ಬೆಳಿಗ್ಗೆ ಶಿಕ್ಷಕಿಯರು, ಸಂಜೆ ವಿದ್ಯಾರ್ಥಿನಿಯರು… ತುಳು , ಕೊಂಕಣಿ ಎಂಎ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದರು
ಮಂಗಳೂರಿನ ಕೂಳೂರಿನ ಜ್ಯೋತಿ ಪ್ರಿಯ ಮತ್ತು ಮಂಗಳೂರಿನ ಮಣ್ಣಗುಡ್ಡೆಯ ಅನಿತಾ ಶೆಣೈ ಈ ಸಾಧನೆ ಮಾಡಿದವರು. ಇವರಿಬ್ಬರು ತಮ್ಮ ಮಾತೃಭಾಷೆಯಲ್ಲಿಯೇ ಎಂಎ ಮಾಡಿದ್ದು ವಿಶೇಷ.

ಮಂಗಳೂರು: ಇವರಿಬ್ಬರು ಹಗಲಿನಲ್ಲಿ ಶಿಕ್ಷಕಿಯರು, ಸಂಜೆಯಾಗುತ್ತಿದ್ದಂತೆ ತರಗತಿಗಳಿಗೆ ಹಾಜರಾಗಿ, ಓದಿದರು. ಇದೀಗ ತಮ್ಮ ಮಾತೃಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂದು (ಮಾರ್ಚ್ 29) ನಡೆದ ಘಟಿಕೋತ್ಸವದಲ್ಲಿ ಕೊಂಕಣಿ ಮತ್ತು ತುಳು ಭಾಷೆಯಲ್ಲಿ ಈ ಇಬ್ಬರು ಶಿಕ್ಷಕಿಯರು ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇವರಿಬ್ಬರೂ ಹಗಲು ಹೊತ್ತಿನಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾರಾಗಿದ್ದರು. ಸಂಜೆ ಕಾಲೇಜಿನಲ್ಲಿ ಎಂಎ ವಿದ್ಯಾರ್ಥಿನಿಯರಾಗಿದ್ದರು.
ಮಂಗಳೂರಿನ ಕೂಳೂರಿನ ಜ್ಯೋತಿ ಪ್ರಿಯ ಮತ್ತು ಮಂಗಳೂರಿನ ಮಣ್ಣಗುಡ್ಡೆಯ ಅನಿತಾ ಶೆಣೈ ಈ ಸಾಧನೆ ಮಾಡಿದವರು. ಇವರಿಬ್ಬರು ತಮ್ಮ ಮಾತೃಭಾಷೆಯಲ್ಲಿಯೇ ಎಂಎ ಮಾಡಿದ್ದು ವಿಶೇಷ. ಜ್ಯೋತಿ ಪ್ರಿಯ ಅವರು ಈ ಮೊದಲು ಕನ್ನಡ ಎಂಎ ಮಾಡಿದ್ದರು. ಕನ್ನಡ ಎಂಎಯಲ್ಲಿಯೂ ಮೊದಲ ರಾಂಕ್ ಪಡೆದಿದ್ದ ಅವರು ಇದೀಗ ತುಳುಭಾಷೆಯಲ್ಲಿ ಎಂಎ ಮಾಡಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಇವರು ಮೂಲತಃ ತುಳು ಭಾಷಿಕರು. ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ದಯಾನಂದ ಪೈ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಜ್ಯೋತಿ ಪ್ರಿಯ ಅವರು ಸಂಜೆ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಸಂಧ್ಯಾ ಕಾಲೇಜಿನಲ್ಲಿ ಎಂಎ ಅಭ್ಯಾಸ ಮಾಡಿದ್ದಾರೆ. ಇವರು ಕನ್ನಡ ಲಿಪಿಯಲ್ಲಿ ತುಳು ಭಾಷೆಯಲ್ಲಿ ಎಂಎ ಪರೀಕ್ಷೆ ಬರೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, 'ನಾನು ಕಾಲೇಜಿನಲ್ಲಿ ಮಕ್ಕಳಿಗೆ ಕನ್ನಡ ಪಾಠ ಮಾಡುತ್ತಿದ್ದೇನೆ. ಇಲ್ಲಿನ ಸ್ಥಳೀಯ ಭಾಷೆ ತುಳು. ತುಳು ಭಾಷೆಯಲ್ಲಿ ಮಕ್ಕಳಿಗೆ ಹೆಚ್ಚು ಆಸಕ್ತಿ ಇರುವುದರಿಂದ, ತುಳು ಸಂಸ್ಕೃತಿಯ ಬಗ್ಗೆ ಹೆಚ್ಚು ಅಧ್ಯಯನ ಮಾಡುವ ನಿಟ್ಟಿನಲ್ಲಿ ತುಳು ಎಂಎ ಮಾಡಿದ್ದೇನೆ. ತುಳುವನ್ನು ಅಧ್ಯಯನ ಮಾಡುವಾಗ ಸಂಸ್ಕೃತಿ ಹೆಚ್ಚು ತಿಳಿಯಲು ಸಾಧ್ಯವಾಯಿತು. ನಾನು ಶಿಕ್ಷಕಿಯಾಗಿ ತರಗತಿ ಮುಗಿಸಿ ಸಂಜೆ ಕಾಲೇಜಿನಲ್ಲಿ ಕಲಿಯಲು ಪೂರಕವಾಯಿತು' ಎನ್ನುತ್ತಾರೆ.
ಕೊಂಕಣಿ ಪರೀಕ್ಷೆ ಬರೆದ ಅನಿತಾ ಶೆಣೈ
ಅನಿತಾ ಶೆಣೈ ಅವರು ಮಂಗಳೂರಿನ ಮಣ್ಣಗುಡ್ಡೆ ನಿವಾಸಿಯಾಗಿದ್ದು ಇದೀಗ ಕೊಂಕಣಿ ಭಾಷೆಯಲ್ಲಿ ಎಂಎ ಮಾಡಿ, ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇವರ ಪತಿ ಹರೀಶ್ ಶೆಣೈ ವೃತ್ತಿಯಲ್ಲಿ ಎಂಜಿನಿಯರ್. ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಅನಿತಾ ಅವರು 13 ವರ್ಷದಿಂದ ಕೆಜಿ ಟೀಚರ್ ಆಗಿದ್ದರು. ತಮ್ಮ ಮಾತೃಭಾಷೆ ಕೊಂಕಣಿಯಲ್ಲಿ ಎಂಎ ಪರೀಕ್ಷೆಯನ್ನು ದೇವನಾಗರಿ ಲಿಪಿಯಲ್ಲಿ ಬರೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಅನಿತಾ ಶೆಣೈ, 'ನಾನು ಶಾರದಾ ವಿದ್ಯಾಲಯದಲ್ಲಿ ಟೀಚರ್ ಆಗಿದ್ದೇನೆ. ಸಂಜೆ ಕಾಲೇಜಿನಲ್ಲಿ ಕೊಂಕಣಿ ಭಾಷೆಯಲ್ಲಿ ಎಂಎ ಮಾಡಿ ಮೊದಲ ರ‍್ಯಾಂಕ್ ಪಡೆದಿದ್ದೇನೆ. ಶಿಕ್ಷಕಿಯಾಗಿ ಮತ್ತೆ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡುವಾಗ ಸ್ವಲ್ಪ ಕಷ್ಟವಾಗುತ್ತಿತ್ತು. ಮನೆಯವರ ಸಹಕಾರ, ಕಾಲೇಜಿನವರ ಸಹಕಾರದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಕೊಂಕಣಿ ನನ್ನ ಮಾತೃಭಾಷೆ. ಅದರಲ್ಲಿ ಆಳವಾಗಿ ಅಭ್ಯಾಸ ಮಾಡುವ ಇಚ್ಛೆಯಿಂದ ಎಂಎ ಮಾಡಿದೆ ಎಂದರು.
ಹಗಲು ಹೊತ್ತಿನಲ್ಲಿ ಶಿಕ್ಷಕಿಯರಾಗಿದ್ದುಕೊಂಡು, ಸಂಜೆ ಹೊತ್ತಿನಲ್ಲಿ ವಿದ್ಯಾರ್ಥಿನಿಯರಾಗಿ ಪರಿಶ್ರಮಪಟ್ಟ ಜ್ಯೋತಿ ಪ್ರಿಯ ಮತ್ತು ಅನಿತಾ ಶೆಣೈ ಸಾಧನೆಯ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


