ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಚಡ್ಡಿ ಗ್ಯಾಂಗ್ ಅರೆಸ್ಟ್​; ಐದೇ ಗಂಟೆಯಲ್ಲಿ ನಡೆದ ರೋಚಕ ಕಾರ್ಯಾಚರಣೆ ಹೇಗಿತ್ತು ನೋಡಿ

ಮಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಚಡ್ಡಿ ಗ್ಯಾಂಗ್ ಅರೆಸ್ಟ್​; ಐದೇ ಗಂಟೆಯಲ್ಲಿ ನಡೆದ ರೋಚಕ ಕಾರ್ಯಾಚರಣೆ ಹೇಗಿತ್ತು ನೋಡಿ

Mangaluru Crime: ಜುಲೈ 9ರ ಮಂಗಳವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಮಂಗಳೂರಿನ ಊರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಣಿಯಲ್ಲಿ ಇಬ್ಬರೇ ವಾಸಿಸುತ್ತಿದ್ದ ಮನೆ ಪ್ರವೇಶಿಸಿ ದರೋಡೆ ನಡೆಸಿದ್ದ ಚಡ್ಡಿ ಗ್ಯಾಂಗ್ ಬಂಧನವಾಗಿದೆ.​ (ವರದಿ: ಹರೀಶ ಮಾಂಬಾಡಿ)

ಮಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಚಡ್ಡಿ ಗ್ಯಾಂಗ್ ಅರೆಸ್ಟ್​; ಐದೇ ಗಂಟೆಯಲ್ಲಿ ನಡೆದ ರೋಚಕ ಕಾರ್ಯಚಾರಣೆ ಹೇಗಿತ್ತು ನೋಡಿ
ಮಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಚಡ್ಡಿ ಗ್ಯಾಂಗ್ ಅರೆಸ್ಟ್​; ಐದೇ ಗಂಟೆಯಲ್ಲಿ ನಡೆದ ರೋಚಕ ಕಾರ್ಯಚಾರಣೆ ಹೇಗಿತ್ತು ನೋಡಿ

ಮಂಗಳೂರು: ಮಂಗಳವಾರ (ಜುಲೈ 9) ಬೆಳಗಿನ ವೇಳೆ ಸುಮಾರು 4 ಗಂಟೆಗೆ ಮಂಗಳೂರಿನ ಊರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಣಿಯಲ್ಲಿ ಇಬ್ಬರೇ ವಾಸಿಸುತ್ತಿದ್ದ ಮನೆ ಪ್ರವೇಶಿಸಿ, ಹಲ್ಲೆ ನಡೆಸಿ ದರೋಡೆ ನಡೆಸಿದ್ದ ಕುಖ್ಯಾತ ಚಡ್ಡಿ ಗ್ಯಾಂಗ್ ಅನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯ ನಡೆದು ಐದು ಗಂಟೆಗಳಲ್ಲೇ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವುದು ಸಾರ್ವಜನಿಕರ ಶ್ಲಾಘನೆಗೂ ಪಾತ್ರವಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಧ್ಯಪ್ರದೇಶದ ಗುಣಾ ಜಿಲ್ಲೆ ರಗೋಗರ್ ತಾಲೂಕಿನ ರಾಜು ಸಿಂಗ್ವಾನಿಯ (24),, ಮಧ್ಯಪ್ರದೇಶದ ಭೋಪಾಲ್ ಗುಲಾಬ್ ಗಂಜ್​​ನ ಮಯೂರ್ (30), ಮಧ್ಯಪ್ರದೇಶದ ಅಶೋಕ್ ನಗರದ ಮಾಧವಗಢದ ಬಾಲಿ (22), ಮಧ್ಯಪ್ರದೇಶದ ಗುಣಾ ಜಿಲ್ಲೆಯ ವಿಕ್ಕಿ (21) ಬಂಧಿತರು.

ಪ್ರಕರಣದ ವಿವರ ಹೀಗಿದೆ

ಮಂಗಳೂರು ನಗರ ಪೊಲೀಸ್ ಕಮಿಷನರೇಟ್​​ನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ (ಜುಲೈ 9ರ) ಬೆಳಗ್ಗಿನ ಜಾವ ಸಮಯ ಸುಮಾರು 4 ಗಂಟೆಗೆ ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ ಸುಮಾರು 30 ರಿಂದ 40 ವರ್ಷ ಪ್ರಾಯದ 4 ಜನ ಯುವಕರು (ಚೆಡ್ಡಿ ಗ್ಯಾಂಗ್) ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ವಿಕ್ಟರ್ ಮೆಂಡೋನ್ಸಾ ಎನ್ನುವವರ ಮನೆಯ ಕಿಟಕಿಯ ಗ್ರಿಲ್ ತುಂಡರಿಸಿ ಒಳ ಪ್ರವೇಶಿಸಿದ್ದರು. ವಿಕ್ಟರ್ ಮೆಂಡೋನ್ಸಾಗೆ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿದರೆ, ಅವರ ಪತ್ನಿ ಪ್ಯಾಟ್ರಿಸಿಯಾ ಮೆಂಡೋನ್ಸಾಗೆ ಸ್ಕ್ರೂ ಡ್ರೈವರ್​​​ನಿಂದ ಹಲ್ಲೆ ನಡೆಸಿದ್ದರು.

ಇದೇ ವೇಳೆ ಬೆದರಿಸಿ ಮನೆಯಲ್ಲಿದ್ದ 3 ಮೊಬೈಲ್ ಫೋನ್​​ಗಳನ್ನು ನೆಲಕ್ಕೆ ಬಡಿದು ಜಖಂಗೊಳಿಸಿದ್ದರು. ಲಾಕರ್​ನಲ್ಲಿದ್ದ ಸುಮಾರು 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್, 1 ಲಕ್ಷ ರೂ ಮೌಲ್ಯದ 10 ಬ್ರಾಂಡೆಡ್ ವಾಚ್​​ಗಳು, 3000 ರೂ ನಗದು ಸುಲಿಗೆ ಮಾಡಿದ್ದಾರೆ. ಇದೆನ್ನೆಲ್ಲಾ ಪಡೆದು ಮನೆಯ ಆವರಣದಲ್ಲಿದ್ದ ಕಾರಿನ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಪ್ಯಾಟ್ರಿಸಿಯಾ ಮೆಂಡೊನ್ಸಾ ನೀಡಿದ ದೂರಿನಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ 7 ಗಂಟೆಗೆ ಪ್ರಕರಣ ದಾಖಲಾಗಿತ್ತು.

ಕಾರ್ಯಾಚರಣೆಗಿಳಿದ ಪೊಲೀಸ್ ಟೀಮ್

ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸರು ತಕ್ಷಣ ಕೃತ್ಯ ನಡೆದ ಸ್ಥಳ ಪರಿಶೀಲಿಸಿದರು. ನಂತರ ತನಿಖೆ ಕೈಗೊಂಡು ಮುಲ್ಕಿ ಬಸ್ ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಳವು ಮಾಡಲ್ಪಟ್ಟ ಕಾರನ್ನು ಪತ್ತೆಮಾಡಿ ವಶಕ್ಕೆ ಪಡೆದರು. ನಂತರ ಸ್ಥಳದ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದರು. ಕೆಎಸ್​ಆರ್​ಟಿಸಿ ಬಸ್​ನಲ್ಲಿ ಗುಮಾನಿ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿದೆ.

ಕೆಎಸ್​ಆರ್​ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಬೆಳಗಿನ ಜಾವ ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಬಸ್​ಗಳ ಮಾಹಿತಿ ಪಡೆದ ಉರ್ವಾ ಠಾಣೆಯ ಪೊಲೀಸರಿಗೆ ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ನಾಲ್ವರು ಬಂದಿದ್ದರ ಕುರಿತು ಕಂಡಕ್ಟರ್​ವೊಬ್ಬರು ಮಾಹಿತಿ ನೀಡಿದ್ದರು. ನಾಲ್ವರು ಸಹ ಬೆಂಗಳೂರಿಗೆ ಪ್ರಯಾಣಿಸುವ ಬಸ್​​ಗಳ ಕುರಿತು ನನ್ನಲ್ಲಿ ಕೇಳಿದ್ದರು ಎಂದು ನಿರ್ವಾಹಕರು ಪೊಲೀಸರಿಗೆ ಹೇಳಿದರು. ಬಸ್​ ನಂಬರ್​ ಕೆಎ-19-ಎಫ್-3575ದ ಕಂಡಕ್ಟರ್ ನೀಡಿದ ಮಾಹಿತಿಯಂತೆ ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಉರ್ವಾ ಠಾಣೆ ಪೊಲೀಸರು ತಿಳಿಸಿದರು. ನಂತರ ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿ ತಂಡ, ಸಕಲೇಶಪುರ ಸಮೀಪ ಬಸ್ಸನ್ನು ನಿಲ್ಲಿಸಿ ನಾಲ್ವರನ್ನು ವಶಕ್ಕೆ ಪಡೆದರು.

ಬಾಯ್ಬಿಟ್ಟ ಗ್ಯಾಂಗ್

ತೀವ್ರ ವಿಚಾರಣೆ ನಡೆಸಿದಾಗ ಚಡ್ಡಿ ಗ್ಯಾಂಗ್​ ಕೃತ್ಯವೆಸಗಿದ್ದನ್ನು ಒಪ್ಪಿಕೊಂಡರು. ಅವರ ವಶದಲ್ಲಿದ್ದ ಚಿನ್ನಾಭರಣ, ವಜ್ರ, ನಗದು, ಮೊಬೈಲ್ ಎಲ್ಲವನ್ನೂ ವಶಕ್ಕೆ ಪಡೆದರು. ನಂತರ ಉರ್ವಾ ಠಾಣೆಯ ಪೊಲೀಸರಿಗೆ ಒಪ್ಪಿಸಿದರು. ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್ ಗೋಯಲ್ ಹಾಗೂ ಅಪರಾಧ ವಿಭಾಗದ ಡಿಸಿಪಿ ಬಿ.ಪಿ ದಿನೇಶ್ ಕುಮಾರ್ ನಿರ್ದೇಶನದಂತೆ ಕಾರ್ಯಾಚರಣೆ ನಡೆದಿದೆ.