ಕನ್ನಡ ಸುದ್ದಿ  /  ಕರ್ನಾಟಕ  /  Mangalore Crime: ಲಾಡ್ಜ್‌ನಲ್ಲಿ ಬೆಡ್‌ಗೆ ಬೆಂಕಿ ತಗುಲಿ ಮಲಗಿದ್ದ ವ್ಯಕ್ತಿ ಸಜೀವ ದಹನ; ವಿವಾಹಿತೆ ಅನುಮಾನಾಸ್ಪದ ಸಾವು

Mangalore Crime: ಲಾಡ್ಜ್‌ನಲ್ಲಿ ಬೆಡ್‌ಗೆ ಬೆಂಕಿ ತಗುಲಿ ಮಲಗಿದ್ದ ವ್ಯಕ್ತಿ ಸಜೀವ ದಹನ; ವಿವಾಹಿತೆ ಅನುಮಾನಾಸ್ಪದ ಸಾವು

ಲಾಡ್ಜ್‌ನಲ್ಲಿ ಬೆಡ್‌ಗೆ ಬೆಂಕಿ ಬಿದ್ದು ವ್ಯಕ್ತಿಯೊರ್ವ ಸಜೀವ ದಹನವಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ದಕ್ಷಿಣ ಕನ್ನಡದ ಇತರೆ ಕ್ರೈಮ್‌ ಸುದ್ದಿಗಳ ವಿವರ ಇಲ್ಲಿದೆ.

ಬೆಡ್‌ಗೆ ಬೆಂಕಿ ತಗುಲಿ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಮಂಗಳೂರಿನ ಲಾಡ್ಜ್‌ವೊಂದರಲ್ಲಿ ನಡೆದಿದೆ.
ಬೆಡ್‌ಗೆ ಬೆಂಕಿ ತಗುಲಿ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಮಂಗಳೂರಿನ ಲಾಡ್ಜ್‌ವೊಂದರಲ್ಲಿ ನಡೆದಿದೆ.

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಲಾಡ್ಜ್‌ವೊಂದರ ರೂಮ್‌ನಲ್ಲಿದ್ದ ಬೆಡ್‌ಗೆ ಬೆಂಕಿ ತಗಲಿ ವ್ಯಕ್ತಿಯೊರ್ವ ಸಜೀವ ದಹನವಾಗಿರುವ ಘಟನೆ ನಡೆದಿದೆ. ಮಂಗಳೂರಿನ ಕಂಕನಾಡಿಯ ರೆಸಿಡೆನ್ಸಿ ಗೇಟ್ ಲಾಡ್ಜ್ ನಲ್ಲಿ ದುರಂತ ಸಂಭವಿಸಿದೆ. ಬೆಂದೂರ್ ವೆಲ್ ನಿವಾಸಿ ಯಶರಾಜ್ ಸುವರ್ಣ (43) ಮೃತ ದುರ್ದೈವಿ.

ಮೃತ ಯಶರಾಜ್ ನವೆಂಬರ್ 15 ರಿಂದ ಹೋಟೆಲ್‌ನಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಊಟ ಮುಗಿಸಿ ಕೊಠಡಿಗೆ ತೆರಳಿದ್ದಾರೆ. ರಾತ್ರಿ 12 ಗಂಟೆ ಬಳಿಕ ಕೊಠಡಿಯಿಂದ ಹೊಗೆ ಕಾಣಿಸಿಕೊಂಡಿದೆ. ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿದ್ದು, ಅಷ್ಟರಾಗಲೇ ಬೆಂಕಿ ವ್ಯಾಪಿಸಿ ಅವರು ಸಜೀವದಹನಗೊಂಡಿದ್ದಾರೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ವಿವಾಹಿತೆ ಸಂಶಯಾಸ್ಪದ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮೊಡಂಕಾಪು ಎಂಬಲ್ಲಿ ವಿವಾಹಿತೆಯೊಬ್ಬರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಡಂಕಾಪು ನಿವಾಸಿ ಯೋಗೀಶ್ ಅವರ ಪತ್ನಿ ಬೇಬಿ ಸಾವನ್ನಪ್ಪಿದವರು.

ಟ್ರೆಂಡಿಂಗ್​ ಸುದ್ದಿ

ಬುಧವಾರ ಮುಂಜಾನೆ ಪತಿ ಯೋಗೀಶ್ ಅವರು ಕರೆ ಮಾಡಿ ಬೇಬಿ ಅಸ್ತಮಾದಿಂದ ಗಂಭೀರ ಸ್ಥಿತಿಗೆ ತಲುಪಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಅಲ್ಲಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಬೇಬಿ ಅವರು ಆಸ್ಪತ್ರೆಗೆ ಬರುವಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಈ ಸಾವಿನ ಕುರಿತು ಸಂಶಯವಿದೆ, ಸೂಕ್ತ ತನಿಖೆಯಾಗಬೇಕು ಎಂದು ಮೃತಳ ಸಹೋದರ ಪದ್ಮನಾಭ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಯುವಕ ಸಾವು, ಸಾರ್ವಜನಿಕರ ಪ್ರತಿಭಟನೆ

ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸುರತ್ಕಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತನ ಸಂಬಂಧಿಕರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.

ಕುಳಾಯಿ ನಿವಾಸಿ ಮೊಯ್ದೀನ್ ಫರ್ಹನ್ ಮೃತ ಯುವಕ. ಮಂಗಳವಾರ ರಾತ್ರಿ ಮುಕ್ಕದಲ್ಲಿ ನಡೆದ ಅಪಘಾತದಲ್ಲಿ ಕಾಲಿನ ಭಾಗಕ್ಕೆ ಗಾಯವಾಗಿತ್ತು. ಬಳಿಕ ಆತನನ್ನು ಸುರತ್ಕಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಫರ್ಹನ್, ಎಲ್ಲದಂತೆ ಬೆಳಗ್ಗೆ ಚಹ ಸೇವಿಸಿದ್ದ. ಕುಟುಂಬದವರೊಂದಿಗೆ ಸಹಜವಾಗಿ ಇದ್ದ. ಆದರೆ ಬುಧವಾರ ಕಾಲಿನ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ದಿಢೀರನೆ ಆರೋಗ್ಯದಲ್ಲಿ ಏರುಪೇರಾಯಿತು.

ಮಂಗಳೂರಿನ ಕೆಎಂಸಿಗೆ ಆತನನ್ನು ದಾಖಲಿಸಲಾಗಿತ್ತು. ಅಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಇದಕ್ಕೆ ಸುರತ್ಕಲ್ ವೈದ್ಯರು ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಮನೆಯವರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಮಗು ಸಾವು ಪ್ರಕರಣ, ರೆಸಾರ್ಟ್ ಮಾಲೀಕನ ವಿರುದ್ಧ ದೂರು

ಆಟವಾಡುತ್ತಿದ್ದ ವೇಳೆ ರೆಸಾರ್ಟ್ ಗೇಟ್ ಮೈಮೇಲೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಮಂಗಳವಾರ ಕೋಟತಟ್ಟು ಪಡುಕೆರೆ ಎಂಬಲ್ಲಿ ನಡೆದಿದ್ದು, ಇದಕ್ಕೆ ರೆಸಾರ್ಟ್ ಮಾಲೀಕನ ನಿರ್ಲಕ್ಷ್ಯತನವೇ ಕಾರಣ ಎಂದು ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶಾಸಕ ಕಿರಣ್ ಕೊಡ್ಗಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಘಟನೆ ಕುರಿತು ಜಿಲ್ಲಾ ಎಸ್ಪಿ ಜೊತೆ ಚರ್ಚಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾಗಿ ಶಾಸಕರು ಹೇಳಿದ್ದಾರೆ.