Mangala gowri Vrat 2022: ಪತಿಯ ದೀರ್ಘಾಯುಷ್ಯಕ್ಕಾಗಿ ಮಂಗಳಗೌರಿ ವ್ರತ; ಈ ವ್ರತದ ಆಚರಣೆ ಹೇಗೆ? ಯಾರು ವ್ರತ ಪಾಲಿಸಬೇಕು? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ಜುಲೈ 29ರಿಂದ ಆರಂಭವಾಗುವ ಶ್ರಾವಣ ಮಾಸದ ಎರಡನೇ ಮಂಗಳ ಗೌರಿ ವ್ರತವನ್ನು ಆಗಸ್ಟ್ 2ರ ಮಂಗಳವಾರ ಆಚರಿಸಲಾಗುತ್ತಿದೆ. ಅವಿವಾಹಿತ ಯುವತಿಯರು ಮತ್ತು ವಿವಾಹಿತ ಮಹಿಳೆಯರಿಗೆ ಈ ಉಪವಾಸ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ವ್ರತದ ವಿಶೇಷತೆ ಏನು? ಇಲ್ಲಿದೆ ಮಾಹಿತಿ.
ಕರ್ನಾಟಕದಲ್ಲಿ ಜುಲೈ 29ರಿಂದ ಆರಂಭವಾಗುವ ಶ್ರಾವಣ ಮಾಸದ ಎರಡನೇ ಮಂಗಳ ಗೌರಿ ವ್ರತವನ್ನು ಆಗಸ್ಟ್ 2ರ ಮಂಗಳವಾರ ಆಚರಿಸಲಾಗುತ್ತಿದೆ. ಅವಿವಾಹಿತ ಯುವತಿಯರು ಮತ್ತು ವಿವಾಹಿತ ಮಹಿಳೆಯರಿಗೆ ಈ ಉಪವಾಸ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯುವತಿಯರಿಗೆ ಬಯಸಿದ ಸಂಗಾತಿ ಸಿಗುವ ಯೋಗ ಈ ವ್ರತದಿಂದ ಸಿಗುತ್ತದೆ ಎಂಬ ನಂಬಿಕೆ ಇದೆ. ವಿವಾಹಿತ ಮಹಿಳೆಯರಿಗೆ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಮತ್ತು ಸಂತೋಷದ ದಾಂಪತ್ಯ ಜೀವನಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ. ತಾಯಿ ಪಾರ್ವತಿಗೆ ಅರ್ಪಿಸುವ ಈ ದಿನವನ್ನು ಅಷ್ಟೇ ವಿಶೇಷವಾಗಿ ನಾಲ್ಕು ಮಂಗಳವಾರ ಆಚರಿಸಲಾಗುತ್ತದೆ. ಹಾಗಾದರೆ ಈ ವ್ರತದ ವಿಶೇಷತೆ ಏನು? ಇಲ್ಲಿದೆ ಮಾಹಿತಿ.
ಮಂಗಳಗೌರಿ ಪೂಜಾ ಮತ್ತು ಉಪವಾಸ ಕ್ರಮ ಹೇಗೆ?
ಮಂಗಳಗೌರಿ ವ್ರತದ ದಿನ ಬೆಳಗ್ಗೆ ಬೇಗ ಸ್ನಾನ ಮಾಡಿ, ಸಾಧ್ಯವಾದರೆ ಕೆಂಪು ಅಥವಾ ಹಸಿರು ಬಟ್ಟೆಗಳನ್ನು ಧರಿಸಬೇಕು. ಉಪವಾಸ ಆಚರಣೆ ಮಾಡುತ್ತಿದ್ದರೆ, ಶಿವ ಮತ್ತು ಪಾರ್ವತಿಯ ಮುಂದೆ ಕೈಜೋಡಿಸಿ ಉಪವಾಸದ ಪ್ರತಿಜ್ಞೆ ಮಾಡಬೇಕು. ಮಂಗಳಕರ ಸಮಯದಲ್ಲಿ ಮಂಗಳಗೌರಿ ವಿಗ್ರಹವನ್ನು ಅಥವಾ ಪಾರ್ವತಿಯ ಫೋಟೋ ಪ್ರತಿಷ್ಠಾಪಿಸಿ ಪೂಜಿಸಬೇಕು. ಕೆಲವರು ಜೇಡಿ ಮಣ್ಣಿನಿಂದ ಗೌರಿ ಪ್ರತಿಮೆ ಮಾಡಿ ಪ್ರತಿಷ್ಠಾಪಿಸುತ್ತಾರೆ. ಪಕ್ಕದಲ್ಲಿಯೇ ಗಣೇಶನ ವಿಗ್ರಹವಿಟ್ಟು, ಅದಕ್ಕೂ ಪೂಜೆ ಸಲ್ಲಿಸಬೇಕು.
ಈ ಪೂಜೆಗೂ ಮುನ್ನ ಕಲಶ, ಬೆಲ್ಲ, ಅಕ್ಕಿಹೂವಿನ ಮಾಲೆ ಅಥವಾ ಹತ್ತಿಯ ಹಾರ, ಕೆಂಪು ಬಣ್ಣದ ಹೂವುಗಳು, 5 ತೆಂಗಿನಕಾಯಿಗಳು, ತ್ರಿಕೋನಾಕಾರದಲ್ಲಿ ಮಡಚಲ್ಪಟ್ಟ ಬಟ್ಟೆ, ವಿವಿಧ ಜಾತಿಯ ಒಂದಿಷ್ಟು ಫಲಗಳು, ಗೌರಿ ಬಳೆ, ಹಸಿರು ಬಳೆ ಮತ್ತು ಹಸಿರು ಬಣ್ಣದ ರವಿಕೆ ಬಟ್ಟೆ, ಅರಶಿಣ, ಕುಂಕುಮವನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.
ನೀರು ತುಂಬಿರುವ ಕುಂಭ ಪ್ರತಿಷ್ಠಾಪಿಸಿ, ವೀಳ್ಯದೆಲೆ ಇಟ್ಟು, ಅದರ ಮೇಲೆ ತೆಂಗಿನ ಕಾಯಿ ಕೂರಿಸಿ, ಬೆಳ್ಳಿಯ ತಾಯಿ ಪಾರ್ವತಿಯ ಮುಖ ಹಾಕಿ, ಅಲಂಕರಿಸಿಯೂ ಪೂಜೆ ಮಾಡುವ ಪದ್ಧತಿ ಇದೆ. ಪಾರ್ವತಿಗೆ ಕೆಂಪು ಬಳೆಗಳು, ಅರಿಶಿಣ, ಕುಂಕುಮ, ಅಕ್ಷತೆ ಅರ್ಪಿಸಬೇಕು. ಜೇನುತುಪ್ಪ, ಹಣ್ಣುಗಳು ಮತ್ತು ಸಿಹಿತಿಂಡಿ ನೈವೇದ್ಯ ಮಾಡಬೇಕು. ಬಳಿಕ ಮಂಗಳಗೌರಿ ವೃತದ ಪುಸ್ತಕ ಪಠಣೆ ಮಾಡಬೇಕು. ಸರ್ವಮಂಗಳ ಮಾಂಗಲ್ಯೇ, ಶಿವೇ ಸರ್ವಾರ್ಥ ಸಾಧಿಕೆ, ಶರಣೇ ತ್ರಿಯಂಬಿಕೆ ಗೌರಿ ನಾರಾಯಣಿ ನಮೋಸ್ತ್ ಮಂತ್ರ ಪಠಣ ಮಾಡಿ ಇಡೀ ದಿನ ನಿರಾಹಾರಿಯಾಗಿ ಉಪವಾಸ ಮಾಡಿ ಸಂಜೆ ಉಪವಾಸ ಮುರಿಯಬೇಕು.
ಕರುನಾಡಿನಲ್ಲಿ ಮಂಗಳಗೌರಿ ವ್ರತದ ದಿನಾಂಕಗಳು
ರಾಜ್ಯದಲ್ಲಿ ಜುಲೈ 29ರಿಂದ ಶ್ರಾವಣ ಮಾಸ ಆರಂಭವಾಗಿದೆ. ಆಗಸ್ಟ್ 27ಕ್ಕೆ ಶ್ರಾವಣ ಕೊನೆಗೊಳ್ಳಲಿದೆ. ಈ ಒಂದು ತಿಂಗಳ ಅವಧಿಯಲ್ಲಿ ಒಟ್ಟು ನಾಲ್ಕು ಮಂಗಳವಾರ ಬರಲಿದ್ದು, ಆ ಶುಭ ದಿನದಂದು ಮಂಗಳಗೌರಿ ವೃತ ಆಚರಣೆ ಮಾಡಲಾಗುತ್ತದೆ. ಆ ನಾಲ್ಕು ಮಂಗಳವಾರಗಳ ಮಾಹಿತಿ ಇಲ್ಲಿದೆ. ಆಗಸ್ಟ್ 2ರಂದು ಮೊದಲ ಮಂಗಳವಾರದ ಮಂಗಳಗೌರಿ ವೃತ ಆರಂಭವಾಗಲಿದೆ. ಆಗಸ್ಟ್ 9 ಎರಡನೇ ಮಂಗಳ ಗೌರಿ ವ್ರತ, ಆಗಸ್ಟ್ 16ರಂದು ಮೂರನೇ ಮಂಗಳ ಗೌರಿ ವ್ರತ, ಆಗಸ್ಟ್ 23ರಂದು ಮಂಗಳವಾರ ನಾಲ್ಕನೇ ಮಂಗಳ ಗೌರಿ ವ್ರತ ಮತ್ತು ಶ್ರಾವಣ ಮಾಸದ ಕೊನೆಯ ಮಂಗಳವಾರವಾಗಿದ್ದು, ಮಹಾಪೂಜೆ ನಡೆಯಲಿದೆ.