ಶ್ರೀ ದೈವರಾಜ ಬಬ್ಬುಸ್ವಾಮಿ ದೈವಸ್ಥಾನ: ಅಮಾವಾಸ್ಯೆಯ ಮಧ್ಯರಾತ್ರಿ ಬ್ರಹ್ಮರಾಕ್ಷಸ, ಪ್ರೇತಗಳ ಉಚ್ಚಾಟನೆ ಮಾಡಿದ ದೈವಪಾತ್ರಿ
Brahma Rakshasa: ಮಂಗಳೂರಿನ ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಅಡೆತಡೆ ಉಂಟಾಗಬಹುದು ಎಂಬ ಕಾರಣಕ್ಕೆ ದೈವ, ರಸ್ತೆಯುದ್ದಕ್ಕೂ ದೈವಾವೇಶದಲ್ಲಿ ಸಂಚರಿಸಿ ಬ್ರಹ್ಮರಾಕ್ಷಸನ ಉಚ್ಚಾಟಿಸಿತು.

ಮಂಗಳೂರು: ಇದೇ ಜನವರಿ 29ರ ಬುಧವಾರ ಸಂಜೆ ವಿರಳವೂ ಆಗಿರುವ ಬ್ರಹ್ಮರಾಕ್ಷಸ ಉಚ್ಚಾಟನೆಯು ಧಾರ್ಮಿಕ ವಿಧಿವಿಧಾನದೊಂದಿಗೆ ಮಂಗಳೂರಿನ ಕೊಟ್ಟಾರ ಬಳಿಯ ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯಿತು. ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಚಿಂತನೆ ನಡೆಸುತ್ತಿದ್ದ ಆಡಳಿತ ಮಂಡಳಿ ತಂತ್ರಿಗಳಿಂದ ಪ್ರಶ್ನಾಚಿಂತನೆ ಇಡಲಾಗಿತ್ತು. ಜೀರ್ಣೋದ್ಧಾರಕ್ಕೂ ಮುನ್ನ ಇಲ್ಲಿರುವ ಬ್ರಹ್ಮರಾಕ್ಷಸ ಹಾಗೂ ಪ್ರೇತಗಳ ಉಚ್ಚಾಟನೆ ಮಾಡಬೇಕು. ಇಲ್ಲವಾದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಅಡೆತಡೆ ಉಂಟಾಗಬಹುದು ಎನ್ನಲಾಗಿತ್ತು. ಅದರಂತೆ ಅಮಾವಾಸ್ಯೆಯ ಮಧ್ಯರಾತ್ರಿ ಈ ಪ್ರಕ್ರಿಯೆ ನಡೆಯಿತು.
ಊರ ಜನರು ಅಗೋಚರವಾಗಿ ಆ ಪ್ರದೇಶಗಳಲ್ಲಿ ಅಲೆದಾಡುವ ಬ್ರಹ್ಮರಾಕ್ಷಸನ ಉಚ್ಚಾಟನೆಯ ವಿಶೇಷ ದೃಶ್ಯವನ್ನು ಕಣ್ತುಂಬಿಕೊಳ್ಳಲೆಂದೇ ರಾತ್ರಿ 10 ಗಂಟೆಗೂ ಮೊದಲೇ ದೈವಸ್ಥಾನದಲ್ಲಿ ಜನರು ಸೇರಿದ್ದರು. ಪ್ರತೀ ಮನೆಯಿಂದಲೂ ಉಚ್ಚಾಟನೆಗೆ ಬೇಕಿದ್ದ ಕೋಳಿ, ತೆಂಗಿನಕಾಯಿ, ತೆಂಗಿನಗರಿಯ ಸೂಟೆಗಳನ್ನು ಹರಕೆ ಸಲ್ಲಿಸಲಾಗಿತ್ತು. ಗಂಟೆ 12 (ರಾತ್ರಿ) ಬಾರಿಸುತ್ತಿದ್ದಂತೆಯೇ ಆವೇಶಕ್ಕೆ ನಿಂತ ಬಬ್ಬುಸ್ವಾಮಿ ಹಾಗೂ ಗುಳಿಗ ದೈವಗಳ ದರ್ಶನಪಾತ್ರಿಗಳು, ದೈವಾವೇಶದಲ್ಲಿಯೇ ಅಗೋಚರವಾಗಿ ಅಲೆಯುತ್ತಿದ್ದ ಬ್ರಹ್ಮರಾಕ್ಷಸ ಹಾಗೂ ಪ್ರೇತಗಳನ್ನು ಆವಾಹಿಸಿ ದೈವಸ್ಥಾನದ ಮುಂಭಾಗ ಇಟ್ಟಿದ್ದ ಬಲಿಗೆ ಹಾಕುತ್ತಿದ್ದರು. ಬಲಿಯಲ್ಲಿ ಆ ಕ್ಷುದ್ರಶಕ್ತಿಗಳು ದಿಗ್ಭಂಧನಕ್ಕೊಳಗಾಗುತ್ತಿತ್ತು.
ಮಧ್ಯರಾತ್ರಿ ಕಳೆಯುತ್ತಿದ್ದಂತೆ ದೈವಪಾತ್ರಿ, ಈ ಕ್ಷುದ್ರಶಕ್ತಿಗಳಿಗೆ ಮುಕ್ತಿ ಕೊಡುವ ಸಲುವಾಗಿ ಆವೇಶದಲ್ಲಿಯೇ ಕೂಳೂರು ನದಿಯತ್ತ ತೆರಳಿದ್ದರು. ಜನರೂ ಅದರ ಹಿಂದೆಯೇ ಓಡಿದ್ದರು. ಈ ವೇಳೆ ಯಾರೂ ಎದುರು ಬರಬಾರದು ಎಂಬ ನಂಬಿಕೆ ಇದೆ. ಹಾಗಾಗಿ ಮೊದಲೇ ಈ ಪ್ರದೇಶದ ಎಲ್ಲಾ ರಸ್ತೆಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5ರ ತನಕ ಸಂಚಾರವನ್ನು ನಿಷೇಧಿಸಲಾಗಿತ್ತು. ಈ ಬಗ್ಗೆ ಮುಂಚೆಯೇ ಸೂಚನೆ ನೀಡಲಾಗಿತ್ತು. ಜನರು ಮತ್ತು ವಾಹನ ಸಂಚಾರ ಇರದಂತೆ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆಯೂ ನೆರವಾಗಿತ್ತು.
ದೈವಪಾತ್ರಿ ಹೇಳಿದ್ದೇನು?
ದೈವಪಾತ್ರಿ ಪ್ರಜ್ವಲ್ ಅವರು ಈ ಬಗ್ಗೆ ಮಾತನಾಡಿ, ‘ಈ ಪ್ರದೇಶದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಸಂಚಾರ ನಡೆಸುವವರಿಗೆ ತೊಂದರೆ ಉಂಟಾಗುವುದು, ಆರೋಗ್ಯದಲ್ಲಿ ವ್ಯತ್ಯಾಸ ಆಗಬಾರದೆಂಬ ಕಾರಣಕ್ಕೆ ದೈವಸ್ಥಾನದ ಜೀರ್ಣೋದ್ದಾರ ಅವಧಿಯಲ್ಲಿ ಕ್ಷುದ್ರ ಶಕ್ತಿಗಳನ್ನು ಉಚ್ಚಾಟನೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ಗ್ರಾಮಸ್ಥರು ಹೇಳಿದ್ದೇನು?
ಈ ಬಗ್ಗೆ ಗ್ರಾಮಸ್ಥ ರಾಜೇಶ್ ಎಂಬವರು ಮಾತನಾಡಿ, ‘ಈ ದೈವಸ್ಥಾನ ಜೀರ್ಣೋದ್ದಾರ ಕಾರ್ಯದ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದವು. ಇಲ್ಲಿ ಬ್ರಹ್ಮ ರಾಕ್ಷಸನ ಉಚ್ಚಾಟನೆ ಮಾಡುವಂತೆ ಕಾಣಿಸಿತು. ದೈವದ ದರ್ಶನದ ವೇಳೆಯು ಇದೇ ರೀತಿ ಕಾಣಿಸಿತು. ಅದರಂತೆ ಬ್ರಹ್ಮ ರಾಕ್ಷಸನ ಉಚ್ಚಾಟನೆ ನಡೆಯಿತು’ ಎನ್ನುತ್ತಾರೆ ಅವರು.
