Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೆನಪಿಗೆ ಬರಲಿದೆ ವಿಶಾಲ ಕನ್ನಡ ಭವನ
ಕನ್ನಡ ಸುದ್ದಿ  /  ಕರ್ನಾಟಕ  /  Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೆನಪಿಗೆ ಬರಲಿದೆ ವಿಶಾಲ ಕನ್ನಡ ಭವನ

Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೆನಪಿಗೆ ಬರಲಿದೆ ವಿಶಾಲ ಕನ್ನಡ ಭವನ

ಮಂಡ್ಯದಲ್ಲಿ ಈಗಷ್ಟೇ ಮುಕ್ತಾಯವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗೆ ವಿಶಾಲ ಕನ್ನಡ ಭವನ ನಿರ್ಮಿಸುವ ಯೋಜನೆಯನ್ನು ಸಾಹಿತ್ಯ ಸಮ್ಮೇಳನ ಸಮಿತಿ ಪ್ರಕಟಿಸಿದೆ.

ಮಂಡ್ಯ ಸಾಹಿತ್ಯ ಸಮ್ಮೇಳನದ ನೆನಪಿಗೆ ಕನ್ನಡ ಭವನ ನಿರ್ಮಿಸಲಾಗುತ್ತಿದೆ.
ಮಂಡ್ಯ ಸಾಹಿತ್ಯ ಸಮ್ಮೇಳನದ ನೆನಪಿಗೆ ಕನ್ನಡ ಭವನ ನಿರ್ಮಿಸಲಾಗುತ್ತಿದೆ.

ಮಂಡ್ಯ: ಮಂಡ್ಯದಲ್ಲಿ ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿಯೇ ನಡೆಯಿತು. ಅದರ ನೆನಪುಗಳು ಇನ್ನು ಗಾಢವಾಗಿಯೇ ಇದೆ. ಈ ನೆನಪುಗಳನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾಡಳಿತ, ಸಾಹಿತ್ಯ ಸಮ್ಮೇಳನ ಆಯೋಜನೆ ಸಮಿತಿಯು ಮಂಡ್ಯದಲ್ಲಿ ವಿಶಾಲ ಕನ್ನಡ ಭವನ ನಿರ್ಮಿಸುವ ಯೋಜನೆ ಹಾಕಿಕೊಂಡಿದೆ. ಕನ್ನಡ ಭವನದಲ್ಲಿ ನಿರಂತರ ಚಟುವಟಿಕೆಗಳನ್ನು ನಡೆಸಿ ಕನ್ನಡ ಅಭಿಮಾನಿಗಳಿಗೆ ಉತ್ತೇಜನ ನೀಡುವುದು. ಮಂಡ್ಯ ಸಾಹಿತ್ಯ ಸಮ್ಮೇಳನದ ನೆನಪುಗಳನ್ನು ಅಜರಾಮರಾವಾಗಿ ಉಳಿಸುವುದು ಇದರ ಹಿಂದೆ ಇರುವ ಉದ್ದೇಶ. ಇದಕ್ಕಾಗಿ ಸೂಕ್ತ ಸ್ಥಳಕ್ಕಾಗಿ ಹುಡುಕಾಟವನ್ನು ಮಂಡ್ಯ ಜಿಲ್ಲಾಡಳಿತ ಆರಂಭಿಸಲಿದೆ. ಮುಂದಿನ ವರ್ಷದ ಹೊತ್ತಿಗೆ ಕನ್ನಡ ಭವನ ಸಿದ್ದವಾಗಬಹುದು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ಣಗೊಂಡ ಬೆನ್ನಲ್ಲೇ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮಂಡ್ಯದಲ್ಲಿ ಕನ್ನಡ ಭವನ ಸ್ಥಾಪನೆಯ ಘೋಷಣೆ ಮಾಡಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಾರ್ಥವಾಗಿ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭವನವನ್ನು ನಿರ್ಮಾಣ ಮಾಡಲಾಗುವುದು. ಭವನದ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಹುಡುಕಿ ಶೀಘ್ರದಲ್ಲೇ ಶಂಕುಸ್ಥಾಪನೆಯನ್ನು ಕೈಗೊಳ್ಳಲಾಗುವುದು ಎನ್ನುವುದು ಅವರ ವಿವರಣೆ.

ನಾಡಿನಲ್ಲಿ ಇದುವರೆಗೂ ನಡೆದಿರುವ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 20 ಸಮ್ಮೇಳನದಲ್ಲಿ ಭಾಗವಹಿಸಿದ್ದು, ಬಹಳ ವ್ಯವಸ್ಥಿತ ಹಾಗೂ ಯಶಸ್ವಿಯಾಗಿ ನಡೆದ ಸಮ್ಮೇಳನವೆಂದರೆ ಅದು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಗೊ. ರು. ಚನ್ನಬಸಪ್ಪ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಸಕ್ಕರೆ ನಾಡು ಮಂಡ್ಯದಲ್ಲಿ ಜರುಗಿದ ಮೂರು ದಿನಗಳ ಅಕ್ಷರ ಜಾತ್ರೆ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಪ್ರತಿಯೊಬ್ಬರೂ ಪ್ರಾಮಾಣಿಕ ಹಾಗೂ ಜವಾಬ್ದಾರಿಯಿಂದ ಸಂಪೂರ್ಣವಾಗಿ ತೊಡಗಿಸಿಕೊಂಡು ಕೈಜೋಡಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಲಾಗಿದ್ದು, ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದವರು ಸಚಿವ ಎನ್ ಚಲುವರಾಯಸ್ವಾಮಿ.

ವಿದೇಶದ ಕನ್ನಡಿಗರ ಆಗಮನ

ಸಮ್ಮೇಳನವು ಬಹಳ ಶಿಸ್ತು ಬದ್ಧ ಹಾಗೂ ವ್ಯವಸ್ಥಿತವಾಗಿ ನಡೆಯಲು ಸಮ್ಮೇಳನದ ಕೆಲಸ ಕಾರ್ಯಗಳ ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೂ ಎಲ್ಲರೂ ಶ್ರಮಿಸಿದರು. ಸಾಂಘಿಕ ಪ್ರಯತ್ನದಿಂದ ಸಮ್ಮೇಳನ ಯಶಸ್ವಿಯಾಗಿ ಕನ್ನಡ ಗೆದ್ದಿದೆ. ಊಟದ ವ್ಯವಸ್ಥೆ, ವಸತಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ವಸ್ತು ಪ್ರದರ್ಶನ, ಮಳಿಗೆಗಳು, ಸ್ವಚ್ಛತೆ ಮತ್ತು ನೈರ್ಮಲ್ಯ, ವೇದಿಕೆ ಕಾರ್ಯಕ್ರಮಗಳು ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯು ಬಹಳ ಅಚ್ಚುಕಟ್ಟಾಗಿ ಜರುಗಿತು. ಸಮ್ಮೇಳನದ ಮೂರು ದಿನಗಳ ಕಾಲ ಸುಮಾರು 5 ರಿಂದ 6 ಲಕ್ಷ ಜನರು ಭಾಗವಹಿಸಿದ್ದು, ಜನರ ಪಾಲ್ಗೊಳ್ಳುವಿಕೆಯು ಸರೋವರದಂತಿತ್ತು.ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 18 ದೇಶಗಳಿಂದ 250 ವಿದೇಶಿ ಕನ್ನಡಿಗರು ಭಾಗವಹಿಸಿದ್ದು, ಅತ್ಯುತ್ತಮವಾಗಿ ಜರುಗಿದ ಸಮ್ಮೇಳನಕ್ಕೆ ವಿದೇಶಗಳಿಂದ ಪ್ರಸಂಶೆಗಳು ಬರುತ್ತಿವೆ ಎನ್ನುವುದು ಅವರ ವಿವರಣೆ.

ಸಮ್ಮೇಳನದಲ್ಲಿ 30ಕ್ಕೂ ಹೆಚ್ಚು ಗೋಷ್ಠಿಗಳು ಬಹಳ ಯಶಸ್ವಿಯಾಗಿ ನಡೆದಿವೆ. ಹೆಚ್ಚು ಪುಸ್ತಕ ಮಳಿಗೆ ಹಾಗೂ ಸಾಮಾನ್ಯ ಮಳಿಗೆಗಳು ಹಾಗೂ ವಸ್ತು ಪ್ರದರ್ಶನ ಮಳಿಗೆ ಸೇರಿದಂತೆ 450 ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ವೇದಿಕೆ ಕಾರ್ಯಕ್ರಮಗಳಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ರಸ ಸಂಜೆ, ಪೊಲೀಸ್ ಬ್ಯಾಂಡ್, ಜನಪದ ನೃತ್ಯ ಮುಂತಾದವು ಜನರ ಮೆಚ್ಚುಗೆಯನ್ನು ಪಡೆದಿವೆ. ಸಮ್ಮೇಳನ ನಡೆಯುವ ಕಡೆ ಮಾತ್ರ ಮಳೆ ಬಂದು ಹಾರೈಸಿರುವುದು ಸಂತೋಷದ ವಿಷಯವಾಗಿದೆ ಎಂದರು.

ಸಾಂಘಿಕ ಪ್ರಯತ್ನದ ಫಲ

ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿಗಳು ಕೂಡ ಸಮ್ಮೇಳನದ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಎಲ್ಲಾ ಸ್ಥಳೀಯ ಶಾಸಕರುಗಳು ಸಂಪೂರ್ಣವಾಗಿ ತೊಡಗಿಸಿಕೊಂಡು ಹೆಚ್ಚಿನ ಆಸಕ್ತಿ ವಹಿಸಿ ಸಹಕರಿಸಿದರು. ಪ್ರಪ್ರಥಮವಾಗಿ ಮಂಡ್ಯದಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಬಹಳ ವಿಜೃಂಭಣೆಯಿಂದ ಮಾಡಲಾಯಿತು. 30 ವರ್ಷಗಳ ನಂತರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಅವಕಾಶ ಜಿಲ್ಲೆಗೆ ಸಿಕ್ಕಿರುವುದು ಸೌಭಾಗ್ಯವಾಗಿದೆ. 87ನೇ ಸಮ್ಮೇಳನಕ್ಕೆ ರಾಜ್ಯದ ಅನೇಕ ಜಿಲ್ಲೆಯಿಂದ ಬಂದ ಸಾಹಿತಿಗಳು ಮತ್ತು ಕನ್ನಡ ಅಭಿಮಾನಿಗಳು ಬಹಳ ಸಂಭ್ರಮಿಸಿದ್ದಾರೆ ಎಂದು ಖುಷಿಯಾದರು ಚಲುವರಾಯಸ್ವಾಮಿ.

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್, ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ನ ಶೇಖ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಶುಗರ್ ಕಂಪನಿ ಅಧ್ಯಕ್ಷ ಸಿ. ಡಿ. ಗಂಗಾಧರ್, ಮುಡಾ ಅಧ್ಯಕ್ಷ ನಯೀಮ್, ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಸಂಚಾಲಕಿ ಡಾ ಮೀರಾಶಿವಲಿಂಗಯ್ಯ, ಗೌರವ ಕಾರ್ಯದರ್ಶಿ ಹರ್ಷ ಪಣ್ಣೆದೊಡ್ಡಿ ಸಹಿತ ಹಲವರು ಸಂತಸ ಹಂಚಿಕೊಂಡರು.

 

Whats_app_banner