ಶ್ರೀರಂಗಪಟ್ಟಣದಲ್ಲಿ ಅಕ್ಟೋಬರ್ 4 ರಿಂದ 7 ವರೆಗೆ ದಸರಾ: ಅಂಬಾರಿ ಹೊರಲಿದ್ದಾನೆ ಮಹೇಂದ್ರ, ಈ ಬಾರಿ ಏನಿರಲಿದೆ ವಿಶೇಷ
ಮೈಸೂರು ದಸರಾದ ಮೂಲ ಸ್ಥಳವಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಈ ಬಾರಿ ಅದ್ದೂರಿಯಾಗಿ ದಸರಾ ಆಚರಿಸಲು ಮಂಡ್ಯ ಜಿಲ್ಲಾಡಳಿತ ಅಣಿಯಾಗಿದೆ. ಅಕ್ಟೋಬರ್ 4 ರಿಂದ 7ರವರೆಗೆ ದಸರಾ ಇರಲಿದೆ.
ಮಂಡ್ಯ: ಮೈಸೂರು ದಸರಾ ವೇಳೆಯೇ ನಡೆಯಲಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾಗೂ ಸಿದ್ದತೆಗಳು ನಡೆದಿವೆ. ಮೈಸೂರಿಗಿಂತ ಮೊದಲು ದಸರಾ ನಡೆಯುತ್ತಿದ್ದುದು ಶ್ರೀರಂಗಪಟ್ಟಣದಲ್ಲೇ. ಆನಂತರ ಮೈಸೂರಿಗೆ ಸ್ಥಳಾಂತರಗೊಂಡಿದೆ. ಇದರ ನೆನಪಿಗೆ ಹಲವು ವರ್ಷಗಳಿಂದ ಶ್ರೀರಂಗಪಟ್ಟಣದಲ್ಲೂ ದಸರಾ ನಡೆದಿದೆ. ಈ ಬಾರಿಯೂ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿಯೇ ಶ್ರೀರಂಗಪಟ್ಟಣ ದಸರಾ ನಡೆಯಲಿದೆ. ಶ್ರೀರಂಗಪಟ್ಟಣ ದಸರಾ ಮಹೋತ್ಸವ-2024ರ ಲೋಗೋ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ನಾಲ್ಕು ದಿನಗಳ ಕಾಲ ಶ್ರೀರಂಗಪಟ್ಟಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಹಿರಿಯ ಹಾಗೂ ಖ್ಯಾತನಾಮ ಕಲಾವಿದರು ಶ್ರೀರಂಗಪಟ್ಟಣ ದಸರಾದಲ್ಲಿ ಭಾಗಿಯಾಗುವರು. ಸ್ಥಳೀಯ ಕಲಾವಿದರೂ ಅವಕಾಶ ಮಾಡಿಕೊಡಲಾಗುತ್ತಿದೆ. ಇದಲ್ಲದೇ ದಸರಾದಲ್ಲಿ ಕೃಷಿಗೆ ಸಂಬಂಧಿಸಿದಂತೆ ವಸ್ತು ಪ್ರದರ್ಶನವೂ ಇರಲಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಹೇಳುತ್ತಾರೆ.
ಪ್ರತಿ ವರ್ಷದಂತೆ ಜಂಬೂ ಸವಾರಿಯಲ್ಲೂ ಶ್ರೀರಂಗಪಟ್ಟಣದಲ್ಲಿ ಇರಲಿದೆ. ಮಹೇಂದ್ರ ಆನೆಯೇ ಜಂಬೂ ಸವಾರಿ ಹೊತ್ತು ಸಾಗಲಿದೆ. ಸುಮಾರು ಒಂದು ಕಿ.ಮಿ ಉದ್ದಕ್ಕೂ ಶ್ರೀರಂಗಪಟ್ಟಣದಲ್ಲಿ ಜಂಬೂ ಸವಾರಿ ಇರಲಿದೆ. ಸಾಂಸ್ಕೃತಿಕ ತಂಡಗಳೂ ಕೂಡ ಭಾಗಿಯಾಗಲಿವೆ.
ನಾಡಿನ ದಸರಾ ಹಬ್ಬವು ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದು, ನಮ್ಮ ನಾಡಿನ ಕಲ್ಯಾಣಕ್ಕೋಸ್ಕರ ಶ್ರೀ ಚಾಮುಂಡೇಶ್ವರಿ ತಾಯಿಯನ್ನು ಪೂಜಿಸಲಾಗುವುದು. ಶ್ರೀರಂಗಪಟ್ಟಣ ದಸರಾ ಹಬ್ಬದಲ್ಲಿ ಅನೇಕ ರೀತಿಯ ವಿಭಿನ್ನ ಸಾಂಸ್ಕೃತಿಕ ಉತ್ಸವಗಳು ನಡೆಯಲಿದ್ದು, ಸಾರ್ವಜನಿಕರಿಗೆ ಹಬ್ಬದ ವಾತಾವರಣವು ಉಂಟಾಗಲಿದೆ.
ಶ್ರೀರಂಗಪಟ್ಟಣ ದಸರಾ ಹಬ್ಬದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಂಡ್ಯ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು. ಜೊತೆಗೆ ನಮ್ಮ ನಾಡಿನ ಪರಂಪರೆಯನ್ನು ಉಳಿಸುವ ಕೆಲಸವಾಗಬೇಕು ಎನ್ನುವುದು ಸಚಿವರ ಮನವಿ.
ಪ್ರತಿ ವರ್ಷದಂತೆ ಈ ವರ್ಷವು ಶ್ರೀರಂಗಪಟ್ಟಣ ದಸರಾವನ್ನು ಆಚರಿಸಲಾಗುತಿದ್ದು, ಲೋಗೋ ಬಿಡುಗಡೆ ಮಾಡಲಾಗಿದೆ. ಶ್ರೀರಂಗಪಟ್ಟಣ ದಸರಾಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಸಮಿತಿಗಳನ್ನು ರಚನೆ ಮಾಡಲಾಗಿದೆ. ದಸರಾ ಸಮಿತಿಗಳು ಕಾರ್ಯೋನ್ಮುಖವಾಗಿವೆ ಎನ್ನುತ್ತಾರೆ ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ.
ಮೈಸೂರು ದಸರಾವನ್ನು ಮೂಲತಃ 1610 ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್ ಪ್ರಾರಂಭಿಸಿದರು. ಟಿಪ್ಪು ಸುಲ್ತಾನನ ಪತನದ ನಂತರ ರಾಜಧಾನಿಯನ್ನು ಮೈಸೂರಿಗೆ ಸ್ಥಳಾಂತರಿಸಿದಾಗ ಅದು 1799 ರಲ್ಲಿ ಮೈಸೂರಿಗೆ ಸ್ಥಳಾಂತರಗೊಂಡಿತು. ಐತಿಹಾಸಿಕ, ವಾರ್ಷಿಕ ಶ್ರೀರಂಗಪಟ್ಟಣ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕೆಲ ವರ್ಷ ನಿಂತು ಹೋಗಿದ್ದರೂ ಈಗ ಮೈಸೂರು ಮಾದರಿಯಲ್ಲಿಯೇ ಚಟುವಟಿಕೆ ರೂಪಿಸಿ ಶ್ರೀರಂಗಪಟ್ಟಣ ದಸರಾ ಆಚರಿಸಲಾಗುತ್ತಿದೆ.