Online Fraud: ಆನ್‌ಲೈನ್ ವಂಚಕರ ಬಲೆಗೆ ಬಿದ್ದು 72 ಲಕ್ಷ ರೂ ಪಿಂಚಣಿ ಹಣ ಕಳೆದುಕೊಂಡ ಮಂಗಳೂರು ನಿವೃತ್ತ ಪ್ರಿನ್ಸಿಪಾಲ್
Mangalore Online fraud ಮಂಗಳೂರಿನಲ್ಲಿ( Mangalore) ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪ್ರಾಂಶುಪಾಲರೊಬ್ಬರು( Retired Principal) ಆನ್‌ಲೈನ್ ವಂಚಕರ( Online fraud) ಬಲೆಗೆ ಸಿಲುಕಿ ಪಿಂಚಣಿ ಸೇರಿದಂತೆ 72 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಮಂಗಳೂರು: ಪ್ರಿನ್ಸಿಪಾಲ್ ಹುದ್ದೆಯಿಂದ ನಿವೃತ್ತರಾದ ಮಹಿಳೆಯೊಬ್ಬರು ವಂಚಕರ ಬಲೆಗೆ ಬಿದ್ದು ರೂ 72 ಲಕ್ಷ ರೂ ಕಳೆದುಕೊಂಡ ಘಟನೆ ಮಂಗಳೂರಲ್ಲಿ ನಡೆದಿದೆ.
ನಿವೃತ್ತ ಪ್ರಾಂಶುಪಾಲರಿಗೆ ವಾಟ್ಸ್ ಆಪ್ ಮುಖಾಂತರ ಯಾರೋ ಅಪರಿಚಿತ ವ್ಯಕ್ತಿಗಳು ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡು ಅತ್ಯಂತ ಆತ್ಮೀಯರಾಗಿ ಮಾತನಾಡಿಕೊಂಡಿದ್ದರು. ಈ ವ್ಯಕ್ತಿಗಳು ನಂತರದ ದಿನಗಳಲ್ಲಿ ಮಹಿಳೆಯೊಂದಿಗೆ ವಾಟ್ಸ್ ಆಪ್ ಮುಖಾಂತರ ನಿರಂತರವಾಗಿ ಸಂಪರ್ಕದಲ್ಲಿದ್ದರು. ಅಪರಿಚಿತ ವ್ಯಕ್ತಿಗಳು ಇವರಿಗೆ ಲಾಟರಿ ಹಣ ಬಂದಿರುವುದಾಗಿ ತಿಳಿಸಿ ಹಾಗೂ ಈ ಹಣವನ್ನು ಅವರ ಖಾತೆಗೆ ಜಮಾ ಮಾಡುವುದಾಗಿಯೂ ತಿಳಿಸಿದ್ದಾರೆ.
ಈ ಹಣವನ್ನು ಪಾವತಿ ಮಾಡಲು ಅಪರಿಚಿತ ವ್ಯಕ್ತಿಯ ಮಹಿಳೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುವಂತೆ ತಿಳಿಸಿದ್ದರು. ಅದರಂತೆ ವಂಚಕರ ಮೊಬೈಲ್ ನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆರ್ಯ ಸಮಾಜ ರೋಡ್ ಬ್ರಾಂಚ್, ಖಾತೆ ನಂಬರ್ ಮತ್ತು ಇಂಡಿಯನ್ ಬ್ಯಾಂಕ್,ಬಿಜೈ ಶಾಖೆ, ಖಾತೆ ನಂಬರ್ ಗೆ ಲಿಂಕ್ ಮಾಡಿಸಿದ್ದರು. ಇದಾದ ನಂತರ ಮಹಿಳೆಗೆ ನಿವೃತ್ತಿ ಪಿಂಚಣಿ ಸೇರಿ ವಿವಿಧ ಹಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ 50,55,118/- ರೂ.ಗಳು ಮತ್ತು ಇಂಡಿಯನ್ ಬ್ಯಾಂಕ್ ಖಾತೆಗೆ 22,31,798/- ರೂ.ಗಳು ಬಂದಿತ್ತು.
ನಂತರ ಈ ಅಪರಿಚಿತ ವ್ಯಕ್ತಿಯು ಮಹಿಳೆಯ ಗಮನಕ್ಕೆ ಬಾರದೆ ಒಟ್ಟು 72,86,916 /- ರೂಗಳನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಹಿಳೆ ಬ್ಯಾಂಕ್ ನಲ್ಲಿ ಹೋಗಿ ವಿಚಾರಿಸಿದಾಗ ವಂಚನೆ ಅವರ ಗಮನಕ್ಕೆ ಬಂದಿದೆ. ಈ ರೀತಿಯಾಗಿ ಅಪರಿಚಿತ ವ್ಯಕ್ತಿಗಳು ಆನ್ ಲೈನ್ ಮುಖಾಂತರ ಒಟ್ಟು 72,86,916/-ರೂಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಕಾರಣಕ್ಕೂ ಆನ್‌ಲೈನ್ ವಂಚಕರಿಗೆ ಮಾಹಿತಿ ನೀಡಬೇಡಿ ಎಂದು ತಿಳಿಸಿದರೂ ನಿವೃತ್ತ ಪ್ರಾಂಶುಪಾಲರು ವಿವರ ಕೊಟ್ಟು ಹಣ ಕಳೆದುಕೊಂಡಿದ್ದಾರೆ. ಈ ಕುರಿತು ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸೆನ್ ಪೊಲೀಸರು ತಿಳಿಸಿದ್ದಾರೆ.
ಎಂಡಿಎಂಎ ಮಾರಾಟ, ಮಡಿಕೇರಿ ಮೂಲದ ಮೂವರ ಸೆರೆ
ಮಂಗಳೂರು ಸಿಸಿಬಿ ಪೊಲೀಸರಿಂದ MDMA ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ಆರೋಪಿಗಳಿಂದ ಒಟ್ಟು 95,000 ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆಪಡೆದುಕೊಳ್ಳಲಾಗಿದೆ.
ಮಂಗಳೂರು ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಪಳ್ನೀರು ಎಂಬಲ್ಲಿ ಬ್ಲೂ ಸ್ಟಾರ್ ಲಾಡ್ಜ್ ಬಳಿಯಲ್ಲಿ 3 ಜನ ವ್ಯಕ್ತಿಗಳು ಅಕ್ರಮವಾಗಿ MDMA ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಪ್ರಮೋದ್ (30), ಮೊಹಮ್ಮದ್ ರಶೀದ್ (41), ದರ್ಶನ್ (24) ಬಂಧಿತರು. ಎಲ್ಲರೂ ಕೊಡಗಿನವರು.
ಆರೋಪಿತರಲ್ಲಿ ಪ್ರಮೋದ್ ಎಮ್ ಜಿ @ ಡಿಸ್ಕ್ ಎಂಬಾತನ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಮಂಗಳೂರು ನಗರದ ಬರ್ಕೆ ಠಾಣೆಯಲ್ಲಿ ಕೊಲೆಯತ್ನ ಹಾಗೂ ಮಡಿಕೇರಿ ಜಿಲ್ಲೆಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿವೆ.
ಮೊಹಮ್ಮದ್ ರಶೀದ್ ಎಂ.ಝಡ್ @ ರಾಶೀ ಎಂಬಾತನ ಮೇಲೆ ಕೊಡಗು ಜಿಲ್ಲೆಯ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಮಡಿಕೇರಿ ನಗರ ಠಾಣೆಯಲ್ಲಿ ಕೊಲೆ, ದರೋಡೆ, ಸುಲಿಗೆ ಪ್ರಕಣಗಳು ದಾಖಲಾಗಿರುತ್ತವೆ. ದರ್ಶನ್ ಎಸ್ ಎಂಬಾತನ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ನೇತೃತ್ವದಲ್ಲಿ ಈ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ವಿವರ 15 ಗ್ರಾಂ MDMA ಮಾದಕ ವಸ್ತು OPPO ಕಂಪನಿಯ ಮೊಬೈಲ್ ಪೋನ್ 1 Asus ಕಂಪನಿಯ ಮೊಬೈಲ್ ಪೋನ್-1, ಡಿಜಿಟಲ್ ತೂಕ ಮಾಪನ -1 , ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 95,000/- ರೂ ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.