ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ; ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಅಪಘಾತ, 3 ವರ್ಷದ ಮಗು ದುರ್ಮರಣ; ಈ ವರೆಗಿನ 5 ಮುಖ್ಯ ವಿದ್ಯಮಾನಗಳು
ಮಂಡ್ಯದ ಸ್ವರ್ಣಸಂದ್ರ ಬಳಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ತಡೆದ ದಂಡ ಹಾಕುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, 3 ವರ್ಷದ ಮಗು ದುರ್ಮರಣಕ್ಕೀಡಾಯಿತು. ಪೊಲೀಸರ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಈ ಸಂಬಂಧ ಇದುವರೆಗಿನ 5 ಮುಖ್ಯ ವಿದ್ಯಮಾನಗಳ ವಿವರ ಇಲ್ಲಿದೆ.

ಮಂಡ್ಯ: ಸ್ವರ್ಣಸಂದ್ರ ಸಮೀಪ ಟ್ರಾಫಿಕ್ ಪೊಲೀಸ್ ತಪಾಸಣೆ ವೇಳೆ ಪೊಲೀಸರ ನಿರ್ಲಕ್ಷ್ಯದ ಕಾರಣದಿಂದಾಗಿ 3 ವರ್ಷದ ಮಗು ಬೈಕ್‌ನಿಂದ ಕೆಳಗೆ ಬಿದ್ದು ಅಪಘಾತಕ್ಕೊಳಗಾಗಿ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆ ಮಂಡ್ಯದಿಂದ ವರದಿಯಾಗಿದೆ. ಇದರ ಬೆನ್ನಿಗೆ ಈ ಘಟನೆಯಲ್ಲಿ ಬೇವಜಾಬ್ದಾರಿ ವರ್ತನೆ ತೋರಿದ ಮೂವರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ ಘಟನೆಯೂ ನಡೆದಿದೆ. ವಾಹನ ತಪಾಸಣೆ ಕರ್ತವ್ಯದಲ್ಲಿದ್ದ ಪೊಲೀಸರ ಹೊಣೆಗೇಡಿತನದ ವರ್ತನೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ರಾಜಕೀಯವಾಗಿ ಕೂಡ ಗಮನಸೆಳೆದಿದೆ.
ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಅಪಘಾತ, 3 ವರ್ಷದ ಮಗು ದುರ್ಮರಣ
ಮಂಡ್ಯದ ಸ್ವರ್ಣಸಂದ್ರ ಬಳಿ ಸಂಚಾರ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದಾಗ, ಬೈಕ್‌ನಲ್ಲಿ ಬರುತ್ತಿದ್ದ ದಂಪತಿಯನ್ನು ತಡೆದಿದ್ದಾರೆ. ಆಗ ಬೈಕ್ ಸವಾರ ಏಕಾಕಿಯಾಗಿ ಬ್ರೇಕ್ ಹಾಕಿದ್ದು, ಎಲ್ಲರೂ ಆಯತಪ್ಪಿ ಕೆಳಬಿದ್ದ ವೇಳೆ 3 ವರ್ಷದ ಮಗು ರಸ್ತೆಗೆ ಬಿದ್ದ ವೇಳೆ ಸಂಭವಿಸಿದ ಅಪಘಾತಕ್ಕೆ ಬಲಿಯಾಗಿದೆ. ಇದರಿಂದ ನೊಂದ ಕುಟುಂಬದವರು ಮಗುವಿನ ಶವ ಹಿಡಿದುಕೊಂಡೇ ಪ್ರತಿಭಟನೆ ನಡೆಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆ ರಾಜಕೀಯವಾಗಿ ಕೂಡ ಗಮನಸೆಳೆದಿದ್ದು, ಪ್ರತಿಪಕ್ಷಗಳು ಸರ್ಕಾರವನ್ನು ಟೀಕಿಸಿವೆ.
ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ; ಇದುವರೆಗಿನ 5 ಮುಖ್ಯ ವಿದ್ಯಮಾನಗಳು
ಸಂಚಾರ ಪೊಲೀಸರ ತಪಾಸಣೆ ವೇಳೆ ದಿಢೀರ್ ಬೈಕ್ ಅಡ್ಡಗಟ್ಟಿದ ಪರಿಣಾಮ ಆಯತಪ್ಪಿ ಕೆಳಗೆ ಬಿದ್ದು ಮೂರು ವರ್ಷದ ಮಗು ದುರ್ಮರಣಕ್ಕೀಡಾದ ಮನಕಲಕುವ ಘಟನೆ ನಗರದ ಸ್ವರ್ಣಸಂದ್ರದ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ. ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದ ಅಶೋಕ್ ಮತ್ತು ವಾಣಿಶ್ರೀ ದಂಪತಿಯ ಪುತ್ರಿ ಹೃತಿಕ್ಷಾ (3) ಮೃತಪಟ್ಟ ಮಗು.
1) ಮಗು ಮೃತಪಟ್ಟದ್ದು ಹೇಗೆ?: ಸಂಚಾರ ಪೊಲೀಸರ ತಪಾಸಣೆ ವೇಳೆ ದಿಢೀರ್ ಬೈಕ್ ಅಡ್ಡಗಟ್ಟಿದ ಪರಿಣಾಮ ಆಯತಪ್ಪಿ ಕೆಳಗೆ ಬಿದ್ದು ಮೂರು ವರ್ಷದ ಮಗು ರಸ್ತೆಗೆ ಬಿದ್ದ ಸಂದರ್ಭದಲ್ಲಿ ಬೇರೆ ವಾಹನ ಮಗುವಿನ ಮೇಲೆ ಚಲಿಸಿದ ಪರಿಣಾಮ ದುರಂತ ಸಂಭವಿಸಿತು.
2) ಟ್ರಾಫಿಕ್ ಪೊಲೀಸರು ಏನು ಮಾಡಿದ್ರು?: ನಾಯಿ ಕಡಿತಕ್ಕೆ ಒಳಗಾಗಿದ್ದ ಬಾಲಕಿಯನ್ನು ತುರ್ತು ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ದಿಢೀರ್ ಅಡ್ಡಗಟ್ಟಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಅಶೋಕ್, ವಾಣಿಶ್ರೀ ಮತ್ತು ಮಗು ರಸ್ತೆಗೆ ಬಿದ್ದಿದ್ದರು. ಆಗ ಮಗುವಿನ ಮೇಲೆ ವಾಹನ ಚಲಿಸಿದ್ದರಿಂದ ದುರಂತ ಸಂಭವಿಸಿದ್ದು, ಅದಕ್ಕೆ ಪೊಲೀಸರೇ ಕಾರಣ ಎಂದು ಪ್ರತಿಭಟನೆ ನಡೆಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
3) ಮೂವರು ಪೊಲೀಸರ ಅಮಾನತು: ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದ ಸಂತ್ರಸ್ತ ಕುಟುಂಬ ಸದಸ್ಯರು ಮತ್ತು ಹಿತೈಷಿಗಳು ಹೆದ್ದಾರಿಯಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅವರು ಸ್ಥಳದಲ್ಲಿ ತಪಾಸಣೆ ಮಾಡಿದ್ದ ಮೂವರು ಎಎಸ್ಐಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದರು. ಜಯರಾಮ್, ನಾಗರಾಜ್, ಗುರುದೇವ್ ಅಮಾನತು ಶಿಕ್ಷೆಗೆ ಒಳಗಾದವರು.
4) ಅಪಘಾತ ಹೇಗಾಯಿತು: ಸೋಮವಾರ (ಮೇ 26) ಬೆಳಗ್ಗೆ 11 ಗಂಟೆ ಸುಮಾರಿಗೆ ಮಂಡ್ಯ ನಗರದ ಸ್ವರ್ಣಸಂದ್ರ ಹತ್ತಿರ ಮಂಡ್ಯ ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮತ್ತು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದ ವಾಹನ ಸವಾರರನ್ನು ಪರಿಶೀಲಿಸುತ್ತಿದ್ದರು. ಆಗ, ಮದ್ದೂರು ತಾಲೂಕಿನ ದಂಪತಿ ತಮ್ಮ ಮಗುವಿಗೆ ನಾಯಿ ಕಚ್ಚಿದೆ. ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಅವರನ್ನು ಪೊಲೀಸರು ಬಿಟ್ಟ ಬಳಿಕ ಹೊರಡುವಾಗ ಇನ್ನೊಂದು ವಾಹನ ಇವರಿದ್ದ ಬೈಕ್‌ಗೆ ಟಚ್ ಆಗಿದೆ. ಹೀಗಾಗಿ ಅವರು ಆಯತಪ್ಪಿ ಬಿದ್ದರು. ಆಗ ಹಿಂದಿನಿಂದ ಬಂದ ಲಾರಿಯೊಂದು ಮಗುವಿನ ಮೇಲೆ ಹರಿದು ಹೋಗಿದೆ. ಗಂಭೀರ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸಿದಾಗ, ಮಗು ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗಾರರಿಗೆ ತಿಳಿಸಿದರು.
5) ಪರಿಹಾರಕ್ಕೆ ವಿಪಕ್ಷ ನಾಯಕ ಆಗ್ರಹ: ಪೊಲೀಸರ ನಿರ್ಲಕ್ಷ್ಯದ ಕಾರಣ ಮಗುವಿನ ಸಾವು ಸಂಭವಿಸಿದೆ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಇಲ್ಲದೇ ಇರುವುದೇ ಇದಕ್ಕೆ ಕಾರಣ. ತಪಾಸಣೆ ಹೆಸರಲ್ಲಿ ರಸ್ತೆಯಲ್ಲಿ ಏಕಾಕಿಯಾಗಿ ವಾಹನ ನಿಲ್ಲಿಸುವ ಪೊಲೀಸರ ಪ್ರವೃತ್ತಿಯೇ ಈ ರಸ್ತೆ ಅಪಘಾತಕ್ಕೆ ಕಾರಣ. ಪೊಲೀಸರ ಕೈ ತಗುಲಿ ಮಗು ಬಿದ್ದಿದೆ ಎಂಬ ಮಾಹಿತಿ ಬಂದಿದ್ದು, ರಾಜ್ಯ ಸರ್ಕಾರ ಮಗುವಿನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಅಗ್ರಹಿಸಿದರು.