Mangalore Auto Blast: ಮಂಗಳೂರು ಆಟೋ ಸ್ಫೋಟ, ಶಂಕಿತನ ವಶಕ್ಕೆ ಪಡೆದ ಪೊಲೀಸರು, ಕರಾವಳಿಯಲ್ಲಿ ಮತ್ತೆ ಉಗ್ರರ ಕರಿನೆರಳು
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಗರೋಡಿ ಬಳಿ ಆಟೋ ರಿಕ್ಷಾದಲ್ಲಿ ನಿನ್ನೆ ನಡೆದ ನಿಗೂಢ ಸ್ಫೋಟಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ತೀವ್ರಗಗೊಳಿಸಿದ್ದಾರೆ. ತುರ್ತು ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಒಬ್ಬ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಗರೋಡಿ ಬಳಿ ಆಟೋ ರಿಕ್ಷಾದಲ್ಲಿ ನಿನ್ನೆ ನಡೆದ ನಿಗೂಢ ಸ್ಫೋಟಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ತೀವ್ರಗಗೊಳಿಸಿದ್ದಾರೆ. ತುರ್ತು ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಒಬ್ಬ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟ್ರೆಂಡಿಂಗ್ ಸುದ್ದಿ
ಮಂಗಳೂರು ನಿಗೂಢ ಸ್ಫೋಟಕ್ಕೆ ಸಂಬಂಧಿಸಿದಂತೆ ಮೈಸೂರಲ್ಲಿ ಒಬ್ಬನನ್ನ ವಶಕ್ಕೆ ಪಡೆಯಲಾಗಿದೆ ಅಂತ ಹೇಳಲಾಗುತ್ತಿದೆ. ಶಂಕಿತ ಭಯೋತ್ಪಾದಕನಿಗೆ ಮೊಬೈಲ್ ನೀಡಿದ ವ್ಯಕ್ತಿಯನ್ನ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಮೇಟಗಳ್ಳಿ ಪೊಲೀಸರಿಂದ ಶಂಕಿತನ ಸ್ನೇಹಿತನನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ನಿನ್ನೆ ಮಂಗಳೂರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದ್ದು, ಆ ದಿನವೇ ಮಂಗಳೂರಿನಲ್ಲಿ ಬಾಂಬ್ ಸ್ಪೋಟ ನಡೆಸಲು ಹುನ್ನಾರ ನಡೆಸಲಾಗಿತ್ತು ಎನ್ನುವ ಶಂಕೆಯೂ ವ್ಯಕ್ತವಾಗಿದೆ. ಸ್ಫೋಟಕವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಮಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಅದನ್ನು ಸ್ಫೋಟಿಸಲು ಸಂಚು ರೂಪಿಸಲಾಗಿತ್ತು ಎನ್ನುವ ಸಂದೇಹ ವ್ಯಕ್ತವಾಗಿದೆ.
ಆಟೋದಲ್ಲಿ ಪ್ರಯಾಣಿಕನಾಗಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಹೆಸರನ್ನು ಪ್ರೇಮ್ ಕುಮಾರ್ ಕನೋಗಿ ಎಂದು ಗುರುತಿಸಲಾಗಿದೆ. ಆದರೆ, ಈತನ ಬಳಿ ಇರುವ ಎಲ್ಲಾ ದಾಖಲೆಗಳು ನಕಲಿ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ತನ್ನ ಪುತ್ರನ ಆಧಾರ್ ಮತ್ತು ಇತರೆ ದಾಖಲೆಗಳು ಕಳವಾಗಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ, ಕಾಣೆಯಾದ ಆಧಾರ್ ಮತ್ತು ಇತರೆ ದಾಖಲೆಪತ್ರಗಳನ್ನು ಈ ವ್ಯಕ್ತಿಯು ಬಳಸಿರಬಹುದು ಮತ್ತು ತನ್ನ ಫೋಟೊವನ್ನು ಆಧಾರ್ ಕಾರ್ಡ್‌ಗೆ ಅಂಟಿಸಿರಬಹುದು ಎನ್ನಲಾಗುತ್ತಿದೆ.
ಹಿಂದಿ ಭಾಷೆಯಲ್ಲಿ ಮಾತನಾಡುವ ಈ ವ್ಯಕ್ತಿಯು ಉತ್ತರ ಭಾರತೀಯ ಆಗಿರಬಹುದು ಎಂದು ಶಂಕಿಸಲಾಗಿದೆ. ರಸ್ತೆಯಲ್ಲಿ ಚಲಿಸುವಾಗ ವಾಹನ ಕುಲಿಕಿದಾಗ ಬ್ಯಾಗ್‌ನಲ್ಲಿದ್ದ ಸ್ಫೋಟಕ ವಯರ್‌ಗಳು ಸಂಪರ್ಕಕ್ಕೆ ಬಂದು ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಬಳಿಕ ಭಾರೀ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿದೆ.
ಈ ಘಟನೆಯಿಂದ ಆಟೋ ಚಾಲಕ ಮತ್ತು ಪ್ರಯಾಣಿಕ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಮಂಗಳೂರು ಪೊಲೀಸರು ಈಗಾಗಲೇ ಕೇಂದ್ರ ಗುಪ್ತಚರ ಮತ್ತು ಎನ್‌ಐಎ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.
ಸ್ಫೋಟಗೊಂಡ ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ಅದರಲ್ಲಿ ಬೋಲ್ಟ್ ನಟ್‌ಗಳು, ವಯರ್‌ಗಳು, ವಿದ್ಯುನ್ಮಾನ ಉಪಕರಣಗಳು ಪತ್ತೆಯಾಗಿವೆ. ಇವುಗಲನ್ನು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದಾರೆ.
ಮಂಗಳೂರಿನ ಆಟೋ ರಿಕ್ಷಾ ಸ್ಫೋಟ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಇದೊಂದು, ಭಯೋತ್ಪಾದನೆ ಸಂಬಂಧಿತ ಘಟನೆಯಾಗಿದ್ದು ರಾಜ್ಯ ಪೊಲೀಸರ ಜೊತೆ, ಕೇಂದ್ರ ತನಿಖಾ ತಂಡಗಳೂ ಕೈ ಜೋಡಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಸ್ಫೋಟವು ಆಕಸ್ಮಿಕವಲ್ಲ. ಇದು 'ಭಯೋತ್ಪಾದನಾ ಕೃತ್ಯ' ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದೂ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿ ಈ ಹಿಂದೆ ಬಾಂಬ್ ಬೆದರಿಕೆ ಘಟನೆಯೊಂದು ನಡೆದಿತ್ತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಸಿಕ ರೋಗಿ ಆದಿತ್ಯ ರಾವ್ ಎಂಬಾತನನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ಆಟೋದಲ್ಲಿ ಬಂದ ವ್ಯಕ್ತಿಯೊಬ್ಬ ಬಾಂಬ್ ಇಟ್ಟಿರುವುದು ತಿಳಿದುಬಂದಿತ್ತು. ಬಳಿಕ ಆ ವ್ಯಕ್ತಿ ಆದಿತ್ಯ ರಾವ್ ಎಂದು ತಿಳಿದುಬಂದು ಆತನನ್ನು ಬಂಧಿಸಲಾಗಿತ್ತು.
2020, ಜನವರಿ 20ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆದಿತ್ಯ ರಾವ್ ದೋಷಿ ಎಂದಿರುವ ಸ್ಥಳೀಯ ನ್ಯಾಯಾಲಯ, ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು.