Government Doctors: ಸರ್ಕಾರಿ ಸೇವೆ ವೇಳೆ ಕ್ಲಿನಿಕ್‌ ನಡೆಸುವ ವೈದ್ಯರ ವಿರುದ್ದ ಕ್ರಮ, ಮಧ್ಯಾಹ್ನವೂ ಹಾಜರಾತಿ ಸಂಗ್ರಹ
ಕನ್ನಡ ಸುದ್ದಿ  /  ಕರ್ನಾಟಕ  /  Government Doctors: ಸರ್ಕಾರಿ ಸೇವೆ ವೇಳೆ ಕ್ಲಿನಿಕ್‌ ನಡೆಸುವ ವೈದ್ಯರ ವಿರುದ್ದ ಕ್ರಮ, ಮಧ್ಯಾಹ್ನವೂ ಹಾಜರಾತಿ ಸಂಗ್ರಹ

Government Doctors: ಸರ್ಕಾರಿ ಸೇವೆ ವೇಳೆ ಕ್ಲಿನಿಕ್‌ ನಡೆಸುವ ವೈದ್ಯರ ವಿರುದ್ದ ಕ್ರಮ, ಮಧ್ಯಾಹ್ನವೂ ಹಾಜರಾತಿ ಸಂಗ್ರಹ

ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಭೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಆರ್ ಪಾಟೀಲ್ ವೈದ್ಯರ ಸೇವೆ ಕುರಿತು ಮಾಹಿತಿ ಪಡೆದುಕೊಂಡರು.

ಮಂಡ್ಯ ಜಿಲ್ಲಾಸ್ಪತ್ರೆಗೆ ಸಚಿವ ಡಾ.ಶರಣ್‌ ಪ್ರಕಾಶ್‌ ಪಾಟೀಲ್‌ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.
ಮಂಡ್ಯ ಜಿಲ್ಲಾಸ್ಪತ್ರೆಗೆ ಸಚಿವ ಡಾ.ಶರಣ್‌ ಪ್ರಕಾಶ್‌ ಪಾಟೀಲ್‌ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

ಮಂಡ್ಯ: ಸರ್ಕಾರಿ ಸೇವೆಯಲ್ಲಿರುವ ವೈದ್ಯರು ವೈದ್ಯಕೀಯ ಮಹಾವಿದ್ಯಾಲಯಗಳ ಸೇವೆ ವೇಳೆ ಆಸ್ಪತ್ರೆಗಳಲ್ಲಿಯೇ ಇರಬೇಕು. ಈ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಇಲ್ಲವೇ ಖಾಸಗಿ ಕ್ಲಿನಿಕ್‌ ನಡೆಸುತ್ತಿರುವುದು ಕಂಡರೆ ಅಂತವರ ವಿರುದ್ದ ಕ್ರಮ ಆಗಲಿದೆ. ಈಗಾಗಲೇ ಸರ್ಕಾರಿ ವೈದ್ಯರು ಸೇವೆ ಮುಗಿದ ನಂತರ ಖಾಸಗಿಯಾಗಿ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಡಲಾಗಿದೆ. ಹಲವರು ಖಾಸಗಿ ಕ್ಲಿನಿಕ್‌ಗಳನ್ನು ಸೇವೆಯ ಅವಧಿ ಮುಗಿದ ನಂತರ ಹಾಗೂ ರಜೆ ದಿನಗಳಲ್ಲಿ ನಡೆಸುತ್ತಿದ್ಧಾರೆ. ಆದರೆ ಸೇವೆಯಲ್ಲಿರುವ ಸಮಯದಲ್ಲಿಯೇ ಕೆಲವರು ಖಾಸಗಿ ಕ್ಲಿನಿಕ್‌ ಇಲ್ಲವೇ ಆಸ್ಪತ್ರೆಗೆ ಹೋಗುವ ದೂರುಗಳೂ ಬರುತ್ತಿರುವುದರಿಂದ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಗಾವಲು ಇರಿಸಿ ಅಂತಹ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದೆ.

ಮಂಡ್ಯದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್ ಪಾಟೀಲ್ ಅವರು ಭೇಟಿ ನೀಡಿ ಸಭೆ ನಡೆಸಿದ ಜತೆಗೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಈ ಕುರಿತು ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿದರು. ವೈದ್ಯಕೀಯ ಮಹಾವಿದ್ಯಾಲಯದ ಸರ್ಕಾರಿ ವೈದ್ಯರು ಸಮಯಕ್ಕೆ ಬರುತ್ತಿದ್ದಾರೆಯೇ. ಅವರ ಕೆಲಸದ ಪ್ರಮಾಣ ಹೇಗಿದೆ. ಸಂಜೆ ಎಷ್ಟು ಹೊತ್ತಿಗೆ ಹೋಗುತ್ತಾರೆ. ಮಧ್ಯಾಹ್ನದ ನಂತರ ಬಾರದೇ ಇರುವವರು ಯಾರು, ತರಗತಿ ವೇಳೆ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆಯೇ ಎನ್ನುವುದೂ ಸೇರಿ ಹಲವು ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಅವರು. ವೈದ್ಯರು ತಮ್ಮಕಾಲೇಜಿನ ಕೆಲಸ ನಿರ್ವಹಿಸಬೇಕಿರುವ ಸಮಯದಲ್ಲಿ ಹೊರಗೆ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ, ಕಂಡುಬಂದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಇನ್ನು ಮುಂದೆ ಮಧ್ಯಾಹ್ನದ ವೇಳೆ ಸಹ ಈ ಹಾಜರಾತಿ ಸಂಗ್ರಹಿಸಲು ತಿಳಿಸಲಾಗುವುದು ಎಂದರು.

ಕಾಮಗಾರಿಗೆ ಸೂಚನೆ

ಮಿಮ್ಸ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿಗಳು 3 ತಿಂಗಳೊಳಗಾಗಿ ಪೂರ್ಣಗೊಳ್ಳಬೇಕು. ಕ್ಯಾನ್ಸರ್ ಆಸ್ಪತ್ರೆಯ ಸಿವಿಲ್ ಕಾಮಗಾರಿಗಳು ಒಂದು ತಿಂಗಳೊಳಗೆ ಪೂರ್ಣಗೊಳಿಸವೇಕು. ಆಸ್ಪತ್ರೆಗೆ ಅವಶ್ಯಕವಿರುವ ವೈದ್ಯಕೀಯ ಉಪಕರಣಗಳು ಹಾಗೂ ಇನ್ನಿತರೆ ಟೇಬಲ್, ಚೇರ್, ಬೆಡ್ ವಿದ್ಯುತ್ ಸಂಪರ್ಕ ಇತ್ಯಾಧಿ ಕೆಲಸಗಳು 3 ತಿಂಗಳೊಳಗೆ ಪೂರ್ಣಗೊಳ್ಳಬೇಕು. ಅಷ್ಟರಲ್ಲಿ ಆಸ್ಪತ್ರೆಗೆ ಬೇಕಿರುವ ವೈದ್ಯರು ಹಾಗೂ ಇನ್ನಿತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆದು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವರದಿ ಬೇಗ ಕೊಡಿ

ಎಂ.ಆರ್.ಐ ಹಾಗೂ ಸಿ.ಟಿ ಸ್ಕ್ಯಾನ್ ಆದ ನಂತರ ರೋಗಿಗಳ ವರದಿ ನೀಡಲು ಮೂರ ರಿಂದ ಐದು ದಿನ ಆಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಖಾಲಿ ಇರುವ ರೆಡಿಯಾಲಜಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಿ ಟೆಲಿ ಸರ್ವಿಸ್ ಉಪಯೋಗಿಸಿಕೊಂಡು ಒಂದು ದಿನದೊಳಗಾಗಿ ವರದಿ ನೀಡುವ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೊರ ಗುತ್ತಿಗೆ ಮೇಲೆ ಲ್ಯಾಬ್ ಸೇವೆ ಒದಗಿಸುತ್ತಿರುವ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೆಚ್ಚಿನ ದರ ವಿದಿಸುತ್ತಿದ್ದಾರೆ ಎಂದು ದೂರು ಕೇಳಿ ಬರುತ್ತಿದ್ದು, ಇದನ್ನು ಪರಿಶೀಲಿಸಿ ತಪ್ಪು ಕಂಡು ಬಂದಲ್ಲಿ ಟೆಂಡರ್ ರದ್ದುಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ಸಿಬ್ಬಂದಿಗಳ ಖಾತೆಗೆ ಸರಿಯಾಗಿ ಸಂಬಳ, ಪಿ‌ಎಫ್ ಜಮೆಯಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ಇದರ ಬಗ್ಗೆ ದೂರುಗಳು ಕೇಳಿಬಂದಲ್ಲಿ ಶಿಸ್ತು ಕ್ರಮ ವಹಿಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶಾಸಕ ಪಿ.ರವಿಕುಮಾರ್ ಅವರು ಮಾತನಾಡಿ ಬಿ.ಹೊಸೂರಿನಲ್ಲಿ ನರ್ಸಿಂಗ್, ಪ್ಯಾರ್ ಮೆಡಿಕಲ್ ಕಾಲೇಜು ಮತ್ತು ಹಾಸ್ಟಲ್ ಗೆ ಸ್ಥಳದ ವ್ಯವಸ್ಥೆ ಮಾಡಿಕೊಡಲಾಗುವುದು. ಇದಕ್ಕೆ ಯೋಜನೆ ರೂಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

ವರ್ಚುಯಲ್ ಡಿಸೆಕ್ಸನ್ ಟೇಬಲ್ ಗೆ ಚಾಲನೆ: ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2.50 ಕೋಟಿ ರೂ ವೆಚ್ಚದಲ್ಲಿ ಖರೀದಿಸಲಾಗಿರುವ ಅನಾಟಮಿ ವರ್ಚುಯಲ್ ಡಿಸೆಕ್ಸನ್ ಟೇಬಲ್ (Anatomy virtual dissection table) ಗೆ ಸಚಿವರು ಚಾಲನೆ ನೀಡಿದರು.

ಸಭೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎ ಬಿ ರಮೇಶ್ ಬಂಡಿಸಿದ್ದೇಗೌಡ,ವಿಧಾನ ಪರಿಷತ್ ಸದಸ್ಯರಾದ ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ ಕುಮಾರ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ: ಸುಜಾತಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Whats_app_banner