ಮಂಗಳೂರು ಬೆಂಗಳೂರು ಹೆದ್ದಾರಿಯ ಪೆರಿಯಶಾಂತಿಯಲ್ಲಿ ಕಾರು-ಆಟೋ ಡಿಕ್ಕಿ: ಆಟೋ ಚಾಲಕ ಸ್ಥಳದಲ್ಲೇ ದುರ್ಮರಣ
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ವಾಲ್ತಾಜೆ ಸೇತುವೆ ಬಳಿ ಕಾರು ಹಾಗೂ ಆಟೋರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟಿದ್ದಾನೆ.

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿಯ ಸಮೀಪ ವಾಲ್ತಾಜೆ ಸೇತುವೆ ಬಳಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋರಿಕ್ಷಾ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಈ ಭೀಕರ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನ ಅಡ್ಡಹೊಳೆ ಸಮೀಪದ ಪೇರಮಜಲು ನಿವಾಸಿ ಪ್ರಭಾಕರ(40 ವ.) ಎಂದು ಗುರುತಿಸಲಾಗಿದೆ. ನೆಲ್ಯಾಡಿಯಿಂದ ಗುಂಡ್ಯ ಕಡೆಗೆ ತೆರಳುತ್ತಿದ್ದ ಆಟೋಕ್ಕೆ, ಬೆಂಗಳೂರಿನಿಂದ ಉಪ್ಪಿನಂಗಡಿಯತ್ತ ಬರುತ್ತಿದ್ದ ಕಾರು ಡಿಕ್ಕಿಯಾದ ಪರಿಣಾಮ ಆಟೋ ಚಾಲಕ ರಸ್ತೆ ಮೇಲೆಯೇ ಎಸೆಯಲ್ಪಟ್ಟಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಪತ್ನಿ, ಗಂಡು ಮತ್ತು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮಂಗಳೂರು ಭಾಗದಲ್ಲಿ ಭಾನುವಾರ ಸಂಜೆಯಿಂದ ಮಳೆಯಾಗುತ್ತಿತ್ತು. ಈ ವೇಳೆ ಆಟೋ ರಿಕ್ಷಾ ಬರುವಾಗ ಕಾರು ಎದುರಿನಿಂದ ಬಂದು ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಆಟೋ ರಿಕ್ಷಾ ಗೋಡೆಗೆ ಗುದ್ದಿದೆ. ಈ ವೇಳೆ ಆಟೋ ಚಾಲಕ ಮೃತಪಟ್ಟಿದ್ದಾನೆ. ಆಟೋ ರಿಕ್ಷಾ ಜಖಂಗೊಂಡಿದೆ. ಅಲ್ಲದೇ ಕಾರಿನ ಒಂದು ಭಾಗವೂ ಜಖಂಗೊಂಡಿದೆ. ಕಾರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ವಿಚಾರಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.