ಕನ್ನಡ ಸುದ್ದಿ  /  Karnataka  /  Mandya News Officers Hunting For Second Day After Lok Sabha Election Announcement Rs 1 Crore Seized In Maddur Taluk Rmy

Mandya News: ಲೋಕಸಭೆಗೆ ಚುನಾವಣೆ ಘೋಷಣೆಯಾದ 2ನೇ ದಿನವೇ ಅಧಿಕಾರಿಗಳ ಬೇಟೆ; ಮಂಡ್ಯದಲ್ಲಿ 1 ಕೋಟಿ ಹಣ ಜಪ್ತಿ

ಮಂಡ್ಯ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿರುವ ಚುನಾವಣಾ ಅಧಿಕಾರಿಗಳು ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 1 ಕೋಟಿ ರೂಪಾಯಿ ಹಣವನ್ನು ಸೀಜ್ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 1 ಕೋಟಿ ರೂಪಾಯಿಯನ್ನು ಚುನಾವಣಾ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. (ಫೋಟೋ-ಹೆಚ್‌ಟಿ ಫೈಲ್)
ಮಂಡ್ಯ ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 1 ಕೋಟಿ ರೂಪಾಯಿಯನ್ನು ಚುನಾವಣಾ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. (ಫೋಟೋ-ಹೆಚ್‌ಟಿ ಫೈಲ್)

ಮಂಡ್ಯ: ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಅಕ್ರಮಗಳ ಮೆಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಇದರ ಬೆನ್ನಲ್ಲೇ ಯಾವುದೆ ದಾಖಲೆಗಳಿಲ್ಲದೆ ಕೊಂಡೊಯ್ಯುತ್ತಿದ್ದ ಬರೋಬ್ಬರಿ ತೊಂಬತ್ತೊಂಬತ್ತು ಲಕ್ಷದ ಇಪ್ಪತ್ತು ಸಾವಿರ ನಗದು (99,20,000) ಹಣವನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಿಡಘಟ್ಟ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಿಡಘಟ್ಟ ಚೆಕ್ ಪೋಸ್ಟ್ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಇಷ್ಟೊಂದು ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ.

ಈ ಹಣವನ್ನು ಕ್ರೇಟಾ ಕಾರಿನಲ್ಲಿ ಬೇರೆಡೆಗೆ ಸಾಗಣೆ ಮಾಡಲಾಗುತ್ತಿತ್ತು. ನಿಡಘಟ್ಟ ಚೆಕ್ ಪೋಸ್ಟ್‌ನಲ್ಲಿ ಕಾರು ತಪಾಸಣೆ ನಡೆಸಿದ ವೇಳೆ ಚೀಲದಲ್ಲಿ ತುಂಬಿಸಿದ್ದ ಕಂತೆಗಟ್ಟಲೆ ಹಣ ಪತ್ತೆಯಾಗಿದೆ. ಚೀಲದಲ್ಲಿ ತುಂಬಿಸಿಟ್ಟಿದ್ದ 99,20,000 ನಗದು, ಕ್ರೇಟಾ ಕಾರನ್ನು ಜಪ್ತಿ ಮಾಡಿರುವ ಪೊಲೀಸರು, ಹಣ ಸಾಗಿಸುತ್ತಿದ್ದ ಗಿರೀಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಪೊಲೀಸರ ವಿಚಾರಣೆ ವೇಳೆಯೂ ಕೊಂಡೊಯ್ಯುತ್ತಿದ್ದ ಹಣಕ್ಕೆ ಸೂಕ್ತ ದಾಖಲೆ, ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಹಣ ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ.

ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ತಹಸೀಲ್ದಾರ್ ಕೆ ಎಸ್ ಸೋಮಶೇಖರ್, ಮದ್ದೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೆ ಆರ್ ಪ್ರಸಾದ್, ಚುನಾವಣಾಧಿಕಾರಿ ಲೋಕನಾಥ್ ಈ ವೇಳೆ ಹಾಜರಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್ 16 ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮಾರ್ಚ್ 16 ರ ಶನಿವಾರ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದರು. ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಹೇಳಿದ್ದರು. ಅಂದಿನಿಂದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ತಾಲೂಕು ಮುಖ್ಯ ರಸ್ತೆಗಳು ಸೇರಿದಂತೆ ವಿವಿಧ ಚುನಾವಣಾ ಅಧಿಕಾರಿಗಳು ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

18ನೇ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ಶುಕ್ರವಾರ ಮತ್ತು ಮೇ 7 ರ ಮಂಗಳವಾರ ಎರಡು ಹಂತಗಳಲ್ಲಿ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 14 ಹಾಗೂ ಎರಡನೇ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ಜರುಗಲಿದೆ.