ಕನ್ನಡ ಸುದ್ದಿ  /  ಕರ್ನಾಟಕ  /  Mandya News: ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕನ್ನಡದಲ್ಲೇ ಹೆಚ್ಚು ಅನುತ್ತೀರ್ಣ, ಮಕ್ಕಳ ಜತೆಗೆ ಶಿಕ್ಷಕರಿಗೂ ಕಾರ್ಯಾಗಾರ !

Mandya News: ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕನ್ನಡದಲ್ಲೇ ಹೆಚ್ಚು ಅನುತ್ತೀರ್ಣ, ಮಕ್ಕಳ ಜತೆಗೆ ಶಿಕ್ಷಕರಿಗೂ ಕಾರ್ಯಾಗಾರ !

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮಂಡ್ಯದಲ್ಲಿ ಅನುತ್ತೀರ್ಣರಾಗಿದ್ದಾರೆ. ಇದನ್ನು ಮಂಡ್ಯ ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ.

ಸಭೆಯಲ್ಲಿ ಮಾತನಾಡಿದ ಮಂಡ್ಯ ಡಿಸಿ ಡಾ.ಕುಮಾರ್‌. ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್   ಕೂಡ ಇದ್ದರು.
ಸಭೆಯಲ್ಲಿ ಮಾತನಾಡಿದ ಮಂಡ್ಯ ಡಿಸಿ ಡಾ.ಕುಮಾರ್‌. ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಕೂಡ ಇದ್ದರು.

ಮಂಡ್ಯ: ಈಗಷ್ಟೇ ಮುಗಿದಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಪ್ಪಟ ಕನ್ನಡ ಭಾಷಾ ಸೊಗಡಿನ ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಮಕ್ಕಳು ಕನ್ನಡ ಭಾಷೆಯಲ್ಲಿ ಅನುತ್ತೀರ್ಣಗೊಂಡಿದ್ದಾರೆ. ಮುಂದಿನ ತಿಂಗಳು ನಡೆಯಿರುವ ಎಸ್‌ಎಸ್‌ಎಲ್‌ಸಿ-2 ಪರೀಕ್ಷೆಗೆ ಈಗಿನಿಂದಲೇ ತಯಾರಿ ಆರಂಭಿಸಿ ಮಕ್ಕಳು ಉತ್ತೀರ್ಣವಾಗುವಂತೆ ಶಿಕ್ಷಣ ಇಲಾಖೆ ಅಣಿಯಾಗಬೇಕು. ಮಕ್ಕಳಿಗೆ ವಿಶೇಷ ಬೋಧನಾ ತರಗತಿಗಳನ್ನು ಆರಂಭಿಸಬೇಕು. ಇದರ ಜತೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯಾವ ರೀತಿ ಪಾಠ ಮಾಡಿ ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂಬ ವಿಧಾನಗಳ ಬಗ್ಗೆ ಶಿಕ್ಷಕರಿಗೆ ಕಾರ್ಯಾಗಾರವನ್ನು ಏರ್ಪಡಿಸಿ ಸೂಕ್ತ ತರಬೇತಿ ನೀಡಬೇಕು.

ಟ್ರೆಂಡಿಂಗ್​ ಸುದ್ದಿ

ಪರೀಕ್ಷೆಯಲ್ಲಿ ಮಕ್ಕಳು ಅನುತ್ತೀರ್ಣವಾಗಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮಂಡ್ಯ ಜಿಲ್ಲಾಡಳಿತವು ಇಂತಹದೊಂದು ಸೂಚನೆಯನ್ನು ಶಿಕ್ಷಕರಿಗೆ ನೀಡಿದೆ.

ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಎಸ್. ಎಸ್. ಎಲ್.ಸಿ. ಪರೀಕ್ಷೆ 1 ರ ಫಲಿತಾಂಶ ವಿಶ್ಲೇಷಣೆ ಹಾಗೂ ಜೂನ್ - 2024 ರ ಎಸ್ಎಸ್ಎಲ್ಸಿ ಪರೀಕ್ಷೆ 02 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಎಲ್ಲಾ ವೃತ್ತಿಗಳಲ್ಲಿ ಶಿಕ್ಷಕರ ವೃತ್ತಿಯು ಶ್ರೇಷ್ಠವಾಗಿದ್ದು, ಅಂತಹ ಪವಿತ್ರ ವೃತ್ತಿಯಲ್ಲಿರುವ ಶಿಕ್ಷಕರು ಹೆಚ್ಚು ಶ್ರಮಿಸಿದರೆ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಯಾಗುತ್ತದೆ.ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದ ಸಾಧನೆ ಕಡಿಮೆಯಾಗಿದ್ದು, ಪ್ರತಿ ಶಿಕ್ಷಕರು ಆತ್ಮವಲೋಕನ ಮಾಡಿಕೊಂಡು ಇನ್ನುಮುಂದೆ ಎಚ್ಚೆತ್ತುಕೊಳ್ಳಬೇಕು. ಸರಿಯಾದ ಯೋಜನೆಯನ್ನು ಹಾಕಿಕೊಂಡು ಈ ಬಾರಿ ಆಗಿರುವ ತಪ್ಪುಗಳು ಮರುಪರೀಕ್ಷೆಯಲ್ಲಿ ಮರುಕಳಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲಿಯೇ 3571 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ತಲೆ ತಗ್ಗಿಸುವ ವಿಷಯವಾಗಿದೆ. ಕೆ. ಆರ್. ಪೇಟೆ ತಾಲ್ಲೂಕಿನ 56 ಶಾಲೆಗಳಲ್ಲಿ ಒಟ್ಟು 924 ವಿದ್ಯಾರ್ಥಿಗಳು ಮದ್ದೂರು ತಾಲ್ಲೂಕಿನ 84 ಶಾಲೆಗಳಲ್ಲಿ ಒಟ್ಟು 1038 ವಿದ್ಯಾರ್ಥಿಗಳು .ಮಳವಳ್ಳಿ ತಾಲ್ಲೂಕಿನ 70 ಶಾಲೆಗಳಲ್ಲಿ 814 ವಿದ್ಯಾರ್ಥಿಗಳು, ಮಂಡ್ಯ ತಾಲ್ಲೂಕಿನಲ್ಲಿ ದಕ್ಷಿಣ ವಲಯದ 62 ಶಾಲೆಗಳಲ್ಲಿ 607 ವಿದ್ಯಾರ್ಥಿಗಳು ಹಾಗೂ ಉತ್ತರ ವಲಯದ 27 ಶಾಲೆಗಳಲ್ಲಿ 163 ವಿದ್ಯಾರ್ಥಿಗಳು, ನಾಗಮಂಗಲ ತಾಲ್ಲೂಕಿನ 50 ಶಾಲೆಗಳಲ್ಲಿ ಒಟ್ಟು 596 ವಿದ್ಯಾರ್ಥಿಗಳು ಹಾಗೂಪಾಂಡವಪುರ ತಾಲ್ಲೂಕಿನ 47 ಶಾಲೆಗಳಲ್ಲಿ 585 ವಿದ್ಯಾರ್ಥಿಗಳು , ಶ್ರೀರಂಗಪಟ್ಟಣ ತಾಲ್ಲೂಕಿನ 49 ಶಾಲೆಗಳಲ್ಲಿ 427 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಯಟ್ ಉಪನ್ಯಾಸಕರು ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ -1 ರಲ್ಲಿ ಉತ್ತೀರ್ಣರಾಗುವಂತೆ ತರಬೇತಿ ನೀಡಬೇಕು. ಶಿಕ್ಷಕರು ಪ್ರಾಮಾಣಿಕತೆ, ಆಸಕ್ತಿ, ಪ್ರೀತಿ ಹಾಗೂ ನಿಸ್ವಾರ್ಥ ಮನೋಭಾವವನೆಯಿಂದ ಕಾರ್ಯನಿರ್ವಹಿಸಿ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುಂದೆ ತರಲು ಶ್ರಮಿಸಬೇಕು ಎನ್ನುವುದು ಜಿಲ್ಲಾಧಿಕಾರಿ ಡಾ.ಕುಮಾರ ಅವರ ಸೂಚನೆ.

ಡಿಸಿ ಸೂಚನೆ ಏನು?

  • ಜಿಲ್ಲೆಯಲ್ಲಿ 2024 ನೇ ಸಾಲಿನಲ್ಲಿ ನಡೆದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ 17 ರಿಂದ ಜೂನ್ 5 ರವರೆಗೆ ಪರಿಹಾರ ಬೋಧನೆಯನ್ನು ನಡೆಸಲಾಗುವುದು
  • ಅನುತ್ತೀರ್ಣರಾಗಿರುವ 5154 ವಿದ್ಯಾರ್ಥಿಗಳು ಪರೀಕ್ಷೆ- 2 ಬರೆಯಲು ನೊಂದಣಿ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು.
  • ಪರಿಹಾರ ಬೋಧನೆಯ ತರಗತಿಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರ ಮನವೊಲಿಸಬೇಕು
  • ಪರಿಹಾರ ಬೋಧನೆ ಗೆ ಶಾಲಾ ಶಿಕ್ಷಕರು ವೇಳಾ ಪಟ್ಟಿ ತಯಾರಿಸಿ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಅವರಲ್ಲಿರುವ ಋಣಾತ್ಮಕ ಮನೋಭಾವನೆಯನ್ನು ಹೋಗಲಾಡಿಸಿ, ಧನಾತ್ಮಕ ಮನೋಭಾವನೆಯನ್ನು ಬೆಳೆಸಿ
  • ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯಾವ ರೀತಿ ಪಾಠ ಮಾಡಿ ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂಬ ವಿಧಾನಗಳ ಬಗ್ಗೆ ಶಿಕ್ಷಕರಿಗೆ ಕಾರ್ಯಾಗಾರವನ್ನು ಏರ್ಪಡಿಸಬೇಕು
  • ಈಗಾಗಲೇ ಕಡಿಮೆ ಫಲಿತಾಂಶ ಬಂದಿರುವ 6 ರಿಂದ 7 ಶಾಲೆಗಳಿಗೆ ಒಬ್ಬ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದೆ.

ಇದನ್ನೂ ಓದಿರಿ: ಸೈಲೆಂಟ್ ಕಿಲ್ಲರ್ ವಿರುದ್ಧ ಹೋರಾಡುವುದು: ಮೈಕ್ರೋ ಲ್ಯಾಬ್ಸ್ ರಾಷ್ಟ್ರವ್ಯಾಪಿ ಅಧಿಕ ರಕ್ತದೊತ್ತಡ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತದೆ

  • ನೋಡೆಲ್ ಅಧಿಕಾರಿಗಳು ನೇಮಕ ಮಾಡಿರುವ ಶಾಲೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಅಭ್ಯಾಸ ಮಾಡಿಸಿ ಪರೀಕ್ಷೆಗೆ ತಯಾರು ಮಾಡಬೇಕು
  • ಜಿಲ್ಲೆಯಲ್ಲಿ ಕಳೆದ 5 - 6 ವರ್ಷಗಳಿಂದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿರುವ ಶಾಲೆಗಳಲ್ಲಿ ಕಾರಣಗಳೇನು ಹಾಗೂ ಪರಿಹಾರ ಕ್ರಮಗಳೇನು ಎಂಬುದರ ಬಗ್ಗೆ ವಿಶ್ಲೇಷಣೆ ಮಾಡಿ ವರದಿ ನೀಡಲು ಸಮಿತಿ ರಚಿಸಲಾಗುವುದು.\

IPL_Entry_Point

ವಿಭಾಗ