Mangalore Crime: ಮಂಗಳೂರು ಪೊಲೀಸರಿಂದ ಭರ್ಜರಿ ಬೇಟೆ; ಮನೆ, ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ 6 ಮಂದಿ ಕಳ್ಳರ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Mangalore Crime: ಮಂಗಳೂರು ಪೊಲೀಸರಿಂದ ಭರ್ಜರಿ ಬೇಟೆ; ಮನೆ, ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ 6 ಮಂದಿ ಕಳ್ಳರ ಬಂಧನ

Mangalore Crime: ಮಂಗಳೂರು ಪೊಲೀಸರಿಂದ ಭರ್ಜರಿ ಬೇಟೆ; ಮನೆ, ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ 6 ಮಂದಿ ಕಳ್ಳರ ಬಂಧನ

ಕಳ್ಳತನ ಪ್ರಕರಣ ಸಂಬಂಧ ಮಂಗಳೂರಿನಲ್ಲಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಕಳ್ಳತನ ಮಾಡಿ ಮಹಾರಾಷ್ಟ್ರದ ಪುಣೆಗೆ ಪರಾರಿಯಾಗುತ್ತಿದ್ದವರನ್ನು ಪೊಲೀಸರು ಬಲೆಗೆ ಬೀಳಿಸಿರುವುದೇ ರೋಚಕವಾಗಿದೆ. ಅದರ ಸಂಪೂರ್ಣ ಮಾಹಿತಿ ಹಾಗೂ ನಗರದ ಇತರೆ ಪ್ರಕರಣಗಳ ವಿವರ ಇಲ್ಲಿದೆ.

ಮಂಗಳೂರು ಪೊಲೀಸರಿಂದ ಭರ್ಜರಿ ಬೇಟೆ; ಮನೆ, ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ 6 ಮಂದಿ ಕಳ್ಳರ ಬಂಧನ
ಮಂಗಳೂರು ಪೊಲೀಸರಿಂದ ಭರ್ಜರಿ ಬೇಟೆ; ಮನೆ, ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ 6 ಮಂದಿ ಕಳ್ಳರ ಬಂಧನ

ಮಂಗಳೂರು: ಪಂಪ್‌ವೆಲ್‌ನಲ್ಲಿ 1 ಅಂಗಡಿ ಹಾಗೂ ಕೊಣಾಜೆ ಪೊಲೀಸ್‌ ಠಾಣೆ ವ್ಯಾಪ್ತಿಯ 3 ಮನೆಗಳಲ್ಲಿ ನಡೆದ ಕಳ್ಳತನ ಸಹಿತ ಒಟ್ಟು 4 ಕಳವು ಪ್ರಕರಣಗಳಿಗೆ ಸಂಬಂಧಿಸಿ 6 ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜುಲೈ 8 (ಸೋಮವಾರ) ರಂದು ರಾತ್ರಿ ಕಪಿತಾನಿಯೋ ಬಳಿಯ ದಿನಸಿ ಅಂಗಡಿಯ ಶಟರ್‌ ಎತ್ತಿ ಕ್ಯಾಶ್‌ ಕೌಂಟರ್‌ನಲ್ಲಿದ್ದ 10.20 ಲಕ್ಷ ರೂ. ಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಉತ್ತರ ಪ್ರದೇಶದ ಮಹಮ್ಮದ್‌ ನಜೀರ್‌ ಹೌಸಿಲ್‌ ಖಾನ್‌(27) ಮತ್ತು ಇಲಿಯಾಸ್‌ ಖಾನ್‌ (22)ನನ್ನು ಬಂಧಿಸಿದ್ದಾರೆ.

ಪ್ರಕರಣ ನಡೆದ ಅಂಗಡಿಯ ಸುತ್ತಮುತ್ತ ದೊರೆತ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಶಂಕಿತರ ಬಗ್ಗೆ ಪೊಲೀಸರು ಆಟೋರಿಕ್ಷಾ ಚಾಲಕರನ್ನು ವಿಚಾರಿಸಿದರು. ಆಗ ಕೃತ್ಯ ನಡೆದ ರಾತ್ರಿ ಇಬ್ಬರು ಹಿಂದಿ ಭಾಷಿಗರಾದ ಶಂಕಿತರನ್ನು ರೈಲು ನಿಲ್ದಾಣಕ್ಕೆ ಬಿಟ್ಟು ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿತು. ಬಳಿಕ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಎರ್ನಾಕುಲಂ- ಪುಣೆ ಎಕ್ಸ್‌ಪ್ರೆಸ್‌ನಲ್ಲಿ ಅದೇ ದಿನ ರಾತ್ರಿ ಇಬ್ಬರು ಮಂಗಳೂರಿನಿಂದ ಪುಣೆಗೆ ಎರಡು ಟಿಕೆಟ್‌ ಕಾದಿರಿಸಿ ಹೊರಟಿರುವ ಮಾಹಿತಿ ದೊರೆಯಿತು. ರಾತ್ರಿ 8.30 ರ ಸುಮಾರಿಗೆ ರೈಲು ಮಹಾರಾಷ್ಟ್ರದ ಸತಾರ ದಾಟಿ ಹೋಗುತ್ತಿದ್ದಾಗ 11.45 ರ ಸುಮಾರಿಗೆ ಪುಣೆ ತಲುಪುವ ಮಾಹಿತಿ ಪಡೆದು ಮಂಗಳೂರಿನ ಆರ್‌ಪಿಎಫ್ ಪೊಲೀಸರ ಮುಖಾಂತರ ಪುಣೆ ಆರ್‌ಪಿಎಫ್ ಪೊಲೀಸರನ್ನು ಸಂಪರ್ಕಿಸಲಾಯಿತು ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಶುಕ್ರವಾರ (ಜುಲೈ 12) ಮಾಹಿತಿ ನೀಡಿದ್ದಾರೆ.

ಬಳಿಕ ಪುಣೆ ಜಿಆರ್‌ಪಿ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿ ಶಂಕಿತರನ್ನು ವಿಚಾರಿಸಲಾಯಿತು. ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಠಾಣೆಯ ಪೊಲೀಸ್‌ ನಿರೀಕ್ಷಕ ಟಿ.ಡಿ.ನಾಗರಾಜ್‌ ನೇತೃತ್ವದಲ್ಲಿ ಪಿಎಸ್‌ಐ ಶಿವಕುಮಾರ್‌, ಎಚ್‌ಸಿ ಜಯಾನಂದ, ಪಿಸಿಗಳಾದ ರಾಜೇಸಾಬ್‌ ಮುಲ್ಲಾ, ಚೇತನ್‌, ಎಎಚ್‌ಸಿ ಪ್ರವೀಣ್‌ ಅವರು ಪುಣೆಗೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಹಣದ ಬ್ಯಾಗ್‌ನ್ನು ರೈಲ್ವೆ ಪ್ಲಾಟ್‌ಫಾರಂನ ಬೇರೊಂದು ಕಡೆ ಬಚ್ಚಿಟ್ಟಿದ್ದ ಬ್ಯಾಗಿನಲ್ಲಿದ್ದ 10.13 ಲಕ್ಷ ರೂ. ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಗರುಡ ಗ್ಯಾಂಗ್‌ಗೆ ಹಣಕಾಸು ನೆರವು: ಮಹಿಳೆ ಬಂಧನ

ಉಡುಪಿಯಲ್ಲಿ ಸಂಚಲನ ಮೂಡಿಸಿದ್ದ ಗ್ಯಾಂಗ್‌ ವಾ‌ರ್ ಪ್ರಕರಣ ನಡೆಸಿದ್ದ ಗರುಡ ಗ್ಯಾಂಗ್‌ ಸದಸ್ಯನಿಗೆ ಹಣಕಾಸು ಮತ್ತು ಆಶ್ರಯ ನೀಡಿದ್ದ ಆರೋಪದ ಮೇಲೆ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿ ಮೂಲದ ಸಫರಾ ಬಂಧಿತ ಯುವತಿ.

ಉಡುಪಿಯಲ್ಲಿ ಎರಡು ತಿಂಗಳ ಹಿಂದೆ ಗರುಡ ಗ್ಯಾಂಗ್​ನ ಸದಸ್ಯರು ಹೆದ್ದಾರಿಯಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ ಮೆರೆದಿದ್ದರು. ಈ ತಂಡವು ಯುವಕನ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿತ್ತು. ಗ್ಯಾಂಗ್ ವಾರ್ ಆರೋಪಿಗಳಲ್ಲಿ ಒಬ್ಬ ಇಸಾಕ್ ಎಂಬಾತನಿಗೆ ಈ ಸಫರಾ ಆರ್ಥಿಕ ಸಹಾಯ ಮಾಡುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿತ್ತು.

ಸತ್ತ ನಾಗರಹಾವು ಮುಂದಿಟ್ಟು ಪ್ರತಿಭಟನೆ

ಕುಕ್ಕೆ ಸುಬ್ರಹ್ಮಣ್ಯದ ಆಡಳಿತ ಕಚೇರಿ ಮುಂಭಾಗ ವ್ಯಕ್ತಿಯೊಬ್ಬರು ಸತ್ತ ನಾಗರ ಹಾವು ಇಟ್ಟು ಪ್ರತಿಭಟನೆಗೆ ಮುಂದಾದ ಘಟನೆ ಜು.11 ರಂದು ನಡೆದಿದೆ. ಕುಕ್ಕೆ ಬೈಪಾಸ್ ರಸ್ತೆಯಲ್ಲಿ ಯಾವುದೋ ವಾಹನದಡಿಗೆ ಬಿದ್ದು ನಾಗರ ಹಾವು ಸತ್ತು ಬಿದ್ದಿತ್ತು. ಇದನ್ನು ಗಮನಿಸಿದ ಗ್ರಾ.ಪಂ ಸದಸ್ಯ ರಾಜೇಶ್ ಎಂಬುವರು ದೇಗುಲದ ಗಮನಕ್ಕೆ ತರಲು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ದೇಗುಲದ ಕಡೆಯಿಂದ ಸಕಾಲಕ್ಕೆ ಸ್ಪಂದನೆ ದೊರೆಯದ ಹಿನ್ನೆಲೆ ಆಕ್ರೋಶಕೊಂಡು ದೇವಸ್ಥಾನದ ಆಡಳಿತ ಕಚೇರಿ ಮುಂದೆ ಸತ್ತ ಸರ್ಪವನ್ನಿಟ್ಟು ಪ್ರತಿಭಟಿಸಿದ್ದಾರೆ. ಸರ್ಪ ತಂದಿಟ್ಟು ಒಂದು ಗಂಟೆ ಕಳೆದರೂ ಸ್ಪಂದಿಸದ ಕಾರಣ ಪುತ್ತೂರು ಎಸಿ ಜುಬಿನ್ ಮಹಾಪಾತ್ರ ಅವರಿಗೆ ಪೋನ್ ಮೂಲಕ ದೂರು ನೀಡಿದ್ದು, ಈ ಸಂಬಂಧ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿರುವುದಾಗಿ ತಿಳಿದು ಬಂದಿದೆ.

ಕಾಸರಗೋಡು: ಶೂ ಧರಿಸಿದ್ದಕ್ಕೆ ಹಲ್ಲೆ

ಕಾಸರಗೋಡಿನ ಶಾಲೆಯಲ್ಲಿ ಅಪ್ರಾಪ್ತನೊಬ್ಬ ಶೂಧರಿಸಿ ಬಂದಿದ್ದಾನೆಂದು ಸೀನಿಯರ್ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಕಾಸರಗೋಡಿನ ಚಿತ್ತಾರಿ ಜಮಾತ್ ಹೈಯರಿ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಪಳ್ಳಿಕೆರೆ ಬಿಲಾಲ್ ನಗರದ ನಿವಾಸಿ, ಈ ಶಾಲೆಯ ಕಿರಿಯ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳು ಥಳಿಸಿದ್ದಾರೆ. ಈತ ಶೂ ಧರಿಸಿ ಶಾಲೆಗೆ ಬಂದಿರುವುದಕ್ಕೆ ಮೊದಲು ಹಾಡುವಂತೆ ಒತ್ತಾಯಿಸಿ ರ‍್ಯಾಗಿಂಗ್ ಮಾಡಲಾಗಿದೆ. ಆತ ಹಾಡಲು ನಿರಾಕರಿಸಿದ್ದಾನೆ. ಆದ್ದರಿಂದ ಶಾಲೆಯ ಬಳಿಯ ಬಸ್ ನಿಲ್ದಾಣದಲ್ಲಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಥಳಿತದಿಂದ ಬಾಲಕನ ಕಿವಿ ಹಾಗೂ ಕಣ್ಣಿಗೆ ಹಾನಿಯಾಗಿದೆ. ಈ ಬಗ್ಗೆ ಕಾಸರಗೋಡಿನ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಹರೀಶ್ ಮಾಂಬಾಡಿ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner