ಮಂಗಳೂರು: 8ರ ಹರೆಯದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಮರಣದಂಡನೆ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು: 8ರ ಹರೆಯದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಮರಣದಂಡನೆ

ಮಂಗಳೂರು: 8ರ ಹರೆಯದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಮರಣದಂಡನೆ

Mangaluru Crime News: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಮೂವರಿಗೆ ಮಂಗಳೂರು ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಮಂಗಳೂರು: 8ರ ಹರೆಯದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಮರಣದಂಡನೆ
ಮಂಗಳೂರು: 8ರ ಹರೆಯದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಮರಣದಂಡನೆ

ಮಂಗಳೂರು: ನಗರದ ಗ್ರಾಮಾಂತರ ಠಾಣಾ ವ್ಯಾಪ್ತಿಯ ತಿರುವೈಲು ಪರಾರಿ ಗ್ರಾಮದಲ್ಲಿ 2021ರಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಂದ ಪ್ರಕರಣಕ್ಕೆ (Rape and Murder) ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್​ಟಿಎಸ್​​ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯ ಮರಣದಂಡನೆ (Death Sentence) ವಿಧಿಸಿ, 1,20,000 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ಮಧ್ಯಪ್ರದೇಶ ಮೂಲದ ಜಯಸಿಂಗ್(21), ಮುಖೇಶ್ ಸಿಂಗ್(20), ಜಾರ್ಖಾಂಡ್ ಮೂಲದ ಮನೀಷ್ ತಿರ್ಕಿ(33) ಮರಣದಂಡನೆಗೆ ಒಳಗಾದ ಕಾಮುಕರು.

2021ರಲ್ಲಿ ನಡೆದಿತ್ತು ಘಟನೆ

ಅಪರಾಧಿಗಳು ಮಂಗಳೂರಿನ ಹೊರವಲಯದ ತಿರುವೈಲು ಗ್ರಾಮದ ಪರಾರಿ ಎಂಬಲ್ಲಿನ ರಾಜ್‌ಟೈಲ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿದ್ದರು‌. 2021ರ ನವೆಂಬರ್ 21ರಂದು ಫ್ಯಾಕ್ಟರಿಗೆ ರಜೆಯಿತ್ತು. ಕಾರ್ಮಿಕರು ಯಾರೂ ಇರಲಿಲ್ಲ. ಆದ್ದರಿಂದ ಇವರು ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಂತು ತಿರ್ಕಿ ಲೋಹರ ಹಾಗೂ ಸೀತಾ ದಂಪತಿಯ 8 ವರ್ಷದ ಪುತ್ರಿಯನ್ನು ಚಿಕ್ಕಿ ಕೊಟ್ಟು ಪುಸಲಾಯಿಸಿದ್ದರು. ಬಳಿಕ ಸಿಸಿ ಕ್ಯಾಮರಾ ಇಲ್ಲದ ಕಡೆಗೆ ಕರೆದೊಯ್ದು, ಆಕೆಯ ಮೇಲೆ ಮೂವರೂ ಅತ್ಯಾಚಾರ ನಡೆಸಿದ್ದಾರೆ‌. ಬಾಲಕಿ ನೋವಿನಿಂದ ಚೀರಾಡಿದಾಗ ಜಯಸಿಂಗ್ ಒಂದು ಕೈಯಿಂದ ಬಾಲಕಿಯ ಬಾಯನ್ನು ಮುಚ್ಚಿ ಮತ್ತೊಂದು ಕೈಯಿಂದ ಕುತ್ತಿಗೆ ಹಿಚುಕಿದ್ದಾನೆ. ಪರಿಣಾಮ ಆಕೆ ಅಲ್ಲಿಯೇ ಮೃತಪಟ್ಟಿದ್ದಾಳೆ.

ಬಳಿಕ ಬಾಲಕಿಯ ಮೃತದೇಹವನ್ನು ಅಲ್ಲಿಯೇ ಇದ್ದ ಕಲ್ಲಚಪ್ಪಡಿ ಹಾಸಿರುವ ತೋಡಿನಲ್ಲಿ ಇಟ್ಟಿದ್ದಾರೆ. ಬಾಲಕಿ ಕಾಣದಿದ್ದಾಗ ಆಕೆಯ ಹೆತ್ತವರು ಹುಡುಕಾಡಿದ್ದಾರೆ. ಈ ವೇಳೆ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಕೃತ್ಯ ಎಸಗಿದ ಮೂವರು ಹಾಗೂ ಅವರಿಗೆ ಸಹಕರಿಸಿದ ನಾಲ್ಕನೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದರು. ಮೃತ ಬಾಲಕಿಯ ತಾಯಿ ನೀಡಿರುವ ದೂರಿನಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಪೊಕ್ಸೊ ಹಾಗೂ ಕೊಲೆ ಪ್ರಕರಣದಲ್ಲಿ ಕೇಸು ದಾಖಲಿಸಿದ್ದರು.

30 ಸಾಕ್ಷಿಗಳ ವಿಚಾರಣೆ

ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್​ಟಿಎಸ್​​ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯವು 30 ಸಾಕ್ಷಿಗಳನ್ನು ವಿಚಾರಣೆ ನಡೆಸಿ, 74 ದಾಖಲೆಗಳನ್ನು ಹಾಗೂ ಸ್ಥಳದಲ್ಲಿ ಸಿಕ್ಕ 45 ಪರಿಕರಗಳನ್ನು ಗುರುತಿಸಿತ್ತು. 

ಪ್ರಕರಣದ ಸಾಕ್ಷ್ಯ, ದಾಖಲೆಗಳು, ಪೂರಕ ಸಾಕ್ಷ್ಯ, ವೈಜ್ಞಾನಿಕ ವರದಿ ಹಾಗೂ ವಾದ ವಿವಾದಗಳನ್ನು ಆಲಿಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್​ಟಿಎಸ್​​ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆಎಸ್ ಮಾನು ಮೂವರು ಆರೋಪಿಗಳಿಗೆ ಮರಣದಂಡನೆ ಹಾಗೂ 1.20ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬಾಲಕಿಯ ಹೆತ್ತವರಿಗೆ ಪರಿಹಾರ ಯೋಜನೆಯಡಿ 3.80ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರಿ ವಿಶೇಷ ಅಭಿಯೋಜಕ ಕೆ.ಬದರಿನಾಥ ನಾಯಿರಿ ವಾದ ಮಂಡಿಸಿದ್ದರು.

 

Whats_app_banner