Mangalore Blast Case: ಕರಾವಳಿಯ ಪ್ರಮುಖ ದೇಗುಲಗಳು ಶಾರೀಕ್ ಟಾರ್ಗೆಟ್ ಆಗಿತ್ತೆ? ಶಂಕಿತ ಉಗ್ರನ ಕುರಿತು 10 ಶಂಕೆಗಳು
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ಮೂಲಕ ಸುದ್ದಿಯಲ್ಲಿರುವ ಶಾರೀಕ್ ಕುರಿತು ದಿನದಿಂದ ದಿನಕ್ಕೆ ಹೊಸ ಸುದ್ದಿಗಳು ಬರುತ್ತಿವೆ. ಚಿಕ್ಕ ಇಲಿ ಎಂದುಕೊಂಡ ಘಟನೆ ನಾನಾ ಬೀಲಗಳನ್ನು ಹೊಂದಿದ್ದು, ಎಲ್ಲಾ ಆಯಾಮಗಳಿಂದ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ಮೂಲಕ ಸುದ್ದಿಯಲ್ಲಿರುವ ಶಾರೀಕ್ ಕುರಿತು ದಿನದಿಂದ ದಿನಕ್ಕೆ ಹೊಸ ಸುದ್ದಿಗಳು ಬರುತ್ತಿವೆ. ಚಿಕ್ಕ ಇಲಿ ಎಂದುಕೊಂಡ ಘಟನೆ ನಾನಾ ಬೀಲಗಳನ್ನು ಹೊಂದಿದ್ದು, ಎಲ್ಲಾ ಆಯಾಮಗಳಿಂದ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ಸಾಕಷ್ಟು ಊಹಾಪೋಹಾಗಳೂ ಹರಿದಾಡುತ್ತಿದ್ದು, ಪೊಲೀಸರು ಹಲವು ವಿಷಯಗಳ ಕುರಿತೂ ಇನ್ನೂ ಅಧಿಕೃತವಾಗಿ ಮಾಹಿತಿ ಪ್ರಕಟಿಸಿಲ್ಲ.
ಟ್ರೆಂಡಿಂಗ್ ಸುದ್ದಿ
- ವರದಿಗಳ ಪ್ರಕಾರ ಶಂಕಿತ ಉಗ್ರ ಶಾರೀಕ್ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಪ್ರಮುಖ ದೇಗುಲಗಳನ್ನು ಟಾರ್ಗೆಟ್ ಮಾಡಿದ್ದನಂತೆ. ಮಂಗಳೂರಿನ ಕದ್ರಿಯಲ್ಲಿರುವ ಮಂಜುನಾಥಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಬಾಂಬ್ ಸ್ಫೋಟಿಸಲು ಯೋಜನೆ ರೂಪಿಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ.
- ಇದೇ ರೀತಿ, ಮಂಗಳೂರಿನ ಕುದ್ರೋಳಿಯಲ್ಲಿರುವ ಗೋಕರ್ಣನಾಥೇಶ್ವರ ದೇಗುಲ ಮತ್ತು ಮಂಗಳದೇವಿ ದೇವಾಲಯದಲ್ಲಿಯೂ ಬಾಂಬ್ ಸ್ಪೋಟಿಸಲು ಸ್ಕೆಚ್ ಹಾಕಿದ್ದ ಎಂಬ ಅನುಮಾನವೂ ಇದೆ. ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದು, ಈ ಮೂರು ದೇಗುಲಗಳು ಶಾರೀಕ್‌ನ ಪ್ರಮುಖ ಟಾರ್ಗೆಟ್ ಆಗಿತ್ತು ಎನ್ನಲಾಗುತ್ತಿದೆ.
- ಈ ಮೂರು ದೇವಾಲಯಗಳು ಮಾತ್ರವಲ್ಲದೆ ಮಂಗಳೂರಿನ ರೈಲ್ವೇ ನಿಲ್ದಾಣ, ಮಂಗಳೂರಿನ ಕೆಎಸ್ಆರ್ಟಿಸಿ ಬಸ್ ಸ್ಟಾಂಡ್, ಮಂಗಳೂರಿನ ಸಂಘನಿಕೇತನದಲ್ಲಿಯೂ ಬಾಂಬ್ ಸ್ಫೋಟಿಸುವ ಯೋಜನೆ ಹೊಂದಿದ್ದ ಎನ್ನಲಾಗುತ್ತಿದೆ. ಈ ಕುರಿತು ಪೊಲೀಸರು ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಆದರೆ, ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಹಲವು ವರದಿಗಳು ಈ ವಿವರವನ್ನು ನೀಡಿವೆ.
- ಶಾರೀಕ್‌ಗೆ ಐಸಿಸ್‌ಗೆ ಸೇರುವ ಆಸೆ ಇತ್ತು ಎಂದು ಕೆಲವು ವರದಿಗಳು ತಿಳಿಸಿವೆ. ಇದಕ್ಕೆ ಸಂಬಂಧಪಟ್ಟಂತೆ ಹಲವರ ಸಂಪರ್ಕವನ್ನೂ ಮಾಡಿದ್ದ. ನೀನು ದೊಡ್ಡಮಟ್ಟದಲ್ಲಿ ಕೃತ್ಯ ಎಸಗಿದರೆ ಐಸಿಸ್‌ನವರು ನಿನ್ನನ್ನು ಗುರುತಿಸಬಹುದು ಎಂಬ ಸೂಚನೆ ದೊರಕಿದ್ದಿರಬಹುದು, ಹೀಗಾಗಿ, ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ ಎಂದು ಕೆಲವು ವರದಿಗಳು ತಿಳಿಸಿವೆ.
- ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮುನ್ನ ಶಾರೀಕ್ ಜಿಹಾದ್ ಸಂಬಂಧ ವಿಡಿಯೋ ಮಾಡಿ ತನ್ನ ಹ್ಯಾಂಡ್ಲರ್ಗಳಿಗೆ ಕಳುಹಿಸಿದ್ದನಂತೆ. ಕುಕ್ಕರ್ ಬಾಂಬ್ ಹಿಡಿದುಕೊಂಡು ತೆಗೆಸಿಕೊಂಡ ಫೋಟೋವನ್ನೂ ಹ್ಯಾಂಡ್ಲರ್ಗೆ ಕಳುಹಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈಗ ಈತ ಕುಕ್ಕರ್ ಬಾಂಬ್ ಹಿಡಿದ ಫೋಟೊಗಳೂ ವೈರಲ್ ಆಗುತ್ತಿರುವುದು ಈ ಮಾಹಿತಿಗೆ ಪುಷ್ಠಿ ನೀಡುತ್ತಿದೆ.
- ಶಾರೀಕ್‌ನ ಮೊಬೈಲ್ ರಿಟ್ರೀವ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಪತ್ತೆಯಾದ ಹಲವು ಮೊಬೈಲ್ ಸಂಖ್ಯೆಯಗಳು ಸ್ವಿಚ್ಡ್ ಆಫ್ ಬರುತ್ತಿವೆ, ಈ ನಂಬರ್‌ಗಳ ಲೊಕೆಷನ್‌ಗಳು ತಮಿಳುನಾಡು, ಕೇರಳವನ್ನು ತೋರಿಸುತ್ತಿದ್ದು, ಈ ಜಾಲವು ದೇಶದ ವಿವಿಧೆಡೆ ಹಬ್ಬಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
- ಶಾರೀಕ್‌ನ ನಿರ್ದಿಷ್ಟ ಟಾರ್ಗೆಟ್ ಏನಾಗಿತ್ತು ಎನ್ನುವ ಕುರಿತು ಮಾಹಿತಿ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಎಲ್ಲಾದರೂ ಮುಖ್ಯಮಂತ್ರಿಯವರು ಮಂಗಳೂರು ಕಾರ್ಯಕ್ರಮದಲ್ಲಿದ್ದಾಗ ಸ್ಫೋಟಿಸುವ ಯೋಜನೆ ಹಾಕಿಕೊಂಡಿದ್ದಾನೆಯೇ, ಆತನ ಮಂಗಳೂರು ತಲುಪಿ ವಿಳಂಬವಾದಾಗ ಪ್ಲ್ಯಾನ್ ಬದಲಾಯಿಸಿಕೊಂಡನೆ ಇತ್ಯಾದಿ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- ಶಾರೀಕ್ ಹುಟ್ಟೂರಿನಲ್ಲಿರುವ ಇಬ್ಬರು ಯುವಕರ ಮೇಲೆಯೂ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ ಎನನ್ಲಾಗಿದೆ. ಈ ಸಂಚಿನ ಕುರಿತು ಅವರಿಗೂ ಮಾಹಿತಿ ಇರಬಹುದು ಎನ್ನಲಾಗಿದೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.
- ಶಂಕಿತ ಆರೋಪಿ ಮೊಹಮ್ಮದ್ ಶಾರಿಕ್ ತನ್ನ ವಾಟ್ಸ್‌ಆ್ಯಪ್ ಡಿಪಿಯಲ್ಲಿ ಇಶಾ ಫೌಂಡೇಶನ್‌ನವರ ಈಶ್ವರ ದೇವರ ಪ್ರತಿಮೆಯ ಚಿತ್ರವನ್ನು ಹಾಕಿದ್ದ. ಇದು ಶಿವ ದೇಗುಲದ ಮೇಲೆ ದಾಳಿ ನಡೆಸುವ ಸಂಕೇತವಾಗಿತ್ತೆ? ಎಂಬ ಸಂಶಯವೂ ಕಾಡುತ್ತಿದೆ.
- ಮೈಸೂರಿನ ಲೋಕನಾಯಕನಗರದಲ್ಲಿರುವ ಶಾರಿಕ್ ಅವರ ರೂಮಿನಿಂದ ಸಂಗ್ರಹಿಸಿದ ಸಾಕ್ಷ್ಯವನ್ನು ಮುಚ್ಚಿದ ಲಕೋಟೆಯಲ್ಲಿ ಮಂಗಳೂರಿಗೆ ಕಳುಹಿಸಲಾಗಿದೆ. ಸಾಕ್ಷ್ಯಗಳಲ್ಲಿ ಮಲ್ಟಿಮೀಟರ್ ತಂತಿಗಳು, ಸಣ್ಣ ಬೋಲ್ಟ್‌ಗಳು, ಸರ್ಕ್ಯೂಟ್ ಬೋರ್ಡ್‌ಗಳು, ಬ್ಯಾಟರಿಗಳು, ಸಲ್ಫರ್, ರಂಜಕ, ಮರದ ಪುಡಿ ಮತ್ತು ಇತರ ವಸ್ತುಗಳಿದ್ದವು ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಭಾಗ