KRS Dam: 2 ವರ್ಷ ಬಳಿಕ ತುಂಬುವ ಹಾದಿಯಲ್ಲಿ ಕೆಆರ್‌ಎಸ್‌, ಹೊರ ಹರಿವಿಗೆ ಸಿದ್ದತೆ, ಕಾವೇರಿ ನದಿ ತೀರದಲ್ಲಿ ಪ್ರವಾಹ ಮುನ್ನೆಚ್ಚರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Krs Dam: 2 ವರ್ಷ ಬಳಿಕ ತುಂಬುವ ಹಾದಿಯಲ್ಲಿ ಕೆಆರ್‌ಎಸ್‌, ಹೊರ ಹರಿವಿಗೆ ಸಿದ್ದತೆ, ಕಾವೇರಿ ನದಿ ತೀರದಲ್ಲಿ ಪ್ರವಾಹ ಮುನ್ನೆಚ್ಚರಿಕೆ

KRS Dam: 2 ವರ್ಷ ಬಳಿಕ ತುಂಬುವ ಹಾದಿಯಲ್ಲಿ ಕೆಆರ್‌ಎಸ್‌, ಹೊರ ಹರಿವಿಗೆ ಸಿದ್ದತೆ, ಕಾವೇರಿ ನದಿ ತೀರದಲ್ಲಿ ಪ್ರವಾಹ ಮುನ್ನೆಚ್ಚರಿಕೆ

Mandya News ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ( KRS Dam) ತುಂಬುವ ಹಂತಕ್ಕೆ ಬರುತ್ತಿದ್ದು ಜಲಾಶಯದಿಂದ ನೀರು ಹೊರ ಬಿಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಯಾವುದೇ ಕ್ಷಣದಲ್ಲಾದರೂ ನೀರು ಹೊರ ಬಿಡಬಹುದು.

ತುಂಬುತ್ತಿರುವ ಕೆಆರ್‌ಎಸ್‌ನ ನೋಟ.
ತುಂಬುತ್ತಿರುವ ಕೆಆರ್‌ಎಸ್‌ನ ನೋಟ.

ಮಂಡ್ಯ: ಕೊಡಗಿನಲ್ಲಿ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಅದರಲ್ಲು ಕಳೆದ ವರ್ಷ ತುಂಬದೇ ಸೊರಗಿದ್ದ ಕೃಷ್ಣರಾಜಸಾಗರ ಜಲಾಶಯಕ್ಕೆ ಈಗ ಜೀವ ಕಳೆ ಬಂದಿದೆ. ಹಿಂದಿನ ವರ್ಷದ ನೀರಿನ ಮಟ್ಟದ ಗಡಿಯನ್ನೂ ಈಗಾಗಲೇ ದಾಟಿದ್ದು, ತುಂಬುವತ್ತ ಮುನ್ನಡೆದಿದೆ. ಈಗ ಬರುತ್ತಿರುವ ಒಳ ಹರಿವು, ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆಯಾದರೆ ಜಲಾಶಯ ಎರಡು ಮೂರು ದಿನದಲ್ಲಿಯೇ ತುಂಬುವ ವಾತಾವರಣ ಕಂಡು ಬಂದಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರು ಹೊರ ಹರಿಸಲು ಮಂಡ್ಯ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮವು ಯೋಜನೆ ರೂಪಿಸಿಕೊಂಡಿದೆ. ಕೆ.ಆರ್.ಎಸ್ ಜಲಾಶಯ ಭರ್ತಿಯಾಗುತ್ತಿದ್ದು, ಜಲಾಶಯದ ಮಟ್ಟ 120 ಅಡಿ ದಾಟಿದ ನಂತರ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.

ಈಗಾಗಲೇ ಕಾವೇರಿ ನೀರಾವರಿ ನಿಗಮವೂ ಕೃಷ್ಣರಾಜಸಾಗರ ಜಲಾಶಯದಿಂದ ನೀರು ಹರಿಸುವ ಮುನ್ಸೂಚನೆ ನೀಡಿದ್ದು, ಕಾವೇರಿ ನದಿ ಪಾತ್ರದ ಜನ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆಯನ್ನೂ ನೀಡಿದೆ. ಸದ್ಯ ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟವು 117 ಅಡಿ ತಲುಪಿದೆ.

ಕೆ.ಆರ್.ಎಸ್ ನಿಂದ ಒಂದು‌ ಲಕ್ಷ ಕ್ಕಿಂತ ಹೆಚ್ಚಿನ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ ಸಂದರ್ಭದಲ್ಲಿ ನದಿ ಪಾತ್ರದಲ್ಲಿರುವ ಶ್ರೀರಂಗಪಟ್ಟಣ ತಾಲ್ಲೂಕಿನ- 53, ಪಾಂಡವಪುರ- 15, ಮಳವಳ್ಳಿ- 21 ಹಾಗೂ ಹೇಮಾವತಿ ಜಲಾಶಯಕ್ಕೆ ಸಂಬಂಧಿಸಿದಂತೆ ಕೆ.ಆರ್.ಪೇಟೆ - 3 ಗ್ರಾಮಗಳಲ್ಲಿ ಪ್ರವಾಹ ಉಂಟಾಗಿ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಗ್ರಾಮಗಳಿಗೆ ಖುದ್ದು ಅಧಿಕಾರಿಗಳು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲಿಸಬೇಕು ಎನ್ನುವ ಸೂಚನೆಯನ್ನು ಮಂಡ್ಯ ಜಿಲ್ಲಾಡಳಿತ ಅಧಿಕಾರಿಗಳಿಗೆ ನೀಡಿದೆ.

ಜಿಲ್ಲಾ ಮಟ್ಟದ ಜೊತೆಗೆ ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋಸ್೯ ಸಮಿತಿ ರಚಿಸಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾಲ ಕಾಲಕ್ಕೆ ಬಿಡುಗಡೆಯಾಗುವ ನೀರು, ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ತಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಎನ್ನುವುದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಸೂಚನೆ.

ಕಂಟ್ರೋಲ್ ರೂಮ್ ಸ್ಥಾಪನೆ

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಸ್ಥಳ ಅಥವಾ ಮನೆಗಳು ಪ್ರವಾಹಕ್ಕೆ ಸಿಲುಕಿದರೆ ರಕ್ಷಣೆಗಾಗಿ ಎಲ್ಲಾ ತಾಲ್ಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಮ್ ಅನ್ನು ಸ್ಥಾಪಿಸಬೇಕು. ಮಳೆ ಹಾಗೂ ನದಿಗಳಿಂದ ಯಾವುದೇ ಅಪಾಯಗಳು ಉಂಟಾದಾಗ ಕೂಡಲೇ ಕಂಟ್ರೋಲ್ ರೂಮ್ ಗೆ ಮಾಹಿತಿ ಸಲ್ಲಿಸುವುದರಿಂದ ಸಾರ್ವಜನಿಕರನ್ನು ಸಮಸ್ಯೆಯಿಂದ ಪಾರು ಮಾಡಬಹುದು. ಚೆಸ್ಕಾಂ ಹಾಗೂ ಕಾವೇರಿ ನೀರಾವರಿ ನಿಗಮದಿಂದಲೂ ಸಹ ಪ್ರತ್ಯೇಕ ಕಂಟ್ರೋಲ್ ರೂಂ ಸ್ಥಾಪನೆ ಮಾಡುವ ಸೂಚನೆ ನೀಡಲಾಗಿದೆ..

ಪ್ರತಿ ತಾಲ್ಲೂಕಿಗೂ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿಯನ್ನು ರಚಿಸಲಾಗಿದೆ. 3 ಹಂತಗಳಲ್ಲಿಯೂ ತಂಡಗಳನ್ನು ರಚಿಸಿಕೊಂಡು ಸಮನ್ವಯತೆಯಿಂದ ಸಹಕಾರ ಮನೋಭಾವದಿಂದ ಯಾವುದೇ ಸಮಸ್ಯೆ ಬಾರದಂತೆ ಕೆಲಸ ನಿರ್ವಹಿಸುವಂತೆಯೂ ತಿಳಿಸಲಾಗಿದೆ.

ಜನರಿಗೆ ಮಾಹಿತಿ ಕೊಡಿ

ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳು ಹಾಗೂ ಕೃಷಿ ಬೆಳೆಗಳು ಮುಳುಗಡೆಯಾಗುವುದೋ ಅಂತಹ ಪ್ರದೇಶಗಳಿಗೆ ತಾಲ್ಲೂಕಿನ ಇಒಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಎಚ್ಚರಿಕಾ ಸೂಚನಾ ಫಲಕಗಳನ್ನು ಅಳವಡಿಸಬೇಕು. ಸಾರ್ವಜನಿಕರಲ್ಲಿ ಕರ ಪತ್ರ, ಟಾಮ್ ಟಾಮ್ ವಾಹನಗಳಲ್ಲಿ ವ್ಯಾಪಕ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಲಾಗಿದೆ..

ಕೆ ಆರ್ ಎಸ್ ಅಣೆಕಟ್ಟಿನ ನೀರಿನ ಮಟ್ಟ, ಒಳ ಹರಿವು, ಹೊರ ಹರಿವು ಎಷ್ಟಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ. ನದಿ ಅಕ್ಕ ಪಕ್ಕ ಇರುವಂತಹ ಗ್ರಾಮಗಳಿಗೆ ಮುನ್ನೆಚ್ಚರಿಕ ಕ್ರಮಗಳನ್ನು ಅನುಸರಿಸಲು ತಿಳಿಸುವಂತಹದ್ದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಯಾವುದೇ ಅಪಾಯಗಳು ಸಂಭವಿಸುವುದಕ್ಕೂ ಮುನ್ನ ಮುಂಜಾಗ್ರತಾ ಕ್ರಮವಾಗಿ ಅವಶ್ಯಕ ಸಿದ್ದತೆಯನ್ನು ಮಾಡಿಟ್ಟುಕೊಳ್ಳುವುದು ಸೂಕ್ತ. ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆಗಳು ಸ್ವಯಂ ಸೇವಕರು, ಈಜು ಪರಿಣತರ ಪಟ್ಟಿ, ಜೆ.ಸಿ.ಬಿ ಹಾಗೂ ಬೋಟ್ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು ಎನ್ನುವುದು ಡಿಸಿ ನೀಡಿದ ಸೂಚನೆ.

ಪ್ರವಾಸಿಗರ ಮೇಲೆ ನಿಗಾ ಇರಲಿ

ಜಿಲ್ಲೆಯಲ್ಲಿ ಇಲ್ಲಿಯವರೆಗೂ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನಾಲೆಗಳಿಗೆ ಬಿಟ್ಟಾಗ ಯಾವುದೇ ಕುಟುಂಬದ ಸ್ಥಳಾಂತರ ಘಟನೆಗಳು ನಡೆದಿಲ್ಲ. ಒಂದು ವೇಳೆ ತೀವ್ರ ಪ್ರವಾಹದಿಂದಾಗಿ ಯಾವುದೇ ಕುಟುಂಬವನ್ನು ಸ್ಥಳಾಂತರಿಸಬೇಕಾದರೆ ಮುನ್ನೆಚ್ಚರಿಕಾ ಕ್ರಮವಾಗಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಸಾಕಷ್ಟು ಕಡೆ ತೀವ್ರ ಮಳೆ ಹಾಗೂ ನದಿ ನೀರಿನಿಂದ ರಸ್ತೆಗಳು ಜಲಾವೃತವಾದರೆ ಸಂಚಾರ ನಿರ್ಬಂಧ ಮಾಡಿ, ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು . ಜಲಾಶಯದಿಂದ ಕೃಷಿ ಭೂಮಿಗಳು ಪ್ರವಾಹದಿಂದ ಜಲಾವೃತವಾಗಿ ಬೆಳೆ ನಾಶವಾದರೆ ಕಾನೂನು ಬದ್ಧವಾಗಿ ಪರಿಹಾರ ನೀಡಲು ಅನುಕೂಲವಾಗುವಂತೆ ಮುಂಜಾಗ್ರತಾ ಕ್ರಮವಾಗಿ ಕೃಷಿ ಅಧಿಕಾರಿಗಳು ಕೃಷಿ ಭೂಮಿಯನ್ನು ಗುರುತಿಸಿ ಭಾವಚಿತ್ರಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಜಿಲ್ಲೆಯ ಜನ, ಪ್ರವಾಸಿಗರು ಹಾಗೂ ಅಣೆಕಟ್ಟಿನ ಸುರಕ್ಷತೆ ಮುಖ್ಯವಾಗಿದೆ. ಅಪಾಯದ ಸ್ಥಳಗಳಲ್ಲಿ, ಸೆಲ್ಫಿ ಪಾಯಿಂಟ್, ನದಿ ಪಾತ್ರದಲ್ಲಿ ಇರುವ ದೇವಸ್ಥಾನ, ಗಗನಚುಕ್ಕಿ ಜಲಪಾತ, ಮುತ್ತತ್ತಿ, ಮುಂತಾದ ಸ್ಥಳಗಳಲ್ಲಿ ಎಚ್ಚರಿಕಾ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿ. ಅವಶ್ಯಕವಿರುವ ಕಡೆ ಹೋಮ್ ಗಾರ್ಡ್ ವ್ಯವಸ್ಥೆ ಮಾಡಿ. ನದಿ ಪಾತ್ರದಲ್ಲಿರುವ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಭೇಟಿ ಅವಶ್ಯಕವಿರುವ ಕಡೆ ಅವರಿಗೆ ಸೂಕ್ತ ಮಾಹಿತಿಗಳನ್ನು ರವಾನಿಸಿ ಎಂದು ತಿಳಿಸಲಾಗಿದೆ.

ತಂಡವಾಗಿ ಕೆಲಸ ಮಾಡಿ

ಮಂಡ್ಯ ಜಿಲ್ಲೆ ಎಲ್ಲಾ ಗ್ರಾಮ ಪಂಚಾಯಿತಿಯ ಪಿಡಿಒ, ಬಿಲ್ ಕಲೆಕ್ಟರ್, ವಾಟರ್ ಮ್ಯಾನ್ ಗಳೊಂದಿಗೆ ಸಭೆ ನಡೆಸಿ ಪ್ರವಾಹದ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಪ್ರವಾಹದ ಸನ್ನಿವೇಶ ಎದುರಿಸಲು ಸದಾ ಸನ್ನದರಾಗಿರುವಂತೆ ನೋಡಿಕೊಳ್ಳಬೇಕು. ತಂಡವಾಗಿ ಕೆಲಸ ಮಾಡಬೇಕು. ಶ್ರೀರಂಗಪಟ್ಟಣದ ಗಂಜಾಂ, ಮಳವಳ್ಳಿಯ ಮುತ್ತತ್ತಿ ಹಾಗೂ ಗಗನಚುಕ್ಕಿ ಸೇರಿದಂತೆ ಜಿಲ್ಲೆಯ ಇನ್ನಿತರೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬಂದು ನೀರಿನಲ್ಲಿ ಈಜಾಡುವ ಸಾಧ್ಯತೆಯಿದೆ. ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಹೋಮ್ ಗಾಡ್ಸ್ ೯ ನಿಯೋಜಿಸಿಕೊಳ್ಳಿ ಎನ್ನುವುದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್ ಸೂಚನೆ.

Whats_app_banner