Success Story: ಮೇಲುಕೋಟೆ ಜನಪದ ಸೇವಾ ಟ್ರಸ್ಟ್‌ನ ನೇಕಾರಿಕೆ ಮಾದರಿಯಿಂದ ಗೆದ್ದ ತಮಿಳುನಾಡು ಯುವ ಪಡೆ; ಶಿವಗುರು ನುರುಪು ಬ್ರಾಂಡ್‌ ಹುರುಪು
ಕನ್ನಡ ಸುದ್ದಿ  /  ಕರ್ನಾಟಕ  /  Success Story: ಮೇಲುಕೋಟೆ ಜನಪದ ಸೇವಾ ಟ್ರಸ್ಟ್‌ನ ನೇಕಾರಿಕೆ ಮಾದರಿಯಿಂದ ಗೆದ್ದ ತಮಿಳುನಾಡು ಯುವ ಪಡೆ; ಶಿವಗುರು ನುರುಪು ಬ್ರಾಂಡ್‌ ಹುರುಪು

Success Story: ಮೇಲುಕೋಟೆ ಜನಪದ ಸೇವಾ ಟ್ರಸ್ಟ್‌ನ ನೇಕಾರಿಕೆ ಮಾದರಿಯಿಂದ ಗೆದ್ದ ತಮಿಳುನಾಡು ಯುವ ಪಡೆ; ಶಿವಗುರು ನುರುಪು ಬ್ರಾಂಡ್‌ ಹುರುಪು

Melkote News ತಮಿಳುನಾಡಿನ ಯುವಕ ಮೇಲಕೋಟೆಗೆ ಬಂದು ನೇಕಾರಿಕೆ ತಾಲೀಮುಗಳನ್ನು ಕಲಿತು ಯಶಸ್ವಿಯಾಗಿರುವ ಕಥೆಯಿದು. ಇದರ ಹಿನ್ನೆಲೆಯನ್ನು ಮೇಲುಕೋಟೆ ಜನಪದ ಸೇವಾ ಟ್ರಸ್ಟ್‌ನ ಸಂತೋಷ್‌ ಕೌಲಗಿ( Santhosh Koulagi) ವಿವರಿಸಿದ್ದಾರೆ.

ಮೇಲುಕೋಟೆಯಲ್ಲಿ ತರಬೇತಿ ಪಡೆದು ತಮಿಳುನಾಡಿನಲ್ಲಿ ಯಶಸ್ವಿಯಾದ ಶಿವಗುರು ಕುಟುಂಬ
ಮೇಲುಕೋಟೆಯಲ್ಲಿ ತರಬೇತಿ ಪಡೆದು ತಮಿಳುನಾಡಿನಲ್ಲಿ ಯಶಸ್ವಿಯಾದ ಶಿವಗುರು ಕುಟುಂಬ

ಮಂಡ್ಯ: ಏನಾದರೂ ಸಾಧಿಸಬೇಕು ಎಂದರೆ ಛಲದ ಜತೆಗೆ ತಯಾರಿಯೂ ಬೇಕು. ಅದರಲ್ಲೂ ವಹಿವಾಟು ಎಂದರೆ ಕೊಂಚ ಹೆಚ್ಚಿನ ಸಿದ್ದತೆಯೇ ಬೇಕಾಗುತ್ತದೆ. ಈಗ ಮಾರುಕಟ್ಟೆಯ ಎಲ್ಲಾ ವಲಯದಲ್ಲೂ ತುರುಸಿನ ಸ್ಪರ್ಧೆ. ಕೊಂಚ ಎಚ್ಚರ ತಪ್ಪಿದರೂ ಹೂಡಿದ ಹಣವೆಲ್ಲ ಮಾಯವೇ. ಕೌಶಲ್ಯ, ಹೊಸತನ ಹಾಗೂ ನಾವಿನ್ಯತೆ ಎಲ್ಲೆ ಇದ್ದರೂ ಗೆಲುವು ಬಂದೇ ಬರುತ್ತದೆ. ಇದಕ್ಕೆ ಸಾಕ್ಷಿ ನೇಕಾರಿಕೆಯಲ್ಲಿ ಯಶಸ್ವಿಯಾಗಿರುವ ನುರುಪು ಸಂಸ್ಥೆ. ಇದಕ್ಕೆ ಕರ್ನಾಟಕದ ಪ್ರೇರಣೆಯಿದೆ. ಕರ್ನಾಟಕದ ಗಾಂಧಿ ಮಾದರಿಯಿಂದಲೇ ಪ್ರೇರಣೆಗೊಂಡ ತಮಿಳುನಾಡಿನ ಯುವಕ ಅಲ್ಲಿ ನೇಕಾರಿಕೆಯ ಮೂಲಕ ಯಶಸ್ಸಿನ ಹೆಜ್ಜೆ ಇಟ್ಟು ಉದ್ಯೋಗದಾತರೂ ಆಗಿರುವ ಪ್ರೇರಣದಾಯಕ ಯಶಸ್ಸಿನ ಕಥೆಯಿದು.

ಅವರ ಹೆಸರು ಶಿವಗುರು. ತಮಿಳುನಾಡಿನ ಎಲ್ಲ ಯುವಕರಂತೆ ಪದವಿ ಪಡೆದು ದೂರದ ಚೆನ್ನೈಗೆ ಕೆಲಸಕ್ಕೆ ಹೋದರು. ದುಡಿಮೆಯೇನೋ ಇತ್ತು. ಆದರೆ ಅದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಎಷ್ಟು ದಿನ ಅಂತ ಇದೇ ಕೆಲಸ ಮಾಡೋದು ಎನ್ನುವ ತೀರ್ಮಾನಕ್ಕೆ ಬಂದರು ಶಿವಗುರು.

ಸುಮಾರು ಎಂಟು ವರ್ಷದ ಹಿಂದಿನ ಮಾತು.ಶಿವಗುರು ಮಂಡ್ಯ ಜಿಲ್ಲೆ ಮೇಲುಕೋಟೆಗೆ ಬಂದರು. ಅಲ್ಲಿ ಗಾಂಧಿವಾದಿ ಸುರೇಂದ್ರ ಕೌಲಗಿ ಅವರು ನೇಯುವ ಚಟುವಟಿಕೆಗೆ ಉತ್ತೇಜನ ನೀಡಿದ್ದರು. ಅದರ ಮಾದರಿ ಶಿವಗುರು ಕಿವಿಗೆ ಬಿದ್ದು ಅದನ್ನು ನೋಡಿಕೊಂಡು ನಾನೂ ಏನಾದರೂ ಮಾಡಬೇಕು ಎಂದು ನಿರ್ಧರಿಸಿಯೇ ಬಂದಿದ್ದರು. ಚೆನೈನ ಒಂದು ಕಂಪನಿಯಲ್ಲಿ ಈತನಿಗೆ ಕೆಲಸ. ಮೇಲುಕೋಟೆ ಜನಪದ ಸೇವಾ ಟ್ರಸ್ಟ್‌ ಒಂದೆರಡು ದಿನ ಇದ್ದು ಇಲ್ಲಿನ ಕಾರ್ಯ ಚಟುವಟಿಕೆಗಳು, ವಿಚಾರ ಎಲ್ಲವನ್ನೂ ತಿಳಿದು ಪ್ರಭಾವಿತರಾದರು. ನಂತರ ಪದೇ ಪದೇ ನಮ್ಮಲ್ಲಿಗೆ ಬಂದು ಹೋಗ ತೊಡಗಿದರು.

ನೇಕಾರರು ಎದುರಿಸುತ್ತಿರುವ ಕಷ್ಟಗಳು ಮತ್ತು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳ ತೊಡಗಿದರು. ತಲೆತಲಾಂತರದಿಂದ ಬಂದಿರುವ ನೇಯ್ಗೆ ಕೌಶಲ್ಯ ಈ ತಲೆ ಮಾರಿನೊಂದಿಗೆ ಅಂತ್ಯ ಕಾಣುತ್ತಿರುವ ದುಸ್ಥಿತಿಯನ್ನು ನೆನೆದು ಅವರಿಗೆ ಆತಂಕ ಮತ್ತು ಬೇಸರ ಉಂಟಾಯಿತು. ಕೈ ಮಗ್ಗದ ಉಳಿವಿಗೆ ತಾನು ಏನಾದರೂ ಮಾಡ ಬೇಕೆಂದು ತೀರ್ಮಾನಿಸಿ, ಚೆನೈನ ಕೆಲಸ ಬಿಟ್ಟು ತಮ್ಮ ಹುಟ್ಟೂರಾದ ಈರೋಡ್ ಬಳಿಯ ಚಿನ್ನಮಲೈಗೆ ಹೋಗಿ ಬಿಟ್ಟರು.

ನೇಕಾರರ ಕುಟುಂಬದಿಂದ ಬಂದ ಶಿವಗುರು, ಸುರೇಂದ್ರ ಕೌಲಗಿ ಅವರು ಎಷ್ಟೋ ವರ್ಷಗಳ ಹಿಂದೆ ನೇಯ್ಗೆ ಮಾಡುತ್ತಿದ್ದ ಮಗ್ಗವನ್ನು ಮನೆಯ ಅಟ್ಟದಿಂದ ಕೆಳಗಿಳಿಸಿ, ಆರು ತಿಂಗಳಲ್ಲಿ ನೇಯ್ಗೆ ಕಲಿತು ಬಟ್ಟೆ ತಯಾರಿಸ ತೊಡಗಿದರು. ತನ್ನನ್ನು ಮದುವೆಯಾಗಿ ಬಂದ ರೂಪಶ್ರೀಯನ್ನೂ ನೇಯ್ಗೆಗೆ ಹಚ್ಚಿದರು. ತಾವು ತಯಾರಿಸಿದ ಬಟ್ಟೆಯನ್ನು ಗೆಳೆಯರ ಮೂಲಕ ತಮ್ಮ ಸಂಪರ್ಕದಲ್ಲಿ ಚೆನೈ ಮತ್ತು ಇತರ ನಗರಗಳಲ್ಲಿ ಮಾರ ತೊಡಗಿದರು.

ಹೀಗೆ ಒಂದೆರಡು ವರ್ಷ ಕಳೆಯಿತು ಕೆಲಸ ಕೈಬಿಟ್ಟಿದ್ದ ನೇಕಾರರು ಶಿವಗುರುವಿನಿಂದ ಪ್ರಭಾವಿತರಾಗಿ ಮತ್ತೆ ನೇಯ್ಗೆ ಮಾಡಲು ಬಂದರು. ಸುಮಾರು 12 ಜನ ನೇಕಾರರ ಗುಂಪಾಯಿತು. ಸೀರೆಗಳು, ಪಂಚೆ, ಅಂಗವಸ್ತ್ರ ಹೀಗೆ ಹಲವಾರು ಉತ್ಪನ್ನಗಳು ತಯಾರಿಸಿ ’ನುರುಪು’ ಹೆಸರಿನಲ್ಲಿ ಮಾರ ತೊಡಗಿದರು. ತಮಿಳಿನಲ್ಲಿ ನುರುಪು ಎಂದರೆ ನೂಲು.

ಈಗ ಮೊನ್ನೆ ಮುಂದಿನ ಹೆಜ್ಜೆಯಾಗಿ ಚಿನ್ನಮಲೈನಲ್ಲಿ ಗೆಳೆಯರ ನೆರವಿನಿಂದ ಒಂದು ಹಳೆಯ ಮನೆ ಖರೀದಿಸಿ ಅದನ್ನು ಬಹಳ ಸುಂದರವಾಗಿ ನವೀಕರಿಸಿ ಒಂದು ತರಬೇತಿ ಕೇಂದ್ರವನ್ನು ಸ್ಥಾಪಿಸಿ ನೇಕಾರರ ಮುಂದಿನ ಪೀಳಿಗೆಯನ್ನು ಕಟ್ಟುವ ಕೆಲಸವನ್ನು ಶಿವಗುರು ಕೈಗೊಂಡಿದ್ದಾರೆ.

ಅದರ ಉದ್ಘಾಟನೆಗೆ ಬರಲೇ ಬೇಕೆಂದು ಒತ್ತಾಯ ಪೂರ್ವಕವಾಗಿ ಆಹ್ವಾನ ನೀಡಿದ್ದರಿಂದ ಅವರ ಪ್ರೀತಿ ಮತ್ತು ವಿಶ್ವಾಸ ಕ್ಕೆ ಆಗದು ಎನ್ನಲಾಗದೆ ಹೋಗಿಬಂದರು ಸುರೇಂದ್ರ ಕೌಲಗಿ ಅವರ ಪುತ್ರ, ಇಂತಹ ಚಟುವಟಿಕೆಗಳಿಗೆ ಬೆಂಬಲವಾಗಿ ನಿಲ್ಲುವ ಸಂತೋಷ್‌ ಕೌಲಗಿ.

ಸುರೇಂದ್ರ ಕೌಲಗಿ ಮತ್ತು ಗಿರಿಜಾ ಕೌಲಗಿ ಅವರಿಂದ ಪ್ರಭಾವಿತರಾಗಿರುವ ಶಿವಗುರು ತರಬೇತಿ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಅವರಿಬ್ಬರ ಫೋಟೋ ಇಟ್ಟು ಅದಕ್ಕೆ ಪೂಜೆ ಮಾಡಿ ಉಧ್ಘಾಟನಾ ಕಾರ್ಯಕ್ರಮ ಪ್ರಾರಂಭಿಸಿದ್ದು ನನ್ನ ಕಣ್ಣಲ್ಲಿ ನೀರು ತಂದಿತು.ನಿಜವಾಗಿ ಗಾಂಧಿಯವರ ಮೆಚ್ಚಿನ ಕೆಲಸ ಮಾಡುತ್ತಿರುವ ಶಿವಗುರು, ರೂಪಶ್ರೀ ಗೆ ಒಳ್ಳೆಯದಾಗಲಿ ಎಂದು ಹರಸಿ ಬಂದೆ. ನೇಕಾರರಿಗೆ ಒಳ್ಳೆಯ ಕೂಲಿ ದೊರೆಯುವಂತೆ ಮಾಡಿ, ಅಸಲಿ ಕೈಮಗ್ಗ ದ ಬಟ್ಟೆಗಳನ್ನು ತಯಾರಿಸಿ ನ್ಯಾಯಯುತ ವ್ಯಾಪಾರ ಮಾಡುತ್ತಿರುವ ಶಿವಗುರು ಅವರ ನುರುಪು ಹ್ಯಾಂಡ್ಲೂಮ್ ನ ಬಟ್ಟೆಗಳು ಆನ್ ಲೈನ್ ನಲ್ಲೂ ಲಭ್ಯ. ಈ ಹಬ್ಬದ ದಿನಗಳ ಸಂದರ್ಭದಲ್ಲಿ ನುರುಪು ಬಟ್ಟೆ/ಸೀರೆ ಖರೀದಿಸುವ ಮೂಲಕ ಶಿವಗುರು ಅವರ ಈ ಸಾಹಸಕ್ಕೆ ನೀವೂ ಕೈ ಜೋಡಿಸ ಬಹುದು ಎಂದು ಸಂತೋಷ್‌ ಕೌಲಗಿ ಮನವಿ ಮಾಡುತ್ತಾರೆ.

ಮಾಹಿತಿಗೆ www.nurpu.in.

 

Whats_app_banner