Mandya News: ಮಂಡ್ಯದ ಕೆರಗೋಡಿನಲ್ಲಿ 108 ಅಡಿ ಧ್ವಜಸ್ತಂಭದಿಂದ ಹನುಮ ಧ್ವಜ ತೆರವು ವಿವಾದ; ಇಲ್ಲಿದೆ ಪೂರ್ಣ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  Mandya News: ಮಂಡ್ಯದ ಕೆರಗೋಡಿನಲ್ಲಿ 108 ಅಡಿ ಧ್ವಜಸ್ತಂಭದಿಂದ ಹನುಮ ಧ್ವಜ ತೆರವು ವಿವಾದ; ಇಲ್ಲಿದೆ ಪೂರ್ಣ ವಿವರ

Mandya News: ಮಂಡ್ಯದ ಕೆರಗೋಡಿನಲ್ಲಿ 108 ಅಡಿ ಧ್ವಜಸ್ತಂಭದಿಂದ ಹನುಮ ಧ್ವಜ ತೆರವು ವಿವಾದ; ಇಲ್ಲಿದೆ ಪೂರ್ಣ ವಿವರ

Mandya News: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಪ್ರಕರಣ ಈಗ ಭಾರಿ ವಿವಾದಕ್ಕೀಡಾಗಿದೆ. ಗ್ರಾಮಸ್ಥರು ಮತ್ತು ಸರ್ಕಾರದ ನಡುವಿನ ಈ ಜಟಾಪಟಿಯಲ್ಲಿ ಈಗ ರಾಜಕೀಯವೂ ಸೇರಿಕೊಂಡಿದ್ದು, ಸ್ಥಳಕ್ಕೆ ಬಿಜೆಪಿ ನಿಯೋಗ ತೆರಳಲು ಸಜ್ಜಾಗಿದೆ. ಇಲ್ಲಿದೆ ವಿದ್ಯಮಾನದ ಪೂರ್ಣವಿವರ.

ಮಂಡ್ಯದ ಕೆರೆಗೋಡು ಗ್ರಾಮದ 108 ಅಡಿ ಎತ್ತರದ ಧ್ವಜಸ್ತಂಭದ ಬುಡದಲ್ಲಿ ಪ್ರತಿಭಟನಾ ನಿರತ ಗ್ರಾಮಸ್ಥರು ಮತ್ತು ಧ್ವಜಸ್ತಂಭದಲ್ಲಿ ಹಾರಾಡುತ್ತಿದ್ದ ಹನುಮ ಧ್ವಜ.
ಮಂಡ್ಯದ ಕೆರೆಗೋಡು ಗ್ರಾಮದ 108 ಅಡಿ ಎತ್ತರದ ಧ್ವಜಸ್ತಂಭದ ಬುಡದಲ್ಲಿ ಪ್ರತಿಭಟನಾ ನಿರತ ಗ್ರಾಮಸ್ಥರು ಮತ್ತು ಧ್ವಜಸ್ತಂಭದಲ್ಲಿ ಹಾರಾಡುತ್ತಿದ್ದ ಹನುಮ ಧ್ವಜ.

ಮಂಡ್ಯ ಜಿಲ್ಲೆ ಕೆರಗೋಡು (Keragodu, Mandya Dist) ಎಂಬಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು 108 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಹನುಮ ಧ್ವಜ (Hanuma dhwaj) ವನ್ನು ಹಾರಿಸಿದ್ದರು. ಈ ಧ್ವಜವನ್ನು ತೆರವುಗೊಳಿಸಿದ ಪೊಲೀಸರ ಕ್ರಮ ಈಗ ಟೀಕೆಗೆ ಒಳಗಾಗಿದ್ದು, ಪ್ರತಿಭಟನೆಯೂ ವ್ಯಕ್ತವಾಗಿದೆ.

ಕೆರಗೋಡು ಗ್ರಾಮದಲ್ಲಿ ಗ್ರಾಮಸ್ಥರ ಪ್ರತಿಭಟನೆ ಮುಂದುವರಿದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೆಕ್ಷನ್ 144 ಜಾರಿಯಾಗಿದೆ. ಸರ್ಕಾರ ಮತ್ತು ಗ್ರಾಮಸ್ಥರ ನಡುವಿನ ಬಿಕ್ಕಟ್ಟಿಗೆ ಕಾರಣವಾದ ಈ ಘಟನೆಯ ಪೂರ್ಣ ವಿವರ ಇಲ್ಲಿದೆ.

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ನಿಮಿತ್ತ ಜನವರಿ 22ರಂದು ಕೆರೆಗೋಡು ಗ್ರಾಮಸ್ಥರು ಗ್ರಾಮದ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ತೀರ್ಮಾನಿಸಿದರು. ಗ್ರಾಮ ಪಂಚಾಯಿತಿಗೆ ಈ ಕುರಿತು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ಮೂಲಕ ಮನವಿಯನ್ನೂ ಸಲ್ಲಿಸಿದರು.

ಕೆರಗೋಡು ಗ್ರಾಮ ಪಂಚಾಯಿತಿ ನೀಡಿತ್ತು ಎನ್ನಲಾದ ಅನುಮತಿ ಪತ್ರ
ಕೆರಗೋಡು ಗ್ರಾಮ ಪಂಚಾಯಿತಿ ನೀಡಿತ್ತು ಎನ್ನಲಾದ ಅನುಮತಿ ಪತ್ರ

ಆದರೆ, ಗ್ರಾಮ ಪಂಚಾಯಿತಿಯು “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಹೊರತುಪಡಿಸಿ ಯಾವುದೇ ಧಾರ್ಮಿಕ/ ರಾಜಕೀಯ ಧ್ವಜವನ್ನು ಹಾರಿಸುವಂತಿಲ್ಲ ಎಂಬ ಒಕ್ಕಣೆಯೊಂದಿಗೆ ಜನವರಿ 19ರಂದು ಅನಮತಿ ಪತ್ರ ನೀಡಿದೆ. ಆದಾಗ್ಯೂ, ಗ್ರಾಮಸ್ಥರು ಮತ್ತು ಹಿಂದೂ ಕಾರ್ಯಕರ್ತರು ಹನುಮ ಧ್ವಜವನ್ನು ಹಾರಿಸಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೆ, ಗ್ರಾಮ ಪಂಚಾಯಿತಿಯ ಅಧೀನದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರ ಗ್ರಾಮ ಪಂಚಾಯತ್​ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಮ ಪಂಚಾಯತ್​ ಸದಸ್ಯರು ನಡಾವಳಿ ರಚಿಸಿ, ವಿವಾದ ಇತ್ಯರ್ಥ ಪಡಿಸಿದ್ದರು.

ಹನುಮ ಧ್ವಜ ವಿವಾದ ಪ್ರತಿಭಟನೆ ರೂಪ ಪಡೆದುದು ಹೀಗೆ

ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ ಇದನ್ನು ತೆರವುಗೊಳಿಸಬೇಕು ಎಂದು ಮಂಡ್ಯ ಜಿಲ್ಲಾಡಳಿತವು ತಾಲೂಕು ಆಡಳಿತಕ್ಕೆ ಮೌಖಿಕ ಆದೇಶ ನೀಡಿತ್ತು. ಅದರಂತೆ ಹನುಮ ಧ್ವಜ ತೆರವು ಮಾಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಆಗಮಿಸಿದ್ದರು. ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಕಾರಣ, ಹನುಮ ಧ್ವಜ ಇಳಿಸದೇ ಅವರು ಶನಿವಾರ (ಜ.27) ರಾತ್ರಿ ಹಿಂದಿರುಗಿದ್ದರು.

ಆದರೆ, ಜನವರಿ 28ರ ನಸುಕಿನ ಜಾವ 3 ಗಂಟೆಗೆ ಗ್ರಾಮಕ್ಕೆ ಮಂಡ್ಯ ಎಸಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಆಗಮಿಸಿ ಧ್ವಜ‌ ತೆರವುಗೊಳಿಸಲು ಯತ್ನಿಸಿದ್ದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದರು. ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರಾದರೂ ಫಲ ನೀಡಲಿಲ್ಲ. ಕೂಡಲೆ ಗ್ರಾಮದಲ್ಲಿ 144 ಸೆಕ್ಷನ್​ ಜಾರಿಗೊಳಿಸಿ, ಗುಂಪು ಚದುರಿಸಲು ಲಾಠಿ ಚಾರ್ಜ್​ ಮಾಡಲಾಯಿತು. ಇಷ್ಟಾದ ಬಳಿಕ ಪೊಲೀಸರು ಹನುಮ ಧ್ವಜವನ್ನು ತೆರವುಗೊಳಿಸಿದರು.

ಇದು ಗ್ರಾಮಸ್ಥರನ್ನು ಕೆರಳಿಸಿತು. ಗ್ರಾಮಸ್ಥರು ಮತ್ತೆ ಬೀದಿಗಿಳಿದು ರಸ್ತೆಯಲ್ಲೇ ಅಡುಗೆ ಮಾಡುತ್ತ ಪ್ರತಿಭಟನೆ ನಡೆಸಲು ಮುಂದಾದರು. ಈ ಹಂತದಲ್ಲಿ ಪೊಲೀಸರು ಗ್ರಾಮಸ್ಥರು ತಂದಿದ್ದ ನೀರನ್ನು ರಸ್ತೆ ಸುರಿದು ಅವರನ್ನು ಚದುರಿಸಲು ಪ್ರಯತ್ನಿಸಿದರು. ಇದೇ ವೇಳೆ, ಗ್ರಾಮಸ್ಥರು ಶಾಸಕ ರವಿಕುಮಾರ್ ಅವರ ಫ್ಲೆಕ್ಸ್‌ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರಹಾಕಿದರು. ಇಷ್ಟಾದ ಬಳಿಕ ಗ್ರಾಮಸ್ಥರು, ಹಿಂದೂ ಕಾರ್ಯಕರ್ತರು ಸಭೆ ನಡೆಸಿ ಮನೆ-ಮನೆಗೆ ಹನುಮ ಧ್ವಜ ನೀಡಿ, ಪ್ರತಿ ಮನೆಯ ಮೇಲೂ ಹನುಮ ಧ್ವಜ ಹಾರಿಸಿದರು.

ಗ್ರಾಮಸ್ಥರ ಪ್ರತಿಭಟನೆಯಲ್ಲಿ ಜೆಡಿಎಸ್​ ನಾಯಕ, ಮಾಜಿ ಸಚಿವ ಡಿಸಿ ತಮ್ಮಣ್ಣ, ಮಾಜಿ ಶಾಸಕ ಸುರೇಶ್ ಗೌಡ ಸೇರಿ ಹಲವರು ಭಾಗಿಯಾಗಿದ್ದಾರೆ.

ಗ್ರಾಮಕ್ಕೆ ಬಿಜೆಪಿ ನಿಯೋಗ: ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಅಶ್ವತ್ಥ್​ ನಾರಾಯಣ, ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ಸೇರಿದ ಬಿಜೆಪಿ ನಿಯೋಗ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಲಿದೆ.

ಸರ್ಕಾರಿ ಜಾಗದಲ್ಲಿ ರಾಷ್ಟ್ರಧ್ವಜ ಮತ್ತು ನಾಡ ಬಾವುಟ ಬಿಟ್ಟು ಬೇರೆ ಧ್ವಜ ಹಾರಿಸುವಂತೆ ಇಲ್ಲ. ಹನುಮ ಧ್ವಜದ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಸ್ಥಳೀಯರನ್ನು ದಾರಿತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಸಚಿವ ಎನ್‌ ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

(Mandya News Mandya village Keragodu tense as Hanuma dhwaj removal from 108 ft pole sparks tension UKS)

Whats_app_banner