ಮಂಗಳೂರು ಕ್ರೈಮ್: ವಿಟ್ಲ ಬೋಳಂತೂರಿನ‌ ಉದ್ಯಮಿ ಮನೆಯಲ್ಲಿ ಹಣಲೂಟಿ ಪ್ರಕರಣ ಮತ್ತೊಬ್ಬ ಆರೋಪಿ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಕ್ರೈಮ್: ವಿಟ್ಲ ಬೋಳಂತೂರಿನ‌ ಉದ್ಯಮಿ ಮನೆಯಲ್ಲಿ ಹಣಲೂಟಿ ಪ್ರಕರಣ ಮತ್ತೊಬ್ಬ ಆರೋಪಿ ಬಂಧನ

ಮಂಗಳೂರು ಕ್ರೈಮ್: ವಿಟ್ಲ ಬೋಳಂತೂರಿನ‌ ಉದ್ಯಮಿ ಮನೆಯಲ್ಲಿ ಹಣಲೂಟಿ ಪ್ರಕರಣ ಮತ್ತೊಬ್ಬ ಆರೋಪಿ ಬಂಧನ

ಬಂಟ್ವಾಳ ತಾಲೂಕು ವಿಟ್ಲ ಸಮೀಪ ಸಿಂಗಾರಿ ಬೀಡಿ ಉದ್ಯಮಿ ಮನೆಯಲ್ಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದು 30 ಲಕ್ಷ ರೂಪಾಯಿ ದರೋಡೆ ಮಾಡಿದ್ದ ಪ್ರಕರಣದಲ್ಲಿ ವಿಟ್ಲ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ವಿಟ್ಲದಲ್ಲಿ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ಇಡಿ ಅಧಿಕಾರಿಗಳಂತೆ ದಾಳಿ ನಡೆಸಿದ ವಂಚಕರು 30 ಲಕ್ಷ ರೂಪಾಯಿ ದೋಚಿದ್ದ ಪ್ರಕರಣದಲ್ಲಿ ಮತ್ತೊರ್ವ ಆರೋಪಿಯನ್ನು ಬಂಧಿಸಲಾಗಿದೆ.
ವಿಟ್ಲದಲ್ಲಿ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ಇಡಿ ಅಧಿಕಾರಿಗಳಂತೆ ದಾಳಿ ನಡೆಸಿದ ವಂಚಕರು 30 ಲಕ್ಷ ರೂಪಾಯಿ ದೋಚಿದ್ದ ಪ್ರಕರಣದಲ್ಲಿ ಮತ್ತೊರ್ವ ಆರೋಪಿಯನ್ನು ಬಂಧಿಸಲಾಗಿದೆ.

ಮಂಗಳೂರು (ದಕ್ಷಿಣ ಕನ್ನಡ): ರಾಜ್ಯವನ್ನೇ ತಲ್ಲಣಗೊಳಿಸಿದ್ದ ಉದ್ಯಮಿ ಮನೆ ಮೇಲೆ ಇಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿ 30 ಲಕ್ಷ ರೂಪಾಯಿ ದೋಚಿದ್ದ ಪ್ರಕರಣ ಸಂಬಂಧ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬೋಳಂತೂರು ನಾರ್ಶದ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಅವರ ಮನೆಗೆ ನುಗ್ಗಿ ಹಣ ಲೂಟಿ ಮಾಡಿದ ಪ್ರಕರಣದಲ್ಲಿ ಫೆ.3 ರಂದು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಆರೋಪಿಯ ಹೆಸರು ಕೂಡ ಸಚಿನ್ ಎನ್ನಲಾಗಿದ್ದು, ಪೊಲೀಸರು ಹೆಸರನ್ನು ಖಚಿತ ಪಡಿಸಿಲ್ಲ. ಬಂಧಿತ ಆರೋಪಿ ಕೇರಳ ಮೂಲದವನು ಎನ್ನಲಾಗಿದ್ದು ಅನಾರೋಗ್ಯದ ಕಾರಣ ಪುತ್ತೂರು ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ.

ನೇರವಾಗಿ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರು ಜನರ ಪೈಕಿ ಎರ್ಟಿಗಾ ಕಾರು ಸಹಿತ ಕೇರಳದ ಅನಿಲ್‌ ಫೆರ್ನಾಂಡೀಸ್ ಎಂಬಾತನನ್ನು ಬಂಧಿಸಿ ಕಾರು ಹಾಗೂ ಹಣ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಮುಂಬೈನಲ್ಲಿ ಮತ್ತೋರ್ವ ಆರೋಪಿ ಸಚಿನ್ ಬಂಧನವಾಗಿತ್ತು‌. ಪ್ರಕರಣದಲ್ಲಿ ಉಳಿದ ಮೂವರು ಆರೋಪಿಗಳ ಮತ್ತು ಸಹಕಾರ ನೀಡಿದ ಸ್ಥಳೀಯ ಮಾಹಿತಿದಾರರ ಬಂಧನ ಆಗಬೇಕಿದೆ.

ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸ್ ಅಧೀಕ್ಷಕ ಯತೀಶ್ ಎನ್. ಅದೇಶದ ಮೇರೆಗೆ, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತನಿಖಾ ತಂಡ ರಚಿಸಿ, ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು‌. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಿಂದ, ಅಪರಾಧ ಪ್ರಕರಣಗಳಲ್ಲಿ ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೊಂಡ ನಾಲ್ಕು ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸಿದೆ.

ಘಟನೆ ಹಿನ್ನಲೆ

ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಜ. 3ರಂದು ರಾತ್ರಿ ಅವರ ಮನೆಗೆ ತಮಿಳುನಾಡು ರಿಜಿಸ್ಟ್ರೇಶನ್ ಹೊಂದಿರುವ ಮಾರುತಿ ಎರ್ಟಿಗಾ ಕಾರಿನಲ್ಲಿ ಆಗಮಿಸಿದ ದೃಢಕಾಯ ಶರೀರದ 6 ಮಂದಿಯ ತಂಡವೊಂದು ದಾಳಿ ನಡೆಸಿದಂತೆ ನಟಿಸಿತ್ತು. ನಾವು ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡೂವರೆ ಗಂಟೆಗಳ ವರೆಗೆ ತನಿಖೆ ನಡೆಸಿದ ನಾಟಕ ಮಾಡಿ ಮನೆಯಲ್ಲಿದ್ದ ಸುಮಾರು 30 ಲಕ್ಷ ರೂಪಾಯಿಗಳಷ್ಟು ಮೊತ್ತವನ್ನು ದೋಚಿ ಪರಾರಿಯಾಗಿತ್ತು. ದರೋಡೆಕೋರರು ವಶಪಡಿಸಿದ್ದ ಮನೆಯವರ ಮೊಬೈಲ್ ಫೋನ್ ಗಳು ಮನೆಯ ತಳಹಂತಸ್ತಿನ ರ್ಯಾಕ್ ನಲ್ಲಿ ಪತ್ತೆಯಾಗಿತ್ತು. ಈ ದರೋಡೆ ಘಟನೆ ನಾಡಿನಾದ್ಯಂತ ದಿಗ್ಭ್ರಮೆ, ಸಂಚಲನ ಮೂಡಿಸಿತ್ತು.

ಹಲವು ಕೋನಗಳಲ್ಲಿ ವಿಚಾರಣೆ

ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಿ ಕಾರು ಚಾಲಕ, ಕೆಲವು ಬೀಡಿ ಬ್ರಾಂಚ್ ಮಾಲಕ, ಮನೆಯ ಕೆಲವು ಕೆಲಸಗಾರರ ವಿಚಾರಣೆ ನಡೆದಿತ್ತು. ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೂಡ ತನಿಖೆ ತಂಡ ಕಾರ್ಯಾಚರಣೆ ನಡೆದಿತ್ತು. ತನಿಖಾ ತಂಡಕ್ಕೆ ಸ್ಥಳೀಯವಾಗಿ ಉಂಟಾಗಿದ್ದ ಅನುಮಾನಕ್ಕೆ ಪೂರಕವಾಗಿ ತನಿಖೆ ಮುಂದುವರಿದಿತ್ತು.

ಘಟನೆ ನಡೆಯುವ ಮೊದಲ ಕೆಲವು ವಾರ ಸುಲೈಮಾನ್ ಹಾಜಿಯವರ ಮನೆಗೆ ಭೇಟಿ ನೀಡಿದವರ ಬಗ್ಗೆ, ಅವರ ಚಲನವಲನಗಳ ಬಗ್ಗೆ, ಹಾಜಿಯವರ ವ್ಯವಹಾರದ ಬಗ್ಗೆ, ದೂರವಾಣಿ ಕರೆಗಳ ಬಗ್ಗೆ ಪೊಲೀಸರ ತಂಡದ ತನಿಖೆ ಮುಂದುವರಿದಿತ್ತು. ಸ್ಥಳೀಯ ಕೆಲವು ಮುಖಂಡರನ್ನು ಘಟನೆ ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸಿದ್ದರು. ಸುಲೈಮಾನ್ ಹಾಜಿ ಅವರ ಮನೆಗೆ ಸ್ಪೀಕರ್ ಯುಟಿ ಖಾದರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತಂಡ ಭೇಟಿ ನೀಡಿ ತನಿಖೆಯ ಪ್ರಗತಿ ಪರಿಶೀಲನೆ ನಡೆಸಿತ್ತು. ಕಾರ್ಯವಿಧಾನದ ಬಗ್ಗೆ ಸಮಾಲೋಚನೆ ನಡೆಸಿತ್ತು.

ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಡಿವೈಎಸ್ಪಿ ವಿಜಯ ಪ್ರಸಾದ್ ಜೊತೆಗೆ ದರೋಡೆಗೊಳಗಾದ ಮನೆಯ ಮಾಲಕ ಸುಲೈಮಾನ್ ಹಾಜಿ ಹಾಗೂ ಪುತ್ರ ಇಕ್ಬಾಲ್ ಜೊತೆಗೆ ಗೌಪ್ಯ ಸಭೆ ನಡೆಸಿದ್ದರು. ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಇ ನಾಗರಾಜ್, ಸಬ್ ಇನ್ಸ್ ಪೆಕ್ಟರ್ ವಿದ್ಯಾ ಮೊದಲಾದವರು ಭಾಗವಹಿಸಿದ್ದರು.

Whats_app_banner