ಶ್ರೀರಂಗಪಟ್ಟಣದಲ್ಲಿ ಇಂದೇ ಜಂಬೂಸವಾರಿ, ನಟ ಶಿವರಾಜಕುಮಾರ್ ಚಾಲನೆ; 4 ದಿನ ಉಂಟು ನಾನಾ ಕಾರ್ಯಕ್ರಮ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ದಸರಾ ಸಂಭ್ರಮ ತೆರೆದುಕೊಳ್ಳಲಿದೆ. ನಟ ಶಿವರಾಜಕುಮಾರ್ ಜಂಬೂ ಸವಾರಿಯಲ್ಲಿ ಪುಷ್ಪಾರ್ಚನೆ ಮಾಡುವರು.
ಮಂಡ್ಯ: ಕರ್ನಾಟಕದಲ್ಲಿ ದಸರಾ ನಾಲ್ಕು ನೂರು ವರ್ಷಗಳ ಹಿಂದೆಯೇ ಆರಂಭಗೊಂಡ ಕಾವೇರಿ ನದಿ ದ್ವೀಪನಗರಿ ಶ್ರೀರಂಗಪಟ್ಟಣದಲ್ಲಿ ಇಂದೇ ಜಂಬೂ ಸವಾರಿ. ಇದಕ್ಕಾಗಿ ಐತಿಹಾಸಿಕ ಪಟ್ಟಣ ಅಣಿಗೊಂಡಿದೆ. ಪ್ರತಿ ವರ್ಷವೂ ಮಂಡ್ಯ ಜಿಲ್ಲಾಡಳಿತದಿಂದ ಶ್ರೀರಂಗಪಟ್ಟಣ ದಸರಾವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು. ಈ ಬಾರಿಯೂ ಅಕ್ಟೋಬರ್ 4 ರಿಂದ 7 ರವರೆಗೆ ನಾಲ್ಕು ದಿನಗಳ ಕಾರ್ಯಕ್ರಮ ಇರಲಿದೆ. ಜಂಬೂಸವಾರಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟ, ಮಹಿಳೆಯರು, ಪುರುಷರು ಹಾಗೂ ಯುವಕರಿಗೆ ನಾನಾ ಸ್ಪರ್ಧೆಗಳು ನಾಲ್ಕು ದಿನಗಳ ದಸರಾ ಚಟುವಟಿಕೆಯಲ್ಲಿ ಇರಲಿವೆ. ಶುಕ್ರವಾರ ಬೆಳಿಗ್ಗೆ ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಮ್ಯಾರಥಾನ್ ಸ್ಪರ್ಧೆ ನಡೆಯಿತು. ಮಕ್ಕಳು, ಹಿರಿಯರು ಉತ್ಸಾಹದಿಂದ ಭಾಗಿಯಾದರು.
ಶುಕ್ರವಾರ ಮಧ್ಯಾಹ್ನ 12:30ಕ್ಕೆ ಶ್ರೀರಂಗಪಟ್ಟಣದ ಕಿರಂಗೂರಿನ ಬನ್ನಿ ಮಂಟಪದಲ್ಲಿ "ನಂದಿ ಧ್ವಜ ಪೂಜೆ" ನಡೆಯಲಿದೆ. ಮಧ್ಯಾಹ್ನ 2:30 ರಿಂದ 3 ರವರೆಗೆ ಕಿರಂಗೂರಿನ ಬನ್ನಿ ಮಂಟಪದಿಂದ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಚಾಲನೆ ನೀಡಲಾಗುವುದು. ಮೆರವಣಿಗೆಯಲ್ಲಿ ಮಹೇಂದ್ರ (ಅಂಬಾರಿ ಆನೆ), ಹಿರಣ್ಯ ಮತ್ತು ಲಕ್ಷ್ಮಿ ( ಕುಮ್ಕಿ ಆನೆಗಳು) ಇರಲಿವೆ. ಈಗಾಗಲೇ ಶ್ರೀರಂಗಪಟ್ಟಣದ ಬನ್ನಿಮಂಟಪದಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮಹೇಂದ್ರ, ಹಿರಣ್ಯ ಹಾಗೂ ಲಕ್ಷ್ಮಿ ಆನೆಗಳು ಗುರುವಾರ ರಾತ್ರಿಯೇ ಮೈಸೂರಿನಿಂದ ಆಗಮಿಸಿ ಬೀಡು ಬಿಟ್ಟಿವೆ.
ಈ ಬಾರಿ ಶ್ರೀರಂಗಪಟ್ಟಣ ದಸರಾವನ್ನು ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವಣ್ಣ ಉದ್ಘಾಟಿಸುವರು. ಅವರು ನಂದಿಧ್ವಜ ಪೂಜೆ ನೆರವೇರಿಸಿ ನಂತರ ಪುಷ್ಪಾರ್ಚನೆಯನ್ನು ಮಾಡುವರು. ಸಚಿವರಾದ ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ಸಹಿತ ಹಲವರು ಭಾಗಿಯಾಗುವರು. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡ ಪಾಲ್ಗೊಳ್ಳುವರು.
ಹಲವಾರು ವರ್ಷಗಳಿಂದ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ.ನಾಲ್ಕು ದಿನಗಳ ಚಟುವಟಿಕೆಗಳು ನಡೆಯುತ್ತಿದ್ದು ಜಂಬೂ ಸವಾರಿಯೂ ಇಲ್ಲಿನ ವಿಶೇಷ ಆರ್ಕಷಣೆ. ಮೈಸೂರಿನಿಂದ ಆನೆಗಳು ಆಗಮಿಸಿ ಶ್ರೀರಂಗಪಟ್ಟಣ ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ ಎಂದು ಮಂಡ್ಯ ಡಿಸಿ ಡಾ.ಕುಮಾರ ಹೇಳುತ್ತಾರೆ.
ಅಕ್ಟೋಬರ್ 4ರ ಶುಕ್ರವಾರ ಸಂಜೆ 6 ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದ ಶ್ರೀರಂಗ ವೇದಿಕೆಯಲ್ಲಿ ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಜರುಗಲಿದೆ. ಕಾರ್ಯಕ್ರಮದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭಾಗಿಯಾಗುವರು. ನಂತರ ಸಂಜೆ 7 ಗಂಟೆಗೆ ಗಾಯಕರು ಹಾಗೂ ಸಂಗೀತ ನಿರ್ದೇಶಕರಾದ ವಾಸುಕಿ ವೈಭವ್ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
ಇತರೆ ದಿನದ ಕಾರ್ಯಕ್ರಮ
- ಅಕ್ಟೋಬರ್ 5 ರಂದು ಬೆಳಿಗ್ಗೆ 7:00 ಗಂಟೆಗೆ ಕರಿಘಟ್ಟ ದೇವಸ್ಥಾನದ ಪಾದದಿಂದ ದೇವಸ್ಥಾನದ ಮೇಲ್ಭಾಗದವರೆಗೆ ಬೆಟ್ಟ ಹತ್ತುವ ಸ್ಪರ್ಧೆ (ಚಾರಣ) ಏರ್ಪಡಿಸಲಾಗಿದೆ. ಬೆಳಿಗ್ಗೆ 10 ರಿಂದ 12:30 ರವರೆಗೆ ಗಂಜಾಂನ ಶ್ರೀದೇವಿ ಚಿತ್ರಮಂದಿರ, ಬಾಬುರಾಯನ ಕೊಪ್ಪಲಿನ ಭಾರತಿ ಚಿತ್ರಮಂದಿರ ಹಾಗೂ ಅರಕೆರೆಯ ಮಂಜುನಾಥ್ ಚಿತ್ರಮಂದಿರಗಳಲ್ಲಿ ಸಿನಿಮೋತ್ಸವ ನಡೆಯಲಿದೆ. ಮಧ್ಯಾಹ್ನ 2:00 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 7:00 ಗಂಟೆಗೆ ಖ್ಯಾತ ಹಿನ್ನೆಲೆ ಗಾಯಕರದ ವಿಜಯ ಪ್ರಕಾಶ್ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
- ಅಕ್ಟೋಬರ್ 6 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದ ಶ್ರೀರಂಗ ವೇದಿಕೆಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಲಿದೆ. ಬೆಳಿಗ್ಗೆ 10:00 ಗಂಟೆಗೆ ಶ್ರೀರಂಗಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಗ್ಗ ಜಗ್ಗಾಟ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ 12.30 ಗಂಟೆಯವರೆಗೆ ಗಂಜಾಂನ ಶ್ರೀದೇವಿ ಚಿತ್ರಮಂದಿರ, ಬಾಬುರಾಯನ ಕೊಪ್ಪಲಿನ ಭಾರತಿ ಚಿತ್ರಮಂದಿರ ಹಾಗೂ ಅರಕೆರೆಯ ಮಂಜುನಾಥ್ ಚಿತ್ರಮಂದಿರಗಳಲ್ಲಿ ಸಿನಿಮೋತ್ಸವ ನಡೆಯಲಿದೆ. ಮಧ್ಯಾಹ್ನ 2:00 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 7:00 ಗಂಟೆಗೆ ಕಲಾವಿದರು ಹಾಗೂ ಹಿನ್ನೆಲೆ ಗಾಯಕರಾದ ಆಲ್ ಓಕೆ ಮತ್ತು ತಂಡ ಹಾಗೂ ರಾತ್ರಿ 9:00 ಗಂಟೆಗೆ ಹಿನ್ನೆಲೆ ಗಾಯಕರಾದ ಲಗೋರಿ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿರಿ: Indian Railways: ದಸರಾಗೆ ಯಶವಂತಪುರ, ಮೈಸೂರಿನಿಂದ ಹಾಸನ- ಮಂಗಳೂರು-ಉಡುಪಿ ಮಾರ್ಗದಲ್ಲಿ ಕಾರವಾರಕ್ಕೆ ವಿಶೇಷ ರೈಲುಗಳ ಸಂಚಾರ - ಅಕ್ಟೋಬರ್ 7 ರಂದು ಬೆಳಿಗ್ಗೆ 10 ಗಂಟೆಯಿಂದ 12.30 ಗಂಟೆಯವರೆಗೆ ಗಂಜಾಂನ ಶ್ರೀದೇವಿ ಚಿತ್ರಮಂದಿರ, ಬಾಬುರಾಯನ ಕೊಪ್ಪಲಿನ ಭಾರತಿ ಚಿತ್ರಮಂದಿರ ಹಾಗೂ ಅರಕೆರೆಯ ಮಂಜುನಾಥ್ ಚಿತ್ರಮಂದಿರಗಳಲ್ಲಿ ಸಿನಿಮೋತ್ಸವ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದ ಶ್ರೀರಂಗ ವೇದಿಕೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಗಾಯಕರು ಹಾಗೂ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಮತ್ತು ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.