Mangalore auto rickshaw blast: ಮಂಗಳೂರು ಆಟೋರಿಕ್ಷಾದಲ್ಲಿ ಸ್ಫೋಟ, ಪತ್ತೆಯಾದ ಹುಬ್ಬಳ್ಳಿಯ ಪ್ರೇಮ್‌ರಾಜ್ ಹೆಸರಿನ ಆಧಾರ್ ನಕಲಿ
ಆಟೋ ರಿಕ್ಷಾದಲ್ಲಿ ಪತ್ತೆಯಾಗಿರುವ ಆಧಾರ್ ಕಾರ್ಡ್ ಹುಬ್ಬಳ್ಳಿಯ ಕೇಶ್ವಾಪುರದ ಮುಧುರಾ ಕಾಲೋನಿ ನಿವಾಸಿಯದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರೇಮ್‌ರಾಜ್ ಹೆಸರಿನಲ್ಲಿರುವ ಈ ಆಧಾರ್ ಕಾರ್ಡ್ ಕೆಲವು ತಿಂಗಳ ಹಿಂದೆ ಕಳೆದು ಹೋಗಿತ್ತಂತೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನಾಗೂರಿಯಲ್ಲಿ ನಿನ್ನೆ ಆಟೋ ರಿಕ್ಷಾದಲ್ಲಿ ಸಂಭವಿಸಿದ ನಿಗೂಢ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದೇ ಸಮಯದಲ್ಲಿ ನಿನ್ನೆ ಕುಕ್ಕರ್ ಬಾಂಬ್ ಸ್ಪೋಟಗೊಂಡ ರಿಕ್ಷಾದಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ನಕಲಿ ಎನ್ನುವುದು ತಿಳಿದುಬಂದಿದೆ.
ಟ್ರೆಂಡಿಂಗ್ ಸುದ್ದಿ
ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯು ನಕಲಿ ಆಧಾರ್ ಕಾರ್ಡ್ ಬಳಸಿದ್ದ ಎನ್ನಲಾಗುತ್ತಿದೆ. ಆಟೋ ರಿಕ್ಷಾದಲ್ಲಿ ಪತ್ತೆಯಾಗಿರುವ ಆಧಾರ್ ಕಾರ್ಡ್ ಹುಬ್ಬಳ್ಳಿಯ ಕೇಶ್ವಾಪುರದ ಮುಧುರಾ ಕಾಲೋನಿ ನಿವಾಸಿಯದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರೇಮ್‌ರಾಜ್ ಹೆಸರಿನಲ್ಲಿರುವ ಈ ಆಧಾರ್ ಕಾರ್ಡ್ ಕೆಲವು ತಿಂಗಳ ಹಿಂದೆ ಕಳೆದು ಹೋಗಿತ್ತು. ಈ ಆಧಾರ್ ಕಾರ್ಡ್ ಅನ್ನು ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ್ದ ವ್ಯಕ್ತಿ ಬಳಸಿದ್ದಾನೆ ಎಂದು ತಿಳಿದುಬಂದಿದೆ.
ಪ್ರೇಮ್‌ಕುಮಾರ್ ಉತ್ತರ ಭಾರತದವನು ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಇದೀಗ ಆಧಾರ್ ಕಾರ್ಡ್ ವಿಳಾಸದ ಆಧಾರದಲ್ಲಿ ಪ್ರೇಮ್‌ಕುಮಾರ್ ಹುಬ್ಬಳ್ಳಿಯವನು ಎಂದು ತಿಳಿದುಬಂದಿದೆ. ಅಸಲಿ ಪ್ರೇಮ್‌ಕುಮಾರ್ ಈ ಪ್ರಕರಣದಲ್ಲಿ ಅಮಾಯಕ ಎಂದು ಆತನ ಕುಟುಂಬದವರು ಹೇಳಿದ್ದಾರೆ. ಪ್ರೇಮ್ ಕುಮಾರ್ ಎಂಬಾತನ ಆಧಾರ್ ಕಾರ್ಡ್ ಬಳಸಲಾಗಿದೆ ಎನ್ನಲಾಗುತ್ತಿದೆ.
"ಈ ಪ್ರಕರಣಕ್ಕೂ ನನ್ನ ಮಗನಿಗೂ ಸಂಬಂಧವಿಲ್ಲ. ನನ್ನ ಮಗ ಈ ಹಿಂದೆ ಹಾವೇರಿಯಲ್ಲಿ ಶಿಕ್ಷಕರ ಹುದ್ದೆ ಪರೀಕ್ಷೆಗೆ ಹೋಗಿದ್ದಾಗ ಆಧಾರ್ ಕಾರ್ಡ್ ಕಳೆದುಕೊಂಡಿದ್ದಾನೆ. ನನ್ನ ಮಗನಿಗೂ ಈ ಘಟನೆಗೂ ಸಂಬಂಧವಿಲ್ಲ. ಆತನಿಗೆ ಆಧಾರ್ ಕಾರ್ಡ್ ಕಳೆದುಕೊಂಡಿರುವ ಕುರಿತು ದೂರು ನೀಡು ಎಂದು ಸಲಹೆ ನೀಡಿದ್ದೆ. ಪೊಲೀಸರು ಕೇಳಿರುವ ಮಾಹಿತಿಗಳನ್ನು ಹಂಚಿಕೊಂಡಿದ್ದೇವೆ. ತುಮಕೂರಿನಲ್ಲಿ ನನ್ನ ಮಗನ ವಿಚಾರಣೆ ನಡೆಸಲಾಗಿದೆʼʼ ಎಂದು ಪ್ರೇಮ್‌ಕುಮಾರ್ ತಂದೆ ಮಾರುತಿ ಹುಟಗಿ ಹೇಳಿದ್ದಾರೆ.
ಪ್ರೇಮ್‌ರಾಜ್ ಅವರು ರೈಲ್ವೆಯ ಡಿ ಗ್ರೂಪ್ ನೌಕರನಾಗಿದ್ದಾರೆ. ತುಮಕೂರಿನಲ್ಲಿ ಟ್ರ್ಯಾಕ್ ಮೆಂಟೇನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಶಿಕ್ಷಕರ ಹುದ್ದೆ ಪರೀಕ್ಷೆ ಬರೆದು ಅದರಲ್ಲಿಯೂ ಉತ್ತೀರ್ಣರಾಗಿದ್ದಾರೆ. ಆರು ತಿಂಗಳ ಹಿಂದೆ ಇವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹಾವೇರಿಗೆ ಹೋಗಿರುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು ಎನ್ನುವುದು ತಿಳಿದುಬಂದಿದೆ.
ಆರಂಭದಲ್ಲಿ ಮಂಗಳೂರು ಆಟೋ ರಿಕ್ಷಾ ಸ್ಪೋಟದಲ್ಲಿ ಪ್ರೇಮ್‌ಕುಮಾರ್ ಹೆಸರು ಕೇಳಿ ಬಂದಾಗ ಕುಟುಂಬಸ್ಥರು ದಿಗಿಲುಗೊಂಡಿದ್ದರು. ಪ್ರೇಮ್‌ಕುಮಾರ್ ತಾಯಿ ರೇಣುಕಾ ಆತಂಕಗೊಂಡಿದ್ದರು. ಬಳಿಕ ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿದೆ.
ಆಟೋ ರಿಕ್ಷಾದಲ್ಲಿದ್ದ ವ್ಯಕ್ತಿ ಹಿಂದಿಯಲ್ಲಿ ಮಾತನಾಡುತ್ತಿದ್ದ. ಆತನು ಪ್ರೇಮ್‌ಕುಮಾರ್‌ನ ಆಧಾರ್ ಕಾರ್ಡ್ ಬಳಸಿರಬಹುದು ಅಥವಾ ಆ ಆಧಾರ್ ಕಾರ್ಡ್‌ಗೆ ತನ್ನ ಫೋಟೊ ಬಳಸಿರಬಹುದು ಎನ್ನಲಾಗುತ್ತಿದೆ.
ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ಆ ಪ್ರಯಾಣಿಕನು ಉತ್ತರ ಭಾರತೀಯ ಆಗಿರಬಹುದು ಎಂದು ಶಂಕಿಸಲಾಗಿದೆ. ರಸ್ತೆಯಲ್ಲಿ ಚಲಿಸುವಾಗ ವಾಹನ ಕುಲುಕಿದಾಗ ಬ್ಯಾಗ್‌ನಲ್ಲಿದ್ದ ಸ್ಫೋಟಕ ವಯರ್‌ಗಳು ಸಂಪರ್ಕಕ್ಕೆ ಬಂದು ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಬಳಿಕ ಭಾರೀ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿದೆ.
ಈ ಘಟನೆಯಿಂದ ಆಟೋ ಚಾಲಕ ಮತ್ತು ಪ್ರಯಾಣಿಕ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಮಂಗಳೂರು ಪೊಲೀಸರು ಈಗಾಗಲೇ ಕೇಂದ್ರ ಗುಪ್ತಚರ ಮತ್ತು ಎನ್‌ಐಎ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.
ಸ್ಫೋಟಗೊಂಡ ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ಅದರಲ್ಲಿ ಬೋಲ್ಟ್ ನಟ್‌ಗಳು, ವಯರ್‌ಗಳು, ವಿದ್ಯುನ್ಮಾನ ಉಪಕರಣಗಳು ಪತ್ತೆಯಾಗಿವೆ. ಇವುಗಲನ್ನು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದಾರೆ.
ಮಂಗಳೂರಿನ ಆಟೋ ರಿಕ್ಷಾ ಸ್ಫೋಟ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಇದೊಂದು, ಭಯೋತ್ಪಾದನೆ ಸಂಬಂಧಿತ ಘಟನೆಯಾಗಿದ್ದು ರಾಜ್ಯ ಪೊಲೀಸರ ಜೊತೆ, ಕೇಂದ್ರ ತನಿಖಾ ತಂಡಗಳೂ ಕೈ ಜೋಡಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಸ್ಫೋಟವು ಆಕಸ್ಮಿಕವಲ್ಲ. ಇದು 'ಭಯೋತ್ಪಾದನಾ ಕೃತ್ಯ' ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದೂ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.