಡಿಸೆಂಬರ್ 5 ರವರೆಗೆ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಿ, 2023 - 24 ನೇ ಸಾಲಿನ ಪ್ರಗತಿಯನ್ನು ಮುಕ್ತಾಯಗೊಳಿಸಿದೆ. ರೈತರಿಗೆ ಪ್ರತಿ ಮೆ. ಟನ್ ಗೆ ರೂ 2920 ರಂತೆ ಒಟ್ಟು 70,46,10,515 ರೂ ಹಣವನ್ನು ಪಾವತಿಸಲಾಗಿದೆ. ಕಬ್ಬು ಕಟಾವು ಮೇಸ್ತ್ರಿಗಳಿಗೆ 10,21,57,933 ರೂ ಹಾಗೂ ಸಾರಿಗೆ 3,43,31,481 ರೂ ಹಣವನ್ನು ಪಾವತಿಸಲಾಗಿದೆ. ರೈತರ ಕ್ಷೇಮಾಭಿವೃದ್ಧಿ ನಿಧಿಗೆ 12,10,499 ರೂ ಹಣ ಹಾಗೂ ಅಂತಿಮ ಬಟವಾಡೆ ಮಾಡಿದ ರೈತರಿಗೆ 56,69,00,602 ರೂ ಹಣವನ್ನು ಪಾವತಿಸಲಾಗಿದೆ ಎನ್ನುವ ವಿವರಣೆ ನೀಡಿದರು.

Whats_app_banner